ಪದ್ಯ ೩೭: ಯಾರ ದೆಸೆಯಿಂದ ದ್ವಾಪರಯುಗದಲ್ಲಿ ಧರ್ಮ ನಿಂತಿದೆ?

ಆ ಯುಗದ ತರುವಾಯಲಾ ತ್ರೇ
ತಾಯುಗವಲೇ ಬಳಿಕ ಧರ್ಮದ
ಲಾಯದಲಿ ಕಟ್ಟಿದರ್ಧರ್ಮವನೊಂದು ಪಾದದಲಿ
ರಾಯ ಕೇಳೈ ದ್ವಾಪರದಲಿ ದೃ
ಢಾಯದಲಿ ತಾ ಧರ್ಮವೆರಡಡಿ
ಬೀಯವಾದುದು ನಿಂದುದೆನಿಸಿತು ನಿನ್ನ ದೆಸೆಯಿಂದ (ಅರಣ್ಯ ಪರ್ವ, ೧೫ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕೃತಯುಗದ ಬಳಿಕ ತ್ರೇತಾಯುಗವು ಬರಲು ಧರ್ಮದ ಲಾಯದಲ್ಲಿ ಒಂದು ಪಾದ ಅಧರ್ಮವನ್ನು ಕಟ್ಟಿದರು. ಧರ್ಮವು ಮೂರೇ ಪಾದಗಳಿಂದ ನಿಂತಿತು, ಬಳಿಕ ಬಂದ ದ್ವಾಪರ ಯುಗದಲ್ಲಿ ಧರ್ಮದ ಎರಡ್ ಪಾದಗಳು ಲೋಪವಾಗಿ ಎರಡೇ ಪಾದಗಳುಳಿದವು, ಎಲೈ ರಾಜ ನಿನ್ನ ದೆಸೆಯಿಂದ ಧರ್ಮವು ನಿಂತೆದೆ ಎಂದು ಮುನಿಪ ತಿಳಿಸಿದರು.

ಅರ್ಥ:
ಯುಗ: ವಿಶ್ವದ ದೀರ್ಘವಾದ ಕಾಲಖಂಡ; ತರುವಾಯ: ನಂತರ; ಬಳಿಕ: ನಂತರ; ಧರ್ಮ: ಧಾರಣ ಮಾಡಿದುದು; ಲಾಯ: ಕುದುರೆ ಕಟ್ಟುವ ಜಾಗ; ಕಟ್ಟು: ಬಂಧಿಸು; ಅಧರ್ಮ: ನ್ಯಾಯವಲ್ಲದುದು; ಪಾದ: ಚರಣ; ರಾಯ: ಒಡೆಯ; ಕೇಳು: ಆಲಿಸು; ದೃಢ: ಗಟ್ಟಿಯಾದುದು; ಆಯ: ಪ್ರಮಾಣ, ಪರಿಮಿತಿ; ಬೀಯ: ವ್ಯಯ, ನಷ್ಟ; ನಿಂದು: ನಿಲ್ಲಿಸು; ದೆಸೆ: ಕಾರಣ;

ಪದವಿಂಗಡಣೆ:
ಆ +ಯುಗದ +ತರುವಾಯಲ್+ಆ+ ತ್ರೇ
ತಾ+ಯುಗವಲೇ +ಬಳಿಕ +ಧರ್ಮದ
ಲಾಯದಲಿ +ಕಟ್ಟಿದ್+ಅರ್ಧರ್ಮವನ್+ಒಂದು +ಪಾದದಲಿ
ರಾಯ +ಕೇಳೈ +ದ್ವಾಪರದಲಿ +ದೃ
ಢಾಯದಲಿ +ತಾ +ಧರ್ಮವ್+ಎರಡಡಿ
ಬೀಯವಾದುದು +ನಿಂದುದ್+ಎನಿಸಿತು +ನಿನ್ನ +ದೆಸೆಯಿಂದ

ಅಚ್ಚರಿ:
(೧) ಧರ್ಮಜನ ಹಿರಿಮೆ: ರಾಯ ಕೇಳೈ ದ್ವಾಪರದಲಿ ದೃಢಾಯದಲಿ ತಾ ಧರ್ಮವೆರಡಡಿ
ಬೀಯವಾದುದು ನಿಂದುದೆನಿಸಿತು ನಿನ್ನ ದೆಸೆಯಿಂದ