ಪದ್ಯ ೧: ಪಾಂಡವರಿಗೆ ಇಭಪುರಿಯಲ್ಲಿ ಏನು ಕಾದಿತ್ತು?

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡವ ನೃಪರನರಮನೆ
ಬೀಳುಗೊಂಡುದು ವಿಳಸದಿಂದ್ರಪ್ರಸ್ಥ ಪುರಸಹಿತ
ಮೇಲೆ ನೆಗಳುವ ದುರ್ನಿಮಿತ್ತವ
ನಾಲಿಸಿದರೇ ದೈವದೋಷ ನಿ
ಮೀಲಿತಾಂತಃಕರಣ ಹತರೈತಂದರಿಭಪುರಿಗೆ (ಸಭಾ ಪರ್ವ, ೧೪ ಸಂಧಿ, ೧ ಪದ್ಯ)

ತಾತ್ಪರ್ಯ:
ಇಂದ್ರಪ್ರಸ್ಥದ ಅರಮನೆಯು ವೈಭವಯುತವಾದ ನಗರದೊಂದಿಗೆ ಪಾಂಡವರನ್ನು ಕಳುಹಿಸಿಕೊಟ್ಟಿತು. ಮುಂದೆ ಅನೇಕ ದುಶ್ಶಕುನಗಳನ್ನು ಕಂಡೂ ಕಂಡೂ ದೈವ ದೋಷವು ಅವರ ಮನಸ್ಸನ್ನು ಮುಚ್ಚಿ ಬಿಟ್ಟಿತು. ಮುಂದಾಗುವ ಅನಾಹುತವನ್ನು ಅವರು ಊಹಿಸದಂತೆ ಮಾಡಿತು. ಪಾಂಡವರು ಹಸ್ತಿನಾಪುರಕ್ಕೆ ಬಂದರು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಪಾಲ; ಒಡೆಯ, ರಕ್ಷಿಸುವ; ನೃಪ: ರಾಜ; ಅರಮನೆ: ರಾಜರ ವಾಸಸ್ಥಾನ; ಬೀಳುಕೊಡು: ತೆರಳು; ವಿಳಸ: ವೈಭವ; ಪುರ: ಊರು; ಸಹಿತ: ಜೊತೆ; ಮೇಲೆ:ಮುಂದೆ; ನೆಗಳು: ಉಂಟಾಗು; ದುರ್ನಿಮಿತ್ತ: ಕೆಟ್ಟ ಶಕುನ; ಆಲಿಸು: ಕೇಳು; ದೈವ: ಭಗವಂತ; ದೋಷ: ತೊಡಕು; ನಿಮೀಲಿತ: ರೆಪ್ಪೆ ಮುಚ್ಚಿದ; ಅಂತಃಕರಣ: ಮನಸ್ಸು; ಹತ: ನಾಶವಾದ, ಭಂಗವಾದ; ಐತರು: ಬಂದು ಸೇರು; ಇಭಪುರಿ: ಹಸ್ತಿನಾಪುರ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಪಾಂಡವ +ನೃಪರನ್+ಅರಮನೆ
ಬೀಳುಗೊಂಡುದು +ವಿಳಸದ್+ಇಂದ್ರಪ್ರಸ್ಥ +ಪುರಸಹಿತ
ಮೇಲೆ +ನೆಗಳುವ +ದುರ್ನಿಮಿತ್ತವನ್
ಆಲಿಸಿದರೇ +ದೈವದೋಷ+ ನಿ
ಮೀಲಿತ+ಅಂತಃಕರಣ+ ಹತರ್+ಐತಂದರ್+ಇಭಪುರಿಗೆ

ಅಚ್ಚರಿ:
(೧) ಧರಿತ್ರೀಪಾಲ, ನೃಪ – ಸಮನಾರ್ಥಕ ಪದ
(೨) ಅರಮನೆ ಬೀಳುಗೊಂಡುದು ವಿಳಸದಿಂದ್ರಪ್ರಸ್ಥ ಪುರಸಹಿತ ಎಂದು ಹೇಳುವ ಮೂಲಕ ಮುಂದೆ ಬರುವ ಕಷ್ಟಗಳ ಸೂಕ್ಷ್ಮ ಪರಿಚಯ ಮಾಡಿದ್ದಾರೆ