ಪದ್ಯ ೪೨: ಸೈಂಧವನ ತಂದೆ ಯಾವ ಶಾಪವನ್ನಿತ್ತಿದ್ದನು?

ಇವನ ತಂದೆಯ ಶಾಪವಾವವ
ನಿವನ ತಲೆಯನು ನೆಲಕೆ ಕೆಡಹುವ
ನವನ ಮಸ್ತಕ ಬಿರಿದು ಬೀಳಲಿಯೆಂದನೀ ತಲೆಯ
ಇವನ ತಂದೆಯ ಕೈಯೊಳಗೆ ಬೀ
ಳುವವುಪಾಯವ ಮಾಡು ನೀನೆನೆ
ದಿವಿಜಪತಿಸುತನಾ ಮಹಾಸ್ತ್ರಕೆ ಬೆಸಸಿದನು ಹದನ (ದ್ರೋಣ ಪರ್ವ, ೧೪ ಸಂಧಿ, ೪೨ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ತನ್ನ ಮಾತನ್ನು ಮುಂದುವರೆಸುತ್ತಾ, ಇವನ ತಲೆಯನ್ನು ಯಾರು ನೆಲಕ್ಕೆ ಕೆಡಹುವರೋ ಅವನ ತಲೆ ಬಿರಿದು ಬೀಳಲಿ ಎಂದು ಇವನ ತಂದೆಯ ಶಾಪವಿದೆ. ಈ ತಲೆಯು ಇವನ ತಂದೆಯ ಕೈಗೆ ಬೀಳುವ ಹಾಗೆ ಉಪಾಯವನ್ನು ಮಾಡು ಎಂದು ಕೃಷ್ಣನು ಹೇಳಲು, ಅರ್ಜುನನು ಹಾಗೆ ಆಗಲಿ ಎಂದು ಪಾಶುಪತಾಸ್ತ್ರಕ್ಕೆ ಆದೇಶವನ್ನಿತ್ತನು.

ಅರ್ಥ:
ತಂದೆ: ಅಪ್ಪ, ಪಿತ; ಶಾಪ: ನಿಷ್ಠುರದ ನುಡಿ; ತಲೆ: ಶಿರ; ನೆಲ: ಭೂಮಿ; ಕೆಡಹು: ಬೀಳು; ಮಸ್ತಕ: ತಲೆ; ಬಿರಿ: ಸೀಳು; ಬೀಳು: ಕುಸಿ; ಕೈ: ಹಸ್ತ; ಉಪಾಯ: ಯೋಚನೆ; ದಿವಿಜಪತಿ: ದೇವತೆಗಳ ರಾಜ (ಇಂದ್ರ); ಅಸ್ತ್ರ: ಶಸ್ತ್ರ; ಬೆಸಸು: ಕಾರ್ಯ; ಹದ: ಸ್ಥಿತಿ, ರೀತಿ;

ಪದವಿಂಗಡಣೆ:
ಇವನ +ತಂದೆಯ +ಶಾಪವ್+ಆವವನ್
ಇವನ +ತಲೆಯನು +ನೆಲಕೆ +ಕೆಡಹುವನ್
ಅವನ +ಮಸ್ತಕ +ಬಿರಿದು +ಬೀಳಲಿ+ಎಂದನ್+ಈ+ ತಲೆಯ
ಇವನ +ತಂದೆಯ +ಕೈಯೊಳಗೆ +ಬೀ
ಳುವ+ಉಪಾಯವ +ಮಾಡು +ನೀನ್+ಎನೆ
ದಿವಿಜಪತಿ+ಸುತನ್+ಆ+ ಮಹಾಸ್ತ್ರಕೆ +ಬೆಸಸಿದನು +ಹದನ

ಅಚ್ಚರಿ:
(೧) ತಲೆ, ಮಸ್ತಕ – ಸಮಾನಾರ್ಥಕ ಪದ
(೨) ಇವನ ತಂದೆಯ – ೧, ೪ ಸಾಲಿನ ಮೊದಲ ಪದ

ಪದ್ಯ ೧೧: ಯಾವುದು ರಾಜರ ಧರ್ಮ?

ಬವರ ಮುಖದಲಿ ವೈರಿರಾಯರ
ನವಗಡಿಸಿ ತಂದಾ ಧನವ ಭೂ
ದಿವಿಜ ಸಂತತಿಗಿತ್ತ ಫಲವಿನಿತೆಂದು ಗಣಿಸುವೊಡೆ
ದಿವಿಜಪತಿಗಾಗದು ಕಣಾ ಮಾ
ನವಪತಿಗೆ ಸದ್ಧರ್ಮವಿದು ನಿ
ನ್ನವನು ನೀತಿಯನರಿಯನೈ ಧೃತರಾಷ್ಟ್ರ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಯುದ್ಧದಲ್ಲಿ ಶತ್ರುರಾಜರನ್ನು ಸೋಲಿಸಿ, ಕಾಳಗದಲ್ಲಿ ಗೆದ್ದು ಸಂಪಾದಿಸಿದ ಧನವನ್ನು ಬ್ರಾಹ್ಮಣರಿಗೆ ದಾನ ಮಾಡಿದರೆ ಬರುವ ಫಲವು ಇಷ್ಟೇ ಎಂದು ಲೆಕ್ಕ ಮಾಡಲು ದೇವೇಂದ್ರನಿಗೆ ಆಗುವುದಿಲ್ಲ, ಇದು ರಾಜರ ಧರ್ಮ, ನಿನ್ನ ಮಗನಿಗೆ ನೀತಿ ಗೊತ್ತಿಲ್ಲ ಧೃತರಾಷ್ಟ್ರ ಎಂದು ವಿದುರನು ಹೇಳಿದನು.

ಅರ್ಥ:
ಬವರ: ಕಾಳಗ, ಯುದ್ಧ; ಮುಖ: ಆನನ; ವೈರಿ: ಶತ್ರು; ರಾಯ: ರಾಜ; ಅವಗಡಿಸು:ಸೋಲಿಸು; ತಂದ: ಕೊಂಡು, ಪಡೆದು; ಧನ: ಐಶ್ವರ್ಯ; ಭೂದಿವಿಜ: ಬ್ರಾಹ್ಮಣ; ಸಂತತಿ: ವಂಶ; ಫಲ: ಫಲಿತಾಂಶ; ಗಣಿಸು: ಎಣಿಸು; ದಿವಿಜಪತಿ: ಇಂದ್ರ; ಮಾನವಪತಿ: ರಾಜ; ಸದ್ಧರ್ಮ: ಒಳ್ಳೆಯ ನಡತೆ, ಕಾರ್ಯ; ನೀತಿ:ಒಳ್ಳೆಯ ನಡತೆ, ಶಿಷ್ಟಾಚಾರ; ಅರಿ: ತಿಳಿ; ಕೇಳು: ಆಲಿಸು;

ಪದವಿಂಗಡಣೆ:
ಬವರ +ಮುಖದಲಿ +ವೈರಿ+ರಾಯರನ್
ಅವಗಡಿಸಿ +ತಂದಾ +ಧನವ+ ಭೂ
ದಿವಿಜ +ಸಂತತಿಗಿತ್ತ+ ಫಲವಿನಿತೆಂದು +ಗಣಿಸುವೊಡೆ
ದಿವಿಜಪತಿಗ್+ಆಗದು +ಕಣಾ +ಮಾ
ನವಪತಿಗೆ+ ಸದ್ಧರ್ಮವ್+ಇದು +ನಿ
ನ್ನವನು +ನೀತಿಯನ್+ಅರಿಯನೈ+ ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ದಿವಿಜಪತಿ, ಮಾನವಪತಿ – ಇಂದ್ರ ಮತ್ತು ರಾಜರನ್ನು ಉದ್ದೇಶಿಸಲು ಬಳಸಿದ ಪದ
(೨) ದಿವಿಜ – ೨, ೩ ಸಾಲಿನ ಮೊದಲ ಪದ

ಪದ್ಯ ೨೨: ಅರ್ಜುನನು ಭಗದತ್ತನನ್ನು ಏನು ಒಪ್ಪಿಕೊಳ್ಳಲು ಕೇಳಿದನು?

ಆದರೆಮಗೆಯು ದಿವಿಜಪತಿಯೋ
ಪಾದಿ ನೀವೆಮ್ಮಣ್ಣದೇವನ
ಮೇದಿನಿಯ ಸಾಮ್ರಾಜ್ಯ ಪದವಿಯ ರಾಜಸೂಯವನು
ಆದರಿಸಿ ಸಾಕೆನಲು ಗಜಹಯ
ವಾದಿಯಾದ ಸಮಸ್ತ ವಸ್ತುವ
ನೈದೆಕೊಟ್ಟನು ಫಲುಗುಣಂಗೆ ಸುಮಿತ್ರಭಾವದಲಿ (ಸಭಾ ಪರ್ವ, ೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಭಗದತ್ತನ ಮಾತುಗಳನ್ನು ಕೇಳಿದ ಅರ್ಜುನನು, “ನೀವು ನಮಗೆ ನಮ್ಮ ತಂದೆ ಇಂದ್ರನಿಗೆ ಸಮನಾದವರು, ನಮ್ಮ ಅಣ್ಣನ ಸಮಸ್ತ ಭೂಮಿಯ ಚಕ್ರವರ್ತಿಯಾಗಿ ಮಾಡಬೇಕೆಂದಿರುವ ರಾಜಸೂಯ ಯಾಗವನ್ನು ಒಪ್ಪಿಕೊಂಡರೆ ಸಾಕು” ಎನ್ನಲು ಭಗದತ್ತನು ಆನೆ, ಕುದುರೆ ಮೊದಲಾದ ಸಮಸ್ತ ವಸ್ತುಗಳನ್ನು ಅರ್ಜುನನಿಗೆ ಮೈತ್ರಿ ಭಾವದಿಂದ ಕೊಟ್ಟನು.

ಅರ್ಥ:
ದಿವಿಜ: ಸುರರು; ದಿವಿಜಪತಿ:ಇಂದ್ರ; ಅಣ್ಣ: ಸಹೋದರ; ಮೇದಿನಿ: ಭೂಮಿ; ಸಾಮ್ರಾಜ್ಯ: ಚಕ್ರಾಧಿಪತ್ಯ; ಪದವಿ:ಸ್ಥಾನ, ಹುದ್ದೆ; ಆದರಿಸು: ಗೌರವಿಸು; ಗಜ: ಹಸ್ತಿ; ಹಯ: ಕುದುರೆ; ಸಮಸ್ತ: ಎಲ್ಲಾ; ವಸ್ತು: ಸಾಮಗ್ರಿ; ಐದೆ: ಸೇರು; ಮಿತ್ರ: ಸ್ನೇಹ;

ಪದವಿಂಗಡಣೆ:
ಆದರ್+ಎಮಗೆಯು +ದಿವಿಜಪತಿಯೋ
ಪಾದಿ +ನೀವ್+ಎಮ್+ಅಣ್ಣದೇವನ
ಮೇದಿನಿಯ +ಸಾಮ್ರಾಜ್ಯ +ಪದವಿಯ +ರಾಜಸೂಯವನು
ಆದರಿಸಿ+ ಸಾಕ್+ಎನಲು +ಗಜ+ಹಯ
ವಾದಿಯಾದ +ಸಮಸ್ತ +ವಸ್ತುವನ್
ಐದೆಕೊಟ್ಟನು +ಫಲುಗುಣಂಗೆ +ಸುಮಿತ್ರ+ಭಾವದಲಿ

ಅಚ್ಚರಿ:
(೧) ಇಂದ್ರ ಮತ್ತು ಯುಧಿಷ್ಠಿರನನ್ನು ಕರೆಯಲು – ದಿವಿಜಪತಿ, ಅಣ್ಣದೇವ ಪದಗಳ ಪ್ರಯೋಗ