ಪದ್ಯ ೩೮: ಯಾರು ಮೃತ್ಯುವಶರಾದ ರಾಜರು?

ಭರತ ಪೃಥು ಪೌರವ ಭಗೀರಥ
ವರ ಯಯಾತಿ ಮರುತ್ತ ನಹುಷೇ
ಶ್ವರ ಪುರೂರವ ರಂತಿದೇವ ಗಯಾಂಬರೀಷಕರು
ಪರಶುರಾಮ ದಿಲೀಪ ಮಾಂಧಾ
ತರು ಹರಿಶ್ಚಂದ್ರಾದಿ ಪೃಥ್ವೀ
ಶ್ವರರನಂತರು ಮೃತ್ಯುವಶವರ್ತಿಗಳು ಕೇಳೆಂದ (ದ್ರೋಣ ಪರ್ವ, ೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭರತ, ಪೃಥು, ಪೌರವ, ಭಗೀರಥ, ಯಯಾತಿ, ಮರುತ್ತ, ನಹುಷ, ಪುರೂರವ, ರಂತಿದೇವ, ಗಯ, ಅಂಬರೀಷ, ಪರಶುರಾಮ, ದಿಲೀಪ, ಮಾಂಧಾತ, ಹರಿಶ್ಚಂದ್ರ ಮೊದಲಾದ ಲೆಕ್ಕವಿಲ್ಲದಷ್ಟು ರಾಜರು ಮೃತ್ಯುವಿಗೆ ವಶವಾದರು.

ಅರ್ಥ:
ವರ: ಶ್ರೇಷ್ಠ; ಆದಿ: ಮುಂತಾದ; ಪೃಥ್ವೀಶ್ವರ: ರಾಜ; ಪೃಥ್ವಿ: ಭೂಮಿ; ಮೃತ್ಯು: ಸಾವು; ವಶ: ಅಧೀನ; ಕೇಳು: ಆಲಿಸು; ಅನಂತ: ಲೆಕ್ಕವಿಲ್ಲದಷ್ಟು;

ಪದವಿಂಗಡಣೆ:
ಭರತ +ಪೃಥು +ಪೌರವ+ ಭಗೀರಥ
ವರ +ಯಯಾತಿ +ಮರುತ್ತ +ನಹುಷೇ
ಶ್ವರ +ಪುರೂರವ +ರಂತಿದೇವ +ಗಯ+ಅಂಬರೀಷಕರು
ಪರಶುರಾಮ +ದಿಲೀಪ +ಮಾಂಧಾ
ತರು +ಹರಿಶ್ಚಂದ್ರ+ಆದಿ +ಪೃಥ್ವೀ
ಶ್ವರರ್+ಅನಂತರು +ಮೃತ್ಯುವಶವರ್ತಿಗಳು+ ಕೇಳೆಂದ

ಅಚ್ಚರಿ:
(೧) ಈಶ್ವರ ಪದದ ಬಳಕೆ – ನಹುಷೇಶ್ವರ, ಪೃಥ್ವೀಶ್ವರ

ಪದ್ಯ ೭೯: ಅರ್ಜುನನು ಯಾರನ್ನು ಸ್ವರ್ಗದಲಿ ನೋಡಿದನು?

ಈತ ಭರತನು ದೂರದಲಿ ತೋ
ರ್ಪಾತನು ಹರಿಶ್ಚಂದ್ರನಳ ನೃಗ
ರೀತಗಳು ಪುರುಕುತ್ಸನೀತ ಮರುತ್ತ ನೃಪನೀತ
ಈತ ಹೈಹಯ ದುಂದುಮಾರಕ
ನಿತ ನಹುಷ ದಿಳೀಪ ದಶರಥ
ನೀತ ರಘು ತಾನೀತ ಶಂತನು ಪಾರ್ಥ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೭೯ ಪದ್ಯ)

ತಾತ್ಪರ್ಯ:
ಮಾತಲಿಯು ಅರ್ಜುನನಿಗೆ ಸ್ವರ್ಗವನ್ನು ತೋರಿಸುತ್ತಾ, ಇವನು ಭರತ, ಅಲ್ಲಿ ದೂರದಲ್ಲಿ ಕಾಣುವವನು ಹರಿಶ್ಚಂದ್ರ, ಇವನು ನಳ, ಇವನು ನೃಗ, ಇವನು ಪುರುಕುತ್ಸ, ಇವನು ಮರುತ್ತ, ಇವನು ಹೈಹಯ, ಇವನು ದುಂದುಮಾರ, ಇವನು ನಹುಷ, ಇವನು ದಿಲೀಪ, ಇವನು ದಶರಥ, ಇವನು ರಘು, ಇವನು ಶಂತನು ಎಂದು ಹೇಳಿದನು.

ಅರ್ಥ:
ದೂರ: ಅಂತರ; ತೋರ್ಪ: ತೋರುವ; ನೋಡು: ವೀಕ್ಷಿಸು;

ಪದವಿಂಗಡಣೆ:
ಈತ +ಭರತನು +ದೂರದಲಿ +ತೋರ್ಪ
ಆತನು +ಹರಿಶ್ಚಂದ್ರ+ ನಳ +ರ್
ಈತಗಳು +ಪುರುಕುತ್ಸನ್+ಈತ +ಮರುತ್ತ ನೃಪನ್+ಈತ
ಈತ+ ಹೈಹಯ +ದುಂದುಮಾರಕನ್
ಈತ +ನಹುಷ +ದಿಲೀಪ +ದಶರಥನ್
ಈತ +ರಘು +ತಾನ್+ಈತ +ಶಂತನು +ಪಾರ್ಥ +ನೋಡೆಂದ

ಅಚ್ಚರಿ:
(೧) ಈತ – ೮ ಬಾರಿ ಪ್ರಯೋಗ
(೨) ಮುಖ್ಯ ರಾಜರ ಪರಿಚಯ – ಭರತ, ಹರಿಶ್ಚಂದ್ರ, ನಳ, ನೃಗ, ದುಂದುಮಾರ, ಪುರುಕುತ್ಸ, ಹೈಹಯ, ದಿಲೀಪ, ದಶರಥ, ರಘು, ಶಂತನು

ಪದ್ಯ ೮೬: ಪಾಂಡವರ ಕೀರ್ತಿ ಯಾರನ್ನು ಅಣಕಿಸುತ್ತದೆ ಎಂದು ವಿದುರನು ಹೇಳಿದನು?

ನೋಡುವುದು ಬಾಂಧವರ ನಿಮ್ಮಡಿ
ಮಾಡುವುದು ಸೌಖ್ಯವನು ಭಯದಲಿ
ಬಾಡುವುದಲೇ ರಿಪುನೃಪಾಲರ ಸಮರ ಜಯಬೀಜ
ಜೋಡಿಸುವುದಗಲದಲಿ ಕೀರ್ತಿಯ
ಝಾಡಿಯನು ನಿಮ್ಮಭ್ಯುದಯ ಬಳಿ
ಕೇಡಿಸುವುದೈ ದುಂದುಮಾರ ದಿಲೀಪ ದಶರಥರ (ಸಭಾ ಪರ್ವ, ೧೩ ಸಂಧಿ, ೮೬ ಪದ್ಯ)

ತಾತ್ಪರ್ಯ:
ಬಾಂಧವರನ್ನು ನೋಡಿ, ಸೌಖ್ಯವನ್ನು ಇಮ್ಮಡಿ ಹೆಚ್ಚಿಸಿದರೆ ಶತ್ರುರಾಜರ ಯುದ್ಧಜಯದ ಬೀಜ ಬಾಡಿಹೋಗುತ್ತದೆ. ಕೀರ್ತಿಯನ್ನು ಎಲ್ಲೆಡೆಗೆ ಹಬ್ಬಿಸಬೇಕು. ಆನಂತರ ನಿಮ್ಮ ಅಭ್ಯುದಯವು ದುಂದುಮಾರ, ದಿಲೀಪ, ದಶರಥರ ಕೀರ್ತಿಯನ್ನು ಅಣಕಿಸುತ್ತದೆ ಎಂದು ವಿದುರನು ಹೇಳಿದನು.

ಅರ್ಥ:
ನೋಡು: ವೀಕ್ಷಿಸು; ಬಾಂಧವ: ಸಂಬಂಧಿಕರು; ಇಮ್ಮಡಿ: ಎರಡುಪಟ್ಟು; ಮಾಡು: ನಿರ್ವಹಿಸು; ಸೌಖ್ಯ: ನೆಮ್ಮದಿ, ಸಂತಸ; ಭಯ: ಅಂಜಿಕೆ; ಬಾಡು: ಒಣಗು, ಮುರುಟು; ರಿಪು: ವೈರಿ; ನೃಪಾಲ: ರಾಜ; ಸಮರ: ಯುದ್ಧ; ಜಯ: ಗೆಲುವು; ಬೀಜ: ಮೂಲ; ಜೋಡಿಸು: ಕೂಡಿಸು; ಅಗಲ: ವಿಸ್ತಾರ; ಕೀರ್ತಿ: ಯಶಸ್ಸು; ಝಾಡಿ: ಕಾಂತಿ; ಅಭ್ಯುದಯ: ಏಳಿಗೆ; ಬಳಿಕ: ನಂತರ; ಏಡಿಸು: ನಿಂದಿಸು, ಅವಹೇಳನ ಮಾಡು;

ಪದವಿಂಗಡಣೆ:
ನೋಡುವುದು +ಬಾಂಧವರ +ನಿಮ್ಮಡಿ
ಮಾಡುವುದು +ಸೌಖ್ಯವನು +ಭಯದಲಿ
ಬಾಡುವುದಲೇ +ರಿಪು+ನೃಪಾಲರ+ ಸಮರ+ ಜಯಬೀಜ
ಜೋಡಿಸುವುದ್+ಅಗಲದಲಿ +ಕೀರ್ತಿಯ
ಝಾಡಿಯನು +ನಿಮ್ಮ್+ಅಭ್ಯುದಯ +ಬಳಿಕ್
ಏಡಿಸುವುದೈ +ದುಂದುಮಾರ +ದಿಲೀಪ +ದಶರಥರ

ಅಚ್ಚರಿ:
(೧) ವೈರಿಗಳು ಹೆದರುತ್ತಾರೆ ಎಂದು ಹೇಳುವ ಪರಿ – ಭಯದಲಿ ಬಾಡುವುದಲೇ ರಿಪುನೃಪಾಲರ ಸಮರ ಜಯಬೀಜ