ಪದ್ಯ ೫೧: ಯಾರನ್ನು ದುಷ್ಟರು ಮುಟ್ಟಲ್ಲಿಕ್ಕಾಗುವುದಿಲ್ಲ?

ಮೃಷ್ಟಭೋಜನದಿಂದ ನಾವ್ ಸಂ
ತುಷ್ಟರಾಗೊಲಿದುದನು ಬೇಡೆನೆ
ದುಷ್ಟಕೌರವ ನಮ್ಮ ಕಳುಹಿದ ಧೂರ್ತವಿದ್ಯೆಯಲಿ
ಕಷ್ಟವೇ ಕೈಗಟ್ಟಿತಲ್ಲದೆ
ಕೆಟ್ಟರೇ ಪಾಂಡವರು ಹರಿಪದ
ನಿಷ್ಠರನು ನಿಲುಕುವನೆ ದುರ್ಜನನೆಂದನಾ ಮುನಿಪ (ಅರಣ್ಯ ಪರ್ವ, ೧೭ ಸಂಧಿ, ೫೧ ಪದ್ಯ)

ತಾತ್ಪರ್ಯ:
ಎಲೈ ರಾಜ ಕೇಳು, ಕೌರವನು ಮೃಷ್ಟಾನ್ನ ಭೋಜನದಿಂದ ನಮ್ಮನ್ನು ತೃಪ್ತಿಪಡಿಸಿದಾಗ ಏನು ಬೇಕೋ ಕೇಳು ಎಂದು ನಾವು ಹೇಳಿದೆವು. ದ್ರೌಪದಿಯ ಊಟವಾದ ಮೇಲೆ ನಿಮ್ಮಲ್ಲಿಗೆ ಹೋಗಿ ಭೋಜನವನ್ನು ಬೇಡಿರಿ ಎಂದು ಧೂರ್ತನಾದ ಅವನು ನಮ್ಮನ್ನು ಕಳಿಸಿದನು. ನಿಮಗೆ ಕಷ್ಟವನ್ನು ಕೊಡುವುದು ಅವನ ಉದ್ದೇಶ. ಆದರೆ ಆ ಕಷ್ಟದ ಕೈಗಳು ಕಟ್ಟಿ ಹೋದವೇ ಹೊರತು ಪಾಂಡವರು ಕೆಡಲಿಲ್ಲ. ಹರಿಭಕ್ತರನ್ನು ದುರ್ಜನರು ಮುಟ್ಟಲು ಸಾಧ್ಯವೇ? ಎಂದು ದೂರ್ವಾಸ ಮುನಿಗಳು ಹೇಳಿದರು.

ಅರ್ಥ:
ಮೃಷ್ಟ: ಸವಿಯಾದ; ಭೋಜನ: ಊಟ; ಸಂತುಷ್ಟ: ಸಂತಸ; ಒಲಿ: ಸಮ್ಮತಿಸು, ಬಯಸು; ಬೇಡ: ತ್ಯಜಿಸು; ದುಷ್ಟ: ದುರುಳ; ಕಳುಹು: ತೆರಳು; ಧೂರ್ತ: ಕೆಟ್ಟವ; ವಿದ್ಯೆ: ಬುದ್ಧಿ; ಕಷ್ಟ: ಕಠಿಣ; ಕೈಗಟ್ಟು: ನೀಡು; ಕೆಟ್ಟರು: ಹಾಳಾಗು; ಹರಿ: ಕೃಷ್ಣ; ಪದ: ಚರಣ; ನಿಷ್ಠ: ಶ್ರದ್ಧೆಯುಳ್ಳವನು; ನಿಲುಕು: ಎಟುಕಿಸಿಕೊಳ್ಳು; ದುರ್ಜನ: ದುಷ್ಟ; ಮುನಿ: ಋಷಿ;

ಪದವಿಂಗಡಣೆ:
ಮೃಷ್ಟ+ಭೋಜನದಿಂದ +ನಾವ್ +ಸಂ
ತುಷ್ಟರಾಗ್+ಒಲಿದುದನು+ ಬೇಡ್+ಎನೆ
ದುಷ್ಟಕೌರವ +ನಮ್ಮ +ಕಳುಹಿದ+ ಧೂರ್ತ+ವಿದ್ಯೆಯಲಿ
ಕಷ್ಟವೇ +ಕೈಗಟ್ಟಿತಲ್ಲದೆ
ಕೆಟ್ಟರೇ +ಪಾಂಡವರು +ಹರಿಪದ
ನಿಷ್ಠರನು +ನಿಲುಕುವನೆ +ದುರ್ಜನನ್+ಎಂದನಾ+ ಮುನಿಪ

ಅಚ್ಚರಿ:
(೧) ಹರಿಭಕ್ತರ ಹಿರಿಮೆ – ಹರಿಪದನಿಷ್ಠರನು ನಿಲುಕುವನೆ ದುರ್ಜನ
(೨) ಮೃಷ್ಟ, ಸಂತುಷ್ಟ, ದುಷ್ಟ, ಕಷ್ಟ, ನಿಷ್ಠ – ಪ್ರಾಸ ಪದಗಳು