ಪದ್ಯ ೧೮: ಧರ್ಮಜನು ಯಾರನ್ನು ಪಣಕ್ಕೆ ಇಟ್ಟನು?

ಭೇದ ಮಂತ್ರವ ಮಾಡಿ ನಮ್ಮನು
ಭೇದಿಸುವ ಗಡ ಸುಬಲ ಸುತನಕ
ಟೀ ದುರಾತ್ಮನ ನೋಡಿರೈ ಸಭ್ಯರು ಶಿವಾಯೆನುತ
ಆ ದುರಾಗ್ರಹಿ ಲೋಕಜನಪರಿ
ವಾದ ಪದ ನಿರ್ಭೀತನಕ್ಷ ವಿ
ನೋದ ಕರ್ದಮಮಗ್ನ ನೊಡ್ಡಿದನಾ ಧನಂಜಯನ (ಸಭಾ ಪರ್ವ, ೧೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಎಲೈ ಸಭೆಯಲ್ಲಿರುವ ಸಭ್ಯರೇ, ಈ ಸುಬಲನ ಪುತ್ರನಾದ ಶಕುನಿಯ ಭೇದ ನೀತಿಯನ್ನು ನೀವು ನೋಡಿದಿರಾ? ಭೇದೋಪಾಯದಿಂದ ನಮ್ಮನ್ನು ಛಿದ್ರಿಸಬೇಕೆಂದು ಈ ಶಕುನಿಯು ಬಗೆದಿರುವನಲ್ಲವೇ ಶಿವ ಶಿವಾ ಎಂದು ಹೇಳುತ್ತಾ, ದ್ಯೂತದ ದುರಾಗ್ರಹವಡಿಸಿದವನೂ, ಲೋಕವು ಏನೆಂದೀತೆಂಬ ವಿಷಯಕ್ಕೆ ಭಯವಿಲ್ಲದವನೂ, ದಾಳಗಳ ಆಟದ ವಿನೋದವೆಂಬ ಕಪ್ಪುಕೆಸರಿನಲ್ಲಿ ಮುಳುಗಿದವನೂ ಆದ ಧರ್ಮಜನು ಅರ್ಜುನನನ್ನು ಮುಂದಿನ ಆಟಕ್ಕೆ ಪಣವಾಗಿಟ್ಟನು.

ಅರ್ಥ:
ಭೇದ: ಬಿರುಕು, ಛಿದ್ರ, ಒಡಕು; ಮಂತ್ರ: ವಿಚಾರ; ಗಡ: ಅಲ್ಲವೆ; ಸುತ: ಮಗ; ಅಕಟ: ಅಯ್ಯೋ; ದುರಾತ್ಮ: ದುಷ್ಟ; ನೋಡಿ: ವೀಕ್ಷಿಸಿ; ಸಭ್ಯ: ಒಳ್ಳೆಯ ವ್ಯಕ್ತಿ; ದುರಾಗ್ರಹಿ: ಕೆಟ್ಟ ಹಟವುಳ್ಳವನು; ಲೋಕ: ಜಗತ್ತು; ಪರಿವಾದ: ನಿಂದೆ, ತೆಗೆಳಿಕೆ, ದೂರು; ಪದ: ಮಾತು; ನಿರ್ಭೀತ: ಭಯವಿಲ್ಲದ; ಅಕ್ಷ: ಪಗಡೆ ಆಟದ ದಾಳ; ವಿನೋದ: ಕ್ರೀಡೆ; ಕರ್ದಮ: ಕೆಸರು, ಪಂಕ; ಮಗ್ನ; ಮುಳುಗು; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಧನಂಜಯ: ಅರ್ಜುನ;

ಪದವಿಂಗಡಣೆ:
ಭೇದ +ಮಂತ್ರವ +ಮಾಡಿ +ನಮ್ಮನು
ಭೇದಿಸುವ +ಗಡ +ಸುಬಲ ಸುತನ್+ಅಕ
ಟೀ+ ದುರಾತ್ಮನ +ನೋಡಿರೈ+ ಸಭ್ಯರು +ಶಿವಾಯೆನುತ
ಆ +ದುರಾಗ್ರಹಿ +ಲೋಕಜನ+ಪರಿ
ವಾದ +ಪದ +ನಿರ್ಭೀತನ್+ಅಕ್ಷ+ ವಿ
ನೋದ +ಕರ್ದಮ+ಮಗ್ನನ್ +ಒಡ್ಡಿದನ್+ಆ+ ಧನಂಜಯನ

ಅಚ್ಚರಿ:
(೧) ದುರಾತ್ಮ, ದುರಾಗ್ರಾಹಿ – ದುಷ್ಟರನ್ನು ವಿವರಿಸುವ ಪದ
(೨) ಯುಧಿಷ್ಥರನನ್ನು ವಿವರಿಸುವ ಪರಿ – ಆ ದುರಾಗ್ರಹಿ ಲೋಕಜನಪರಿವಾದ ಪದ ನಿರ್ಭೀತನಕ್ಷ ವಿನೋದ ಕರ್ದಮಮಗ್ನ