ಪದ್ಯ ೮೩: ಇಂದ್ರನು ಅರ್ಜುನನನ್ನು ಹೇಗೆ ಬರಮಾಡಿಕೊಂಡನು?

ಇಳಿದು ರಥವನು ದಿವಿಜರಾಯನ
ನಿಳಯವನು ಹೊಕ್ಕನು ಕಿರೀಟಿಯ
ನಳವಿಯಲಿ ಕಂಡಿದಿರು ಬಂದನು ನಗುತ ಶತಮನ್ಯು
ಸೆಳೆದು ಬಿಗಿದಪ್ಪಿದನು ಕರದಲಿ
ತಳುಕಿ ಕರವನು ತಂದು ತನ್ನಯ
ಕೆಲದೊಳಗೆ ಕುಳ್ಳಿರಿಸಿದನು ಸಿಂಹಾಸನಾರ್ಧದಲಿ (ಅರಣ್ಯ ಪರ್ವ, ೮ ಸಂಧಿ, ೮೩ ಪದ್ಯ)

ತಾತ್ಪರ್ಯ:
ಅರ್ಜುನನು ರಥವನ್ನಿಳಿದು ದೇವೇಂದ್ರನ ಮನೆಯನ್ನು ಹೊಕ್ಕನು. ಹತ್ತಿರದಲ್ಲೇ ಅವನನ್ನು ಕಂಡು ಇಂದ್ರನು ನಗುತ್ತಾ ಎದುರುಬಂದನು. ಮಗನನ್ನು ಬರಸೆಳೆದು ಬಿಗಿದಪ್ಪಿ ಕೈಗೆ ಕೈಯನ್ನು ಜೋಡಿಸಿ, ಕರೆದೊಯ್ದು ತನ್ನ ಸಿಂಹಾಸನದಲ್ಲಿ ದೇವೇಂದ್ರನು ಅರ್ಜುನನನ್ನು ಕುಳ್ಳಿರಿಸಿಕೊಂಡನು.

ಅರ್ಥ:
ಇಳಿ: ಕೆಳಕ್ಕೆ ಬಾ; ರಥ: ಬಂಡಿ; ದಿವಿಜ: ದೇವತೆ; ರಾಯ: ಒಡೆಯ; ನಿಳಯ: ಮನೆ; ಹೊಕ್ಕು: ಸೇರು; ಕಿರೀಟಿ: ಅರ್ಜುನ; ಅಳವಿ: ಹತ್ತಿರ; ಕಂಡು: ನೋಡು, ಭೇಟಿ; ಇದಿರು: ಎದುರು; ಬಂದು: ಆಗಮಿಸು; ನಗುತ: ಸಂತಸ; ಶತಮನ್ಯು: ದೇವೇಂದ್ರ; ಸೆಳೆ: ಆಕರ್ಷಿಸು; ಬಿಗಿ: ಭದ್ರವಾಗಿ; ಅಪ್ಪು: ಆಲಂಗಿಸು; ಕರ: ಹಸ್ತ; ತಳುಕು: ಜೋಡಣೆ; ಕರ: ಹಸ್ತ; ತಂದು: ಬರೆಮಾಡು; ಕೆಲ: ಹತ್ತಿರ; ಕುಳ್ಳಿರಿಸು: ಆಸೀನನಾಗು; ಸಿಂಹಾಸನ: ರಾಜರ ಆಸನ; ಅರ್ಧ: ಎರಡು ಸಮಪಾಲುಗಳಲ್ಲಿ ಒಂದು;

ಪದವಿಂಗಡಣೆ:
ಇಳಿದು+ ರಥವನು +ದಿವಿಜ+ರಾಯನ
ನಿಳಯವನು +ಹೊಕ್ಕನು +ಕಿರೀಟಿಯ
ನಳವಿಯಲಿ+ ಕಂಡ್+ಇದಿರು +ಬಂದನು +ನಗುತ +ಶತಮನ್ಯು
ಸೆಳೆದು +ಬಿಗಿದಪ್ಪಿದನು +ಕರದಲಿ
ತಳುಕಿ +ಕರವನು +ತಂದು +ತನ್ನಯ
ಕೆಲದೊಳಗೆ +ಕುಳ್ಳಿರಿಸಿದನು +ಸಿಂಹಾಸನ+ಅರ್ಧದಲಿ

ಅಚ್ಚರಿ:
(೧) ಪ್ರೀತಿ, ಮಮಕಾರ, ವಾತ್ಸಲ್ಯವನ್ನು ತೋರುವ ಪರಿ – ಸೆಳೆದು ಬಿಗಿದಪ್ಪಿದನು ಕರದಲಿ
ತಳುಕಿ ಕರವನು ತಂದು ತನ್ನಯ ಕೆಲದೊಳಗೆ ಕುಳ್ಳಿರಿಸಿದನು ಸಿಂಹಾಸನಾರ್ಧದಲಿ

ಪದ್ಯ ೬೧: ಶಿಶುಪಾಲನು ಎಲ್ಲಿಗೆ ಹೋಗುತ್ತಾನೆ ಎಂದು ಭೀಷ್ಮರು ನುಡಿದರು?

ಆಯುಗದಲಾಯುಗದಲನಿಬರು
ಬೀಯವಾದರು ದೈತ್ಯದಾನವ
ರೀ ಯುಗದಲೆನಿತಸುರರನಿಬರು ದುಷ್ಟದಾನವರು
ರಾಯರನಿಬರು ದಿವಿಜರಾಯನ
ಲಾಯದಲಿ ಲಂಬಿಸಿದರಾ ತರು
ವಾಯ ನಿನಗೀಗಳೆ ವಿಘಾತದೊಳೆಂದನಾ ಭೀಷ್ಮ (ಸಭಾ ಪರ್ವ, ೧೦ ಸಂಧಿ, ೬೧ ಪದ್ಯ)

ತಾತ್ಪರ್ಯ:
ಆಯಾ ಯುಗದಲ್ಲಿ ಅದೆಷ್ಟೋಜನ ಶ್ರೀಕೃಷ್ಣನಿಂದ ಹತರಾದರು. ಈ ಯುಗದಲ್ಲಿ ಅದೆಷ್ಟೋಜನ ಅಸುರರು, ದುಷ್ಟ ರಾಕ್ಷಸರು, ಖಳ ರಾಜರು ಇವನಿಂದ ಹತರಾಗಿ ಇಂದ್ರನ ಅಶ್ವಶಾಲೆಯಲ್ಲಿ ಸಾಲಾಗಿ ನಿಂತಿದ್ದಾರೆ. ಅದಾದ ಮೇಲೆ ಈಗಲೇ ಹೆಚ್ಚಿನ ಹೊದೆತಬಿದ್ದು ನೀನೂ ಅಲ್ಲಿಗೆ ಹೋಗುತ್ತಿಯ ಎಂದು ಭೀಷ್ಮರು ನುಡಿದರು.

ಅರ್ಥ:
ಯುಗ: ಕಾಲದ ಪ್ರಮಾಣ; ಅನಿಬರು: ಅಷ್ಟು; ಬೀಯ: ವ್ಯಯ, ನಷ್ಟ, ಖರ್ಚು; ದೈತ್ಯ: ರಾಕ್ಷಸ; ಅಸುರ: ರಾಕ್ಷಸ; ದುಷ್ಟ: ಕೆಟ್ಟ, ಖಳ; ದಾನವ: ರಾಕ್ಷಸ; ರಾಯ: ರಾಜ; ದಿವಿಜ: ಸುರರು; ಲಾಯ: ಅಶ್ವಶಾಲೆ; ಲಂಬಿಸು: ಉದ್ದ; ತರುವಾಯ: ಅವಕಾಶ, ಅನುಕೂಲ; ವಿಘಾತ: ನಾಶ, ಧ್ವಂಸ;

ಪದವಿಂಗಡಣೆ:
ಆ+ಯುಗದಲ್+ಆ+ಯುಗದಲ್+ಅನಿಬರು
ಬೀಯವಾದರು +ದೈತ್ಯ+ದಾನವರ್
ಈ+ ಯುಗದಲ್+ಎನಿತ್+ಅಸುರರ್+ಅನಿಬರು +ದುಷ್ಟ+ದಾನವರು
ರಾಯರ್+ಅನಿಬರು +ದಿವಿಜ+ರಾಯನ
ಲಾಯದಲಿ +ಲಂಬಿಸಿದರ್+ಆ+ ತರು
ವಾಯ +ನಿನಗ್+ಈಗಳೆ +ವಿಘಾತದೊಳ್+ಎಂದನಾ +ಭೀಷ್ಮ

ಅಚ್ಚರಿ:
(೧) ಅಸುರ, ದಾನವ – ಸಮನಾರ್ಥಕ ಪದ
(೨) ಅನಿಬರು – ೩ ಬಾರಿ ಪ್ರಯೋಗ
(೩) ಇಂದ್ರನನ್ನು ದಿವಿಜರಾಯ ಎಂದು ಕರೆದಿರುವುದು
(೪) ಸತ್ತರು ಎಂದು ಹೇಳಲು – ದಿವಿಜರಾಯನ ಲಾಯದಲಿ ಲಂಬಿಸಿದರಾ

ಪದ್ಯ ೪೯:ಪ್ರಜಂಘನಿಗೆ ಇಂದ್ರನು ಏನು ಹೇಳಿದನು?

ಬಂದು ಖಚರನು ದಿವಿಜರಾಯಂ
ಗಂದು ಮೈಯಿಕ್ಕಿದನು ಭಯದಲಿ
ನಿಂದು ಕರಗಳ ಮುಗಿದು ಬೆಸನೇನೆನಲು ನಸುನಗುತ
ಅಂಧಕಾಸುರ ಮಡಿಯೆ ದಿವಿಜರಿ
ಗಂದಿನಿಂ ಭಯವಿಲ್ಲ ಕುಂತೀ
ನಂದನನ ಭಯವಾಯ್ತು ಕರೆಸಿದೆನೆಂದನಮರೇಂದ್ರ (ಆದಿ ಪರ್ವ, ೨೧ ಸಂಧಿ, ೪೯ ಪದ್ಯ)

ತಾತ್ಪರ್ಯ:
ಪ್ರಜಂಘನು ಇಂದ್ರನ ಮುಂದೆ ಬಂದು ನಮಸ್ಕರಿಸಿ ಭಯದಿಂದ ನಿಂತು ಇಂದ್ರನಿಗೆ ಏನೆಂದು ಕೇಳಲು, ಇಂದ್ರನ್ನು ಚುಚ್ಚುವ ರೀತಿಯಲ್ಲಿ ನಮಗೆ ಹಿಂದೆ ಅಂಧಕಾಸುರನು ಭಯವನ್ನು ಹುಟ್ಟಿಸಿದ್ದನು ಅವನ ಸಾವಿನ ನಂತರ ನಮಗಾವುದೇ ಭಯವಿರಲಿಲ್ಲ, ಈಗ ಅರ್ಜುನನ ದೆಸೆಯಿಂದ ನಮಗೆ ಮತ್ತೆ ಭಯವುಂಟಾಗಲು ನಿನ್ನನ್ನು ಕರೆಸಿದೆನು ಎಂದನು.

ಅರ್ಥ:
ಖಚರ: ಗಂಧರ್ವ; ದಿವಿಜರಾಯ: ಇಂದ್ರ; ದಿವಿಜ: ದೇವತೆ; ರಾಯ: ರಾಜ; ಮೈಯಿಕ್ಕು: ನಮಸ್ಕರಿಸು; ಭಯ: ಹೆದರು; ಕರ: ಕೈ; ಮುಗಿದು: ನಮಸ್ಕರಿಸು; ಬೆಸಸು: ಹೇಳು; ನಗುತ: ಸಂತೋಷ, ಹರ್ಷ; ಅಸುರ: ದಾನವ, ರಾಕ್ಷಸ; ಮಡಿ: ಸಾವು; ನಂದನ: ಮಗ; ಕರೆಸು: ಬರೆಮಾಡು;

ಪದವಿಂಗಡಣೆ:
ಬಂದು+ ಖಚರನು +ದಿವಿಜ+ರಾಯಂಗ್
ಅಂದು +ಮೈಯಿಕ್ಕಿದನು+ ಭಯದಲಿ
ನಿಂದು +ಕರಗಳ+ ಮುಗಿದು +ಬೆಸನೇನ್+ಎನಲು +ನಸುನಗುತ
ಅಂಧಕಾಸುರ +ಮಡಿಯೆ +ದಿವಿಜರಿಗ್
ಅಂದಿನಿಂ +ಭಯವಿಲ್ಲ+ ಕುಂತೀ
ನಂದನನ +ಭಯವಾಯ್ತು +ಕರೆಸಿದೆನ್+ಎಂದನ್+ಅಮರೇಂದ್ರ

ಅಚ್ಚರಿ:
(೧) ದಿವಿಜರಾಯ, ಅಮರೇಂದ್ರ – ಇಂದ್ರ, ೧, ೬ ಸಾಲಿನ ಕೊನೆಯ ಪದಗಳು
(೨) ಪ್ರಜಂಘನು ಇಂದ್ರನ ಮುಂದೆ ನಿಂತ ಪರಿ – ಮೈಯಿಕ್ಕಿದನು ಭಯದಲಿ ನಿಂದು ಕರಗಳ ಮುಗಿದು
(೩) ಭಯ – ೫,೬ ಸಾಲಿನ ೨ನೇ ಪದ

ಪದ್ಯ ೩೮: ಅರ್ಜುನನ ಪತ್ರವು ಹೇಗೆ ಪ್ರಾರಂಭವಾಗುತ್ತದೆ?

ಸ್ವಸ್ತಿ ಶ್ರೀಮತು ದಿವಿಜರಾಯ ಸ
ಮಸ್ತ ಗುಣಸಂಪನ್ನ ಸುರಪ್ತಿ
ಹಸ್ತಿವಾಹನ ಪಾಂಡುವಿನಸುತ ಪಾರ್ಥನೆಂದೆನಿಪ
ಹಸ್ತಿನಾಪುರದರಸು ತನುಜನು
ಪ್ರಸ್ತದಿಂದಲಿ ಕಳುಹಿದೋಲೆಯ
ವಿಸ್ತರದಿ ಕೇಳುವುದು ಕುಂತೀಸುತನ ಬಿನ್ನಪವ (ಆದಿ ಪರ್ವ, ೨೧ ಸಂಧಿ, ೩೮ ಪದ್ಯ)

ತಾತ್ಪರ್ಯ:
ಸ್ವಸ್ತಿ (ಕ್ಷೇಮ), ಗೌರವಾನ್ವಿತನಾದ, ಸಮಸ್ತ ಗುಣಸಂಪನ್ನನಾದ, ಐರಾವತವನ್ನು ತನ್ನ ವಾಹನವಾಗಿ ಉಳ್ಳವನಾದ ದೇವತೆಗಳ ಒಡೆಯನಾದ ದೇವೇಂದ್ರನೆ, ಹಸ್ತಿನಾಪುರದ ಪಾಂಡುರಾಜನ ಕುಮಾರನು, ಧರ್ಮರಾಯನ ಸಹೋದರನೂ, ಕುಂತೀ ಪುತ್ರನಾದ ಪಾರ್ಥನು ಪ್ರಸಂಗವಶಾತ್ ಕಳಿಸಿರುವು ಈ ಪತ್ರವನ್ನು ಸವಿವರವಾಗಿ ಓದಬೇಕೆಂಬ ಬಿನ್ನಹ.

ಅರ್ಥ:
ಸ್ವಸ್ತಿ:ಒಳ್ಳೆಯದು, ಕ್ಷೇಮ; ಶ್ರೀಮತು:ಗೌರವಾನ್ವಿತನಾದ; ದಿವಿಜ: ದೇವತೆಗಳು; ರಾಯ:ರಾಜ; ಸಮಸ್ತ: ಎಲ್ಲಾ; ಗುಣ: ಸ್ವಭಾವ, ನಡತೆ; ಸಂಪನ್ನ:ಸತ್ಪುರುಷ; ಸುರಪತಿ: ಇಂದ್ರ; ಹಸ್ತಿ: ಆನೆ; ವಾಹನ: ರಥ; ಸುತ: ಮಗ; ಅರಸು: ರಾಜ; ತನುಜ: ಸಹೋದರ; ಪ್ರಸ್ತ: ಸಂದರ್ಭ; ಕಳುಹಿದ: ಕಳುಹಿಸಿದ; ಓಲೆ: ಪತ್ರ; ವಿಸ್ತರದಿ: ವಿವರವಾಗಿ; ಕೇಳು: ಆಲಿಸು; ಸುತ: ಮಗ; ಬಿನ್ನಪ: ಬೇಡಿಕೆ

ಪದವಿಂಗಡಣೆ:
ಸ್ವಸ್ತಿ +ಶ್ರೀಮತು +ದಿವಿಜರಾಯ+ ಸ
ಮಸ್ತ +ಗುಣಸಂಪನ್ನ +ಸುರಪತಿ
ಹಸ್ತಿವಾಹನ+ ಪಾಂಡುವಿನಸುತ +ಪಾರ್ಥ+ನೆಂದೆನಿಪ
ಹಸ್ತಿನಾಪುರದ್+ಅರಸು +ತನುಜನು
ಪ್ರಸ್ತದಿಂದಲಿ +ಕಳುಹಿದ್+ಓಲೆಯ
ವಿಸ್ತರದಿ+ ಕೇಳುವುದು +ಕುಂತೀಸುತನ+ ಬಿನ್ನಪವ

ಅಚ್ಚರಿ:
(೧) ಇಂದ್ರನಿಗೆ ಬಳಸಿದ ಗುಣವಿಶೇಷಗಳು – ದಿವಿಜರಾಯ, ಸಮಸ್ತಗುಣಸಂಪನ್ನ, ಸುರಪತಿ, ಹಸ್ತಿವಾಹನ
(೨) ಪಾರ್ಥ ಯಾರೆಂದು ಹೇಳಲು ಬಳಸಿದ ಪದಗಳು – ಪಾಂಡುಸುತ, ಕುಂತೀಸುತ, ಹಸ್ತಿನಾಪುರದರಸು ತನುಜ