ಪದ್ಯ ೬: ಕೌರವನು ಯಾರನ್ನು ತನ್ನ ಬಳಿ ನೇಮಿಸಿದನು?

ಆರು ಕುಹಕಿಗಳಾರು ದುರ್ಜನ
ರಾರು ಖುಲ್ಲರು ನೀತಿ ಬಾಹಿರ
ರಾರು ದುರ್ಬಲರವರು ನಿನ್ನರಮನೆಯ ಮಂತ್ರಿಗಳು
ಆರು ಹಿತವರು ನೀತಿ ಕೋವಿದ
ರಾರು ಸುಜನರು ಬಹು ಪರಾಕ್ರಮ
ರಾರವರ ಹೊರಬೀಸಿ ಕಾಬುದು ನಿನ್ನ ಮತವೆಂದ (ದ್ರೋಣ ಪರ್ವ, ೧ ಸಂಧಿ, ೬ ಪದ್ಯ)

ತಾತ್ಪರ್ಯ:
ಯಾರು ದುರ್ಜನರೋ, ಯಾರು ನೀಚರೋ, ನೀತಿಬಿಟ್ಟವರಾರೋ, ಯಾರು ದುರ್ಬಲರೋ, ಅವರೇ ನಿನ್ನ ಅರಮನೆಯ ಮಂತ್ರಿಗಳು, ಹಿತವರು, ನೀತಿಯನ್ನು ಚೆನ್ನಾಗಿ ಬಲ್ಲವರು, ಸುಜನರು, ಮಹಾಪರಾಕ್ರಮಿಗಳು ಯಾರಿರುವರೋ ಅವರನ್ನು ಹೊರಗಿಡಬೇಕು ಎನ್ನುವುದೇ ನಿನ್ನ ನಿರ್ಧಾರ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಕುಹಕ: ಮೋಸ, ವಂಚನೆ; ದುರ್ಜನ: ದುಷ್ಟ; ಖುಲ್ಲ: ದುಷ್ಟ, ನೀಚ; ಬಾಹಿರ: ಹೊರಗಿನವ; ದುರ್ಬಲ: ಬಲಹೀನವಾದ, ಶಕ್ತಿಹೀನ; ಅರಮನೆ: ರಾಜರ ಆಲಯ; ಮಂತ್ರಿ: ಸಚಿವ; ಹಿತ: ಒಳ್ಳೆಯದು, ಪ್ರಿಯಕರವಾದ; ನೀತಿ: ನಿಯಮ; ಕೋವಿದ: ಪಂಡಿತ; ಸುಜನ: ಒಳ್ಳೆಯ ಜನ,ಸಜ್ಜನ; ಪರಾಕ್ರಮ: ಕಲಿತನ, ಶೌರ್ಯ; ಕಾಬುದು: ಕಾಣಬೇಕು; ಮತ: ಅಭಿಪ್ರಾಯ, ಆಶಯ;

ಪದವಿಂಗಡಣೆ:
ಆರು +ಕುಹಕಿಗಳ್+ಆರು +ದುರ್ಜನರ್
ಆರು +ಖುಲ್ಲರು +ನೀತಿ +ಬಾಹಿರರ್
ಆರು +ದುರ್ಬಲರ್+ಅವರು +ನಿನ್ನ್+ಅರಮನೆಯ +ಮಂತ್ರಿಗಳು
ಆರು +ಹಿತವರು +ನೀತಿ +ಕೋವಿದರ್
ಆರು +ಸುಜನರು +ಬಹು +ಪರಾಕ್ರಮರ್
ಆರ್+ಅವರ+ ಹೊರಬೀಸಿ +ಕಾಬುದು +ನಿನ್ನ +ಮತವೆಂದ

ಅಚ್ಚರಿ:
(೧) ಆರು ಪದದ ಬಳಕೆ – ೧-೬ ಸಾಲಿನ ಮೊದಲ ಪದ
(೨) ದುಷ್ಟರನ್ನು ಹೇಳಲು ಬಳಸಿದ ಪದ – ಕುಹಕಿ, ದುರ್ಜನ, ಖುಲ್ಲ

ಪದ್ಯ ೨೩: ಭೀಷ್ಮರು ಯಾರು ದುರ್ಬಲರೆಂದು ಹೇಳಿದರು?

ದೈವ ಬಲವವರಲ್ಲಿ ನೀವೇ
ದೈವ ಹೀನರು ಧರ್ಮಪರರವ
ರೈವರೂ ಸತ್ಪುರುಷಶೀಲರು ನೀವಧಾರ್ಮಿಕರು
ಮುಯ್ವನಾನುವುದವರ್ಗೆ ಭುವನವು
ಬೈವುದೈ ನಿಮ್ಮಿನಿಬರನು ನಿಮ
ಗೈವಡಿಯ ಸಹಸಿಗಳವರು ದುರ್ಬಲರು ನೀವೆಂದ (ಭೀಷ್ಮ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಅವರಿಗೆ ದೈವಬಲವಿದೆ. ನೀವು ದೈವ ಹೀನರು. ಅವರೈವರೂ ಸತುಪುರುಷರ ಶೀಲವುಳ್ಳವರು. ಧರ್ಮಪರರು. ನೀವು ಅಧಾರ್ಮಿಕರು. ಲೋಕವು ಅವರಿಗೆ ಗೌರವವನ್ನು ಕೊಡುತ್ತದೆ. ಅವರ ಕೆಲಸದಲ್ಲಿ ಹೆಗಲು ಕೊಡುತ್ತದೆ. ಲೋಕವು ನಿಮ್ಮನ್ನು ಬೈಯ್ಯುತ್ತದೆ. ಅವರಿಗೆ ನಿಮಗಿಂತಲೂ ಐದು ಪಟ್ಟು ಹೆಚ್ಚಿನ ಸಾಹಸವಿದೆ, ನೀವು ದುರ್ಬಲರೆಂದು ಭೀಷ್ಮರು ನುಡಿದರು.

ಅರ್ಥ:
ದೈವ: ಭಗವಂತ; ಬಲ: ಶಕ್ತಿ; ಹೀನ: ಕೆಟ್ಟದು, ತ್ಯಜಿಸಿದ; ಧರ್ಮ: ಧಾರಣೆ ಮಾಡಿದುದು; ಸತ್ಪುರುಷ: ಒಳ್ಳೆಯ ಜನ; ಶೀಲ: ಗುಣ; ಅಧಾರ್ಮಿಕ: ಧರ್ಮದ ದಾರಿಯಲ್ಲಿ ನಡೆಯದವರು; ಮುಯ್ಯಿ: ಉಡುಗೊರೆ; ಭುವನ: ಭೂಮಿ; ಬೈವುದು: ಜರಿ; ಇನಿಬರ: ಇಷ್ಟು ಜನ; ಐವಡಿ: ಐದು ಪಟ್ಟು; ಸಹಸಿ: ಪರಾಕ್ರಮಿ; ದುರ್ಬಲ: ಶಕ್ತಿಹೀನ;

ಪದವಿಂಗಡಣೆ:
ದೈವ +ಬಲವ್+ಅವರಲ್ಲಿ +ನೀವೇ
ದೈವ +ಹೀನರು +ಧರ್ಮ+ಪರರ್+ಅವರ್
ಐವರೂ+ ಸತ್ಪುರುಷಶೀಲರು +ನೀವ್+ಅಧಾರ್ಮಿಕರು
ಮುಯ್ವನ್+ಆನುವುದ್+ಅವರ್ಗೆ +ಭುವನವು
ಬೈವುದೈ+ ನಿಮ್ಮಿನಿಬರನು+ ನಿಮಗ್
ಐವಡಿಯ +ಸಹಸಿಗಳ್+ಅವರು +ದುರ್ಬಲರು +ನೀವೆಂದ

ಅಚ್ಚರಿ:
(೧) ದೈವ ಪದದ ಬಳಕೆ – ದೈವ ಬಲವವರಲ್ಲಿ ನೀವೇದೈವ ಹೀನರು
(೨) ಧರ್ಮ ಪದದ ಬಳಕೆ – ಧರ್ಮಪರರವರೈವರೂ ಸತ್ಪುರುಷಶೀಲರು ನೀವಧಾರ್ಮಿಕರು

ಪದ್ಯ ೨೧: ಭೀಮನೇಕೆ ಮರುಗಿದನು?

ಮಿಡುಕದದು ಮಹಿಯಿಂದ ಭೀಮನ
ಕಡುಹು ನಿಮ್ದುದು ಬಾಲದಲಿ ತುದಿ
ನಡುಗದನಿಲಜನಂಗವಟ್ಟದ ಕಡುಹು ಕಂಪಿಸದು
ತೊಡಕೆ ಕೆಟ್ಟುದು ಕಾರ್ಯ ದುರ್ಬಲ
ನೊಡನೆ ಭಂಗವ್ಯಾಪ್ತಿ ತನ್ನನು
ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗಿದನು ಭೀಮ (ಅರಣ್ಯ ಪರ್ವ, ೧೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಹನುಮನ ಬಾಲವು ಭೂಮಿಯಿಂದ ಒಂದು ಚೂರು ಅಲುಗಾಡಲಿಲ್ಲ. ಭೀಮನ ಶಕ್ತಿಯು ಅದರೆದುರು ನಿಂತು ಹೋಯಿತು. ಬಾಲದ ತುದಿಯೂ ನಡುಗಲಿಲ್ಲ. ಭೀಮನ ಸರ್ವಶಕ್ತಿಯ ಪ್ರಯೋಗವೂ ನಿಷ್ಫಲವಾಯಿತು. ಆಗ ಭೀಮನು ಕಾರ್ಯದಲ್ಲಿ ತೊಡಗಿ ಕೆಟ್ಟು ಹೋದೆ, ದುರ್ಬಲನ ಜೊತೆ ಹೋರಿ ಅವಮಾನಿತನಾದೆ, ಹೀಗೆ ಯತ್ನದಲ್ಲಿ ಸೋತ ನನ್ನನ್ನು ಸುಡಬೇಕು ಎಂದುಕೊಂಡು ಹಿಂದಕ್ಕೆ ಸರಿದು ತುಂಬ ತಳಮಳಗೊಂಡನು.

ಅರ್ಥ:
ಮಿಡುಕು: ಅಲುಗಾಟ, ಚಲನೆ; ಮಹಿ: ಭೂಮಿ; ಕಡುಹು: ಸಾಹಸ, ಹುರುಪು; ನಿಂದು: ನಿಲ್ಲು; ಬಾಲ: ಪುಚ್ಛ; ತುದಿ: ಅಗ್ರಭಾಗ; ನಡುಗು: ನಡುಕ, ಕಂಪನ; ಅನಿಲಜ: ವಾಯುಪುತ್ರ (ಭೀಮ); ಅಂಗವಟ್ಟ: ಶರೀರ; ಕಂಪಿಸು: ಅಲುಗಾಡು; ತೊಡಕು: ಗೋಜು, ಗೊಂದಲ; ಕೆಟ್ಟು: ಸರಿಯಿಲ್ಲದ; ಕಾರ್ಯ: ಕೆಲಸ; ದುರ್ಬಲ: ಶಕ್ತಿಹೀನ; ಭಂಗ: ಚೂರು, ಮುರಿಯುವಿಕೆ; ವ್ಯಾಪ್ತಿ: ಹರಹು; ಸುಡು: ದಹಿಸು; ಹಿಮ್ಮೆಟ್ಟು: ಹಿಂದೆಸರಿ; ಮಮ್ಮಲ: ಅತಿಶಯವಾಗಿ, ವಿಶೇಷವಾಗಿ; ಮರುಗು: ತಳಮಳ;

ಪದವಿಂಗಡಣೆ:
ಮಿಡುಕದದು +ಮಹಿಯಿಂದ +ಭೀಮನ
ಕಡುಹು +ನಿಂದುದು +ಬಾಲದಲಿ+ ತುದಿ
ನಡುಗದ್+ಅನಿಲಜನ್+ಅಂಗವಟ್ಟದ +ಕಡುಹು +ಕಂಪಿಸದು
ತೊಡಕೆ +ಕೆಟ್ಟುದು +ಕಾರ್ಯ +ದುರ್ಬಲ
ನೊಡನೆ +ಭಂಗವ್ಯಾಪ್ತಿ +ತನ್ನನು
ಸುಡಲೆನುತ +ಹಿಮ್ಮೆಟ್ಟಿ +ಮಮ್ಮಲ +ಮರುಗಿದನು +ಭೀಮ

ಅಚ್ಚರಿ:
(೧) ಭಿಮನು ಕೊರಗಿದ ಪರಿ – ತೊಡಕೆ ಕೆಟ್ಟುದು ಕಾರ್ಯ ದುರ್ಬಲ ನೊಡನೆ ಭಂಗವ್ಯಾಪ್ತಿ ತನ್ನನು ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗಿದನು ಭೀಮ

ಪದ್ಯ ೭: ಧೃತರಾಷ್ಟ್ರನು ಯುದ್ಧದ ಬಗ್ಗೆ ಹೇಗೆ ಕುತೂಹಲಗೊಂಡಿದ್ದನು?

ಹೇಳು ಸಂಜಯ ವಿಸ್ತರಿಸಿ ಕಾ
ಲಾಳು ಮೇಲಾಳಿನಲಿ ಭೀಮನ
ಕಾಳೆಗದ ಕೌತುಕವನೀ ಹೆಬ್ಬಲದ ದುರ್ಬಲವ
ಆಳು ಹಿರಿದಿದ್ದೇನು ಫಲ ಹೀ
ಹಾಳಿ ದೈವಕೆ ಬೇರೆ ಪರಿಯ ವಿ
ತಾಳವಿಲ್ಲ ವಿಪಕ್ಷಪಾತದೊಳೆಂದನಂಧನೃಪ (ಕರ್ಣ ಪರ್ವ, ೧೫ ಸಂಧಿ, ೭ ಪದ್ಯ)

ತಾತ್ಪರ್ಯ:
ಯುದ್ಧದ ಬಗ್ಗೆ ಹೆಚ್ಚು ವಿವರವಾಗಿ ತಿಳಿಯಲು ಉತ್ಸುಕನಾದ ಧೃತರಾಷ್ಟ್ರ, ಸಂಜಯ ನಮ್ಮ ಸೈನ್ಯ ಮತ್ತು ಸೇನಾನಾಯಕರೊಡನೆ ಭೀಮನ ಯುದ್ಧವನ್ನು ವಿಸ್ತಾರವಾಗಿ ವಿವರಿಸು, ನಮ್ಮ ಮಹಾಸೈನ್ಯದ ದೌರ್ಬಲ್ಯವನ್ನೂ ವಿವರಿಸು, ಹೆಚ್ಚು ಜನರಿದ್ದರೇನು, ದೈವವು ಬೇರೆಯೇ
ರೀತಿಯಲ್ಲಿ ನಿರ್ಧರಿಸುತ್ತ, ದೈವವು ಪಕ್ಷಪಾತಿಯಾಗಿದ್ದಾನೆ, ಎಂದು ಧೃತರಾಷ್ಟ್ರನು ಬೇಜಾರಿನಿಂದ ಹೇಳಿದನು.

ಅರ್ಥ:
ವಿಸ್ತರಿಸು: ಹಬ್ಬುಗೆ, ವಿಸ್ತಾರ, ವ್ಯಾಪ್ತಿ; ಕಾಲಾಳು: ಸೈನಿಕರು; ಮೇಲಾಳು: ಸೇನಾನಾಯಕರು; ಕಾಳೆಗ: ಯುದ್ಧ; ಕೌತುಕ: ಅಚ್ಚರಿ; ಹೆಬ್ಬಲ: ದೊಡ್ಡ ಸೈನ್ಯ; ದುರ್ಬಲ: ಬಲಹೀನನಾದವನು, ಅಶಕ್ತ; ಆಳು: ಸೈನಿಕ; ಹಿರಿ: ಹೆಚ್ಚು; ಫಲ: ಪ್ರಯೋಜನ; ಹೀಹಾಳಿ: ತೆಗಳಿಕೆ, ಅವಹೇಳನ; ದೈವ: ವಿಧಿ, ಭಗವಂತ; ಬೇರೆ: ಅನ್ಯ; ಪರಿ: ರೀತಿ; ವಿತಾಳ: ಚಿಂತೆ, ಅಳಲು; ವಿಪಕ್ಷ: ವಿರೋಧಿಯಾದ; ಅಂಧನೃಪ: ಕುರುಡ ರಾಜ (ಧೃತರಾಷ್ಟ್ರ);

ಪದವಿಂಗಡಣೆ:
ಹೇಳು +ಸಂಜಯ +ವಿಸ್ತರಿಸಿ+ ಕಾ
ಲಾಳು +ಮೇಲಾಳಿನಲಿ+ ಭೀಮನ
ಕಾಳೆಗದ +ಕೌತುಕವನ್+ಈ+ ಹೆಬ್ಬಲದ +ದುರ್ಬಲವ
ಆಳು +ಹಿರಿದಿದ್ದೇನು +ಫಲ +ಹೀ
ಹಾಳಿ +ದೈವಕೆ +ಬೇರೆ +ಪರಿಯ +ವಿ
ತಾಳವಿಲ್ಲ+ ವಿಪಕ್ಷಪಾತದೊಳ್+ಎಂದನ್+ಅಂಧನೃಪ

ಅಚ್ಚರಿ:
(೧) ಕಾಲಾಳು, ಮೇಲಾಳು; ಹೆಬ್ಬಲ, ದುರ್ಬಲ – ಪದಗಳ ಬಳಕೆ
(೨), ಆಳು, ಕಾಲಾಳು, ಹೇಳು – ಪ್ರಾಸ ಪದಗಳು

ಪದ್ಯ ೨೧: ಶಲ್ಯನು ಕರ್ಣನಿಗೆ ಹೇಗೆ ಧೈರ್ಯ ತುಂಬಿದನು?

ಎಲೆ ಮರುಳೆ ರಾಧೇಯ ಫಡ ಮನ
ವಿಳುಹದಿರು ತಪ್ಪೇನು ಸೋಲವು
ಗೆಲವು ದೈವಾಧೀನ ನಿನ್ನಾಳ್ತನಕೆ ಕುಂದೇನು
ಹಲಬರಮರಾಸುರರೊಳಗೆ ಹೆ
ಬ್ಬಲವೆ ದುರ್ಬಲವಾಯ್ತು ನೀ ಮನ
ವಳುಕದಿರು ಹಿಡಿ ಧನುವನನುವಾಗೆಂದನಾ ಶಲ್ಯ (ಕರ್ಣ ಪರ್ವ, ೧೩ ಸಂಧಿ, ೨೧ ಪದ್ಯ)

ತಾತ್ಪರ್ಯ:
ಅಯ್ಯೋ ಕರ್ಣ, ಛೇ, ನೀನೇನು ಮರುಳೇ, ಹುಚ್ಚನಂತೆ ಮನಸ್ಸನ್ನು ಕುಂದುಗೊಳಿಸಬೇಡ. ಸೋಲು ಗೆಲುವುಗಳು ದೈವಾಧೀನವಾಗಿರುವವು. ಒಂದು ಸೋಲಿನಿಂದ ನಿನ್ನ ಪರಾಕ್ರಮಕ್ಕೆ ಕುಂದುಂಟಾಗುವುದಿಲ್ಲ. ದೇವ ದಾನವರಲ್ಲಿ ಕಲಹವಾದಾಗ ಅನೇಕ ವೀರರಿದ್ದರೂ ಮಹಾಬಲಶಾಲಿಗಳೇ ದುರ್ಬಲಗಾರಿ ಸೋತರು. ಹೆದರಬೇಡ, ನಿನ್ನ ಬಿಲ್ಲನ್ನು ಹಿಡಿ ಎಂದು ಕರ್ಣನನ್ನು ಶಲ್ಯನು ಹುರಿದುಂಬಿಸಿದನು.

ಅರ್ಥ:
ಮರುಳ: ಮೂಢ; ರಾಧೇಯ: ಕರ್ಣ; ಫಡ: ಛೀ, ಮೂದಲಿಸುವ ಶಬ್ದ; ಮನ: ಮನಸ್ಸು; ಇಳುಹು: ಇಳಿಸು; ತಪ್ಪು:ಸುಳ್ಳಾಗು; ಸೋಲು: ಅಪಜಯ; ಗೆಲುವು: ಜಯ; ದೈವ: ಭಗವಂತ; ಅಧೀನ: ವಶ; ಆಳುತನ: ಪರಾಕ್ರಮ; ಕುಂದು: ಲೋಪ; ಹಲಬರು: ಅನೇಕ ಜನರು; ಅಮರ: ದೇವ; ಅಸುರ: ದಾನವ, ರಾಕ್ಷಸ; ಹೆಬ್ಬಲ: ಮಹಾಬಲಶಾಲಿ; ದುರ್ಬಲ: ನಿಶ್ಯಕ್ತ; ಮನ: ಮನಸ್ಸು; ಅಳುಕು: ಹೆದರು; ಹಿಡಿ: ತೆಗೆದುಕೋ; ಧನು: ಧನಸ್ಸು; ಅನುವಾಗು: ತಯಾರಾಗು, ಸಿದ್ಧನಾಗು;

ಪದವಿಂಗಡಣೆ:
ಎಲೆ +ಮರುಳೆ +ರಾಧೇಯ +ಫಡ +ಮನವ್
ಇಳುಹದಿರು +ತಪ್ಪೇನು +ಸೋಲವು
ಗೆಲವು+ ದೈವಾಧೀನ+ ನಿನ್+ಆಳ್ತನಕೆ +ಕುಂದೇನು
ಹಲಬರ್+ಅಮರ್+ಅಸುರರೊಳಗೆ+ ಹೆ
ಬ್ಬಲವೆ+ ದುರ್ಬಲವಾಯ್ತು +ನೀ +ಮನವ್
ಅಳುಕದಿರು+ ಹಿಡಿ+ ಧನುವನ್+ಅನುವಾಗ್+ಎಂದನಾ +ಶಲ್ಯ

ಅಚ್ಚರಿ:
(೧) ಹುರಿದುಂಬಿಸುವ ಪದಗಳು – ಮನವಿಳುಹದಿರು ತಪ್ಪೇನು ಸೋಲವು ಗೆಲವು ದೈವಾಧೀನ ನಿನ್ನಾಳ್ತನಕೆ ಕುಂದೇನು; ನೀ ಮನವಳುಕದಿರು ಹಿಡಿ ಧನುವನನುವಾಗೆಂದನಾ ಶಲ್ಯ
(೨) ಸೋಲು, ಗೆಲುವು; ಹೆಬ್ಬಲ, ದುರ್ಬಲ; ಅಮರ, ಅಸುರ – ವಿರುದ್ಧ ಪದಗಳು