ಪದ್ಯ ೩೧: ಅರ್ಜುನನ ಶಿವನಿಂದ ಯಾವ ಅಸ್ತ್ರವನ್ನು ಪಡೆಯುವೆನೆಂದನು?

ಹರನ ಚರಣವ ಭಜಿಸುವೆನು ದು
ರ್ಧರ ತಪೋನಿಷ್ಠೆಯಲಿ ಕೇಳೆಲೆ
ತರುಣಿ ಪಾಶುಪತಾಸ್ತ್ರವಾದಿಯ ದಿವ್ಯ ಮಾರ್ಗಣವ
ಪುರಹರನ ಕೃಪೆಯಿಂದ ಪಡೆದಾ
ನರಿಗಳನು ಸಂಹರಿಸಿ ನಿನ್ನಯ
ಪರಿಭವಾಗ್ನಿಯ ನಂದಿಸುವೆ ನಿಲ್ಲೆಂದನಾ ಪಾರ್ಥ (ಅರಣ್ಯ ಪರ್ವ, ೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅತ್ಯಂತ ಕಷ್ಟಕರವಾದ ತಪಸ್ಸನ್ನಾಚರಿಸಿ, ಶಿವನನ್ನು ಭಜಿಸಿ ಅವನ ಕೃಪೆಯಿಂದ ಪಾಶುಪತಾಸ್ತ್ರವೇ ಮೊದಲಾದ ಮಹಾ ಬಾಣಗಳನ್ನು ಪಡೆಯುತ್ತೇನೆ. ಎಲೈ ದ್ರೌಪದಿ ಆ ಅಸ್ತ್ರಗಳಿಂದ ಆ ನರಿಗಳಾದ ಕೌರವರನ್ನು ಸಂಹರಿಸಿ, ನಿನ್ನ ಅಪಮಾನದ ಅಗ್ನಿಯನ್ನು ನಂದಿಸುತ್ತೇನೆ ಎಂದು ಅರ್ಜುನನು ಹೇಳಿದನು.

ಅರ್ಥ:
ಹರ: ಶಿವ; ಚರಣ: ಪಾದ; ಭಜಿಸು: ಆರಾಧಿಸು; ದುರ್ಧರ: ಕಷ್ಟ, ಕಠಿಣ; ತಪಸ್ಸು: ಧ್ಯಾನ, ಏಕಾಗ್ರಚಿತ್ತ; ನಿಷ್ಠೆ: ದೃಢತೆ, ಸ್ಥಿರತೆ, ಶ್ರದ್ಧೆ; ಕೇಳು: ಆಲಿಸು; ತರುಣಿ: ಹೆಣ್ಣು; ಅಸ್ತ್ರ: ಆಯುಧ; ದಿವ್ಯ: ಶ್ರೇಷ್ಠ; ಮಾರ್ಗಣ: ಬಾಣ; ಪುರಹರ: ಶಿವ; ಕೃಪೆ: ದಯೆ; ನರಿ: ಒಂದು ಪ್ರಾಣಿ, ಇಲ್ಲಿ ಕೌರವರನ್ನು ಹೇಳಲು ಬಳಸಿದ ಪದ; ಸಂಹರಿಸು: ಸಾಯಿಸು; ಪರಿವವ: ಸೋಲು, ಅಪಮಾನ; ಅಗ್ನಿ: ಬೆಂಕಿ; ನಂದಿಸು: ಆರಿಸು; ನಿಲ್ಲು: ತಡೆ;

ಪದವಿಂಗಡಣೆ:
ಹರನ+ ಚರಣವ+ ಭಜಿಸುವೆನು +ದು
ರ್ಧರ+ ತಪೋನಿಷ್ಠೆಯಲಿ +ಕೇಳ್+ಎಲೆ
ತರುಣಿ+ ಪಾಶುಪತಾಸ್ತ್ರವ್+ ಆದಿಯ+ ದಿವ್ಯ+ ಮಾರ್ಗಣವ
ಪುರಹರನ+ ಕೃಪೆಯಿಂದ +ಪಡೆದ್+ಆ
ನರಿಗಳನು +ಸಂಹರಿಸಿ +ನಿನ್ನಯ
ಪರಿಭವಾಗ್ನಿಯ +ನಂದಿಸುವೆ +ನಿಲ್ಲೆಂದನ್+ಆ+ ಪಾರ್ಥ

ಅಚ್ಚರಿ:
(೧) ಹರ, ಪುರಹರ – ಶಿವನಿಗೆ ಬಳಸಿದ ಹೆಸರು
(೨) ದ್ರೌಪದಿಯನ್ನು ತರುಣಿ, ಕೌರವರನ್ನು ನರಿ ಎಂದು ಕರೆದಿರುವುದು

ಪದ್ಯ ೭೬: ದ್ರೌಪದಿಯು ಯುದ್ಧರಂಗದಲ್ಲಿ ಯಾರ ಬಳಿ ಬಂದಳು?

ಅರರೆ ಭೀಮನ ವಿಜಯಲಕ್ಷ್ಮಿಯ
ಬರವೊ ಕೌರವನೃಪನ ಮರಣಾಂ
ಕುರವ ಸೂಚಿಸುವಾತುರಶ್ರೀಸತಿಯ ಸಂಭ್ರಮವೊ
ಅರಿಭಟರಿಗದ್ಭುತವೆನಲು ಭೀ
ಕರರು ದುರ್ಧರವೆಂದೆನಲು ಪಂ
ಕರುಹಮುಖಿ ನಡೆತಂದಳಾ ಪವಮಾನಜನ ಹೊರೆಗೆ (ಕರ್ಣ ಪರ್ವ, ೧೯ ಸಂಧಿ, ೭೬ ಪದ್ಯ)

ತಾತ್ಪರ್ಯ:
ಅರರೆ ಇದೇನು ಭೀಮನ ವಿಜಯಲಕ್ಷ್ಮಿಯ ಆಗಮನವೋ ಅಥವ ದುರ್ಯೋಧನನ ಮರಣದ ಮೊಳಕೆಯನ್ನು ಸೂಚಿಸುವ ಆತುರಲಕ್ಷ್ಮಿಯ ಸಂಭ್ರಮವೋ ಎಂಬಂತೆ ದ್ರೌಪದಿಯ ಆಗಮನವು ವೈರಿಭಟರಿಗೆ ಅದ್ಭುತವಾಗಿ ತೋರಿತು. ಭೀಕರ ಯುದ್ಧದ ವೀರರು ಇದು ದುರ್ಧರ ಎಂದರು, ಕಮಲಮುಖಿಯಾದ ದ್ರೌಪದಿಯು ಭೀಮನ ಬಳಿಗೆ ಬಂದಳು.

ಅರ್ಥ:
ಅರರೆ: ಆಶ್ಚರ್ಯವನ್ನು ಸೂಚಿಸುವ ಪದ; ವಿಜಯ: ಗೆಲುವು; ಲಕ್ಷ್ಮಿ: ಐಶ್ವರ್ಯದ ಸಂಕೇತ; ಬರವೋ: ಆಗಮನ; ನೃಪ: ರಾಜ; ಮರಣ: ಸಾವು; ಅಂಕುರ: ಮೊಳಕೆ; ಸೂಚಿಸು:ತೋರಿಸು, ಹೇಳು; ಆತುರ: ವೇಗ; ಶ್ರೀಸತಿ: ಲಕ್ಷ್ಮಿ; ಸಂಭ್ರಮ: ಉತ್ಸಾಹ, ಸಡಗರ; ಅರಿಭಟ: ವೈರಿ; ಅದ್ಭುತ: ಆಶ್ಚರ್ಯ; ಭೀಕರ: ಭಯಾನಕತೆ; ದುರ್ಧರ: ಕಠಿಣವಾದ, ನರಕಭಾಜನ; ಪಂಕರುಹ: ಕಮಲ; ಪಂಕರುಹಮುಖಿ: ಕಮಲದಂತ ಮುಖವುಳ್ಳವಳು (ದ್ರೌಪದಿ); ನಡೆ: ಚಲಿಸು; ಪವಮಾನಜ: ಭೀಮ, ವಾಯುಪುತ್ರ; ಹೊರೆ: ಹತ್ತಿರ, ಸಮೀಪ;

ಪದವಿಂಗಡಣೆ:
ಅರರೆ +ಭೀಮನ +ವಿಜಯಲಕ್ಷ್ಮಿಯ
ಬರವೊ+ ಕೌರವ+ನೃಪನ +ಮರಣಾಂ
ಕುರವ +ಸೂಚಿಸುವ+ಆತುರ+ಶ್ರೀಸತಿಯ +ಸಂಭ್ರಮವೊ
ಅರಿಭಟರಿಗ್+ಅದ್ಭುತವ್+ಎನಲು +ಭೀ
ಕರರು+ ದುರ್ಧರವೆಂದೆನಲು +ಪಂ
ಕರುಹಮುಖಿ +ನಡೆತಂದಳಾ+ ಪವಮಾನಜನ +ಹೊರೆಗೆ

ಅಚ್ಚರಿ:
(೧) ವಿಜಯಲಕ್ಷ್ಮಿ, ಆತುರಶ್ರೀಸತಿ ಎಂಬ ಪದಗಳ ಬಳಕೆ