ಪದ್ಯ ೨೬: ಸಂಜಯನಿಗೆ ವ್ಯಾಸರು ಯಾವ ಅಪ್ಪಣೆ ನೀಡಿದರು?

ಆವ ವಹಿಲದೊಳಾದುದಾವಿ
ರ್ಭಾವವೆಂದಾನರಿಯೆನಾಗಳೆ
ದೇವಮುನಿಯಡ್ಡೈಸಿ ಹಿಡಿದನು ಕೊರಳಡಾಯುಧವ
ಸಾವು ತಪ್ಪಿತು ಬಾದರಾಯಣ
ನೋವಿ ಕೃಪೆಯಲಿ ಮೈದಡವಿ ಸಂ
ಭಾವಿಸುತ ಕುರುಪತಿಯನರಸೆಂದೆನಗೆ ನೇಮಿಸಿದ (ಗದಾ ಪರ್ವ, ೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ಎಷ್ಟು ಬೇಗದಿಂದ ವೇದವ್ಯಾಸ ಮುನಿಗಳು ಪ್ರಕಟವಾಗಿ ನನ್ನ ಕೊರಳಿಗೆ ಹೂಡಿದ್ದ ಕತ್ತಿಯನ್ನು ಹಿಡಿದುಕೊಂಡರೋ ತಿಳಿಯಲಿಲ್ಲ. ಸಾವು ತಪ್ಪಿತು. ಬಾದರಾಯಣನು ಪ್ರೀತಿಯಿಂದ ನನ್ನ ಮೈದಡವಿ ಕೌರವನನ್ನು ಹುಡುಕು ಎಂದು ಅಪ್ಪಣೆಕೊಟ್ಟನು.

ಅರ್ಥ:
ವಹಿಲ: ಬೇಗ, ತ್ವರೆ; ಆವಿರ್ಭಾವ: ಹುಟ್ಟುವುದು, ಪ್ರಕಟವಾಗುವುದು; ಅರಿ: ತಿಳಿ; ಮುನಿ: ಋಷಿ; ಅಡ್ಡೈಸು: ಅಡ್ಡ ಬಂದು; ಹಿಡಿ: ಗ್ರಹಿಸು; ಕೊರಳು: ಗಂಟಲು ಆಯುಧ: ಶಸ್ತ್ರ; ಸಾವು: ಮರಣ; ಕೃಪೆ: ದಯೆ; ಮೈದಡವಿ: ನೇವರಿಸು; ಸಂಭಾವಿಸು: ತೃಪ್ತಿಪಡಿಸು, ಗೌರವಿಸು; ಅರಸು: ಹುಡುಕು; ನೇಮಿಸು: ಅಪ್ಪಣೆ ಮಾಡು;

ಪದವಿಂಗಡಣೆ:
ಆವ+ ವಹಿಲದೊಳ್+ಆದುದ್+ಆವಿ
ರ್ಭಾವವೆಂದ್+ಆನ್+ಅರಿಯೆನ್+ಆಗಳೆ
ದೇವಮುನಿ+ಅಡ್ಡೈಸಿ +ಹಿಡಿದನು +ಕೊರಳಡ್+ಆಯುಧವ
ಸಾವು +ತಪ್ಪಿತು +ಬಾದರಾಯಣನ್
ಓವಿ+ ಕೃಪೆಯಲಿ +ಮೈದಡವಿ +ಸಂ
ಭಾವಿಸುತ +ಕುರುಪತಿಯನ್+ಅರಸ್+ಎಂದೆನಗೆ +ನೇಮಿಸಿದ

ಅಚ್ಚರಿ:
(೧) ಅ ಕಾರದ ಪದಗಳ ಬಳಕೆ – ಆವ ವಹಿಲದೊಳಾದುದಾವಿರ್ಭಾವವೆಂದಾನರಿಯೆನಾಗಳೆ
(೨) ವ್ಯಾಸರನ್ನು ಕರೆದ ಪರಿ – ಬಾದರಾಯಣ, ದೇವಮುನಿ

ಪದ್ಯ ೧೨: ನಾರದರ ಮಾತನ್ನು ಅರ್ಜುನನು ಹೇಗೆ ಗೌರವಿಸಿದನು?

ಅರಸ ಕೇಳೈ ನಾರದನ ನುಡಿ
ಗುರುತರವಲೇ ಪಾರ್ಥನಾ ಬಿಲು
ದಿರುವ ಮಗುಳಿಳುಹಿದನು ಮುನಿಪನ ಮಾತ ಮನ್ನಿಸಿದ
ಹರಿದುದಮರರ ಮೇಲೆ ನೋಡುವ
ನೆರವಿ ದಿಗುಪಾಲಕರು ನಿಜಮಂ
ದಿರಕೆ ಸರಿದರು ದೇವಮುನಿ ಹಾಯಿದನು ಗಗನದಲಿ (ಅರಣ್ಯ ಪರ್ವ, ೧೪ ಸಂಧಿ, ೧೨ ಪದ್ಯ)

ತಾತ್ಪರ್ಯ:
ನಾರದನ ಘನವಾದ ನುಡಿಯನ್ನು ಕೇಳಿ, ಅರ್ಜುನನು ಗಾಂಡೀವದ ಹೆದೆಯನ್ನು ಕಳಚಿದನು. ಮೇಲೆ ನೋಡಲು ನೆರೆದಿದ್ದ ದೇವತೆಗಳೂ, ದಿಕ್ಪಾಲಕರೂ ಅವರವರ ಆಲಯಗಳಿಗೆ ತೆರಳಿದರು. ನಾರದರು ಆಗಸ ಮಾರ್ಗದಲ್ಲಿ ಮತ್ತೆ ಸ್ವರ್ಗಕ್ಕೆ ಹೋದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ನುಡಿ: ಮಾತು; ಗುರುತರ: ಹಿರಿದಾದುದು; ಬಿಲು: ಬಿಲ್ಲು; ಉದಿರು: ಕೆಳಗೆ ಬೀಳು; ಮಗುಳು: ಹಿಂತಿರುಗು; ಇಳುಹು: ಕೆಳಕ್ಕೆ ಬೀಳು; ಮುನಿ: ಋಷಿ; ಮಾತು: ನುಡಿ; ಮನ್ನಿಸು: ಗೌರವಿಸು; ಹರಿ: ಚಲಿಸು; ಅಮರ: ದೇವತೆ; ಮೇಲೆ: ಮುಂದೆ, ಎತ್ತರ; ನೋಡು: ವೀಕ್ಷಿಸು; ನೆರವು: ಸಹಾಯ; ದಿಗುಪಾಲ: ದಿಕ್ಪಾಲಕ; ನಿಜ: ತನ್ನ, ದಿಟ; ಮಂದಿರ: ಆಲಯ; ಸರಿ: ಹೋಗು, ಗಮಿಸು; ದೇವಮುನಿ: ನಾರದ; ಹಾಯಿದ:

ಪದವಿಂಗಡಣೆ:
ಅರಸ +ಕೇಳೈ +ನಾರದನ +ನುಡಿ
ಗುರುತರವಲೇ +ಪಾರ್ಥನಾ +ಬಿಲ್
ಉದಿರುವ +ಮಗುಳ್+ಇಳುಹಿದನು +ಮುನಿಪನ +ಮಾತ +ಮನ್ನಿಸಿದ
ಹರಿದುದ್+ ಅಮರರ +ಮೇಲೆ +ನೋಡುವ
ನೆರವಿ +ದಿಗುಪಾಲಕರು +ನಿಜ+ಮಂ
ದಿರಕೆ +ಸರಿದರು+ ದೇವಮುನಿ +ಹಾಯಿದನು +ಗಗನದಲಿ

ಅಚ್ಚರಿ:
(೧) ಮ ಕಾರದ ಸಾಲು ಪದ – ಮಗುಳಿಳುಹಿದನು ಮುನಿಪನ ಮಾತ ಮನ್ನಿಸಿದ
(೨) ಸ್ವರ್ಗಕ್ಕೆ ಹೋದನು ಎಂದು ಹೇಳುವ ಪರಿ – ದೇವಮುನಿ ಹಾಯಿದನು ಗಗನದಲಿ

ಪದ್ಯ ೮: ಅರ್ಜುನನಿಗೆ ಯಾರು ಅಸ್ತ್ರಪ್ರಯೋಗವನ್ನು ನಿಲ್ಲಿಸಲು ಹೇಳಿದರು?

ಆಹಹ ಬೆಂದುದು ಭುವನವಿದು ವಿ
ಗ್ರಹದ ಸಮಯವೆ ತಮ್ಮ ಲೀಲೆಗೆ
ಕುಹಕಮತಿಗಳು ತಂದರೈ ತ್ರೈಜಗಕೆ ತಲ್ಲಣವ
ರಹವಿದೇನೆಂದಭ್ರ ತಳದಿಂ
ಮಹಿಗೆ ಬಂದನು ದೇವಮುನಿ
ದುಸ್ಸಹವಿದೇನೈ ಪಾರ್ಥ ಹೋಹೋ ಸಾಕು ಸಾಕೆಂದ (ಅರಣ್ಯ ಪರ್ವ, ೧೪ ಸಂಧಿ, ೮ ಪದ್ಯ)

ತಾತ್ಪರ್ಯ:
ಓಹೋ ಇದೇನು ಭೂಮಿಯು ಬೆಂದಂತಾಗುತ್ತಿದೆ, ಇದೇನು ಯುದ್ಧದ ಸಮಯವೇನಲ್ಲ, ತಮ್ಮ ವಿನೋದಕ್ಕಾಗಿ ಯಾರೋ ಬುದ್ಧಿಯಿಲ್ಲದವರು ಲೋಕಕ್ಕೆ ಕ್ಷೋಭೆಯನ್ನುಂಟು ಮಾಡುತ್ತಿದ್ದಾರೆ, ಇದನ್ನು ತಪ್ಪಿಸುವ ಮಾರ್ಗವೇನೆಂದು ಯೋಚಿಸುತ್ತಾ ನಾರದರು ಆಗಸದಿಂದ ಭೂಮಿಗೆ ಇಳಿದು ಬಂದು ಅರ್ಜುನನನ್ನು ನೋಡಿ ಓಹೋ ಅರ್ಜುನ ಇದು ಸಹಿಸಲಾಗದ ಸಂಕಟ ಇದನ್ನು ಸಾಕು ಮಾಡೆಂದನು.

ಅರ್ಥ:
ಆಹಹ: ಓಹೋ; ಬೆಂದು: ಸುಟ್ಟುಹೋಗು; ಭುವನ: ಭೂಮಿ; ವಿಗ್ರಹ: ರೂಪ; ಯುದ್ಧ; ಸಮಯ: ಕಾಲ; ಲೀಲೆ: ಆಟ, ಕ್ರೀಡೆ; ಕುಹಕ: ಮೋಸ, ವಂಚನೆ; ಮತಿ: ಬುದ್ಧಿ; ತಂದರೈ: ತರು, ಬರೆಮಾಡು; ತ್ರೈಜಗ: ಮೂರು ಲೋಕ; ತಲ್ಲಣ: ಅಂಜಿಕೆ, ಭಯ; ರಹ: ಗುಟ್ಟು, ರಹಸ್ಯ; ಅಭ್ರ: ಆಗಸ; ತಳ: ಕೆಳಗು, ಪಾತಾಳ; ಮಹಿ: ಭೂಮಿ; ಬಂದನು: ಆಗಮಿಸು; ದೇವಮುನಿ: ನಾರದ; ದುಸ್ಸಹ: ಸಹಿಸಲಸಾಧ್ಯವಾದ; ಸಾಕು: ನಿಲ್ಲಿಸು;

ಪದವಿಂಗಡಣೆ:
ಅಹಹ +ಬೆಂದುದು +ಭುವನವ್+ಇದು +ವಿ
ಗ್ರಹದ +ಸಮಯವೆ +ತಮ್ಮ +ಲೀಲೆಗೆ
ಕುಹಕ+ಮತಿಗಳು+ ತಂದರೈ +ತ್ರೈಜಗಕೆ+ ತಲ್ಲಣವ
ರಹವಿದೇನ್+ಎಂದ್+ಅಭ್ರ+ ತಳದಿಂ
ಮಹಿಗೆ+ ಬಂದನು +ದೇವಮುನಿ
ದುಸ್ಸಹವಿದೇನೈ+ ಪಾರ್ಥ +ಹೋಹೋ +ಸಾಕು +ಸಾಕೆಂದ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತಂದರೈ ತ್ರೈಜಗಕೆ ತಲ್ಲಣವ
(೨) ಹೋಹೋ, ಆಹಹ – ಆಶ್ಚರ್ಯ ಸೂಚಕ ಪದಗಳ ಬಳಕೆ

ಪದ್ಯ ೯೧: ಮುನಿಗಳ ಒಟ್ಟಾರೆ ಮತವೇನಿತ್ತು?

ದೇವಮುನಿ ನಾರದನ ವಾಕ್ಯವು
ದೇವಕೀಸುತ ಕೃಷ್ಣನೆಂದುದ
ನಾವನೀಗಲ್ಲೆಂದೆನಲಿ ಬ್ರಹ್ಮಾದಿದೇವರಲಿ
ಆವ ಸಂಶಯವಿಲ್ಲ ಕುಂತೀ
ದೇವಿ ನೋನಲಿ ಯೆಂದು ಮುನಿತಿಲ
ಕಾವಳಿಯು ತಮತಮಗೆ ನುಡಿಯಲು ಭೀಷ್ಮ ಕೈಗೊಂಡ (ಆದಿ ಪರ್ವ, ೨೧ ಸಂಧಿ, ೯೧ ಪದ್ಯ)

ತಾತ್ಪರ್ಯ:
ದೇವರ್ಷಿಗಳಾದ ನಾರದರು, ದೇವಕೀಸುತನಾದ ಕೃಷ್ಣನ ಮಾತುಗಳು ಬ್ರಹ್ಮಾದಿ ದೇವತೆಗಳು ಅಲ್ಲವೆನ್ನಲಾಗದು, ಅಂತಹದರಲ್ಲಿ ನಾರದರು ಹೇಳಿದರಲ್ಲಿ ಯಾವ ಸಂಶಯವೂ ಇಲ್ಲ, ಕುಂತಿದೇವಿಯು ವ್ರತವನ್ನು ಆಚರಿಸಲಿ ಎಂದು ಮುನಿಸಮೂಹವು ಅಭಿಪ್ರಾಯಪಡಲು, ಭೀಷ್ಮನು ಅವರ ಮಾತನ್ನು ಸ್ವೀಕರಿಸಿದನು.

ಅರ್ಥ:
ದೇವಮುನಿ: ನಾರದ; ದೇವ: ಸುರರು; ಮುನಿ: ಋಷಿ; ವಾಕ್ಯ: ನುಡಿ; ದೇವಕೀಸುತ: ಕೃಷ್ಣ; ಸಂಶಯ: ಅನುಮಾನ, ಸಂದೇಹ; ಮುನಿತಿಲಕ: ಮುನಿಗಳಲ್ಲಿ ಶ್ರೇಷ್ಠರಾದವರು; ಆವಳಿ: ಗುಂಪು; ನುಡಿ: ಮಾತು;

ಪದವಿಂಗಡಣೆ:
ದೇವಮುನಿ+ ನಾರದನ+ ವಾಕ್ಯವು
ದೇವಕೀಸುತ +ಕೃಷ್ಣನ್+ ಎಂದುದನ್
ಆವನ್+ಈಗಲ್+ಎಂದೆನಲಿ+ ಬ್ರಹ್ಮಾದಿ+ದೇವರಲಿ
ಆವ +ಸಂಶಯವಿಲ್ಲ +ಕುಂತೀ
ದೇವಿ +ನೋನಲಿ +ಯೆಂದು +ಮುನಿತಿಲ
ಕಾವಳಿಯು +ತಮತಮಗೆ+ ನುಡಿಯಲು +ಭೀಷ್ಮ +ಕೈಗೊಂಡ

ಅಚ್ಚರಿ:
(೧) ದೇವಮುನಿ ಎಂದರೆ ನಾರದರು, ದೇವಕೀಸುತ ಅಂದರೆ ಕೃಷ್ಣ, ಆದರು ನಾರದ, ಕೃಷ್ಣನ ಹೆಸರನ್ನು ಹೇಳಿರುವುದು, ೧, ೨ ಸಾಲಿನಲ್ಲಿ
(೨) ದೇವ, ದೇವಿ – ೧,೨, ೫ ಸಾಲಿನ ಮೊದಲ ಪದ