ಪದ್ಯ ೫೧: ಗಾಂಧಾರಿಯು ವ್ಯಾಸರಿಗೆ ಏನು ಹೇಳಿದಳು?

ರಾಯನನು ಕಾಣಿಸಿದಿರೇ ಪ್ರ
ಜ್ಞಾಯತಾಕ್ಷನ ತಿಳಿಹಿ ಬಂದಿರೆ
ತಾಯಿಗಳು ನಾವೈಸಲೇ ಬಲುಹುಂಟೆ ನಮಗಿನ್ನು
ಸಾಯೆ ಸಾವೆನು ಕುರುಕುಲಾಗ್ರಣಿ
ನೋಯೆ ನೋವೆನು ತನಗೆ ದುರಭಿ
ಪ್ರಾಯವುಂಟೇ ಮಾವ ಎಂದಳು ಮುನಿಗೆ ಗಾಂಧಾರಿ (ಗದಾ ಪರ್ವ, ೧೧ ಸಂಧಿ, ೫೧ ಪದ್ಯ)

ತಾತ್ಪರ್ಯ:
ಗಾಂಧಾರಿಯು ವ್ಯಾಸ ಮುನಿಗಳಿಗೆ ಉತ್ತರಿಸುತ್ತಾ, ಮಾವ ಅರಸನನ್ನು ನೋಡಿ ಸಮಾಧಾನ ಪಡಿಸಿದಿರಾ, ಪ್ರಜ್ಞೆಯೇ ಕಣ್ಣಾಗಿರುವ ನನ್ನನ್ನು ಸಮಾಧಾನ ಪಡಿಸಲು ಬಂದಿರುವಿರಾ? ನಾನು ಎಷ್ಟಾಗಲೀ ಕೌರವರ ತಾಯಿ. ನಮಗೇನು ಸತ್ವವಿರುತ್ತದೆ? ಧೃತರಾಷ್ಟ್ರನಿಗೆ ನೋವಾದರೆ ನನಗೆ ನೋವು, ಸಾವಾದರೆ ಸಾವು, ನನ್ನಲ್ಲಿ ಯಾವ ದುರಭಿಪ್ರಾಯವೂ ಇಲ್ಲ ಎಂದು ಗಾಂಧಾರಿ ನುಡಿದಳು.

ಅರ್ಥ:
ರಾಯ: ರಾಜ; ಕಾಣಿಸು: ತೋರು; ಪ್ರಜ್ಞೆ: ಎಚ್ಚರವಿರುವ ಸ್ಥಿತಿ; ಆಯತಾಕ್ಷ: ಅಗಲವಾದ ಕಣ್ಣು; ತಿಳಿಹು: ಗೊತ್ತುಪಡಿಸು; ಬಂದು: ಆಗಮಿಸು; ತಾಯಿ: ಮಾತೆ; ಐಸಲೇ: ಅಲ್ಲವೇ; ಬಲುಹು: ಶಕ್ತಿ; ಸಾಯೆ: ಮರಣ ಹೊಂದು; ಕುಲ: ವಂಶ; ಅಗ್ರಣಿ: ಶ್ರೇಷ್ಠ; ದುರಭಿಪ್ರಾಯ: ಕೆಟ್ಟ ವಿಚಾರ; ಮಾವ: ಗಂಡನ ತಂದೆ; ಮುನಿ: ಋಷಿ;

ಪದವಿಂಗಡಣೆ:
ರಾಯನನು +ಕಾಣಿಸಿದಿರೇ +ಪ್ರ
ಜ್ಞಾಯತಾಕ್ಷನ+ ತಿಳಿಹಿ +ಬಂದಿರೆ
ತಾಯಿಗಳು +ನಾವ್+ಐಸಲೇ +ಬಲುಹುಂಟೆ +ನಮಗಿನ್ನು
ಸಾಯೆ +ಸಾವೆನು +ಕುರುಕುಲಾಗ್ರಣಿ
ನೋಯೆ +ನೋವೆನು +ತನಗೆ +ದುರಭಿ
ಪ್ರಾಯವುಂಟೇ +ಮಾವ +ಎಂದಳು +ಮುನಿಗೆ +ಗಾಂಧಾರಿ

ಅಚ್ಚರಿ:
(೧) ಗಾಂಧಾರಿಯು ತನ್ನ ಕಣ್ಣಿನ ಬಗ್ಗೆ ಹೇಳುವ ಪರಿ – ಪ್ರಜ್ಞಾಯತಾಕ್ಷನ ತಿಳಿಹಿ ಬಂದಿರೆ
(೨) ಸಾಯೆ, ನೋಯೆ – ಪ್ರಾಸ ಪದಗಳು