ಪದ್ಯ ೨೯: ಅರ್ಜುನನು ಯಾರನ್ನು ಮನ್ನಿಸಿದನು?

ಎನೆ ಹಸಾದವೆನುತ್ತೆ ಯಮನಂ
ದನಗೆ ಭೀಮಂಗೆರಗಿದನು ಮುನಿ
ಜನಕೆ ಮೈಯಿಕ್ಕಿದನು ಮುಳುಗಿದನಕ್ಷತೌಫದಲಿ
ವನಜಮುಖಿ ಮುನಿವಧುಗಳಾಶೀ
ರ್ವಿನುತ ದಧಿ ದೂರ್ವಾಕ್ಷತೆಯನು
ಬ್ಬಿನಲಿ ಕೈಕೊಳುತನಿಬರನು ಮನ್ನಿಸಿದನುಚಿತದಲಿ (ಅರಣ್ಯ ಪರ್ವ, ೫ ಸಂಧಿ, ೨೯ ಪದ್ಯ)

ತಾತ್ಪರ್ಯ:
ಧರ್ಮಜನ ಹಿತನುಡಿಗಳನ್ನು ಆಲಿಸಿದ ಬಳಿಕ ಅರ್ಜುನನು ಇದು ನನಗೆ ಮಹಾಪ್ರಸಾದ ವೆಂದು ಧರ್ಮಜನಿಗೆ ಮತ್ತು ಭೀಮನಿಗೆ ನಮಿಸಿ, ಅಲ್ಲಿದ ಸಮಸ್ತ ಋಷಿಗಳಿಗೂ ನಮಸ್ಕರಿಸಿ ಅವರು ಆಶೀರ್ವಾದ ಪೂರ್ವಕವಾಗಿ ಹಾಕಿದ ಅಕ್ಷತೆಗಳಲ್ಲಿ ಮುಳುಗಿದನು. ಋಶಿಮುನಿಗಳ ಹೆಂಡತಿಯರ ಆಶೀರ್ವಾದವನ್ನು ಪಡೆದು, ದ್ರೌಪದಿಯ ಅನುಮತಿಯನ್ನು ಪಡೆದು ಅವರು ಕೊಟ್ಟ ಮೊಸರು, ದರ್ಭೆ, ಅಕ್ಷತೆಗಳನ್ನು ತೆಗೆದುಕೊಂಡು ಅವರೆಲ್ಲರನ್ನು ಸರಿಯಾದ ರೀತಿಯಲ್ಲಿ ಗೌರವಿಸಿದನು.

ಅರ್ಥ:
ಹಸಾದ: ಪ್ರಸಾದ; ನಂದನ: ಮಗ; ಎರಗು: ನಮಸ್ಕರಿಸು; ಮುನಿ: ಋಷಿ; ಜನ: ಗುಂಪು; ಮೈಯಿಕ್ಕು: ನಮಸ್ಕರಿಸು; ಮುಳುಗು: ತೋಯು; ಅಕ್ಷತೆ: ಅರಿಸಿನ ಅಥವಾ ಕುಂಕುಮ ಲೇಪಿತ ಮಂತ್ರಿತ ಅಕ್ಕಿ; ವನಜ: ಕಮಲ; ವನಜಮುಖಿ: ಕಮಲದಂತ ಮುಖವುಳ್ಳವಳು (ದ್ರೌಪದಿ); ಮುನಿ: ಋಷಿ; ವಧು: ಹೆಣ್ಣು; ಆಶೀರ್ವಿನುತ: ಹಾರೈಕೆಯನ್ನು ಪಡೆದು, ಸ್ತುತಿಗೊಂಡ; ದಧಿ: ಮೊಸರು; ದೂರ್ವಕ್ಷತೆ: ದರ್ಭ, ಅಕ್ಷತೆ; ಉಬ್ಬು: ಹಿಗ್ಗು; ಕೈಕೊಳು: ತೆಗೆದುಕೋ; ಅನಿಬರು: ಅಷ್ಟು ಜನರನ್ನು; ಮನ್ನಿಸು: ಗೌರವಿಸು; ಉಚಿತ: ಸರಿಯಾದ;

ಪದವಿಂಗಡಣೆ:
ಎನೆ +ಹಸಾದವ್+ಎನುತ್ತೆ+ ಯಮನಂ
ದನಗೆ +ಭೀಮಂಗ್+ಎರಗಿದನು +ಮುನಿ
ಜನಕೆ+ ಮೈಯಿಕ್ಕಿದನು +ಮುಳುಗಿದನ್+ಅಕ್ಷತೌಫದಲಿ
ವನಜಮುಖಿ +ಮುನಿವಧುಗಳ್+ಆಶೀ
ರ್ವಿನುತ +ದಧಿ+ದೂರ್ವಾಕ್ಷತೆಯನ್
ಉಬ್ಬಿನಲಿ +ಕೈಕೊಳುತ್+ಅನಿಬರನು+ ಮನ್ನಿಸಿದನ್+ಉಚಿತದಲಿ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮುನಿಜನಕೆ ಮೈಯಿಕ್ಕಿದನು ಮುಳುಗಿದನಕ್ಷತೌಫದಲಿ