ಪದ್ಯ ೬೫: ಧರ್ಮಜನು ಯಾವ ಆಯುಧವನ್ನು ಹೊರತೆಗೆದನು?

ಆಯಿದನು ಶಸ್ತ್ರಾಸ್ತ್ರದಲಿ ದಿ
ವ್ಯಾಯುಧವನರೆಬಳಿದ ವರ ತಪ
ನೀಯರೇಖೆಯ ಕುಣಿವ ಗಂಟೆಯ ಹೊಳೆವ ಹೊಂಗರಿಯ
ಬಾಯಿಧಾರೆಯ ತೈಲಲೇಪನ
ದಾಯತದ ಚೌರಿಗಳ ರಿಪುಭಟ
ನಾಯುಷದ ಕಡೆವಗಲ ಭುಕ್ತಿಯ ಶಕ್ತಿಯನು ನೃಪತಿ (ಶಲ್ಯ ಪರ್ವ, ೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ತನ್ನ ಶಸ್ತ್ರಾಸ್ತ್ರಗಳಲ್ಲಿ ಒಂದು ದಿವ್ಯಾಯುಧವನ್ನು ಆರಿಸಿ ತೆಗೆದನ್. ಸುಡುತ್ತಿರುವ ರೇಖೆಯಿಂದೊಡಗೂಡಿದ ಗಂಟೆಗಳಿರುವ, ಹೊಳೆಯುವ ಬಂಗಾರದ ಗರಿಗಳುಳ್ಳ, ಬಾಯಿಧಾರೆಗೆ ತೈಲವನ್ನು ಹಚ್ಚಿದ, ಚೌರಿಗಳಿರುವ ಶತ್ರುವಿನ ಆಯುಷ್ಯದ ಕಡೆಯ ಹಗಲಾದ ಅವನನ್ನು ನುಂಗಬಲ್ಲ ಶಕ್ತ್ಯಾಯುಧವನ್ನು ತೆಗೆದನು.

ಅರ್ಥ:
ಆಯಿ: ಶೋಧಿಸು, ಹೊರತೆಗೆ; ಶಸ್ತ್ರ: ಆಯುಧ; ದಿವ್ಯ: ಶ್ರೇಷ್ಠ; ಆಯುಧ: ಅಸ್ತ್ರ; ಅರೆಬಳಿ: ; ತಪನೀಯ: ಸುಡುತ್ತಿರುವ; ರೇಖೆ: ಗೆರೆ, ಗೀಟು; ಕುಣಿ: ನರ್ತಿಸು; ಗಂಟೆ: ಕಿರುಗೆಜ್ಜೆ; ಹೊಳೆ: ಪ್ರಕಾಶಿಸು; ಹೊಂಗರಿ: ಚಿನ್ನದ ಗರಿ (ರೆಕ್ಕೆ); ಧಾರೆ: ಮಳೆ; ತೈಲ: ಎಣ್ಣೆ; ಲೇಪನ: ಹಚ್ಚು; ಆಯತ: ನೆಲೆ, ವಿಶಾಲವಾದ; ಚೌರಿ: ಚೌರಿಯ ಕೂದಲು; ರಿಪು: ವೈರಿ; ಭಟ: ಸೈನಿಕ; ಆಯುಷ: ಜೀವಿತದ ಅವಧಿ; ಕಡೆ: ಕೊನೆ; ಭುಕ್ತಿ: ಸುಖಾನುಭವ, ಭೋಗ; ಶಕ್ತಿ: ಬಲ; ನೃಪತಿ: ರಾಜ;

ಪದವಿಂಗಡಣೆ:
ಆಯಿದನು+ ಶಸ್ತ್ರಾಸ್ತ್ರದಲಿ +ದಿ
ವ್ಯಾಯುಧವನ್+ಅರೆಬಳಿದ +ವರ +ತಪ
ನೀಯ+ರೇಖೆಯ +ಕುಣಿವ +ಗಂಟೆಯ +ಹೊಳೆವ +ಹೊಂಗರಿಯ
ಬಾಯಿಧಾರೆಯ +ತೈಲ+ಲೇಪನದ್
ಆಯತದ +ಚೌರಿಗಳ +ರಿಪು+ಭಟನ್
ಆಯುಷದ +ಕಡೆವಗಲ+ ಭುಕ್ತಿಯ +ಶಕ್ತಿಯನು +ನೃಪತಿ

ಅಚ್ಚರಿ:
(೧) ಆಯುಧ, ಶಸ್ತ್ರ – ಸಾಮ್ಯಾರ್ಥ ಪದ
(೨) ಆಯುಧದ ವರ್ಣನೆ – ತಪನೀಯರೇಖೆಯ ಕುಣಿವ ಗಂಟೆಯ ಹೊಳೆವ ಹೊಂಗರಿಯ

ಪದ್ಯ ೬೦: ಮಹಾಂಕುಶಕ್ಕೆ ಯಾರು ಅಡ್ಡ ಬಂದರು?

ಇದರ ಪಾಡೇನೇಸಪಾಯವ
ನೊದೆದು ಕಳೆಯರು ಕೃಷ್ಣಭಕ್ತರು
ಸದರವೇ ಉರಿಗೆಂಡವೊರಲೆಯ ಬಾಯ್ಗೆ ಭಾವಿಸಲು
ಹೊದರುಗಿಡಿಗಳ ಹೊಗೆಯ ಹೇರಾ
ಳದಲಿ ಬಹ ದಿವ್ಯಾಯುಧಕೆ ಚಾ
ಚಿದನು ವಕ್ಷಸ್ಥಳವನಸುರಾರಾತಿಯಡಹಾಯ್ದು (ದ್ರೋಣ ಪರ್ವ, ೩ ಸಂಧಿ, ೬೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರಾ, ಈ ಮಹ ಅಂಕುಶವು ಎಷ್ಟರದು! ಕೃಷ್ಣಭಕ್ತರು ಎಷ್ಟು ಅಪಾಯಗಳನ್ನು ತಪ್ಪಿಸಿಕೊಂಡು ಬದುಕುವುದಿಲ್ಲ ಉರಿಕೆಂಡವು ಒರಲೆಯ ಬಾಯಿಗೆ ದಕ್ಕೀತೇ? ಕಿಡಿಯ ತೆಕ್ಕೆಗಳು, ಹೊಗೆಯ ಹೊರಳಿಗಳಿಂದ ಸುತ್ತುವರಿದು ಬರುತ್ತಿದ್ದ ಆ ಮಹಾಂಕುಶಕ್ಕೆ ಅಡ್ಡಬಂದು ಶ್ರೀಕೃಷ್ಣನು ತನ್ನ ಎದೆಯನ್ನು ಚಾಚಿದನು.

ಅರ್ಥ:
ಪಾಡು: ಸ್ಥಿತಿ; ಏಸು: ಎಷ್ಟು; ಅಪಾಯ: ತೊಂದರೆ; ಒದೆ: ತುಳಿ, ಮೆಟ್ಟು; ಕಳೆ: ಬೀಡು, ತೊರೆ; ಭಕ್ತ: ಆರಾಧಕ; ಸದರ: ಸಲಿಗೆ, ಸಸಾರ; ಉರಿ: ಬೆಂಕಿ; ಕೆಂಡ: ಇಂಗಳ; ಒರಲು: ಅರಚು, ಕೂಗಿಕೊಳ್ಳು; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಹೊದರು: ಗುಂಪು, ಸಮೂಹ; ಕಿಡಿ: ಬೆಂಕಿ; ಹೊಗೆ: ಧೂಮ; ಹೇರಾಳ: ದೊಡ್ಡ, ವಿಶೇಷ; ಬಹ: ಬಹಳ; ದಿವ್ಯ: ಶ್ರೇಷ್ಠ; ಆಯುಧ: ಶಸ್ತ್ರ; ಚಾಚು: ಹರಡು; ವಕ್ಷ: ಹೃದಯ; ಸ್ಥಳ: ಜಾಗ; ಅಸುರಾರಾತಿ: ಕೃಷ್ಣ; ಅಡಹಾಯ್ದು: ಅಡ್ಡಬಂದು; ಹಾಯ್ದು: ಹೋರಾಡು; ಹಾಯ್ದ: ಮೇಲೆಬಿದ್ದು;

ಪದವಿಂಗಡಣೆ:
ಇದರ+ ಪಾಡೇನ್+ಏ‍ಸ್+ಅಪಾಯವನ್
ಒದೆದು +ಕಳೆಯರು +ಕೃಷ್ಣ+ಭಕ್ತರು
ಸದರವೇ+ ಉರಿ+ಕೆಂಡವ್+ಒರಲೆಯ +ಬಾಯ್ಗೆ +ಭಾವಿಸಲು
ಹೊದರು+ಕಿಡಿಗಳ+ ಹೊಗೆಯ+ ಹೇರಾ
ಳದಲಿ+ ಬಹ+ ದಿವ್ಯಾಯುಧಕೆ+ ಚಾ
ಚಿದನು+ ವಕ್ಷಸ್ಥಳವನ್+ಅಸುರ+ಅರಾತಿ+ಅಡಹಾಯ್ದು

ಅಚ್ಚರಿ:
(೧) ಕೃಷ್ಣನನ್ನು ಅಸುರಾರಾತಿ ಎಂದು ಕರೆದಿರುವುದು
(೨) ಕೃಷ್ಣನು ರಕ್ಷಿಸುವ ಪರಿ – ಹೇರಾಳದಲಿ ಬಹ ದಿವ್ಯಾಯುಧಕೆ ಚಾಚಿದನು ವಕ್ಷಸ್ಥಳವನಸುರಾರಾತಿ