ಪದ್ಯ ೧೭: ದೇವತೆಗಳು ಯಾರನ್ನು ಸಾರಥಿಯಾಗಲು ಒಪ್ಪಿಸಿದರು?

ಮಾವ ಕೇಳೈ ಬಳಿಕ ಹರಿದುದು
ದೇವಕುಲ ಪರಮೇಷ್ಠಿಯಲ್ಲಿಗೆ
ಭಾವವನು ಬಿನ್ನೈಸಿದರು ನಿಜರಾಜಕಾರಿಯದ
ಆ ವಿಭುವನೊಡಬಡಿಸಿದರು ದಿವಿ
ಜಾವಳಿಗಳಿಂದಿನಲಿ ಕರ್ಣಗೆ
ನೀವು ಸಾರಥಿಯಾದಡಭಿಮತಸಿದ್ಧಿ ತನಗೆಂದ (ಕರ್ಣ ಪರ್ವ, ೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ಮಾವ ಕೇಳು, ದೇವತೆಗಳು ಸೃಷ್ಟಿಕರ್ತ ಬ್ರಹ್ಮನ ಬಳಿ ಹೋಗಿ ಶಿವನ ರಥಕ್ಕೆ ಸಾರಥಿಯಾಗಲು ಬೇಡಿಕೊಂಡು, ರಾಜಕಾರ್ಯವನ್ನು ತಿಳಿಸಿ ಸಾರಥಿಯಾಗಲು ಒಪ್ಪಿಸಿದರು. ಈ ದಿನವು ನೀವು ಕರ್ಣನ ರಥಕ್ಕೆ ಸಾರಥಿಯಾಗಲೊಪ್ಪಿದರೆ ನಮ್ಮ ಅಭಿಮತ ಸಿದ್ಧಿಸುತ್ತದೆ ಎಂದು ದುರ್ಯೋಧನನು ತಿಳಿಸಿದನು.

ಅರ್ಥ:
ಮಾವ: ತಾಯಿಯ ಸಹೋದರ; ಕೇಳು: ಆಲಿಸು; ಬಳಿಕ: ನಂತರ; ಹರಿ:ಗತಿ, ಯೋಚಿಸು; ದೇವಕುಲ: ಸುರರು; ಪರಮೇಷ್ಠಿ: ಬ್ರಹ್ಮ; ಭಾವ: ಅಭಿಪ್ರಾಯ, ಇಂಗಿತ; ಬಿನ್ನೈಸು: ಹೇಳು, ಬೇಡು; ನಿಜ: ದಿಟ; ರಾಜಕಾರಿಯ: ರಾಜಕಾರಣ; ವಿಭು: ಬ್ರಹ್ಮ, ಸರ್ವವ್ಯಾಪಿ; ಒಡಬಡಿಸಿ: ಒಪ್ಪಿಸಿ; ದಿವಿಜಾವಳಿ: ದೇವರ ಗುಂಪು; ಇಂದು: ಇವತ್ತು; ಸಾರಥಿ: ರಥವನ್ನು ಓಡಿಸುವವ; ಅಭಿಮತ: ಅಭಿಪ್ರಾಯ; ಸಿದ್ಧಿ: ಸಾಧಿಸು;

ಪದವಿಂಗಡಣೆ:
ಮಾವ +ಕೇಳೈ +ಬಳಿಕ +ಹರಿದುದು
ದೇವಕುಲ +ಪರಮೇಷ್ಠಿಯಲ್ಲಿಗೆ
ಭಾವವನು +ಬಿನ್ನೈಸಿದರು+ ನಿಜರಾಜ+ಕಾರಿಯದ
ಆ +ವಿಭುವನ್+ಒಡಬಡಿಸಿದರು +ದಿವಿ
ಜಾವಳಿಗಳ್+ಇಂದಿನಲಿ +ಕರ್ಣಗೆ
ನೀವು +ಸಾರಥಿಯಾದಡ್+ಅಭಿಮತಸಿದ್ಧಿ+ ತನಗೆಂದ

ಅಚ್ಚರಿ:
(೧) ದೇವಕುಲ, ದಿವಿಜಾವಳಿ – ಸುರರ ಗುಂಪು ಎಂದು ಹೇಳುವ ಪದಗಳು
(೨) ಪರಮೇಷ್ಠಿ, ವಿಭು – ಬ್ರಹ್ಮನನ್ನು ಕರೆಯಲು ಬಳಸಿದ ಪದ

ಪದ್ಯ ೨೦: ದೇವತೆಗಳಾದಿ ಶಿವನನ್ನು ಹೇಗೆ ಆರಾಧಿಸಿದರು?

ಪುಳಕಜಲವುಬ್ಬರಿಸೆ ಕುಸುಮಾಂ
ಜಳಿಯನಂಘ್ರಿದ್ವಯಕೆ ಹಾಯಿಕಿ
ನಳಿನಭವ ಮೆಯ್ಯಿಕ್ಕಿದನು ಭಯಭರಿತ ಭಕ್ತಿಯಲಿ
ಬಳಿಯಲಮರೇಂದ್ರಾದಿ ದಿವಿಜಾ
ವಳಿಗಳವನಿಗೆ ಮೆಯ್ಯ ಚಾಚಿದ
ರುಲಿವುತಿರ್ದುದು ಜಯಜಯ ಧ್ವಾನದಲಿ ಸುರಕಟಕ (ಕರ್ಣ ಪರ್ವ, ೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ಶಿವನನ್ನು ನೋಡಿದ ಬ್ರಹ್ಮನು ರೋಮಾಂಚನ ಗೊಂಡು ಸ್ವೇದಗಳುಂಟಾದವು. ಬೊಗಸೆಯಲ್ಲಿ ಹೂಗಳನ್ನು ಶಿವನ ಪಾದಗಳಿಗೆ ಹಾಕಿ, ಭಯಭರಿತ ಭಕ್ತಿಯಿಂದ ಬ್ರಹ್ಮನು ನಮಸ್ಕರಿಸಿದನು. ಆವನೊಡನೆ ಸಮಸ್ತದೇವತೆಗಳೂ ನಮಸ್ಕರಿಸಿ ಜಯಘೋಷವನ್ನು ಹಾಡಿದರು.

ಅರ್ಥ:
ಪುಳಕ: ಮೈನವಿರೇಳುವಿಕೆ, ರೋಮಾಂಚನ; ಜಲ: ನೀರು; ಪುಳಕಜಲ: ರೋಮಾಂಚನದ ನೀರು; ಉಬ್ಬರಿಸು:ಅತಿಶಯ, ಹೆಚ್ಚಳ; ಕುಸುಮ: ಹೂವು; ಆಂಜಳಿ:ಕೈಬೊಗಸೆ, ಜೋಡಿಸಿದ ಕೈಗಳು; ಅಂಘ್ರಿ: ಪಾದ; ದ್ವಯ: ಎರಡು; ಹಾಯಿಕಿ: ಹಾಕಿ; ನಳಿನ:ಕಮಲ; ನಳಿನಭವ: ಕಮಲದಿಂದ ಹುಟ್ಟಿದ (ಬ್ರಹ್ಮ); ಮೈಯ್ಯಿಕ್ಕು: ನಮಸ್ಕರಿಸು; ಭಯ: ಹೆದರಿಕೆ; ಭರಿತ: ತುಂಬಿದ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಬಳಿ: ಹತ್ತಿರ; ಅಮರೇಂದ್ರ: ದೇವತೆಗಳ ರಾಜ (ಇಂದ್ರ); ಆದಿ: ಮುಂತಾದ; ದಿವಿಜ: ಸುರ, ದೇತವೆ; ಆವಳಿ: ಗುಂಪು; ಮೆಯ್ಯಚಾಚು: ದೀರ್ಘದಂಡ ನಮಸ್ಕಾರ; ಉಲಿವು:ಧ್ವನಿ; ಜಯ: ಗೆಲುವು, ಹೊಗಳು; ಧ್ವಾನ: ಧ್ವನಿ; ಸುರ: ದೇವತೆ; ಕಟಕ: ಗುಂಪು;

ಪದವಿಂಗಡಣೆ:
ಪುಳಕಜಲವ್+ಉಬ್ಬರಿಸೆ +ಕುಸುಮಾಂ
ಜಳಿಯನ್+ಅಂಘ್ರಿ+ದ್ವಯಕೆ +ಹಾಯಿಕಿ
ನಳಿನಭವ+ ಮೆಯ್ಯಿಕ್ಕಿದನು+ ಭಯಭರಿತ+ ಭಕ್ತಿಯಲಿ
ಬಳಿಯಲ್+ಅಮರೇಂದ್ರಾದಿ +ದಿವಿಜಾ
ವಳಿಗಳ್+ಅವನಿಗೆ+ ಮೆಯ್ಯ ಚಾಚಿದರ್
ಉಲಿವುತಿರ್ದುದು +ಜಯಜಯ +ಧ್ವಾನದಲಿ +ಸುರಕಟಕ

ಅಚ್ಚರಿ:
(೧) ಕುಸುಮಾಂಜಳಿ, ದಿವಿಜಾವಳಿ, ಬಳಿ – ಪ್ರಾಸ ಪದಗಳು
(೨) ಮೆಯ್ಯಿಕ್ಕು, ಮೆಯ್ಯ ಚಾಚು – ನಮಸ್ಕರಿಸು ಎಂದು ಹೇಳಲು ಬಳಸಿದ ಪದ
(೩) ಕಟಕ, ಆವಳಿ – ಗುಂಪು ಪದದ ಸಮನಾರ್ಥ