ಪದ್ಯ ೫೯: ಭೀಮನು ಗಾಂಧಾರಿಗೆ ಏನೆಂದು ಬಿನ್ನೈಸಿದನು?

ಹೊರಿಸುವಡೆ ದುಷ್ಕೀರ್ತಿ ನಮ್ಮಲಿ
ಹೊರಿಗೆಯಾಯಿತು ನಾಭಿಯಿಂ ಕೆಳ
ಗೆರಗುವುದು ಗದೆಯಿಂದ ಸಲ್ಲದು ಶಸ್ತ್ರವಿದ್ಯೆಯಲಿ
ಅರಿಕೆಯಿಂದನ್ಯಾಯವೀ ಜಗ
ವರಿಯೆ ನಮ್ಮದು ತಾಯೆ ನೀ ಮನ
ಮುರಿಯದವಧರಿಸುವಡೆ ಬಿನ್ನಹವೆಂದನಾ ಭೀಮ (ಗದಾ ಪರ್ವ, ೧೧ ಸಂಧಿ, ೫೯ ಪದ್ಯ)

ತಾತ್ಪರ್ಯ:
ತಾಯೇ, ಹೊರಬೇಕೆಂದರೆ ನಾವು ದುಷ್ಕೀರ್ತಿಯನ್ನು ಹೊರುತ್ತೇವೆ. ಗದಾಯುದ್ಧದಲ್ಲಿ ನಾಭಿಯಿಂದ ಕೆಳಗೆ ಹೊಡೆಯುವುದು ಸಲ್ಲದು, ಈ ಅನ್ಯಾಯವನ್ನು ನಾವು ಮಾಡಿರುವುದು ಜಗತ್ತಿಗೇ ಗೊತ್ತಿದೆ, ನೀವು ಮನಸ್ಸನ್ನು ಮುರಿದುಕೊಳ್ಳದೆ ಕೇಳುವುದಾದರೆ ಬಿನ್ನೈಸುತ್ತೇವೆ ಎಂದು ಭೀಮನು ಗಾಂಧಾರಿಗೆ ನುಡಿದನು.

ಅರ್ಥ:
ಹೊರಿಸು: ಧರಿಸು, ಭಾರವನ್ನು ಹೇರು; ದುಷ್ಕೀರ್ತಿ: ಅಪಕೀರ್ತಿ; ನಾಭಿ: ಹೊಕ್ಕಳು; ಎರಗು: ಬೀಳು; ಸಲ್ಲದು: ಸರಿಹೊಂದು, ಒಪ್ಪಿಗೆಯಾಗು; ಶಸ್ತ್ರ: ಆಯುಧ; ವಿದ್ಯೆ: ಜ್ಞಾನ; ಅರಿಕೆ: ವಿಜ್ಞಾಪನೆ; ಅನ್ಯಾಯ: ಸರಿಯಲ್ಲದ; ಜಗ: ಪ್ರಪಂಚ; ಅರಿ: ತಿಳಿ; ಮನ: ಮನಸ್ಸು; ಮುರಿ: ಸೀಳು; ಅವಧರಿಸು: ಮನಸ್ಸಿಟ್ಟು ಕೇಳು; ಬಿನ್ನಹ: ಕೋರಿಕೆ;

ಪದವಿಂಗಡಣೆ:
ಹೊರಿಸುವಡೆ +ದುಷ್ಕೀರ್ತಿ +ನಮ್ಮಲಿ
ಹೊರಿಗೆಯಾಯಿತು +ನಾಭಿಯಿಂ +ಕೆಳಗ್
ಎರಗುವುದು +ಗದೆಯಿಂದ +ಸಲ್ಲದು+ ಶಸ್ತ್ರವಿದ್ಯೆಯಲಿ
ಅರಿಕೆಯಿಂದ್+ಅನ್ಯಾಯವೀ +ಜಗವ್
ಅರಿಯೆ +ನಮ್ಮದು +ತಾಯೆ +ನೀ +ಮನ
ಮುರಿಯದ್+ಅವಧರಿಸುವಡೆ +ಬಿನ್ನಹವೆಂದನಾ+ ಭೀಮ

ಅಚ್ಚರಿ:
(೧) ಹೊರಿ, ಅರಿ – ೧-೨, ೪,೫ ಸಾಲಿನ ಮೊದಲ ಪದ
(೨) ಅರಿ, ಮುರಿ – ಪ್ರಾಸ ಪದ

ಪದ್ಯ ೨೩: ಕುರುಸೇನೆಯ ರಾಜರು ಓಡಿಹೋಗುವುದನ್ನು ಹೇಗೆ ತಪ್ಪಿಸಲಾಯಿತು?

ನೃಪನ ಮೂದಲೆ ನಿಜಕುಲಕ್ರಮ
ಕಪಯಶೋಭಯ ಪಾರಲೌಕಿಕ
ದುಪಹತಿ ಪ್ರತಿಭಟರ ನಗೆ ಸೌಭಟಪರಿತ್ಯಾಗ
ಕೃಪಣತೆಯ ದುಷ್ಕೀರ್ತಿ ಭುಜಬಲ
ದಪದಶಾವಿರ್ಭಾವವೀ ಭೂ
ಮಿಪರ ಮರಳಿಚಿತೇನನೆಂಬೆನು ಭೂಪ ಕೇಳೆಂದ (ಗದಾ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ ಕೇಳು, ದುರ್ಯೋಧನನು ಹಂಗಿಸುವ ಪರಿ, ತಮ್ಮ ವಂಶಕ್ಕೆ ಬರುವ ಅಪಕೀರ್ತಿ, ಭಯ, ಪರಲೋಕದಲ್ಲಿ ಉತ್ತಮಗತಿಯ ನಾಶದ ಭಯ, ವಿರೋಧಿಗಳ ಅಪಹಾಸ್ಯದ ನಗೆ, ಅಸಹಾಯಕರಾಗಿ ದೀನರಾದರು ಎಂಬ ಕೆಟ್ಟ ಹೆಸರಿನ ಭೀತಿ, ತಮ್ಮ ಭುಜಬಲಕ್ಕೆ ಅಪದೆಸೆ ಬಂತೆಂಬ ಭಯ ಇವು ಕುರುಸೇನೆಯ ರಾಜರು ಓಡಿಹೋಗುವುದನ್ನು ತಪ್ಪಿಸಿದವು.

ಅರ್ಥ:
ನೃಪ: ರಾಜ; ಮೂದಲೆ: ಛೇಡಿಸುವಿಕೆ; ಕುಲ: ವಂಶ; ಕ್ರಮ: ರೀತಿ; ಅಪಯಶೋ: ಅಪಕೀರ್ತಿ; ಭಯ: ಅಂಜಿಕೆ; ಪಾರಲೌಕಿಕ: ಬೇರೆ ಲೋಕಕ್ಕೆ ಸಂಬಂಧಿಸಿದ; ಉಪಹತಿ: ಹೊಡೆತ; ಪ್ರತಿಭಟ: ವೀರೋಧಿ ಸೈನಿಕ; ನಗೆ: ಸಂತಸ; ಸೌಭಟ: ; ಪರಿತ್ಯಾಗ: ಬಿಡುವುದು; ಕೃಪಣ: ತುಚ್ಛವಾದ, ದೀನ; ದುಷ್ಕೀರ್ತಿ: ಅಪಯಶಸ್ಸು; ಭುಜಬಲ: ಬಾಹು ಪರಾಕ್ರಮ; ಅಪದಶ: ದುರದೃಷ್ಟ; ಆವಿರ್ಭಾವ: ಹುಟ್ಟುವುದು; ಭೂಮಿಪ: ರಾಜ; ಮರಳು: ಹಿಂದಿರುಗು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ನೃಪನ +ಮೂದಲೆ +ನಿಜ+ಕುಲಕ್ರಮಕ್
ಅಪಯಶೋ+ಭಯ +ಪಾರಲೌಕಿಕದ್
ಉಪಹತಿ+ ಪ್ರತಿಭಟರ+ ನಗೆ +ಸೌಭಟ+ಪರಿತ್ಯಾಗ
ಕೃಪಣತೆಯ +ದುಷ್ಕೀರ್ತಿ +ಭುಜಬಲದ್
ಅಪದಶ+ಆವಿರ್ಭಾವವ್+ಈ+ ಭೂ
ಮಿಪರ +ಮರಳಿಚಿತ್+ಏನನೆಂಬೆನು +ಭೂಪ +ಕೇಳೆಂದ

ಅಚ್ಚರಿ:
(೧) ಮೂದಲೆ, ಅಪಯಶ, ಉಪಹತಿ, ದುಷ್ಕೀರ್ತಿ, ಅಪದಶ – ಪದಗಳ ಬಳಕೆ

ಪದ್ಯ ೩೦: ದಾನವ ರಾಜನು ಹೇಗೆ ಅಬ್ಬರಿಸಿದನು?

ನೆರೆದಿರೈ ಪರಿಭವದ ನೆಲೆಯಲಿ
ನೆರೆದಿರೈ ದುಷ್ಕೀರ್ತಿ ಸತಿಯಲಿ
ನೆರೆದಿರೈ ಸಲೆ ಹೊರೆದಿರೈ ದುರ್ಗತಿಗೆ ಡೊಳ್ಳುಗಳ
ಸುರರಲೇ ನೀವ್ ನಿಮ್ಮ ಹೆಂಡಿರ
ಕುರುಳ ಕೈದೊಳಸಿಂಗೆ ಮಿಗೆ ಕಾ
ತರಿಸುತಿದೆ ವಾಸವನೊಡನೆ ವಾಸಿಗಳ ಬಿಡಿಯೆಂದ (ಅರಣ್ಯ ಪರ್ವ, ೧೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ದಾನವ ರಾಜನು ತನ್ನ ಸೈನಿಕರಿಗೆ, ಸೋಲಿನ ಬೀಡಿನಲ್ಲಿ ಸೇರಿದ್ದೀರಿ, ದುಷ್ಕೀರ್ತಿ ನಾರಿಯ ಸಂಗಕ್ಕೆ ಹೋದಿರಿ, ಈ ದುರ್ಗತಿಯನ್ನು ಅನುಭವಿಸಲೆಂದು ಡೊಳ್ಳು ಹೊಟ್ಟೆಗಳನ್ನು ಬೆಳೆಸಿದ್ದೀರಿ, ನಿಮ್ಮ ಹೆಂಡಿರ ಕರುಳಿನಲ್ಲಿ ದೇವತೆಗಳು ಕೈಯಾಡಿಸಲು ಕಾತರರಗಿದ್ದಾರೆ, ನೀವಿಲ್ಲಿ ತೆಪ್ಪಗಿದ್ದೀರಿ, ದೇವೇಂದ್ರನ ಮೇಲಿನ ಕೋಪವನ್ನು ಬಿಟ್ಟು ತೆಪ್ಪಗಿರಿ ಎಂದು ದಾನವರಾಜನು ಅಬ್ಬರಿಸಿದನು.

ಅರ್ಥ:
ನೆರೆ: ಸೇರು, ಗುಂಪು; ಪರಿಭವ: ಸೋಲು, ಪರಾಜಯ; ನೆಲೆ: ಸ್ಥಾನ; ದುಷ್ಕೀರ್ತಿ: ಅಪಯಶಸ್ಸು; ಸತಿ: ಹೆಂಡತಿ; ಸಲೆ: ಒಂದೇ ಸಮನೆ, ಸದಾ; ಹೊರೆ: ಹೊದಿಕೆ; ದುರ್ಗತಿ: ಕೆಟ್ಟ ಸ್ಥಿತಿ; ಡೊಳ್ಳು: ಬೊಜ್ಜು ಬೆಳೆದ ಹೊಟ್ಟೆ; ಸುರ: ದೇವತೆ; ಹೆಂಡಿರು: ಪತ್ನಿ; ಕುರುಳ: ಮರುಕ, ಪ್ರೀತಿ, ಅಂತಃಕರಣ; ಕೈದೊಳಸು: ಕೈವಶ, ಅಧೀನ; ಮಿಗೆ: ಅಧಿಕ, ಮತ್ತು; ಕಾತರಿಸು: ತವಕಗೊಳ್ಳು; ವಾಸವ: ಇಂದ್ರ; ವಾಸಿ: ಛಲ, ಹಠ; ಬಿಡಿ: ತೊರೆ;

ಪದವಿಂಗಡಣೆ:
ನೆರೆದಿರೈ +ಪರಿಭವದ +ನೆಲೆಯಲಿ
ನೆರೆದಿರೈ+ ದುಷ್ಕೀರ್ತಿ +ಸತಿಯಲಿ
ನೆರೆದಿರೈ +ಸಲೆ +ಹೊರೆದಿರೈ+ ದುರ್ಗತಿಗೆ+ ಡೊಳ್ಳುಗಳ
ಸುರರಲೇ+ ನೀವ್+ ನಿಮ್ಮ+ ಹೆಂಡಿರ
ಕುರುಳ +ಕೈದೊಳಸಿಂಗೆ +ಮಿಗೆ +ಕಾ
ತರಿಸುತಿದೆ+ ವಾಸವನೊಡನೆ+ ವಾಸಿಗಳ+ ಬಿಡಿಯೆಂದ

ಅಚ್ಚರಿ:
(೧) ಸೋಲಿಸುತ್ತಾರೆ ಎಂದು ಹೇಳುವ ಪರಿ – ನೆರೆದಿರೈ ಪರಿಭವದ ನೆಲೆಯಲಿ, ನೆರೆದಿರೈ ದುಷ್ಕೀರ್ತಿ ಸತಿಯಲಿ, ಸುರರಲೇ ನೀವ್ ನಿಮ್ಮ ಹೆಂಡಿರ ಕುರುಳ ಕೈದೊಳಸಿಂಗೆ
(೨) ಇಂದ್ರನನ್ನು ಕರೆದ ಪರಿ – ಕಾತರಿಸುತಿದೆ ವಾಸವನೊಡನೆ ವಾಸಿಗಳ ಬಿಡಿಯೆಂದ

ಪದ್ಯ ೪೭: ಕೌರವ ಸೈನ್ಯ ಏಕೆ ದುಃಖಿಸಿತು?

ವಾಯದಲಿ ಕೌರವರ ವಿಜಯ
ಶ್ರೀಯ ಸೆರೆವೋಯಿತ್ತು ಶಿವ ಶಿವ
ಕಾಯಲಾಪವರಿಲ್ಲಲಾ ಗುರುಸೂನು ಮೊದಲಾದ
ನಾಯಕರು ದುಷ್ಕೀರ್ತಿ ನಾರಿಯ
ನಾಯಕರು ಸುಪಲಾಯನದ ನಿ
ರ್ಣಾಯಕರು ಮಝ ಪೂತುರೆಂದುದು ನಿಖಿಳ ಪರಿವಾರ (ಕರ್ಣ ಪರ್ವ, ೧೩ ಸಂಧಿ, ೪೭ ಪದ್ಯ)

ತಾತ್ಪರ್ಯ:
ಮೋಸದಲಿ ಕೌರವನ ವಿಜಯಲಕ್ಷ್ಮೀ ಸೆರೆಯಾದಳಲ್ಲಾ ಶಿವ ಶಿವಾ, ಕಾಪಾಡಬೇಕಾದ ಪರಾಕ್ರಮಿಗಳಾದ ಅಶ್ವತ್ಥಾಮ ಮೊದಲಾದ ನಾಯಕರು ಅಪಕೀರ್ತಿ ನಾರಿಯ ಒಡೆಯರಾದರಲ್ಲಾ! ಭಲೇ ಭೇಷ್ ಮೊದಲೇ ಇವರೆಲ್ಲರೂ ತಮ್ಮ ಕೈಲಾಗದೆಂದು ನಿರ್ಣಯಿಸಿ ಪಲಾಯನ ಮಾಡಿದರು ಎಂದು ಕೌರವರ ಸೈನ್ಯದ ಪರಿವಾರದವರು ವ್ಯಥೆಪಟ್ಟರು.

ಅರ್ಥ:
ವಾಯ: ಕಾರಣ, ಸುಳ್ಳು, ಮೋಸ; ವಿಜಯ: ಗೆಲುವು, ಜಯ; ಶ್ರೀ: ಲಕ್ಷ್ಮಿ; ಸೆರೆ: ಬಂಧನ; ಕಾಯಲು: ಕಾಪಾಡಲು; ಕಾಯಲಾಪು: ಕಾಯಲು ಶಕ್ತನಾಗು; ಗುರುಸೂನು: ಆಚಾರ್ಯರ ಮಗ (ಅಶ್ವತ್ಥಾಮ); ಮೊದಲಾದ: ಮುಂತಾದ; ನಾಯಕ: ಒಡೆಯ; ದುಷ್ಕೀರ್ತಿ: ಅಪಖ್ಯಾತಿ; ನಾರಿ: ಹೆಣ್ಣು; ಸುಪಲಾಯನ: ಓಡಿಹೋಗು; ನಿರ್ಣಾಯಕ: ನಿರ್ಧಾರ ಮಾಡುವ; ಮಝ: ಭಲೆ; ಪೂತು: ಪಾಯ್ಕು, ಭೇಷ್; ನಿಖಿಳ: ಎಲ್ಲಾ; ಪರಿವಾರ: ಸುತ್ತಲಿನವರು, ಪರಿಜನ;

ಪದವಿಂಗಡಣೆ:
ವಾಯದಲಿ +ಕೌರವರ +ವಿಜಯ
ಶ್ರೀಯ +ಸೆರೆವೋಯಿತ್ತು +ಶಿವ+ ಶಿವ
ಕಾಯಲಾಪವರ್+ಇಲ್ಲಲಾ +ಗುರುಸೂನು +ಮೊದಲಾದ
ನಾಯಕರು +ದುಷ್ಕೀರ್ತಿ +ನಾರಿಯ
ನಾಯಕರು+ ಸುಪಲಾಯನದ +ನಿ
ರ್ಣಾಯಕರು+ ಮಝ +ಪೂತುರೆಂದುದು +ನಿಖಿಳ+ ಪರಿವಾರ

ಅಚ್ಚರಿ:
(೧) ನಾಯಕರನ್ನು ವಿವರಿಸುವ ಬಗೆ – ನಾಯಕರು ದುಷ್ಕೀರ್ತಿ ನಾರಿಯ ನಾಯಕರು ಸುಪಲಾಯನದ ನಿರ್ಣಾಯಕರು ಮಝ