ಪದ್ಯ ೨೬: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೩?

ಭೀಮನೆನೆ ಭುಗಿಲೆಂಬ ರೋಷದ
ತಾಮಸವ ಬೀಳ್ಕೊಟ್ಟೆಲಾ ನಿ
ರ್ನಾಮವಾದುದೆ ಬಿರುದು ಪಾಂಡವತಿಮಿರರವಿಯೆಂಬ
ಭೀಮವನದಾವಾಗ್ನಿ ಹೊರವಡು
ಭೀಮಭಾಸ್ಕರರಾಹು ಹೊರವಡು
ಭೀಮಗರ್ಜನೆ ಮಧುರಗೀತವೆ ನೃಪತಿಯೇಳೆಂದ (ಗದಾ ಪರ್ವ, ೫ ಸಂಧಿ, ೨೬ ಪದ್ಯ)

ತಾತ್ಪರ್ಯ:
ಭೀಮನೆಂಬ ಹೆಸರನ್ನು ಕೇಳಿದೊಡನೆ ಭುಗಿಲೆಂದು ಏಳುತ್ತಿದ್ದ ತಾಮಸಕೋಪವನ್ನು ಎತ್ತಲೋ ಕಳಿಸಿಬಿಟ್ಟೆಯಾ? ಪಾಂಡವ ತಿಮಿರರವಿಯೆಂಬ ಬಿರುದು ಹೆಸರಿಲ್ಲದೆ ಹೋಗಿಬಿಟ್ಟಿತೇ? ಭೀಮನೆಂಬ ಕಾಡಿಗೆ ಕಾಡುಗಿಚ್ಚೆಂದು ಕೊಚ್ಚಿಕೊಳ್ಳುತ್ತಿದ್ದವನೇ ಹೊರಕ್ಕೆ ಬಾ, ಭೀಮನೆಂಬ ಸೂರ್ಯನಿಗೆ ರಾಹುವೇ ಹೊರಕ್ಕೆ ಬಾ, ಭೀಮಗರ್ಜನೆ ನಿನಗೆ ಮಧುರ ಗೀತೆಯೇ? ರಾಜಾ ಏಳು ಎಂದು ಭೀಮನು ಕೌರವನನ್ನು ಹಂಗಿಸಿದನು.

ಅರ್ಥ:
ಭುಗಿಲ್- ಭುಗಿಲ್ ಎಂಬ ಶಬ್ದ; ರೋಷ: ಕೋಪ; ತಾಮಸ: ಕತ್ತಲೆ, ಅಂಧಕಾರ; ಬೀಳ್ಕೊಡು: ತೆರಳು; ನಿರ್ನಾಮ: ನಾಶ, ಅಳಿವು; ಬಿರುದು: ಗೌರವ ಸೂಚಕ ಪದ; ತಿಮಿರ: ಅಂಧಕಾರ; ರವಿ: ಸೂರ್ಯ; ದಾವಾಗ್ನಿ: ಕಾಡಿನ ಕಿಚ್ಚು, ಕಾಳ್ಗಿಚ್ಚು; ಹೊರವಡು: ತೆರಳು; ಭಾಸ್ಕರ: ಸೂರ್ಯ; ಗರ್ಜನೆ: ಆರ್ಭಟ, ಕೂಗು; ಮಧುರ: ಇಂಪುಆದ; ಗೀತ: ಹಾಡು; ನೃಪತಿ: ರಾಜ; ವನ: ಕಾಡು;

ಪದವಿಂಗಡಣೆ:
ಭೀಮನ್+ಎನೆ +ಭುಗಿಲೆಂಬ +ರೋಷದ
ತಾಮಸವ +ಬೀಳ್ಕೊಟ್ಟೆಲಾ +ನಿ
ರ್ನಾಮವಾದುದೆ +ಬಿರುದು +ಪಾಂಡವ +ತಿಮಿರ+ರವಿಯೆಂಬ
ಭೀಮ+ವನ+ದಾವಾಗ್ನಿ +ಹೊರವಡು
ಭೀಮ+ಭಾಸ್ಕರ+ರಾಹು +ಹೊರವಡು
ಭೀಮಗರ್ಜನೆ +ಮಧುರಗೀತವೆ+ ನೃಪತಿ+ಏಳೆಂದ

ಅಚ್ಚರಿ:
(೧) ಹೊರವಡು – ೪, ೫ ಸಾಲಿನ ಕೊನೆಯ ಪದ
(೨) ರೂಪಕದ ಪ್ರಯೋಗ – ಭೀಮವನದಾವಾಗ್ನಿ ಹೊರವಡು ಭೀಮಭಾಸ್ಕರರಾಹು ಹೊರವಡು ಭೀಮಗರ್ಜನೆ ಮಧುರಗೀತವೆ

ಪದ್ಯ ೨೫: ಕಷ್ಟದ ಸಮಯದಲ್ಲಿ ಯಾವುದು ನಮ್ಮನ್ನು ರಕ್ಷಿಸುತ್ತದೆ?

ಜಲಧಿಯಲಿ ಪಣಿವದನದಲಿ ರಿಪು
ಬಲದ ಮುಖದಲಿ ಸಿಡಿಲ ಹೊಯ್ಲಲಿ
ಹಳುವದಲಿ ಗಿರಿಶಿಖರದಲಿ ದಾವಾಗ್ನಿ ಮಧ್ಯದಲಿ
ಸಿಲುಕಿದಡೆ ಬಿಡುಸುವವಲೇ ಪ್ರತಿ
ಫಲಿತ ಪೂರ್ವಾದತ್ತ ಪುಣ್ಯಾ
ವಳಿಗಳೆಂಬುದು ತನ್ನೊಳಾದುದು ಭೂಪ ಕೇಳೆಂದ (ಗದಾ ಪರ್ವ, ೪ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸಮುದ್ರದಲ್ಲಿ, ಸರ್ಪದ ಬಾಯಲ್ಲಿ, ಶತ್ರು ಸೈನ್ಯದಿದಿರಿನಲ್ಲಿ, ಸಿಡಿಲು ಬಡಿತದಲ್ಲಿ, ಪರ್ವತ ಶಿಖರಾಲ್ಲಿ, ಕಾಡುಗಿಚ್ಚಿನಲ್ಲಿ ಸಿಕ್ಕಾಗ ನಾವು ಹಿಂದೆ ಮಾಡಿದ ಪುಣ್ಯದ ಫಲವು ಫಲಿಸಿ ನಮ್ಮನ್ನು ರಕ್ಷಿಸುತ್ತವೆ ಎಂಬುದು ನನ್ನ ಅನುಭವಕ್ಕೆ ಬಂದಿತು.

ಅರ್ಥ:
ಜಲಧಿ: ಸಾಗರ; ಫಣಿ: ಹಾವು; ವದನ: ಮುಖ; ರಿಪು: ವೈರಿ; ಬಲ: ಶಕ್ತಿ; ಮುಖ: ಆನನ; ಸಿಡಿಲು: ಅಶನಿ; ಹೊಯ್: ಹೊಡೆ; ಹಳುವ: ಕಾಡು; ಗಿರಿ: ಬೆಟ್ಟ; ಶಿಖರ: ತುದಿ; ದಾವಾಗ್ನಿ: ಕಾಡಿನ ಕಿಚ್ಚು, ಕಾಳ್ಗಿಚ್ಚು; ಮಧ್ಯ: ನಡುವೆ; ಸಿಲುಕು: ಸೆರೆಯಾದ ವಸ್ತು, ಬಂಧನಕ್ಕೊಳಗಾದುದು; ಬಿಡುಸು: ಕಳಚು, ಸಡಿಲಿಸು; ಪ್ರತಿ: ಸಾಟಿ, ಸಮಾನ; ಫಲಿತ: ಫಲ, ಪ್ರಯೋಜನ; ಪೂರ್ವಾದತ್ತ: ಹಿಂದೆ ಪಡೆದ; ಪುಣ್ಯ: ಸನ್ನಡತೆ; ಆವಳಿ: ಸಾಲು, ಗುಂಪು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಜಲಧಿಯಲಿ +ಪಣಿ+ವದನದಲಿ +ರಿಪು
ಬಲದ +ಮುಖದಲಿ+ ಸಿಡಿಲ+ ಹೊಯ್ಲಲಿ
ಹಳುವದಲಿ +ಗಿರಿಶಿಖರದಲಿ+ ದಾವಾಗ್ನಿ +ಮಧ್ಯದಲಿ
ಸಿಲುಕಿದಡೆ+ ಬಿಡುಸುವವಲೇ+ ಪ್ರತಿ
ಫಲಿತ+ ಪೂರ್ವಾದತ್ತ+ ಪುಣ್ಯಾ
ವಳಿಗಳೆಂಬುದು+ ತನ್ನೊಳಾದುದು +ಭೂಪ +ಕೇಳೆಂದ

ಅಚ್ಚರಿ:
(೧) ಕಷ್ಟದಿಂದ ನಮ್ಮನ್ನು ರಕ್ಷಿಸುವುದು – ಬಿಡುಸುವವಲೇ ಪ್ರತಿಫಲಿತ ಪೂರ್ವಾದತ್ತ ಪುಣ್ಯಾವಳಿಗಳ್
(೨) ಸಂಸ್ಕೃತದ ಸುಭಾಷಿತವನ್ನು ಈ ಕವನ ಹೋಲುತ್ತದೆ
वने रणे शत्रुजलाग्निमध्ये महार्णवे पर्वतमस्तके वा |
सुप्तं प्रमत्ते विषमस्थितं वा रक्षन्ति पुण्यानि पुराकृतानि ||

ಪದ್ಯ ೨೪: ಭೀಮನ ಕಾಡ್ಗಿಚ್ಚು ಹೇಗೆ ಹರಡಿತು?

ಮಕುಟಬದ್ಧ ಮಹೀಶವೇಣು
ಪ್ರಕರದಲಿ ಛಟಛಟಿಸಿ ತುರಗ
ಪ್ರಕರ ಪಲ್ಲವಭೂಜರಾಜಿಗಳೊಳಗೆ ಘುಳುಘುಳಿಸಿ
ಸಕಲ ಗಜ ರಥ ಭೂಧರಾಧಿ
ತ್ಯಕೆಯೊಳಗೆ ಭುಗಿಭುಗಿಸಿ ರಿಪುವನ
ನಿಕರದಲಿ ಸಲೆ ಬೀದಿವರಿದುದು ಭೀಮದಾವಾಗ್ನಿ (ದ್ರೋಣ ಪರ್ವ, ೧೨ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕಿರೀಟವನ್ನು ಹೊತ್ತು ರಾಜರೆಂಬ ಬಿದಿರು ಗುಂಪುಗಳಲ್ಲಿ ಛಟಛಟಿಸಿ, ಕುದುರೆಗಳೇ ಚಿಗುರಾದ ಮರಗಳಲ್ಲಿ ಘುಳುಘುಳಿಸಿ, ಆನೆ, ರಥ ಮೊದಲಾದ ಬೆಟ್ಟಗಳ ವನಸ್ಪತಿಗಲಲ್ಲಿ ಭುಗುಭುಗಿಸಿ ಶತ್ರು ಸೈನ್ಯ ಸಮೂಹದಲ್ಲಿ ಭೀಮನೆಂಬ ದಾವಾಗ್ನಿ ಸ್ವೇಚ್ಛೆಯಾಗಿ ಮುಂದುವರಿಯಿತು.

ಅರ್ಥ:
ಮಕುಟ: ಕಿರೀಟ; ಬದ್ಧ: ಹೊತ್ತ; ಮಹೀಶ: ರಾಜ; ವೇಣು: ಬಿದಿರು; ಪ್ರಕರ: ಗುಂಪು, ಸಮೂಹ; ತುರಗ: ಅಶ್ವ, ಕುದುರೆ; ಪಲ್ಲವ: ಚಿಗುರು, ತಳಿರು; ಭೂಜರಾಜಿ: ಮರಗಳ ಸಮೂಹ; ಸಕಲ: ಎಲ್ಲಾ; ಗಜ: ಆನೆ; ರಥ: ಬಂಡಿ; ಭೂಧರ: ಬೆಟ್ಟ, ಪರ್ವತ; ರಿಪು: ವೈರಿ; ವನ: ಕಾಡು; ನಿಕರ: ಗುಂಪು; ಸಲೆ: ವಿಸ್ತೀರ್ಣ; ಬೀದಿ: ಹಾದಿ, ವ್ಯಾಪ್ತಿ; ದಾವಾಗ್ನಿ: ಕಾಡಿನ ಕಿಚ್ಚು, ಕಾಳ್ಗಿಚ್ಚು

ಪದವಿಂಗಡಣೆ:
ಮಕುಟ+ಬದ್ಧ +ಮಹೀಶ+ವೇಣು
ಪ್ರಕರದಲಿ +ಛಟಛಟಿಸಿ +ತುರಗ
ಪ್ರಕರ +ಪಲ್ಲವ+ಭೂಜರಾಜಿಗಳೊಳಗೆ+ ಘುಳುಘುಳಿಸಿ
ಸಕಲ +ಗಜ +ರಥ +ಭೂಧರ+ಅಧಿ
ತ್ಯಕೆಯೊಳಗೆ +ಭುಗಿಭುಗಿಸಿ +ರಿಪುವನ
ನಿಕರದಲಿ +ಸಲೆ +ಬೀದಿವರಿದುದು +ಭೀಮ+ದಾವಾಗ್ನಿ

ಅಚ್ಚರಿ:
(೧) ಸುಡುವ ಶಬ್ದಗಳನ್ನು ವರ್ಣಿಸುವ ಪರಿ – ಛಟಛಟಿಸಿ, ಘುಳುಘುಳಿಸಿ, ಭುಗಿಭುಗಿಸಿ

ಪದ್ಯ ೩: ಕೌರವ ಸೈನ್ಯವು ಉತ್ತರನಿಗೆ ಹೇಗೆ ತೋರಿತು?

ಜಡಿವ ಖಡ್ಗದ ಕಿಡಿಯ ಸೇನೆಯ
ತೊಡರುಗಳ ಕೇಸುರಿಯ ಬಲದು
ಗ್ಗಡದ ರಭಸದ ರೌದ್ರರವ ಛಟ ಛಟಿಗ ನಿಸ್ವನದ
ಇಡಿದ ಧೂಳಿಯ ಧೂಮರಾಶಿಯ
ಪಡೆ ವಿರಾಟನ ಸುತನ ಕಂಗಳಿ
ಗೊಡನೊಡನೆ ದಾವಾಗ್ನಿಯಂತಿರೆ ತೋರಿತಿದಿರಿನಲಿ (ವಿರಾಟ ಪರ್ವ, ೭ ಸಂಧಿ, ೩ ಪದ್ಯ)

ತಾತ್ಪರ್ಯ:
ಬೀಸುವ ಖಡ್ಗಗಳ ಹೊಳಪೇ ಕಿಡಿಗಳು, ಆಭರಣಗಳ ಕಾಂತಿ ಕೆಂಬಣ್ಣದ ಉರಿ, ಸೈನ್ಯದ ಸದ್ದೇ ಛಟಛಟ ಸದ್ದು, ಮೇಲೆದ್ದ ಧೂಳೇ ಹೊಗೆ, ಹೀಗೆ ಉತ್ತರನಿಗೆ ಕುರುಸೈನ್ಯವು ಕಾಳ್ಗಿಚ್ಚಿನಂತೆ ತೋರಿತು.

ಅರ್ಥ:
ಜಡಿ: ಬೆದರಿಕೆ, ಹೆದರಿಕೆ; ಖಡ್ಗ: ಕತ್ತಿ, ಕರವಾಳ; ಕಿಡಿ: ಬೆಂಕಿ; ಸೇನೆ: ಸೈನ್ಯ; ತೊಡರು: ಸಂಕೋಲೆ, ಬಂಧನ; ಕೇಸುರಿ: ಕೆಂಪು ಉರಿ; ಬಲ: ಶಕ್ತಿ; ಉಗ್ಗಡ: ಉತ್ಕಟತೆ, ಅತಿಶಯ; ರಭಸ: ವೇಗ; ರೌದ್ರ: ಸಿಟ್ಟು, ರೋಷ; ರವ: ಶಬ್ದ; ಛಟ: ಬೆಂಕಿಯ ಶಬ್ದವನ್ನು ವಿವರಿಸುವ ಪದ; ನಿಸ್ವನ: ಶಬ್ದ, ಧ್ವನಿ; ಇಡಿ: ತಿವಿ, ಚುಚ್ಚು; ಧೂಳು: ಮಣ್ಣಿನ ಪುಡಿ; ಧೂಮ: ಹೊಗೆ; ರಾಶಿ: ಗುಂಪು; ಪಡೆ: ಸೈನ್ಯ; ಸುತ: ಮಗ; ಕಂಗಳು: ಕಣ್ಣು; ಒಡನೊಡನೆ: ಒಮ್ಮೆಲೆ; ದಾವಾಗ್ನಿ: ಕಾಳ್ಗಿಚ್ಚು; ತೋರು: ಕಾಣಿಸು; ಇದಿರು: ಎದುರು;

ಪದವಿಂಗಡಣೆ:
ಜಡಿವ +ಖಡ್ಗದ +ಕಿಡಿಯ +ಸೇನೆಯ
ತೊಡರುಗಳ +ಕೇಸುರಿಯ +ಬಲದ್
ಉಗ್ಗಡದ +ರಭಸದ +ರೌದ್ರ+ರವ+ ಛಟ+ ಛಟಿಗ +ನಿಸ್ವನದ
ಇಡಿದ+ ಧೂಳಿಯ +ಧೂಮರಾಶಿಯ
ಪಡೆ +ವಿರಾಟನ +ಸುತನ +ಕಂಗಳಿಗ್
ಒಡನೊಡನೆ +ದಾವಾಗ್ನಿಯಂತಿರೆ +ತೋರಿತ್+ಇದಿರಿನಲಿ

ಅಚ್ಚರಿ:
(೧) ಬೆಂಕಿಯ ಶಬ್ದವನ್ನು ಹೇಳುವ ಪರಿ – ಛಟ ಛಟಿಗ ನಿಸ್ವನದ

ಪದ್ಯ ೨೪: ಕೃಷ್ಣನು ಪಾಂಡವರ ಬಳಿ ಹೇಗೆ ಬಂದನು?

ಎನುತ ಸಿಂಹಾಸನವನಿಳಿದಾ
ದನುಜರಿಪು ಕಮಲಾಕ್ಷಿ ನೀ ನಿ
ಲ್ಲೆನುತ ಮನವೇಗದಲಿ ಬಂದನು ಧರ್ಮಜನ ಹೊರೆಗೆ
ನೆನೆಯೆ ಲಕ್ಷ್ಮೀಕಾಂತ ಬಂದನು
ಘನದುರಿತ ದಾವಾಗ್ನಿ ಬಂದನು
ಯೆನುತ ಮೈಯಿಕ್ಕಿದನು ಮುನಿಜನ ಸಹಿತ ಯಮಸೂನು (ಅರಣ್ಯ ಪರ್ವ, ೪ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕೃಷ್ಣನು ಸತ್ಯಭಾಮೆಗೆ ಪಾಂಡವರ ಪರಿಸ್ಥಿತಿಯನ್ನು ವಿವರಿಸುತ್ತಾ, ಸಿಂಹಾಸನದಿಂದಿಳಿದು ಸತ್ಯಭಾಮೆಗೆ ಅಲ್ಲೇ ಇರಲು ಹೇಳಿ ಮನೋವೇಗದಲ್ಲಿ ಪಾಂಡವರಿದ್ದೆಡೆಗೆ ಬಂದನು. ಪಾಪಾರಣ್ಯಕ್ಕೆ ದಾವಾಗ್ನಿಯಂತಿರುವ ಲಕ್ಷ್ಮೀಕಾಂತನು ಬಂದನೆಂದು ಸಂತೋಷದಿಂದ ಹೊಗಳುತ್ತಾ ಧರ್ಮಜನು ಋಷಿ ಸಮೂಹದೊಂದಿಗೆ ಶ್ರೀಕೃಷ್ಣನಿಗೆ ನಮಸ್ಕರಿಸಿದನು.

ಅರ್ಥ:
ಸಿಂಹಾಸನ: ರಾಜನು ಕುಳಿತುಕೊಳ್ಳುವ ಪೀಠ; ಇಳಿದು: ಕೆಳಗೆ ಬಂದು; ದನುಜರಿಪು: ರಾಕ್ಷಸರ ವೈರಿ; ಕಮಲಾಕ್ಷಿ: ಕಮಲದಂತೆ ಕಣ್ಣುಳ್ಳವಳು (ಸತ್ಯಭಾಮೆ); ನಿಲ್ಲು: ತಡೆ, ಇರು; ಮನ: ಮನಸ್ಸು; ವೇಗ: ಶೀಘ್ರ; ಬಂದು: ಆಗಮಿಸು; ಹೊರೆ: ರಕ್ಷಣೆ, ಆಶ್ರಯ; ನೆನೆ: ಜ್ಞಾಪಿಸಿಕೊ; ಬಂದನು: ಆಗಮಿಸು; ಘನ:ಗಟ್ಟಿಯಾದುದು; ದುರಿತ: ಪಾಪ, ಪಾತಕ; ದಾವಾಗ್ನಿ: ಕಾಳ್ಗಿಚ್ಚು; ಮೈಯಿಕ್ಕು: ನಮಸ್ಕರಿಸು; ಮುನಿ: ಋಷಿ; ಸಹಿತ: ಜೊತೆ; ಸೂನು: ಮಗ;

ಪದವಿಂಗಡಣೆ:
ಎನುತ +ಸಿಂಹಾಸನವನ್+ಇಳಿದ್
ಆ+ ದನುಜರಿಪು +ಕಮಲಾಕ್ಷಿ+ ನೀ +ನಿ
ಲ್ಲೆನುತ +ಮನವೇಗದಲಿ +ಬಂದನು +ಧರ್ಮಜನ +ಹೊರೆಗೆ
ನೆನೆಯೆ +ಲಕ್ಷ್ಮೀಕಾಂತ +ಬಂದನು
ಘನದುರಿತ +ದಾವಾಗ್ನಿ +ಬಂದನು
ಯೆನುತ+ ಮೈಯಿಕ್ಕಿದನು+ ಮುನಿಜನ +ಸಹಿತ +ಯಮಸೂನು

ಅಚ್ಚರಿ:
(೧) ಕೃಷ್ಣನ ಆಗಮನವನ್ನು ವರ್ಣಿಸುವ ಪರಿ – ನೆನೆಯೆ ಲಕ್ಷ್ಮೀಕಾಂತ ಬಂದನು,
ಘನದುರಿತ ದಾವಾಗ್ನಿ ಬಂದನು
(೨) ಕೃಷ್ಣನನ್ನು ದನುಜರಿಪು, ಲಕ್ಷ್ಮೀಕಾಂತ ಎಂದು ಕರೆದಿರುವುದು