ಪದ್ಯ ೮: ಕೃಷ್ಣನು ಪಾಂಡವರನ್ನು ಹೇಗೆ ಸಂತೈಸಿದನು?

ಬೇರೆ ಬೇರೈವರನು ತೆಗೆದು ಮು
ರಾರಿಯಪ್ಪಿದನಡಿಗಡಿಗೆ ದೃಗು
ವಾರಿಗಳನೊದ್ರಸಿದನು ಪೀತಾಂಬರದ ಸೆರಗಿನಲಿ
ಸಾರು ಸಾರೆನಲುಗ್ಗಡಣೆಯ ವಿ
ಕಾರವಿನ್ನೇಕೆನುತ ರಾಯನ
ನಾರಿ ಬಂದಳು ಕವಿದು ಬಿದ್ದಳು ಹರಿಯ ಚರಣದಲಿ (ಅರಣ್ಯ ಪರ್ವ, ೨ ಸಂಧಿ, ೮ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಪ್ರತಿಯೊಬ್ಬ ಪಾಂಡವರನ್ನು ಬೇರೆ ಬೇರೆಯಾಗಿ ಅಪ್ಪಿಕೊಂಡು ಅವರ ಕಣ್ಣೀರನ್ನು ತನ್ನ ರೇಷ್ಮೆಯ ಉತ್ತರೀಯದಲ್ಲಿ ಒರಸಿ ಸಂತೈಸುತ್ತಿರಲು, ದಾರಿ ಬಿಡಿ ಪಕ್ಕಕ್ಕೆ ಸರಿಯಿರಿ ಎಂಬ ಕೂಗು ಕೇಳಿಬರಲು, ದ್ರೌಪದಿಯು ಈ ಗೌರವರದ ವಿಕಾರವು ಬೇಡ ಎನ್ನುತ್ತಾ ಬಂದು ಶ್ರೀಕೃಷ್ಣನ ಪಾದಗಳ ಮೇಲೆ ಕವಿದು ಬಿದ್ದಳು.

ಅರ್ಥ:
ಬೇರೆ: ಅನ್ಯ; ತೆಗೆದು: ಎತ್ತಿಕೊಳ್ಳು; ಮುರಾರಿ: ಕೃಷ್ಣ; ಅಪ್ಪು: ಆಲಂಗಿಸು; ಅಡಿಗಡಿಗೆ: ಮತ್ತೆ ಮತ್ತೆ; ಧೃಗುವಾರಿ: ಕಣ್ಣಿರು; ಒರಸು: ಸಾರಿಸು; ಪೀತಾಂಬರ: ರೇಷ್ಮೆ ಬಟ್ಟೆ; ಸೆರಗು: ಉತ್ತರೀಯ; ಸಾರು: ಸರಿ, ಜಾಗ ಬಿಡು; ಉಗ್ಗಡ: ಅತಿಶಯ; ವಿಕಾರ: ಬದಲಾವಣೆ, ಮಾರ್ಪಾಟು; ರಾಯ: ರಾಜ; ನಾರಿ: ಹೆಣ್ಣು; ಬಂದಳು: ಆಗಮಿಸು; ಕವಿ: ಮುಚ್ಚು; ಬಿದ್ದಳು: ಎರಗು; ಹರಿ: ಕೃಷ್ಣ; ಚರಣ: ಪಾದ;

ಪದವಿಂಗಡಣೆ:
ಬೇರೆ +ಬೇರ್+ಐವರನು +ತೆಗೆದು +ಮು
ರಾರಿ+ಅಪ್ಪಿದನ್+ಅಡಿಗಡಿಗೆ +ದೃಗು
ವಾರಿಗಳನ್+ ಒರಸಿದನು +ಪೀತಾಂಬರದ+ ಸೆರಗಿನಲಿ
ಸಾರು +ಸಾರ್+ಎನಲ್+ಉಗ್ಗಡಣೆಯ +ವಿ
ಕಾರವ್+ಇನ್ನೇಕೆನುತ +ರಾಯನ
ನಾರಿ+ ಬಂದಳು+ ಕವಿದು +ಬಿದ್ದಳು +ಹರಿಯ+ ಚರಣದಲಿ

ಅಚ್ಚರಿ:
(೧) ದ್ರೌಪದಿಯನ್ನು ರಾಯನ ನಾರಿ ಎಂದು ಕರೆದಿರುವುದು
(೨) ಮುರಾರಿ, ದೃಗುವಾರಿ, ರಾಯನ ನಾರಿ – ಅಂತ್ಯಪ್ರಾಸದ ಪದಗಳು
(೩) ದ್ರೌಪದಿಯು ಎರಗುವ ಚಿತ್ರಣ – ವಿಕಾರವಿನ್ನೇಕೆನುತ ರಾಯನ ನಾರಿ ಬಂದಳು ಕವಿದು ಬಿದ್ದಳು ಹರಿಯ ಚರಣದಲಿ

ಪದ್ಯ ೩೩: ಪಾಂಡವರ ಕೌರವರ ಸೈನ್ಯದ ಸ್ಥಿತಿ ಹೇಗಿತ್ತು?

ಆರಿತದು ಬೊಬ್ಬೆಯಲಿ ದುಗುಡದ
ಭಾರದಲಿ ತಲೆಗುತ್ತಿತಿವರು
ಬ್ಬಾರದಲಿ ಭುಲ್ಲವಿಸಿತವರು ವಿಘಾತಿಯಿಂದಿವರು
ಪೂರವಿಸಿದುದು ಪುಳಕದಲಿ ದೃಗು
ವಾರಿ ಪೂರದಲಿವರಖಿಳ ಪರಿ
ವಾರವಿದ್ದುದು ಕೇಳು ಜನಮೇಜಯ ಮಹೀಪಾಲ (ಕರ್ಣ ಪರ್ವ, ೧೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ಜನಮೇಜಯ ಮಹಾರಾಜ ಕೇಳು, ಪಾಂಡವ ಕೌರವರ ಸೈನ್ಯವು ಹಿಂದಿರುಗಿತು. ಪಾಂಡವರು ಗೆದ್ದ ಸಂತೋಷದಿಂದ ಬೊಬ್ಬೆಯಿಟ್ಟರು, ಕೌರವರು ಸೋತ ದುಃಖದಿಂದ ತಲೆತಗ್ಗಿಸಿದರು. ಜಯದ ಆರ್ಭಟೆಯಿಂದ ಅವರು ಸಂತೋಷಗೊಂಡರು. ಒದೆ ತಿಂದು ಇವರು ದುಃಖಿತರಾದರು. ಪಾಂಡವರು ವಿಜಯದಿಂದ ರೋಮಾಂಚನಗೊಂಡರು, ಇವರು ಸೋತು ಕಣ್ಣಿರಿಟ್ಟರೆಂದು ವೈಶಂಪಾಯನರು ಭಾರತದ ಕಥೆಯನ್ನು ತಿಳಿಸುತ್ತಿದ್ದರು.

ಅರ್ಥ:
ಬೊಬ್ಬೆ: ಜೋರಾದ ಶಬ್ದ; ದುಗುಡು: ದುಃಖ; ಭಾರ: ಹೊರೆ; ತಲೆ: ಶಿರ; ತಲೆಗುತ್ತು: ತಲೆ ತಗ್ಗಿಸು; ಉಬ್ಬಾರ: ಸಂಭ್ರಮ, ಹಿಗ್ಗು; ಭುಲ್ಲವಿಸು: ಉತ್ಸಾಹಗೊಳ್ಳು; ವಿಘಾತ: ನಾಶ, ಧ್ವಂಸ; ಪೂರವಿಸು: ತುಂಬು; ಪುಳಕ: ರೋಮಾಂಚನ; ದೃಗುವಾರಿ: ಕಣ್ಣೀರು; ಪೂರದ:ತುಂಬ; ಅಖಿಳ: ಎಲ್ಲಾ; ಪರಿವಾರ: ಸಂಬಂಧದವರು; ಮಹೀಪಾಲ: ರಾಜ; ಮಹೀ: ಭೂಮಿ;

ಪದವಿಂಗಡಣೆ:
ಆರಿತದು +ಬೊಬ್ಬೆಯಲಿ +ದುಗುಡದ
ಭಾರದಲಿ+ ತಲೆಗುತ್ತಿತ್+ಇವರ್
ಉಬ್ಬಾರದಲಿ +ಭುಲ್ಲವಿಸಿತ್+ಅವರು +ವಿಘಾತಿಯಿಂದ್+ಇವರು
ಪೂರವಿಸಿದುದು+ ಪುಳಕದಲಿ +ದೃಗು
ವಾರಿ +ಪೂರದಲ್+ಇವರ್+ಅಖಿಳ +ಪರಿ
ವಾರವಿದ್ದುದು +ಕೇಳು +ಜನಮೇಜಯ +ಮಹೀಪಾಲ

ಅಚ್ಚರಿ:
(೧) ದೃಗುವಾರಿ, ದುಗುಡ, ವಿಘಾತಿ – ಕೌರವರ ಸ್ಥಿತಿಯನ್ನು ವಿವರಿಸಲು ಬಳಸಿದ ಪದ
(೨) ಬೊಬ್ಬೆ, ಭುಲ್ಲವಿಸು, ಪೂರವಿಸು – ಪಾಂಡವರ ಸ್ಥಿತಿಯನ್ನು ವಿವರಿಸಲು ಬಳಸಿದ ಪದ

ಪದ್ಯ ೧೨: ಭೀಮನು ಯುದ್ಧಕ್ಕೆ ಹೇಗೆ ನಡೆದನು?

ವೈರಿ ಕರ್ಣನ ಕಾಂತೆಯರ ದೃಗು
ವಾರಿ ಧಾರೆಯಲೆನ್ನ ಭಾರಿಯ
ಭೂರಿ ಕೋಪಾನಳನ ಲಳಿಯನು ತಗ್ಗಿಸುವೆನೆನುತ
ಧಾರುಣೀಪತಿಗೆರಗಿ ನಿಜ ಪರಿ
ವಾರವನು ಸುಯ್ದಾನವರಸೆನು
ತಾರುಭಟೆಯಲಿ ಭೀಮ ಮೊಳಗಿದನಹಿತ ಮೋಹರಕೆ (ಕರ್ಣ ಪರ್ವ, ೧೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ನನ್ನ ಶತ್ರುವಾದ ಕರ್ಣನ ಮಡದಿಯರ ಕಣ್ಣೀರಿನಿಂದ ನನ್ನ ಮಹಾಕೋಪವೆಂಬ ಬೆಂಕಿಯ ಜ್ವಾಲೆಯ ರಭಸವನ್ನು ಕಡಿಮೆ ಮಾಡಿಕೊಳ್ಳುತ್ತೇನೆ ಎಂದು ಭೀಮನು ನಿಶ್ಚಯಿಸಿದನು. ಧರ್ಮರಾಯರಿಗೆ ನಮಸ್ಕರಿಸಿ ತನ್ನ ಪರಿವಾರದವರಿಗೆ ದೊರೆಯನ್ನು ಜೋಪಾನವಾಗಿ ನೋಡಿಕೊಳ್ಳಿ ಎಂದು ಹೇಳಿ ಭೀಮನು ಆರ್ಭಟೆಯಿಂದ ಶತ್ರು ಸೈನ್ಯದತ್ತ ನುಗ್ಗಿದನು.

ಅರ್ಥ:
ವೈರಿ: ಅರಿ, ಶತ್ರು; ಕಾಂತೆ: ಹೆಣ್ಣು; ದೃಗುವಾರಿ: ಕಣ್ಣೀರು; ಧಾರೆ: ರಭಸ; ಭಾರಿ: ಭೀಕರವಾದ; ಭೂರಿ: ಹೆಚ್ಚು, ಅಧಿಕ; ಕೋಪ: ರೋಷ; ಅನಲ: ಬೆಂಕಿ; ಲಳಿ:ರಭಸ, ಆವೇಶ; ತಗ್ಗಿಸು: ಕಡಿಮೆ ಮಾಡು; ಧಾರುಣಿ: ಭೂಮಿ; ಧಾರುಣೀಪತಿ: ರಾಜ; ಪರಿವಾರ: ಬಾಂಧವರು; ಸುಯ್ದಾನ: ರಕ್ಷಣೆ, ಕಾಪು; ಅರಸು: ಹುಡುಕು; ಆರುಭಟೆ: ಗರ್ಜನೆ; ಮೊಳಗು: ಧ್ವನಿ, ಸದ್ದು; ಮೋಹರ: ಯುದ್ಧ; ಅಹಿತ: ವೈರಿ;

ಪದವಿಂಗಡಣೆ:
ವೈರಿ+ ಕರ್ಣನ +ಕಾಂತೆಯರ +ದೃಗು
ವಾರಿ +ಧಾರೆಯಲ್+ಎನ್ನ +ಭಾರಿಯ
ಭೂರಿ +ಕೋಪ+ ಅನಳನ+ ಲಳಿಯನು +ತಗ್ಗಿಸುವೆನೆನುತ
ಧಾರುಣೀಪತಿಗ್+ಎರಗಿ+ ನಿಜ +ಪರಿ
ವಾರವನು +ಸುಯ್ದಾನವರಸೆನುತ್
ಆರುಭಟೆಯಲಿ+ ಭೀಮ +ಮೊಳಗಿದನ್+ಅಹಿತ+ ಮೋಹರಕೆ

ಅಚ್ಚರಿ:
(೧) ಕಣ್ಣೀರಿಗೆ ದೃಗುವಾರಿ ಪದದ ಬಳಕೆ
(೨) ಭಾರಿಯ ಭೂರಿ – ಪದಗಳ ಬಳಕೆ