ಪದ್ಯ ೬: ಪಟ್ಟಾಭಿಷೇಕ ಮಹೋತ್ಸವದಲ್ಲಿ ಯಾವ ರಾಕ್ಷಸ ಬಂದನು?

ಆದುದಾ ಪಟ್ಟಾಭಿಷೇಕದೊ
ಳಾ ದುರಾತ್ಮಕ ಬಾಷ್ಕಳನ ಪರಿ
ವಾದವನು ಮುನಿನಿಕರ ಕೇಳಿದು ಖತಿಯ ಭಾರದಲಿ
ಭೇದಿಸಿದರವನಸುರನೆಂದು ವಿ
ಷಾದವಹ್ನಿಯಲುರುಹಿದರು ಬಳಿ
ಕಾದರಿಸಿ ಧರ್ಮಜನ ಸಂತೈಸಿದನು ಮುರವೈರಿ (ಗದಾ ಪರ್ವ, ೧೩ ಸಂಧಿ, ೬ ಪದ್ಯ)

ತಾತ್ಪರ್ಯ:
ಪಟ್ಟಾಭಿಷೇಕದ ಮಹೊತ್ಸವದಲ್ಲಿ ಬಾಷ್ಕಳನೆಂಬ ದುರಾತ್ಮನ ಕುಯುಕ್ತಿ ಯುಕ್ತವಾದ ವಾದವನ್ನು ಕೇಳಿ ಮುನಿಗಳು ಅದರಿಂದುಂಟಾಗುವ ವಿಷಾದದ ಅಗ್ನಿಯಿಂದ ಅವನ ಪ್ರಾಣವನ್ನು ಹಾರಿಸಿ ಸುಟ್ಟುಹಾಕಿದರು. ಆ ಬಳಿಕ ಶ್ರೀಕೃಷ್ಣನು ಧರ್ಮಜನನ್ನು ಸಂತೈಸಿದನು.

ಅರ್ಥ:
ಪಟ್ಟಾಭಿಷೇಕ: ವಿಧ್ಯುಕ್ತವಾಗಿ ಪವಿತ್ರ ಜಲಗಳಿಂದ ಅಭಿಷೇಕ ಮಾಡುವಿಕೆ, ಸಿಂಹಾಸನಾರೋಹಣ ಸಮಾರಂಭ; ದುರಾತ್ಮ: ದುಷ್ಟ; ಪರಿವಾದ: ನಿಂದೆ, ತೆಗೆಳಿಕೆ; ಮುನಿ: ಋಷಿ; ನಿಕರ: ಗುಂಪು; ಕೇಳು: ಆಲಿಸು; ಖತಿ: ಕೋಪ; ಭಾರ: ಹೊರೆ; ಭೇದ: ಮುರಿಯುವುದು; ಅಸುರ: ರಾಕ್ಷಸ; ವಿಷಾದ: ನಿರುತ್ಸಾಹ; ವಹ್ನಿ: ಬೆಂಕಿ, ಅಗ್ನಿ; ಅರುಹು: ತಿಳಿಸು; ಆದರ: ಗೌರವ; ಸಂತೈಸು: ಸಾಂತ್ವನಗೊಳಿಸು; ಮುರವೈರಿ: ಕೃಷ್ಣ;

ಪದವಿಂಗಡಣೆ:
ಆದುದಾ +ಪಟ್ಟಾಭಿಷೇಕದೊಳ್
ಆ+ ದುರಾತ್ಮಕ +ಬಾಷ್ಕಳನ +ಪರಿ
ವಾದವನು +ಮುನಿ+ನಿಕರ+ ಕೇಳಿದು +ಖತಿಯ +ಭಾರದಲಿ
ಭೇದಿಸಿದರ್+ಅವನ್+ಅಸುರನೆಂದು +ವಿ
ಷಾದ+ವಹ್ನಿಯಲ್+ಉರುಹಿದರು +ಬಳಿಕ್
ಆದರಿಸಿ +ಧರ್ಮಜನ +ಸಂತೈಸಿದನು +ಮುರವೈರಿ

ಅಚ್ಚರಿ:
(೧) ರೂಪಕದ ಪ್ರಯೋಗ – ವಿಷಾದವಹ್ನಿಯಲುರುಹಿದರು
(೨) ಒಂದೇ ಪದವಾಗಿ ಬಳಕೆ – ಭೇದಿಸಿದರವನಸುರನೆಂದು, ವಿಷಾದವಹ್ನಿಯಲುರುಹಿದರು

ಪದ್ಯ ೫೧: ಭೀಮನು ಶಬರನಿಗೆ ಏನು ಹೇಳಿದನು?

ಆದರೆಕ್ಕಟಿ ಬಿನ್ನಹವ ನೀ
ವಾದರಿಪುದೆನೆ ತುಷ್ಟನಾಗಿ ವೃ
ಕೋದರನು ಕರಸಿದನು ಪರಿಮಿತಕಾ ಪುಳಿಂದಕರ
ಆದುದೇ ನೆಲೆ ಕುರುಪತಿಗೆ ದು
ರ್ಭೇದವಿದು ಮೆಚ್ಚುಂಟು ನಿಮಗೆನ
ಲಾ ದುರಾತ್ಮಕರರುಹಿದರು ಧೃತರಾಷ್ಟ್ರ ಕೇಳೆಂದ (ಗದಾ ಪರ್ವ, ೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ ಕೇಳು, ಶಬರನು ಭೀಮನನ್ನು ಕಂಡು ಆತನೊಡನೆ ಏಕಾಂಗಿಯಾಗಿ ಮಾತನಾಡಲು ಬಯಸುತ್ತೇನೆ ಎಂದು ಹೇಳಲು, ಭೀಮನು ಸಂತುಷ್ಟನಾಗಿ ಆಪ್ತ ಪರಿವಾರದವರೊಡನೆ ಆ ಶಬರನನ್ನು ಕರೆಸಿದನು. ಕೌರವನು ಎಲ್ಲಿ ಅಡಗಿದನೆಂಬುದು ಗೊತ್ತೇ? ಈವರೆಗೆ ಆ ವಿಷಯ ತಿಳಿದುಬಂದಿಲ್ಲ. ನೀವು ಹೇಳಿದರೆ ನಿಮಗೆ ಉಡುಗೊರೆಯನ್ನು ಕೊಡುತ್ತೇನೆ ಎಂದು ಭೀಮನು ಹೇಳಲು, ಆ ಶಬರನು ಹೀಗೆಂದು ನುಡಿದನು.

ಅರ್ಥ:
ಎಕ್ಕಟಿ: ಒಬ್ಬಂಟಿಗ, ಏಕಾಕಿ; ಬಿನ್ನಹ: ಕೋರಿಕೆ; ತುಷ್ಟ: ತೃಪ್ತ, ಆನಂದ; ಕರಸು: ಬರೆಮಾಡು; ಪರಿಮಿತ: ಮಿತ, ಸ್ವಲ್ಪ; ಪುಳಿಂದಕ: ಬೇಟೆಗಾರ; ನೆಲೆ: ವಾಸಸ್ಥಾನ; ದುರ್ಭೇದ: ಭೇದಿಸಲಾಗದ; ಮೆಚ್ಚು: ಒಲುಮೆ, ಪ್ರೀತಿ; ದುರಾತ್ಮ: ದುಷ್ಟ; ಅರುಹು: ಹೇಳು; ಆದರ: ಆಸಕ್ತಿ, ವಿಶ್ವಾಸ;

ಪದವಿಂಗಡಣೆ:
ಆದರ್+ಎಕ್ಕಟಿ +ಬಿನ್ನಹವ +ನೀವ್
ಆದರಿಪುದ್+ಎನೆ +ತುಷ್ಟನಾಗಿ +ವೃ
ಕೋದರನು +ಕರಸಿದನು +ಪರಿಮಿತಕ್+ಆ+ ಪುಳಿಂದಕರ
ಆದುದೇ +ನೆಲೆ +ಕುರುಪತಿಗೆ+ ದು
ರ್ಭೇದವಿದು+ ಮೆಚ್ಚುಂಟು +ನಿಮಗ್+ಎನಲ್
ಆ+ ದುರಾತ್ಮಕರ್+ಅರುಹಿದರು +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಆದರ್, ಆದರಿಪು – ಪದದ ಬಳಕೆ
(೨) ಕೌರವನೆಲ್ಲಿದ್ದಾನೆ ಎಂದು ಹೇಳುವ ಪರಿ – ಆದುದೇ ನೆಲೆ ಕುರುಪತಿಗೆ

ಪದ್ಯ ೫೪: ಶಕುನಿ ಯುಧಿಷ್ಠಿರನನ್ನು ಏನು ಕೇಳಿದ?

ಆದವೆಮಗಿವುಗಜಘಟೆಗಳೆಂ
ದಾದುರಾತ್ಮಕನಾಡಿದನು ದು
ರ್ಭೇದವಿವದಿರ ಕಪಟಮಂತ್ರವನಾವನರಿವವನು
ಆದುದರಸಗೆ ಸೋಲವಿನ್ನೇ
ನಾದುದೈ ಭೂಪತಿಯೆ ಗಜಘಟೆ
ತೀದವೇ ಮೇಲೇಣು ಪಣವುಂಟೆಂದನಾ ಶಕುನಿ (ಸಭಾ ಪರ್ವ, ೧೪ ಸಂಧಿ, ೫೪ ಪದ್ಯ)

ತಾತ್ಪರ್ಯ:
ಶಕುನಿಯ ದಾಳದ ಪ್ರಭಾವ ಆನೆಗಳ ಗುಂಪನ್ನು ಧರ್ಮರಾಯ ಸೋತನು. ಇವು ನಮಗಾದವು ಯುಧಿಷ್ಠಿರ ಎಂದು ದುಷ್ಟ ಶಕುನಿ ನುಡಿದನು, ಅವರ ಕಪಟ ಮಂತ್ರವನ್ನು ಭೇದಿಸುವುದು ಕಷ್ಟ. ಅದನ್ನ್ ತಿಳಿಯಬಲ್ಲವರಾರು? ಧರ್ಮರಾಯನು ಸೋತನು, ರಾಜ ಆನೆಗಳ ನಂತರ ಪಣಕ್ಕೆ ಮತ್ತೇನನ್ನು ಇಡುವೆ ಎಂದು ಶಕುನಿ ಕೇಳಿದನು.

ಅರ್ಥ:
ಆದವ್: ಆಯಿತು; ಎಮಗ್: ನಮಗೆ; ಗಜಘಟೆ: ಆನೆಗಳು ಗುಂಪು; ದುರಾತ್ಮ: ದುಷ್ಟ; ಆಡು: ಮಾತಾಡು; ಭೇದ: ಒಡೆ, ಬಿರುಕು; ಇವದಿರ: ಇವರ; ಕಪಟ: ಮೋಸ; ಮಂತ್ರ: ವಿಚಾರ, ಆಲೋಚನೆ; ಅರಿ: ತಿಳಿ; ಅರಸ: ರಾಜ; ಸೋಲು: ಪರಾಭವ; ಭೂಪತಿ: ರಾಜ; ಮೇಲೇನು: ಮುಂದೇನು; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ತೀದು: ಮುಗಿಸಿ;

ಪದವಿಂಗಡಣೆ:
ಆದವ್+ಎಮಗ್+ಇವು+ಗಜಘಟೆಗಳೆಂದ್
ಆ+ದುರಾತ್ಮಕನ್+ಆಡಿದನು+ ದು
ರ್ಭೇದವ್+ಇವದಿರ +ಕಪಟ+ಮಂತ್ರವನ್+ಆವನ್+ಅರಿವವನು
ಆದುದ್+ಅರಸಗೆ +ಸೋಲ್+ಅವಿನ್ನೇ
ನಾದುದೈ +ಭೂಪತಿಯೆ +ಗಜಘಟೆ
ತೀದವೇ +ಮೇಲ್+ಏಣು+ ಪಣ+ವುಂಟೆಂದನಾ+ ಶಕುನಿ

ಅಚ್ಚರಿ:
(೧) ಶಕುನಿಯ ಕಪಟ ಆಟವನ್ನು ಸೂಚಿಸುವ ಪರಿ – ದುರ್ಭೇದವಿವದಿರ ಕಪಟಮಂತ್ರವನಾವನರಿವವನು
(೨) ದುರ್ಭೇದ, ದುರಾತ್ಮ – ಶಕುನಿಗೆ ಬಳಸಿದ ಪದಗಳು

ಪದ್ಯ ೩೬: ಸರ್ಪಾಸ್ತ್ರವು ತಾನಾರೆಂದು ಕರ್ಣನಿಗೆ ತಿಳಿಸಿತು?

ಉರಗಪತಿ ತಾನಶ್ವಸೇನನು
ಸುರಪತಿಯ ಖಾಂಡವದೊಳಿಹೆನದ
ನುರುಹುವಂದಿನೊಳೆನ್ನನರೆಗಡಿದೀ ದುರಾತ್ಮಕನ
ಶಿರವನರಿವೆನು ಬೇಗ ತೊಡು ತೊಡು
ಬೆರಗ ಹಾರದಿರೆನಲು ಸತ್ಯದ
ಪರಮಸೀಮೆಗೆ ತಪ್ಪಲಮ್ಮದೆ ಕರ್ಣನಿಂತೆಂದ (ಕರ್ಣ ಪರ್ವ, ೨೫ ಸಂಧಿ, ೩೬ ಪದ್ಯ)

ತಾತ್ಪರ್ಯ:
ಸರ್ಪಾಸ್ತ್ರವು ತನ್ನ ಪರಿಚಯ ಮಾಡಿಕೊಳ್ಳುತ್ತಾ ತಾನು ಅಶ್ವಸೇನನೆಂಬ ಸರ್ಪರಾಜ, ಖಾಂಡವ ವನದಲ್ಲಿದ್ದವ, ಅದನ್ನು ಸುಡುವಾಗ ಈ ದುರಾತ್ಮನಾದ ಅರ್ಜುನನು ನನ್ನನ್ನು ಅರೆಪೆಟ್ಟು ನೀಡಿದನು, ಈ ದುರಾತ್ಮನ ತಲೆಯನ್ನು ಈಗಲೇ ಕೆಡಹುತ್ತೇನೆ, ನನ್ನನ್ನು ಬೇಗ ಬಿಲ್ಲಿನಲ್ಲಿ ಹೂಡಿ ಬಿಡು, ಬೆರಗಾಗಿ ನಿಲ್ಲಬೇಡ ಎಂದು ಅಶ್ವಸೇನನು ಹೇಳಲು, ಸತ್ಯವನ್ನು ಮೀರಲಮ್ಮದೆ ಕರ್ಣನು ಹೀಗೆ ಪ್ರತ್ಯುತ್ತರವನ್ನು ನೀಡಿದನು.

ಅರ್ಥ:
ಉರಗ: ಹಾವು; ಪತಿ: ಒಡೆಯ; ಸುರಪತಿ: ಇಂದ್ರ, ದೇವತೆಗಳ ಒಡೆಯ; ಉರುಹು: ಸುಡು; ಅರೆ: ಅರ್ಧ; ಕಡಿ: ತುಂಡು; ದುರಾತ್ಮ: ದುಷ್ಟ; ಶಿರ: ತಲೆ; ಅರಿ: ಕತ್ತರಿಸು; ಬೇಗ: ಶೀಘ್ರ; ತೊಡು: ಧರಿಸು; ಬೆರಗು: ಆಶ್ಚರ್ಯ; ಹಾರು: ನೋಡು, ಅವಲೋಕಿಸು; ಸತ್ಯ: ದಿಟ; ಪರಮ: ಶ್ರೇಷ್ಠ; ಸೀಮೆ: ಎಲ್ಲೆ; ತಪ್ಪು: ಸುಳ್ಳಾಗು;

ಪದವಿಂಗಡಣೆ:
ಉರಗಪತಿ +ತಾನ್+ಅಶ್ವಸೇನನು
ಸುರಪತಿಯ +ಖಾಂಡವದೊಳ್+ಇಹೆನ್+ಅದನ್
ಉರುಹುವ್+ಅಂದಿನೊಳ್+ಎನ್ನನ್+ಅರೆ+ಕಡಿದ್+ಈ+ ದುರಾತ್ಮಕನ
ಶಿರವನ್+ಅರಿವೆನು +ಬೇಗ +ತೊಡು +ತೊಡು
ಬೆರಗ+ ಹಾರದಿರ್+ಎನಲು +ಸತ್ಯದ
ಪರಮಸೀಮೆಗೆ +ತಪ್ಪಲಮ್ಮದೆ +ಕರ್ಣನ್+ಇಂತೆಂದ

ಅಚ್ಚರಿ:
(೧) ಉರಗಪತಿ, ಸುರಪತಿ – ಪ್ರಾಸ ಪದಗಳು
(೨) ಒಂದೇ ಪದವಾಗ್ ನಿರ್ಮಿತ – ನುರುಹುವಂದಿನೊಳೆನ್ನನರೆಗಡಿದೀ