ಪದ್ಯ ೧೭: ಯುಧಿಷ್ಠಿರನು ತನ್ನ ಸ್ವಪ್ನದ ವಿವರವನ್ನು ಯಾರಿಗೆ ನೀಡಿದನು?

ಅರಸನುಪ್ಪವಡಿಸಿದ ನವನೀ
ಶ್ವರ ವಿಹಿತ ಸತ್ಕ್ರಿಯೆಗಳನು ವಿ
ಸ್ತರಿಸಿದನು ದುಃಸ್ವಪ್ನ ಕುಂತ ವಿಭಿನ್ನಚೇತನನು
ಕರೆಸಿ ಧೌಮ್ಯನಿಗರುಹಲತಿ ದು
ಸ್ತರದ ಕನಸಿದು ಶಾಂತಿ ಕರ್ಮವ
ಪುರದೊಳಗೆ ವಿರಚಿಸುವೆನಂಜದಿರೆಂದನಾ ಧೌಮ್ಯ (ಸಭಾ ಪರ್ವ, ೧೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಆ ಕನಸನ್ನು ನೋಡಿ ಮೇಲೆದ್ದನು. ನಿತ್ಯ ಕರ್ಮಗಳನ್ನು ಮುಗಿಸಿದನು. ಅವನ ಮನಸ್ಸು ಕದಡಿಹೋಗಿತ್ತು. ಅವನು ಧೌಮ್ನ್ಯನನ್ನು ಬರೆಮಾಡಿಕೊಂಡು ತಾನು ಕಂಡ ಕನಸಿನ ಬಗ್ಗೆ ವಿವರಿಸಿದನು. ಇದನ್ನು ಕೇಳಿದ ದೌಮ್ಯನು ಈ ಕನಸಿನ ದುಷ್ಫಲಗಳು ದುಸ್ತರವಾಗಿದೆ, ಊರಿಗೆ ಹಿಂದಿರುಗಿದ ಮೇಲೆ ಶಾಂತಿಕರ್ಮವನ್ನು ಮಾಡೋಣ ಹೆದರಬೇಡಿ ಎಂದು ಹೇಳಿದನು.

ಅರ್ಥ:
ಅರಸ: ರಾಜ; ಉಪ್ಪವಡಿಸು: ಮೇಲೇಳು; ಅವನೀಶ್ವರ: ರಾಜ; ಅವನೀ: ಭೂಮಿ; ಈಶ್ವರ: ಒಡೆಯ; ವಿಹಿತ: ಔಚಿತ್ಯಪೂರ್ಣ, ಹೊಂದಿಸಿದ; ಸತ್ಕ್ರಿಯೆ: ಕಾರ್ಯ, ಕರ್ಮ; ವಿಸ್ತರಿಸು: ಹಬ್ಬು, ಹರಡು; ದುಃಸ್ವಪ್ನ: ಕೆಟ್ಟ ಕನಸು; ಕುಂತ:ಈಟಿ, ಭರ್ಜಿ; ವಿಭಿನ್ನ: ಒಡೆದ, ಛಿದ್ರಗೊಳಿಸುವ; ಚೀತನ: ಮನಸ್ಸು; ಕರೆಸು: ಬರೆಮಾಡು; ಅರುಹು: ಹೇಳು; ಅತಿ: ಬಹಳ; ದುಸ್ತರ: ಪರಿಹರಿಸಲಾಗದ; ಕನಸು: ಸ್ವಪ್ನ; ಶಾಂತಿ: ನೆಮ್ಮದಿ, ಚಿತ್ತಸ್ವಾಸ್ಥ್ಯ; ಕರ್ಮ: ಕೆಲಸ; ಪುರ: ಊರು; ವಿರಚಿಸು: ಕಟ್ಟು, ನಿರ್ಮಿಸು; ಅಂಜು: ಹೆದರು;

ಪದವಿಂಗಡಣೆ:
ಅರಸನ್+ಉಪ್ಪವಡಿಸಿದನ್ + ಅವನೀ
ಶ್ವರ +ವಿಹಿತ +ಸತ್ಕ್ರಿಯೆಗಳನು +ವಿ
ಸ್ತರಿಸಿದನು +ದುಃಸ್ವಪ್ನ +ಕುಂತ +ವಿಭಿನ್ನ+ಚೇತನನು
ಕರೆಸಿ+ ಧೌಮ್ಯನಿಗ್+ಅರುಹಲ್+ಅತಿ+ ದು
ಸ್ತರದ+ ಕನಸಿದು +ಶಾಂತಿ +ಕರ್ಮವ
ಪುರದೊಳಗೆ+ ವಿರಚಿಸುವೆನ್+ಅಂಜದಿರೆಂದನಾ+ ಧೌಮ್ಯ

ಅಚ್ಚರಿ:
(೧) ಅರಸ, ಅವನೀಶ್ವರ – ಸಮನಾರ್ಥಕ ಪದ, ೧ ಸಾಲಿನ ಮೊದಲ ಹಾಗು ಕೊನೆ ಪದ