ಪದ್ಯ ೨೭: ಶಲ್ಯನನ್ನು ಹೇಗೆ ಹೊಗಳಿದರು?

ಪೂತು ಮಝರೇ ಶಲ್ಯ ಹೊಕ್ಕನೆ
ಸೂತಜನ ಹರಿಬದಲಿ ವೀರ
ವ್ರಾತಗಣನೆಯೊಳೀತನೊಬ್ಬನೆ ಹಾ ಮಹಾದೇಅ
ಧಾತುವೊಳ್ಳಿತು ದಿಟ್ಟನೈ ನಿ
ರ್ಭೀತಗರ್ವಿತನಿವನೆನುತ ಭಟ
ರೀತನನು ಹೊಗಳಿದರು ಸಾತ್ಯಕಿ ಸೋಮಕಾದಿಗಳು (ಶಲ್ಯ ಪರ್ವ, ೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ಸಾತ್ಯಕಿ ಸೋಮಕ ಮೊದಲಾದವರು, ಭಲೇ, ಕರ್ನನ ಸೇಡನ್ನು ತೀರಿಸಲು ಶಲ್ಯನು ಮುಂದಾದನೇ? ಇವನೇ ಸೇನಾಧಿಪತಿಯಾಗಲು ಅರ್ಹನಾದ ವೀರನು. ನಿಲುಮೆ, ಸತ್ವ, ನಿರ್ಭೀತಿ ದರ್ಪಗಳು ಇವನಲ್ಲಿ ಎದ್ದುಕಾಣುತ್ತಿದೆ ಎಂದು ಶಲ್ಯನನ್ನು ಹೊಗಳಿದರು.

ಅರ್ಥ:
ಪೂತು: ಭಲೇ; ಮಝ: ಕೊಂಡಾಟದ ಮಾತು; ಹೊಕ್ಕು: ಸೇರು; ಸೂತಜ: ಸೂತನ ಮಗ (ಕರ್ಣ); ಹರಿಬ: ಕೆಲಸ, ಕಾರ್ಯ; ವೀರ: ಶೂರ; ವ್ರಾತ: ಗುಂಪು; ಗಣನೆ: ಲೆಕ್ಕ; ಧಾತು: ಮೂಲ ವಸ್ತು, ತೇಜಸ್ಸು; ದಿಟ್ಟ: ನಿಜ; ನಿರ್ಭೀತ: ಭಯವಿಲ್ಲದ; ಗರ್ವಿತ: ಅಹಂಕಾರಿ; ಭಟ: ಸೈನಿಕ; ಹೊಗಳು: ಪ್ರಶಂಶಿಸು; ಆದಿ: ಮುಂತಾದ;

ಪದವಿಂಗಡಣೆ:
ಪೂತು +ಮಝರೇ +ಶಲ್ಯ+ ಹೊಕ್ಕನೆ
ಸೂತಜನ+ ಹರಿಬದಲಿ +ವೀರ
ವ್ರಾತ+ಗಣನೆಯೊಳ್+ಈತನೊಬ್ಬನೆ +ಹಾ +ಮಹಾದೇವ
ಧಾತುವೊಳ್ಳಿತು+ ದಿಟ್ಟನೈ +ನಿ
ರ್ಭೀತ+ಗರ್ವಿತನ್+ಇವನೆನುತ +ಭಟರ್
ಈತನನು +ಹೊಗಳಿದರು +ಸಾತ್ಯಕಿ +ಸೋಮಕಾದಿಗಳು

ಅಚ್ಚರಿ:
(೧) ಶಲ್ಯನನ್ನು ಹೊಗಳಿದ ಪರಿ – ಧಾತುವೊಳ್ಳಿತು, ದಿಟ್ಟ, ನಿರ್ಭೀತ, ಗರ್ವಿತ

ಪದ್ಯ ೫೨: ದ್ರೋಣನು ದ್ರುಪದನನ್ನು ಹೇಗೆ ಹಂಗಿಸಿದನು?

ದಿಟ್ಟನಹೆಯೋ ದ್ರುಪದ ಹಾ ಜಗ
ಜಟ್ಟಿಗಳಿಗುಪಹಾಸ್ಯವೇ ಗರಿ
ಗಟ್ಟಿದಿರಿ ನೀವ್ ಹಿಡಿಯಲೀವಿರೆ ಧರ್ಮನಂದನನ
ತೊಟ್ಟ ಜೋಹಕೆ ತಕ್ಕ ನುಡಿಗಳ
ಬಿಟ್ಟೆವಲ್ಲದೆ ನಿಮ್ಮ ರಾಯನ
ಕಟ್ಟಲಾಪೆವೆ ಎನುತ ಕರೆದನು ಸರಳ ಸರಿವಳೆಯ (ದ್ರೋಣ ಪರ್ವ, ೨ ಸಂಧಿ, ೫೨ ಪದ್ಯ)

ತಾತ್ಪರ್ಯ:
ದ್ರೋಣನು ಉತ್ತರಿಸುತ್ತಾ, ನೀನು ಪರಮವೀರ, ಸಾಹಸಿ, ನಿಮ್ಮಂತಹ ಜಗಜಟ್ಟಿಗಳನ್ನು ಹಾಸ್ಯಮಾಡಬಹುದೇ? ನೀವೆಲ್ಲರೂ ಕೂಡಿರುವಿರಿ, ಧರ್ಮಜನನ್ನು ಹಿಡಿಯಲು ಬಿಡುವಿರಾ? ನಾನೋ ಸೇನಾಧಿಪತಿಯ ವೇಷದಲ್ಲಿರುವುದರಿಂದ ಅದಕ್ಕೆ ತಕ್ಕ ಮಾತನಾಡಿದೆ, ನಿಮ್ಮ ದೊರೆಯನ್ನು ಹಿಡಿಯಲು ನಮಗೆ ಸಾಧ್ಯವಾದೀತೇ ಎನ್ನುತ್ತಾ ಬಾಣಗಳ ಮಳೆಗೆರೆದನು.

ಅರ್ಥ:
ದಿಟ್ಟ: ಧೈರ್ಯ; ಜಗಜಟ್ಟಿ: ಪರಾಕ್ರಮಿ; ಉಪಹಾಸ್ಯ: ಅಣಕಿಸು; ಗರಿಗಟ್ಟು: ಶಕ್ತಿಶಾಲಿಯಾಗು; ಹಿಡಿ: ಗ್ರಹಿಸು; ತೊಡು: ಧರಿಸು; ಜೋಹ: ಮೋಸದ ವೇಷ, ಸೋಗು; ತಕ್ಕ: ಸರಿಯಾದ; ನುಡಿ: ಮಾತು; ಬಿಟ್ಟು: ಬಿಡು, ತೊರೆ; ರಾಯ: ರಾಜ; ಕಟ್ಟು: ಬಂಧಿಸು; ಕರೆ: ಬರೆಮಾಡು; ಸರಳ: ಬಾಣ; ಸರಿವಳೆ: ಮಳೆ;

ಪದವಿಂಗಡಣೆ:
ದಿಟ್ಟನಹೆಯೋ +ದ್ರುಪದ +ಹಾ +ಜಗ
ಜಟ್ಟಿಗಳಿಗ್+ಉಪಹಾಸ್ಯವೇ +ಗರಿ
ಗಟ್ಟಿದಿರಿ+ ನೀವ್ +ಹಿಡಿಯಲ್+ಈವಿರೆ +ಧರ್ಮನಂದನನ
ತೊಟ್ಟ +ಜೋಹಕೆ+ ತಕ್ಕ+ ನುಡಿಗಳ
ಬಿಟ್ಟೆವಲ್ಲದೆ +ನಿಮ್ಮ +ರಾಯನ
ಕಟ್ಟಲಾಪೆವೆ+ ಎನುತ+ ಕರೆದನು +ಸರಳ+ ಸರಿವಳೆಯ

ಅಚ್ಚರಿ:
(೧) ದ್ರೋಣನು ತನ್ನನ್ನೇ ಹಂಗಿಸುವ ಪರಿ – ತೊಟ್ಟ ಜೋಹಕೆ ತಕ್ಕ ನುಡಿಗಳ ಬಿಟ್ಟೆವಲ್ಲದೆ ನಿಮ್ಮ ರಾಯನ
ಕಟ್ಟಲಾಪೆವೆ
(೨) ದ್ರುಪದನನ್ನು ಹಂಗಿಸುವ ಪರಿ – ದಿಟ್ಟನಹೆಯೋ ದ್ರುಪದ ಹಾ ಜಗಜಟ್ಟಿಗಳಿಗುಪಹಾಸ್ಯವೇ

ಪದ್ಯ ೫೦: ಜೀಮೂತನು ಭೀಮನನ್ನು ಹೇಗೆ ಎದುರಿಸಿದನು?

ದಿಟ್ಟನಹೆ ಬಾಣಸಿನ ಮನೆಯೊಳ
ಗಟ್ಟ ಕೂಳನು ತಿಂದು ದೇಹದೊ
ಳಟ್ಟೆಯಲಿ ಶಿರವಿರಲಹಂಕಾರದಲಿ ಬೆರೆತಿರುವೆ
ಕಟ್ಟಳವಿಗೈದೆನುತಲುರೆ ಕೂ
ಗಿಟ್ಟು ತಾ ಜೀಮೂತ ಮಲ್ಲನು
ಮೆಟ್ಟಿ ಹೊಕ್ಕನು ತೋಳ ತೆಕ್ಕೆಯ ಮಲ್ಲಗಾಳಗಕೆ (ವಿರಾಟ ಪರ್ವ, ೪ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅಡುಗೆ ಮನೆಯಲ್ಲಿ ಮಾಡಿದ ಕೂಳನ್ನು ತಿಂದು, ದಿಟ್ಟತನದಿಂದ ಕೆಳಗೆ ಕಾಲು ಮೇಲೆ ತಲೆಯಿದೆಯೆಂಬ ಗರ್ವದಿಂದ ಸೊಕ್ಕಿರುವೆ. ಈಗ ಮುಖಾಮುಖಿ ಕಾಳಗಕ್ಕೆ ಬಾ ಎಂದು ಜೀಮೂತನು ಅಬ್ಬರಿಸಿ ನೆಲವನ್ನು ಮೆಟ್ಟಿ ಭೀಮನನ್ನು ಹಿಡಿದನು.

ಅರ್ಥ:
ದಿಟ್ಟ: ಧೈರ್ಯಶಾಲಿ, ಸಾಹಸಿ; ಬಾಣಸಿ: ಅಡುಗೆಯವ; ಮನೆ: ಆಲಯ; ಅಟ್ಟ: ಅಂಗುಳು; ಕೂಳು: ಊಟ; ತಿಂದು: ಊಟಮಾಡಿ; ದೇಹ: ಶರೀರ; ಅಟ್ಟೆ: ತಲೆಯಿಲ್ಲದ ದೇಹ; ಶಿರ: ತಲೆ; ಅಹಂಕಾರ: ದರ್ಪ; ಬೆರೆತು: ಕೂಡು; ಅಳವಿ: ಶಕ್ತಿ; ಐದು: ಬಂದುಸೇರು; ಉರೆ: ಹೆಚ್ಚು, ಅಧಿಕ; ಕೂಗು: ಗರ್ಜಿಸು; ಮಲ್ಲ: ಜಟ್ಟಿ; ಮೆಟ್ಟು: ಹೆಜ್ಜೆ ಇಡು, ನಡೆ; ಹೊಕ್ಕು: ಸೇರು; ತೋಳ: ಬಾಹು; ತೆಕ್ಕೆ: ಅಪ್ಪುಗೆ, ಆಲಿಂಗನ; ಕಾಳಗ: ಯುದ್ಧ;

ಪದವಿಂಗಡಣೆ:
ದಿಟ್ಟನಹೆ +ಬಾಣಸಿನ +ಮನೆಯೊಳಗ್
ಅಟ್ಟ +ಕೂಳನು +ತಿಂದು +ದೇಹದೊಳ್
ಅಟ್ಟೆಯಲಿ +ಶಿರವಿರಲ್+ಅಹಂಕಾರದಲಿ +ಬೆರೆತಿರುವೆ
ಕಟ್ಟಳವಿಗ್+ಐದೆನುತಲ್+ಉರೆ +ಕೂ
ಗಿಟ್ಟು +ತಾ +ಜೀಮೂತ +ಮಲ್ಲನು
ಮೆಟ್ಟಿ +ಹೊಕ್ಕನು +ತೋಳ +ತೆಕ್ಕೆಯ +ಮಲ್ಲ+ಕಾಳಗಕೆ

ಅಚ್ಚರಿ:
(೧) ಭೀಮನನ್ನು ಬಯ್ದ ಪರಿ – ದಿಟ್ಟನಹೆ ಬಾಣಸಿನ ಮನೆಯೊಳಗಟ್ಟ ಕೂಳನು ತಿಂದು ದೇಹದೊ
ಳಟ್ಟೆಯಲಿ ಶಿರವಿರಲಹಂಕಾರದಲಿ ಬೆರೆತಿರುವೆ

ಪದ್ಯ ೪೩: ಕೌರವನ ಮಲ್ಲರು ಭೀಮನಿಗೆ ಏನು ಹೇಳಿದರು?

ದಿಟ್ಟನಹೆ ಬಾಣಸಿನ ಮನೆಯಲಿ
ಕಟ್ಟುಳಿಲ್ಲದ ಕೂಳ ತಿಂದುರೆ
ಹೊಟ್ಟೆಯನು ನೆರೆ ಬೆಳೆಸಿ ದೇಹದಲುಬ್ಬಿ ಕೊಬ್ಬಿನಲಿ
ಹೊಟ್ಟುಗುಟ್ಟದೊಡಾಗದೆಲೆ ಜಗ
ಜಟ್ಟಿಗಳ ಕೂಡಕಟ ಮಝರೇ
ಬಿಟ್ಟು ಸುಮ್ಮನೆ ಹೋಗು ನಿನಗಳವಲ್ಲ ಹೋಗೆಂದ (ವಿರಾಟ ಪರ್ವ, ೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕೌರವನ ಮಲ್ಲರಲ್ಲೊಬ್ಬನಾದ ಸಿಂಧುರನು, ನೀನು ಧೈರ್ಯಶಾಲಿ, ಅಡುಗೆ ಮನೆಯಲ್ಲಿ ಮಿತಿಯಿಲ್ಲದೆ ಕೂಳನ್ನು ತಿಂದು ಹೊಟ್ಟೆಯನ್ನು ಬೆಳೆಸಿ, ಕೊಬ್ಬಿನಿಂದ ಜಗಜಟ್ಟಿಗಳೊಡನೆ ಮಲ್ಲಯುದ್ಧಕ್ಕೆ ಬಂದೆಯಾ? ಭಲೇ ಸುಮ್ಮನೆ ಹೋಗಿ ಬಿಡು, ಇದು ನಿನ್ನ ಕೈಲಾಗದ ಮಾತು ಎಂದನು.

ಅರ್ಥ:
ದಿಟ್ಟ: ಧೈರ್ಯಶಾಲಿ, ಸಾಹಸಿ; ಬಾಣಸಿ: ಅಡುಗೆಯವ; ಮನೆ: ಆಲಯ; ಕಟ್ಟು:ಬಂಧ; ಕೂಳು: ಊಟ; ತಿಂದು: ಊಟಮಾದು; ಹೊಟ್ಟೆ: ಉದರ; ನೆರೆ: ಜೊತೆ, ಪಕ್ಕ; ಬೆಳೆಸು: ವೃದ್ಧಿಸು; ದೇಹ: ಕಾಯ; ಉಬ್ಬು: ಹೆಚ್ಚು; ಕೊಬ್ಬು: ಸೊಕ್ಕು, ಅಹಂಕಾರ, ಮೇದಸ್ಸು; ಹೊಟ್ಟುಗುಟ್ಟು: ವ್ಯರ್ಥವಾದ ಮಾತು; ಜಗಜಟ್ಟಿ: ಪರಾಕ್ರಮಿ; ಕೂಡ: ಜೊತೆ; ಅಕಟ: ಅಯ್ಯೋ; ಮಝ: ಭಲೇ; ಬಿಟ್ಟು: ತೊರೆ; ಸುಮ್ಮನೆ: ವ್ಯರ್ಥವಾಗಿ; ಹೋಗು: ತೆರಳು; ಅಳವು: ಶಕ್ತಿ;

ಪದವಿಂಗಡಣೆ:
ದಿಟ್ಟನಹೆ +ಬಾಣಸಿನ +ಮನೆಯಲಿ
ಕಟ್ಟುಳಿಲ್ಲದ+ ಕೂಳ +ತಿಂದುರೆ
ಹೊಟ್ಟೆಯನು +ನೆರೆ +ಬೆಳೆಸಿ +ದೇಹದಲ್+ಉಬ್ಬಿ +ಕೊಬ್ಬಿನಲಿ
ಹೊಟ್ಟುಗುಟ್ಟದೊಡ್+ಆಗದೆಲೆ +ಜಗ
ಜಟ್ಟಿಗಳ+ ಕೂಡ್+ಅಕಟ+ ಮಝರೇ
ಬಿಟ್ಟು +ಸುಮ್ಮನೆ+ ಹೋಗು +ನಿನಗ್+ಅಳವಲ್ಲ+ ಹೋಗೆಂದ

ಅಚ್ಚರಿ:
(೧) ಹೊಟ್ಟುಗುಟ್ಟು – ಪದದ ಬಳಕೆ

ಪದ್ಯ ೫೩: ನಹುಷನು ಯಾವ ಪ್ರಶ್ನೆಗಳನ್ನು ಕೇಳಿದನು?

ಧೀರನಾವನು ದಿಟ್ಟನಾರು ವಿ
ಕಾರಿಯಾರು ವಿನೀತನಾರಾ
ಚಾರ ಹೀನನದಾರು ಸುವ್ರತಿ ಯಾರು ಶಠನಾರು
ಕ್ರೂರನಾರತಿಕಷ್ಟನಾರು ವಿ
ಚಾರಿಯಾರು ವಿಮುಕ್ತನಾರು ವಿ
ದೂರನಾರಿಹಪರಕೆ ಭೂಮೀಪಾಲ ಹೇಳೆಂದ (ಅರಣ್ಯ ಪರ್ವ, ೧೪ ಸಂಧಿ, ೫೩ ಪದ್ಯ)

ತಾತ್ಪರ್ಯ:
ನಹುಷನು ತನ್ನ ಪ್ರಶ್ನಮಾಲಿಕೆಯನ್ನು ಮುಂದುವರೆಸುತ್ತಾ, ಧೀರನಾರು, ದಿಟ್ಟನಾರು, ಯಾರು ವಿಕಾರಿ, ವಿನೀತನ ಗುಣವಾವುದು, ಆಚಾರ ಹೀನನಾರು, ಸುವ್ರತಿಯಾರು, ಯಾರು ದುಷ್ಟ, ಯಾರು ಕ್ರೂರಿ, ಯಾರು ಕಠಿಣರಾದವರು, ಯಾರು ಮುಕ್ತ ಇಹಪರಗಳೆರಡಕ್ಕೂ ಹೊರಗಿನವನಾರು ಎಂದು ನಹುಷನು ಕೇಳಿದನು.

ಅರ್ಥ:
ಧೀರ: ಶೂರ, ಪರಾಕ್ರಮಿ; ದಿಟ್ಟ: ಧೈರ್ಯಶಾಲಿ, ಸಾಹಸಿ, ಗಟ್ಟಿಗ; ವಿಕಾರ: ಮನಸ್ಸಿನ ವಿಕೃತಿ;ವಿನೀತ: ಸೌಜನ್ಯದಿಂದ ಕೂಡಿದ ವ್ಯಕ್ತಿ; ಆಚಾರ: ಕಟ್ಟುಪಾಡು, ಸಂಪ್ರದಾಯ; ಹೀನ: ಕೆಟ್ಟ, ದುಷ್ಟ; ವ್ರತಿ: ನಿಯಮಬದ್ಧವಾದ ನಡವಳಿಕೆಯುಳ್ಳವನು; ಶಠ: ದುಷ್ಟ, ಧೂರ್ತ; ಕ್ರೂರ: ದುಷ್ಟ; ಕಷ್ಟ: ಕಠಿಣವಾದದ್ದು; ವಿಚಾರ: ಪರ್ಯಾಲೋಚನೆ, ವಿಮರ್ಶೆ, ವಿವೇಕ; ವಿಮುಕ್ತ: ಬಿಡುಗಡೆಯಾದವನು, ಮುಕ್ತ; ವಿದೂರ: ಪಡೆಯಲಸಾಧ್ಯವಾದ; ಇಹಪರ: ಈ ಲೋಕ ಮತ್ತು ಪರಲೋಕ; ಭೂಮೀಪಾಲ: ರಾಜ; ಹೇಳು: ತಿಳಿಸು;

ಪದವಿಂಗಡಣೆ:
ಧೀರನಾವನು +ದಿಟ್ಟನಾರು +ವಿ
ಕಾರಿಯಾರು +ವಿನೀತನಾರ್
ಆಚಾರ +ಹೀನನದಾರು +ಸುವ್ರತಿ+ ಯಾರು +ಶಠನಾರು
ಕ್ರೂರನಾರ್+ಅತಿಕಷ್ಟನಾರು +ವಿ
ಚಾರಿಯಾರು +ವಿಮುಕ್ತನಾರು +ವಿ
ದೂರನಾರ್+ಇಹಪರಕೆ+ ಭೂಮೀಪಾಲ+ ಹೇಳೆಂದ

ಅಚ್ಚರಿ:
(೧) ಮನುಷ್ಯರ ಗುಣಗಳು – ವಿಕಾರಿ, ದಿಟ್ಟ, ಧೀರ, ಆಚಾರಹೀನ, ಸುವ್ರತಿ, ಶಠ, ಕ್ರೂರ, ಕಷ್ಟ, ವಿಚಾರಿ, ವಿಮುಕ್ತ, ವಿದೂರ

ಪದ್ಯ ೧೨: ಧರ್ಮಜನು ಅರ್ಜುನನನ್ನು ಏನು ಕೇಳಿದ?

ಆಯಿತಿದು ನೀ ಬಂದ ಪರಿ ರಿಪು
ರಾಯ ಥಟ್ಟಿನೊಳೊಕ್ಕಲಿಕ್ಕಿದ
ದಾಯವೊಳ್ಳಿತು ದಿಟ್ಟನಾವನು ನಿನ್ನ ಹೋಲಿಸಲು
ಕಾಯಿದರಿ ಕಳುಹಿದನೊ ಮೇಣಡ
ಹಾಯಿದನೊ ಕರ್ಣಂಗೆ ಮಾಡಿದು
ಪಾಯವಾವುದು ಪಾರ್ಥ ಹೇಳೆಂದನವನಿಪತಿ ನುಡಿದ (ಕರ್ಣ ಪರ್ವ, ೧೬ ಸಂಧಿ, ೧೨ ಪದ್ಯ)

ತಾತ್ಪರ್ಯ:
ಅರ್ಜುನನ ಯುದ್ಧವೈಕರಿಯನ್ನು ಮೆಚ್ಚುತ್ತಾ, ಅರ್ಜುನ ನೀನು ಶತ್ರುಸೈನ್ಯದಲ್ಲಿ ಯುದ್ಧ ಮಾಡಿ ಬಂದುದನ್ನು ನೋಡಿದೆ, ನಿನ್ನನ್ನು ಹೋಲುವ ವೀರರೇ ಇಲ್ಲ. ಆದರೊಂದು ಪ್ರಶ್ನೆ, ಶತ್ರುವೀರನಾದ ಕರ್ಣನು ನಿನ್ನನ್ನು ಕಾಪಾಡಿ ಕೈಬಿಟ್ಟನೋ, ಅಥವ ನಿನ್ನನ್ನು ಅಡ್ಡಗಟ್ಟಿದನೋ ಅಥವಾ ನಿನ್ನನ್ನು ಕರ್ಣನು ತಡೆದಿದ್ದರೆ ನೀನು ಏನುಪಾಯ ಮಾಡಿ ಬಂದೆ? ನನಗೆ ತಿಳಿಸು ಎಂದು ಕೇಳಿದನು.

ಅರ್ಥ:
ಆಯಿತು: ಮುಗಿದ; ಬಂದ: ಆಗಮಿಸು; ಪರಿ: ರೀತಿ; ರಿಪುರಾಯ: ವೈರಿರಾಜ; ಥಟ್ಟು: ಪಕ್ಕ, ಕಡೆ, ಗುಂಪು; ಒಕ್ಕಲು: ನೆಲೆನಿಲ್ಲು; ದಾಯ: ರೀತಿ, ಸಮಯ, ಪಾಲು; ಒಳ್ಳಿತು: ಸರಿಯಾದುದು; ದಿಟ್ಟ: ದೈರ್ಯ; ಹೋಲಿಕೆ: ಸಾದೃಶ್ಯ, ಸಾಮ್ಯ; ಕಾಯಿದು: ಕಾದು, ಹೋರಾಡು; ಕಳುಹು: ಬೀಳ್ಕೊಡು; ಮೇಣ್:ಅಥವ; ಅಡಹಾಯಿ: ಅಡ್ಡಬಾ; ಉಪಾಯ: ಯುಕ್ತಿ;ಹೇಳು: ತಿಳಿಸು; ಅವನಿಪತಿ: ರಾಜ; ನುಡಿ: ಮಾತಾಡು;

ಪದವಿಂಗಡಣೆ:
ಆಯಿತಿದು +ನೀ+ ಬಂದ +ಪರಿ +ರಿಪು
ರಾಯ +ಥಟ್ಟಿನೊಳ್+ಒಕ್ಕಲ್+ಇಕ್ಕಿದ
ದಾಯವೊಳ್ಳಿತು+ ದಿಟ್ಟನಾವನು+ ನಿನ್ನ+ ಹೋಲಿಸಲು
ಕಾಯಿದರಿ+ ಕಳುಹಿದನೊ +ಮೇಣ್+ಅಡ
ಹಾಯಿದನೊ +ಕರ್ಣಂಗೆ +ಮಾಡಿದ್
ಉಪಾಯವಾವುದು +ಪಾರ್ಥ +ಹೇಳೆಂದನ್+ಅವನಿಪತಿ +ನುಡಿದ

ಅಚ್ಚರಿ:
(೧) ಅರ್ಜುನನನ್ನು ಪ್ರಶಂಶಿಸುವ ನುಡಿ – ದಿಟ್ಟನಾವನು ನಿನ್ನ ಹೋಲಿಸಲು

ಪದ್ಯ ೬: ಸಾತ್ಯಕಿಯ ಎದುರು ಯಾವ ವೀರನು ನಿಂತನು?

ಥಟ್ಟು ಮುರಿದುದು ಕೊಂಡ ನೆಲನನು
ಬಿಟ್ಟು ಹಿಂಗಿತು ನಮ್ಮ ಬಲ ಮೈ
ಬಿಟ್ಟು ತಲೆದೋರಿದನು ಸಾತ್ಯಕಿ ದೊರೆಗಳಿದಿರಿನಲಿ
ದಿಟ್ಟನಾರಿವನೀಸು ಮುಷ್ಟಾ
ಮುಷ್ಟಿಯಲಿ ಬಂದವನೆನುತ ಜನ
ಜಟ್ಟಿಗಳು ವಿಂದಾನುವಿಂದರು ನಿಂದರಿದಿರಿನಲಿ (ಕರ್ಣ ಪರ್ವ, ೩ ಸಂಧಿ, ೬ ಪದ್ಯ)

ತಾತ್ಪರ್ಯ:
ನಿಮ್ಮ ಸೈನ್ಯ ಮುರಿದು ಬಿದ್ದಿದೆ ನಿಂತ ಜಾಗವನ್ನು ಬಿಟ್ಟೋಡಿತು, ನಮ್ಮ ಸೈನ್ಯದವರು ಪರಾಕ್ರಮವನ್ನು ತೋರಿ ನಿಮ್ಮ ಸೈನ್ಯವನ್ನು ಭೇದಿಸಿ ಸಾತ್ಯಕಿಯು ರಾಜರಿದಿರಲ್ಲಿ ಬಂದು ನಿಂತನು. ಯಾರಿವನು ಇಷ್ಟು ಶೂರ, ಪರಾಕ್ರಮವನ್ನು ತೋರಿ ಇಲ್ಲಿ ಬಂದಿದ್ದಾನೆ ಎಂದುಕೊಂಡು ವಿಂದಾನುವಿಂದರು ಸಾತ್ಯಕಿಯ ಎದುರು ನಿಂತರು.

ಅರ್ಥ:
ಥಟ್ಟು: ಪಕ್ಕ, ಕಡೆ, ಗುಂಪು; ಮುರಿ: ಸೀಳು; ಕೊಂಡು: ತೆಗೆದು; ನೆಲ: ಭೂಮಿ; ಬಿಟ್ಟು: ತೊರೆದು; ಹಿಂದು: ಬತ್ತುಹೋಗು; ಬಲ: ಸೈನ್ಯ; ಮೈ:ತನು; ತಲೆ: ಶಿರ; ತೋರು: ಗೋಚರಿಸು; ದೊರೆ: ರಾಜ; ಇದಿರು: ಎದುರು; ದಿಟ್ಟ: ಧೈರ್ಯಶಾಲಿ, ಸಾಹಸಿ;ಈಸು: ಇಷ್ಟು; ಮುಷ್ಟಾಮುಷ್ಟಿ: ಬಲಶಾಲ್; ಬಂದವನು: ಆಗಮಿಸು; ಜಟ್ಟಿ: ಪರಾಕ್ರಮಿ, ಶೂರ; ನಿಂದರು: ನಿಲ್ಲು;

ಪದವಿಂಗಡಣೆ:
ಥಟ್ಟು +ಮುರಿದುದು +ಕೊಂಡ +ನೆಲನನು
ಬಿಟ್ಟು+ ಹಿಂಗಿತು+ ನಮ್ಮ +ಬಲ+ ಮೈ
ಬಿಟ್ಟು +ತಲೆದೋರಿದನು+ ಸಾತ್ಯಕಿ +ದೊರೆಗಳ್+ಇದಿರಿನಲಿ
ದಿಟ್ಟನಾರಿವನ್+ಈಸು +ಮುಷ್ಟಾ
ಮುಷ್ಟಿಯಲಿ +ಬಂದವನೆನುತ +ಜನ
ಜಟ್ಟಿಗಳು +ವಿಂದಾನುವಿಂದರು +ನಿಂದರ್+ಇದಿರಿನಲಿ

ಅಚ್ಚರಿ:
(೧) ಮುಷ್ಟಾಮುಷ್ಟಿ, ಜನಜಟ್ಟಿ, ದಿಟ್ಟ – ಶೂರನೆಂದು ವರ್ಣಿಸಲು ಬಳಸಿದ ಪದಗಳು
(೨) ಪರಾಕ್ರಮದಿಂದ ಹೋರಾಡಿದರು ಎಂದು ಹೇಳಲು – ಮೈಬಿಟ್ಟು ತಲೆದೋರಿದನು