ಪದ್ಯ ೧: ಸೂರ್ಯೋದಯವು ಹೇಗೆ ಕಂಡಿತು?

ಕೇಳು ಜನಮೇಜಯ ಧರಿತ್ರೀ
ಪಾಲಪಾಶುಪತಾಸ್ತ್ರವೇದದ
ಪಾಳಿಯುಚ್ಚರಣೆಯಲಿ ತತ್ಪ್ರಣವ ಸ್ವರೂಪವೆನೆ
ಮೇಳವಿಸಿತರುಣಾಂಶು ಪೂರ್ವದಿ
ಶಾಲತಾಂಗಿಯ ಮಂಡನೋಚಿತ
ಮೌಳಿಮಾಣಿಕವೆನಲು ಮೆರೆದುದು ದಿನಮಣಿಯ ಬಿಂಬ (ಅರಣ್ಯ ಪರ್ವ, ೧೪ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಪಾಶುಪತಾಸ್ತ್ರವೇದದ ಉಚ್ಚಾರಣೆಯ ಮೊದಲು ಬರುವ ಓಂಕಾರವೋ ಎಂಬಂತೆ ಪೂರ್ವ ದಿಕ್ಕಿನಲ್ಲಿ ಅರುಣೋದಯವಾಯಿತು. ಪೂರ್ವದಿಕ್ಕಿನ ವನಿತೆಯ ಮುಂದಲೆಯನ್ನು ಅಲಂಕರಿಸಲು ಸರಿಯಾದ ಮಾಣಿಕ್ಯವೋ ಎಂಬಂತೆ ಉದಯ ರವಿಯ ಬಿಂಬವು ಕಾಣಿಸಿತು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಅಸ್ತ್ರ: ಶಸ್ತ್ರ, ಆಯುಧ; ವೇದ: ಜ್ಞಾನ; ಪಾಳಿ: ಸಾಲು; ಉಚ್ಚರಣೆ: ಹೇಳು; ಪ್ರಣವ: ಓಂಕಾರ; ಸ್ವರೂಪ: ನಿಜವಾದ ರೂಪ; ಮೇಳವಿಸು: ಸೇರು, ಜೊತೆಯಾಗು; ಅರುಣ:ಸೂರ್ಯನ ಸಾರ, ಕೆಂಪುಬಣ್ಣ; ಅಂಶ: ಭಾಗ, ಘಟಕ; ಪೂರ್ವ: ಮೂಡಣ ದಿಕ್ಕು; ದಿಶ: ದಿಕ್ಕು; ಮಂಡನ: ಸಿಂಗರಿಸುವುದು, ಅಲಂಕರಿಸುವುದು; ಉಚಿತ: ಸರಿಯಾದ; ಮೌಳಿ: ಶಿರ; ಮಾಣಿಕ: ಅಮೂಲ್ಯವಾದ ಮಣಿ; ಮೆರೆ: ಹೊಳೆ; ದಿನಮಣಿ: ಸೂರ್ಯ; ಬಿಂಬ: ಕಾಂತಿ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ+ಪಾಶುಪತಾಸ್ತ್ರ+ವೇದದ
ಪಾಳಿ+ಉಚ್ಚರಣೆಯಲಿ +ತತ್+ಪ್ರಣವ +ಸ್ವರೂಪವೆನೆ
ಮೇಳವಿಸಿತ್+ಅರುಣಾಂಶು +ಪೂರ್ವ+ದಿ
ಶಾಲತಾಂಗಿಯ+ ಮಂಡನೋಚಿತ
ಮೌಳಿಮಾಣಿಕವೆನಲು +ಮೆರೆದುದು +ದಿನಮಣಿಯ +ಬಿಂಬ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಪೂರ್ವದಿಶಾಲತಾಂಗಿಯ ಮಂಡನೋಚಿತ ಮೌಳಿಮಾಣಿಕವೆನಲು ಮೆರೆದುದು ದಿನಮಣಿಯ ಬಿಂಬ

ಪದ್ಯ ೧೪: ವಂದಿ ಮಾಗಧರು ಕರ್ಣಾದಿಗಳಿಗೆ ಏನು ಹೇಳಿದರು?

ಮುರಿದು ಲೋಕವ ನುಂಗಿದರೆ ಕ
ಟ್ಟಿರುವೆಯೇ ಕಾಲಂಗೆ ಕತ್ತಲೆ
ಯಿರಿತದಲಿ ಕೈದೀವಿಗೆಯ ಹಂಗೇಕೆ ದಿನಮಣಿಗೆ
ಮರೆದೆಲಾ ರಾಧೇಯ ಕೃಪ ನಿಲು
ಹೊರಗೆ ಗುರುಸುತ ನಿನ್ನ ಗರ್ವವ
ಹೆರಿಸುವವು ಭೀಮಾಸ್ತ್ರವೆಂದುದು ವಂದಿ ಸಂದೋಹ (ಕರ್ಣ ಪರ್ವ, ೧೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭೀಮನು ವಂದಿಮಾಗಧರು ಕುರುವೀರರಿಗೆ ಹೀಗೆ ಹೇಳಿದರು, ಲೋಕವನ್ನು ನುಂಗುವ ಯಮನಿಗೆ ದೊಡ್ಡದಾದ ಇರುವೆಗಳು ಲೆಕ್ಕವೇ? ಕತ್ತಲೊಡನೆ ಯುದ್ಧ ಮಾಡಲು ಸೂರ್ಯನು ಕೈದೀವಿಗೆಯ ಹಂಗಿಗೊಳಗಾದಾನೇ? ಕರ್ಣ ಮರೆತೆಯಾ, ಕೃಪ ದೂರನಿಲ್ಲು, ಅಶ್ವತ್ಥಾಮ ನಿನ್ನ ಗರ್ವವನ್ನು ಭೀಮನ ಆಯುಧಗಳು ನಿನ್ನನ್ನು ಹೆರಿಸುತ್ತವೆ ಎಂದು ತಿಳಿಸಿದರು.

ಅರ್ಥ:
ಮುರಿ: ಸೀಳು; ಲೋಕ: ಜಗತ್ತು; ನುಂಗು: ಸ್ವಾಹಮಾಡು; ಕಟ್ಟಿರುವೆ: ದೊಡ್ಡ ಇರುವೆ, ಗೊದ್ದ; ಕಾಲ: ಯಮ; ಕತ್ತಲೆ: ಅಂಧಕಾರ; ಇರಿ: ಚುಚ್ಚು, ಯುದ್ಧ; ಕೈದೀವಿ: ಕೈಯಲ್ಲಿ ಹಿಡಿದಿರುವ ದೀಪ; ಹಂಗು: ಋಣ, ದಾಕ್ಷಿಣ್ಯ; ದಿನಮಣಿ: ಸೂರ್ಯ; ಮರೆ: ನೆನಪಿನಿಂದ ದೂರ; ರಾಧೇಯ: ಕರ್ಣ; ಹೊರಗೆ: ಆಚೆ; ನಿಲು: ನಿಲ್ಲು, ಚಲಿಸದಿರು; ಸುತ: ಮಗ; ಗರ್ವ: ಅಹಂಕಾರ; ಹೆರು: ಗಟ್ಟಿಯಾಗು, ಹೊಂದು; ಅಸ್ತ್ರ: ಆಯುಧ; ವಂದಿ: ಹೊಗಳುಭಟ್ಟರು; ಸಂದೋಹ: ಗುಂಪು, ಸಮೂಹ;

ಪದವಿಂಗಡಣೆ:
ಮುರಿದು+ ಲೋಕವ +ನುಂಗಿದರೆ +ಕ
ಟ್ಟಿರುವೆಯೇ +ಕಾಲಂಗೆ +ಕತ್ತಲೆ
ಯಿರಿತದಲಿ +ಕೈದೀವಿಗೆಯ +ಹಂಗೇಕೆ +ದಿನಮಣಿಗೆ
ಮರೆದೆಲಾ +ರಾಧೇಯ +ಕೃಪ+ ನಿಲು
ಹೊರಗೆ +ಗುರುಸುತ +ನಿನ್ನ +ಗರ್ವವ
ಹೆರಿಸುವವು+ ಭೀಮಾಸ್ತ್ರವೆಂದುದು +ವಂದಿ +ಸಂದೋಹ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮುರಿದು ಲೋಕವ ನುಂಗಿದರೆ ಕ
ಟ್ಟಿರುವೆಯೇ ಕಾಲಂಗೆ; ಕತ್ತಲೆ ಯಿರಿತದಲಿ ಕೈದೀವಿಗೆಯ ಹಂಗೇಕೆ ದಿನಮಣಿಗೆ

ಪದ್ಯ ೨೨: ಆ ಮಹಾಸಭೆಯಲ್ಲಿ ಯುಧಿಷ್ಠಿರನು ಯಾವ ತೇಜಸ್ಸನ್ನು ಕಂಡನು?

ಆ ಮಹಾಸಭೆಯಲಿ ಯುಧಿಷ್ಠಿರ
ಭೂಮಿಪತಿ ದೂರದಲಿ ಕಂಡನು
ತಾಮರಸದಳ ನಯನ ಸಂನಿಭ ಭಾವಭಾವಿತನ
ಹಾಮಹಾದೇವೆತ್ತಣದುಭುತ
ಧಾಮವಿದು ದಿನಮಣಿಯ ತೇಜ
ಸ್ತೋಮವೆರಡರ ಧಾತುಯೆನುತೀಕ್ಷಿಸಿದರಾದೆಸೆಯ (ಸಭಾ ಪರ್ವ, ೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅತ್ಯಾಕರ್ಷವಾದ ಆ ಮಹಾಸಭೆಯಲಿ ಯುಧಿಷ್ಠಿರನು ದೂರದಲ್ಲಿ ಕಮಲದಂತ ನಯನಗಳುಳ್ಳ ಶ್ರೀ ಮಹಾವಿಷ್ಣುವಿಗೆ ಸದೃಶವಾಗಿ ಅವನ ಭಾವದಲ್ಲೇ ಇರುವ ನಾರದರನ್ನು ಕಂಡನು. ಇಬ್ಬರು ಸೂರ್ಯರ ತೇಜಸ್ಸು ಒಂದೇ ಕಡೆಯಿಂದ ಬರುತ್ತಿದೆಯಲಾ! ಯಾವ ಮೂಲದಿಂದ ಈ ತೇಜಸ್ಸು ಬರುತ್ತಿದೆ ಎಂದು ಆ ಕಡೆಗೆ ತಿರುಗಿ ನೋಡಿದನು.

ಅರ್ಥ:
ಸಭೆ: ದರ್ಬಾರು; ಮಹಾ: ಶ್ರೇಷ್ಠ, ದೊಡ್ಡ; ಭೂಮಿಪತಿ: ರಾಜ; ದೂರ: ಬಹಳ ಅಂತರ, ಸಮೀಪವಲ್ಲದ; ಕಂಡು: ನೋಡು; ತಾಮರಸ: ಕಮಲ; ನಯನ: ಕಣ್ಣು; ಸನ್ನಿಭ: ಸದೃಶ, ಸಮಾನವಾದ; ಭಾವಿತ: ಆಲೋಚಿಸಿದ; ಎತ್ತಣ: ಎಲ್ಲಿಂದ; ಅದುಭುತ: ಅತ್ಯಾಶ್ಚರ್ಯಕರವಾದ; ಧಾಮ: ಕಿರಣ, ರಶ್ಮಿ; ದಿನಮಣಿ: ಸೂರ್ಯ; ತೇಜ: ಹೊಳಪು, ಕಾಂತಿ; ಸ್ತೋಮ: ಗುಂಪು; ಧಾತು:ಮೂಲ ವಸ್ತು; ಈಕ್ಷಿಸು: ನೋಡು; ದೆಸೆ: ದಿಕ್ಕು;

ಪದವಿಂಗಡಣೆ:
ಆ +ಮಹಾಸಭೆಯಲಿ +ಯುಧಿಷ್ಠಿರ
ಭೂಮಿಪತಿ+ ದೂರದಲಿ+ ಕಂಡನು
ತಾಮರಸದಳ+ ನಯನ+ ಸಂನಿಭ+ ಭಾವ+ಭಾವಿತನ
ಹಾ+ಮಹಾದೇವ+ಎತ್ತಣ+ಅದುಭುತ
ಧಾಮವಿದು+ ದಿನಮಣಿಯ+ ತೇಜ
ಸ್ತೋಮವ್+ಎರಡರ +ಧಾತು+ಯೆನುತ್+ಈಕ್ಷಿಸಿದರ್+ಆ+ದೆಸೆಯ

ಅಚ್ಚರಿ:
(೧) ಆ, ಹಾ – ೧, ೪ ಸಾಲಿನ ಮೊದಲ ಪದ
(೨) ಕಂಡನು, ಈಕ್ಷಿಸಿದರ್ – ನೋಡಿದನು ಪದದ ಸಮನಾರ್ಥಕ ಪದಗಳು