ಪದ್ಯ ೧೩೫: ಸತ್ಯಭಾಮೆ ಕೃಷ್ಣನನ್ನು ಏನೆಂದು ಪ್ರಶ್ನಿಸಿದಳು?

ಸತಿ ನೆಗಹಿದಳು ನೆತ್ತವನು ಗಣಿ
ಸುತಲಿ ನೋಡಿದಳೆಣಿಕೆಯೊಳಗಿ
ಲ್ಲತಿಶಯದ ನುಡಿಯಕ್ಷಯವದೆಂದೆಂಬ ವಾಕ್ಯವಿದು
ಮತಿಗೆ ಗೋಚರವಲ್ಲ ಈ ಸಂ
ಗತಿಗೆ ಬಾರದು ದೇವವಾಕ್ಯ
ಸ್ಥಿತಿಯ ಪಲ್ಲಟವೆನುತ ಮಿಗೆ ಬೆಸಗೊಂಡಳಾ ಹರಿಯ (ಸಭಾ ಪರ್ವ, ೧೫ ಸಂಧಿ, ೧೩೫ ಪದ್ಯ)

ತಾತ್ಪರ್ಯ:
ಕೃಷ್ಣನು ಅಕ್ಷಯ ಎಂಬ ಪದವನ್ನುಚ್ಚರಿಸಲು ತಬ್ಬಿಬ್ಬಾದ ಸತ್ಯಭಾಮೆ ದಾಳಗಳನ್ನು ಎತ್ತಿ ಎಲ್ಲಾ ಕಡೆಗೂ ನೋಡಿ, ಇದೇನು, ಇವುಗಳ ಯಾವ ಪಕ್ಕದಲ್ಲೂ ಅಕ್ಷಯವೆಂಬ ಮಾತನ್ನು ಬರೆದಿಲ್ಲ. ಆದರೂ ನೀನು ಅಕ್ಷಯವೆನ್ನುತಿರುವೆ, ನಿನ್ನ ಮಾತು ಹೀಗೇಕೆ ಬಂದಿತೆಂದು ಕೇಳಿದಳು.

ಅರ್ಥ:
ಸತಿ: ಹೆಂಡತಿ; ನೆಗಹು: ಮೇಲೆತ್ತು; ನೆತ್ತ: ಪಗಡೆಯ ದಾಳ; ಗಣಿ: ಮೂಲ ಸ್ಥಾನ; ನೋಡು: ವೀಕ್ಷಿಸು; ಎಣಿಕೆ: ಲೆಕ್ಕ; ಅತಿಶಯ: ಹೆಚ್ಚು; ನುಡಿ: ಮಾತು; ಅಕ್ಷಯ: ಕ್ಷಯವಿಲ್ಲದುದು, ಬರಿದಾ ಗದುದು; ವಾಕ್ಯ: ಮಾತು; ಮತಿ: ಬುದ್ಧಿ; ಗೋಚರ: ಕಾಣುವುದು; ಸಂಗತಿ: ವಿಷಯ; ಸ್ಥಿತಿ: ರೀತಿ, ಅವಸ್ಥೆ; ಪಲ್ಲಟ: ಬದಲಾವಣೆ, ಮಾರ್ಪಾಟು; ಮಿಗೆ: ಮತ್ತು, ಅಧಿಕವಾಗಿ; ಬೆಸ: ವಿಚಾರಿಸುವುದು, ಪ್ರಶ್ನಿಸುವುದು; ಹರಿ: ವಿಷ್ಣು, ಕೃಷ್ಣ;

ಪದವಿಂಗಡಣೆ:
ಸತಿ+ ನೆಗಹಿದಳು +ನೆತ್ತವನು +ಗಣಿ
ಸುತಲಿ +ನೋಡಿದಳ್+ಎಣಿಕೆಯೊಳಗಿಲ್ಲ್
ಅತಿಶಯದ +ನುಡಿ+ಅಕ್ಷಯವ್+ಅದೆಂದ್+ಎಂಬ +ವಾಕ್ಯವಿದು
ಮತಿಗೆ +ಗೋಚರವಲ್ಲ+ ಈ +ಸಂ
ಗತಿಗೆ+ ಬಾರದು +ದೇವ+ವಾಕ್ಯ
ಸ್ಥಿತಿಯ +ಪಲ್ಲಟವೆನುತ +ಮಿಗೆ +ಬೆಸಗೊಂಡಳಾ +ಹರಿಯ

ಅಚ್ಚರಿ:
(೧) ಸತಿ, ಮತಿ, ಗತಿ, ಸ್ಥಿತಿ – ಪ್ರಾಸ ಪದಗಳು
(೨) ಸತ್ಯಭಾಮೆಯ ಪ್ರಶ್ನೆ – ಅತಿಶಯದ ನುಡಿಯಕ್ಷಯವದೆಂದೆಂಬ ವಾಕ್ಯವಿದು