ಪದ್ಯ ೧೮: ದ್ರೌಪದಿಯ ಸೌಂದರ್ಯವು ಏಕೆ ಚಿತ್ರಿಸಲು ಅಸಾಧ್ಯ?

ಸರಸಲಾವಣ್ಯಾಂಬುಮಯ ತನು
ಸರಸಿಯಲಿ ಮುಳುಗಿರ್ದ ಯೌವನ
ಕರಿಯ ಕುಂಭಸ್ಥಳವೊ ವಿಪುಳ ಪಯೋಧರ ದ್ವಯವೊ
ತರಳ ನಯನವೊ ಶಫರಿಗಳೊ ತಾ
ವರೆಯೊಮುಖವೋ ತುಂಬಿಗಳೊ ನಿರಿ
ಗುರುಳುಗಳೊ ಮಣಿಗಣವೊ ರದನವೊ ಚಿತ್ರವಾಯ್ತೆಂದ (ಆದಿ ಪರ್ವ, ೧೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಸೌಂದರ್ಯ, ಚೆಲುವಿನಿಂದ ಕೂಡಿದ ನೀರು ತುಂಬಿದ ದೇಹವೆಂಬ ಸರೋವರದಲ್ಲಿ ಮುಳುಗಿರುವ ಯೌವನವೆಂಬ ಆನೆಯ ತಲೆಯೋ ಅಥವ ತುಂಬು ಸ್ತನವೋ, ಚಂಚಲವಾದ ಕಣ್ನುಗಳೊ ಅಥವ ಮೀನುಗಳೊ, ಸರೋವರದಲ್ಲಿರುವ ಕಮಲವೋ ಅಥವ ಮುಖವೋ, ಕಮಲಕ್ಕೆ ಆಕರ್ಷಿತವಾಗಿ ಬರುವ ಮರಿದುಂಬಿಯೋ ಅಥವ ಆಕೆಯ ಮುಂಗುರುಳೊ, ಸರೋವರದಲ್ಲಿ ಸಿಗುವ ಮಣಿಯೋ ಅಥವ ಆಕೆಯ ಹಲ್ಲೋ, ಹೀಗೆ ಯಾವುದೆಂದು ಹೇಳಲು ಬಾರದಂತೆ ದ್ರೌಪದಿಯ ಸೌಂದರ್ಯವು ಚಿತ್ರಿತವಾಗಿತ್ತು.

ಅರ್ಥ:
ಸರಸ: ಚೆಲುವು, ವಿನೋದ; ಲಾವಣ್ಯ: ಸೌಂದರ್ಯ, ಚೆಲುವು; ಅಂಬು: ನೀರು; ತನು: ಮೈ, ದೇಹ; ಸರಸಿ: ಸರೋವರ; ಮುಳುಗು: ಒಳಸೇರು, ಮುಚ್ಚಿಹೋಗು; ಯೌವನ: ಹರಯ, ತಾರುಣ್ಯ, ಪ್ರಾಯ; ಕರಿ: ಆನೆ; ಕುಂಭ: ಕಲಶ, ಆನೆಯ ನೆತ್ತಿ; ವಿಪುಳ: ತುಂಬ; ಪಯೋಧರ: ಮೊಲೆ, ಸ್ತನ; ದ್ವಯ: ಎರಡು; ತರಳ: ಚಂಚಲತೆ, ಬೆರಗು; ನಯನ: ಕಣ್ಣು; ಶಫರಿ: ಮೀನು; ತಾವರೆ: ಕಮಲ; ಮುಖ: ವಕ್ತ್ರ, ಆನನ; ತುಂಬಿ: ದುಂಬಿ, ಭ್ರಮರ; ನಿರಿಗುರುಳು: ಗುಂಗುರಾದ ಮುಂಗುರುಳು; ಮಣಿ: ಮುತ್ತು; ರದನ: ಹಲ್ಲು; ಚಿತ್ರ: ಆಕೃತಿ;

ಪದವಿಂಗಡಣೆ:
ಸರಸ+ಲಾವಣ್ಯ+ಅಂಬುಮಯ+ ತನು
ಸರಸಿಯಲಿ +ಮುಳುಗಿರ್ದ +ಯೌವನ
ಕರಿಯ+ ಕುಂಭಸ್ಥಳವೊ+ ವಿಪುಳ+ ಪಯೋಧರ +ದ್ವಯವೊ
ತರಳ+ ನಯನವೊ +ಶಫರಿಗಳೊ +ತಾ
ವರೆಯೊ+ಮುಖವೋ +ತುಂಬಿಗಳೊ+ ನಿರಿ
ಗುರುಳುಗಳೊ +ಮಣಿಗಣವೊ +ರದನವೊ +ಚಿತ್ರವಾಯ್ತೆಂದ

ಅಚ್ಚರಿ:
(೧) ಸೌಂದರ್ಯವನ್ನು ವರ್ಣಿಸಲು ಉಪಯೋಗಿಸಿರುವ ಉಪಮಾನಗಳು – ಲಾವಣ್ಯವೆಂಬ ನೀರು ತುಂಬಿದ ದೇಹವೆಂಬ ಸರೋವರ
(೨) ಅಂಬು, ಸರಸಿ – ನೀರು ಪದದ ಸಮಾನಾರ್ಥಕ
(೩) ಸರಸ, ಲಾವಣ್ಯ – ಚೆಲುವು; ಸರಸ, ತರಳ – ಚಂಚಲತೆ; – ಸಮಾನಾರ್ಥಕ ಪದಗಳು
(೪) ಕುಂಭಸ್ಥಳ – ಮೊಲೆ, ನಯನ – ಕಣ್ಣು, ತಾವರೆ – ಮುಖ, ದುಂಬಿ – ಗುಂಗುರು, ಮಣಿ – ಹಲ್ಲು – ಸೌಂದರ್ಯವನ್ನು ಹೋಲಿಸುವ ಉಪಮಾನ ಪದಗಳು