ಪದ್ಯ ೩೧: ಭೀಮನು ಯಾರನ್ನು ಬೇಟೆಯಾಡಿದನು?

ಸರಳ ಸೊಂಪಿನ ಸೋಹಿನಲಿ ನಿರಿ
ಗರುಳ ದಾವಣಿವಲೆಗಳಲಿ ಸಂ
ಗರದ ಸುಭಟವ್ರಜದ ಮಧ್ಯದ ಗೂಡುವಲೆಗಳಲಿ
ಉರುಗದೆಯ ದಡಿವಲೆಯಲಸಿ ಮು
ದ್ಗರದ ಸಿಡಿವಲೆಗಳಲಿ ಸಮರದೊ
ಳರಿಮೃಗವ್ರಾತವನು ಭೀಮಕಿರಾತ ಕೈಕೊಂಡ (ದ್ರೋಣ ಪರ್ವ, ೧೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅಗಣಿತ ಬಾಣಗಳಿಂದ ಸೋವಿ, ಕರುಳುಗಳ ದಾವಣಿ ಬಲೆಯನ್ನು ಬೀಸಿ, ಮುಂಡದ ಗೂಡು ಬಲೆಗಳು, ಗದೆಯ ದಡಿವಲೆ, ಮುದ್ಗರದ ಸಿಡಿಬಲೆಗಳಲ್ಲಿ ಶತ್ರುಗಳೆಂಬ ಮೃಗಗಳನ್ನು ಭೀಮನೆಂಬ ಕಿರಾತನು ಬೇಟೆಯಾಡಿದನು.

ಅರ್ಥ:
ಸರಳು: ಬಾಣ; ಸೊಂಪು: ಸೊಗಸು, ಚೆಲುವು; ಸೋಹು: ಅಟ್ಟು, ಓಡಿಸು; ನಿರಿ: ಕೊಲ್ಲು, ಸಾಯಿಸು; ಕರುಳು: ಪಚನಾಂಗ; ದಾವಣಿ: ಮೂಗುದಾರ, ನಿಯಂತ್ರಣ; ಅಲೆ: ನಿವಾರಿಸು, ಚಲಿಸು; ಸಂಗರ: ಯುದ್ಧ; ಸುಭಟ: ಪರಾಕ್ರಮಿ; ವ್ರಜ: ಗುಂಪು; ಮಧ್ಯ: ನಡುವೆ; ಗೂಡು: ಪಂಜರ, ಮನೆ; ಉರು: ವಿಶೇಷವಾದ; ಗದೆ: ಮುದ್ಗರ; ದಡಿ: ಕೋಲು; ಅಸಿ: ಕತ್ತಿ; ಮುದ್ಗರ: ಗದೆ; ಸಿಡಿ: ಚಿಮ್ಮು; ಸಮರ: ಯುದ್ಧ; ಅರಿ: ವೈರಿ; ಮೃಗ: ಪ್ರಾಣಿ; ವ್ರಾತ: ಗುಂಪು; ಕಿರಾತ: ಬೇಡ;

ಪದವಿಂಗಡಣೆ:
ಸರಳ +ಸೊಂಪಿನ +ಸೋಹಿನಲಿ+ ನಿರಿ
ಕರುಳ+ ದಾವಣಿವ್+ಅಲೆಗಳಲಿ+ ಸಂ
ಗರದ +ಸುಭಟ+ವ್ರಜದ +ಮಧ್ಯದ +ಗೂಡುವ್+ಅಲೆಗಳಲಿ
ಉರು+ಗದೆಯ +ದಡಿವ್+ಅಲೆಯಲಸಿ+ ಮು
ದ್ಗರದ +ಸಿಡಿವ್+ಅಲೆಗಳಲಿ +ಸಮರದೊಳ್
ಅರಿ+ಮೃಗ+ವ್ರಾತವನು +ಭೀಮಕಿರಾತ +ಕೈಕೊಂಡ

ಅಚ್ಚರಿ:
(೧) ಭೀಮನನ್ನು ಭೀಮಕಿರಾತ ಎಂದು ಕರೆದಿರುವುದು
(೨) ಸ ಕಾರದ ತ್ರಿವಳಿ ಪದ – ಸರಳ ಸೊಂಪಿನ ಸೋಹಿನಲಿ

ಪದ್ಯ ೫: ರಣಭೂಮಿ ಹೇಗೆ ತೋರಿತು?

ವ್ರಣದ ಬಲುವೊನಲೊಳಗೆ ತಲೆಗಳು
ಕುಣಿದವರ್ಜುನನಂಬಿನುರುಬೆಗೆ
ಹೆಣನ ದಾವಣಿ ಹಾಸಿದವು ಸೂಸಿದವು ದೊಂಡೆಗಳು
ತಣಿದನಂತಕನಟ್ಟೆಗಳ ರಿಂ
ಗಣದ ನಾಟಕದೊಳಗೆ ಸಮರಾಂ
ಗಣದ ರೌರವ ರೌದ್ರವಾಯಿತು ಕಳನ ಚೌಕದಲಿ (ದ್ರೋಣ ಪರ್ವ, ೧೦ ಸಂಧಿ, ೫ ಪದ್ಯ
)

ತಾತ್ಪರ್ಯ:
ಶತ್ರು ಸೈನ್ಯವು ಗಾಯಗೊಂಡು ಅದರಿಂದ ಹರಿದ ರಕ್ತ ಪ್ರವಾಹದಲ್ಲಿ ರುಂಡಗಳು ಕುಣಿದವು. ಹೆಣಗಳ ಸಾಲುಗಳು ಹಾಸಿದವು. ಮಾಂಸ ಮಿದುಳು ಕರುಳುಗಳು ತುಂಬಿ ಬಂದವು. ಯಮನು ತೃಪ್ತನಾದನು. ಬಾಣಗಳ, ತಲೆಗಳ ದೇಹಗಳ ಕುಣಿತದಿಂದ ಮಹಾ ಭಯಂಕರವಾಗಿ ರಣಭೂಮಿ ಕಾಣಿಸಿತು.

ಅರ್ಥ:
ವ್ರಣ: ಹುಣ್ಣು, ಗಾಯ; ಬಲು: ಬಹಳ; ತಲೆ: ಶಿರ; ಕುಣೀ: ನರ್ತಿಸು; ಅಂಬು: ಬಾಣ; ಉರುಬೆ: ಅಬ್ಬರ; ಹೆಣ: ಜೀವವಿಲ್ಲದ ಶರೀರ; ದಾವಣಿ: ಮೂಗುದಾರ, ಅಂಕೆ, ನಿಯಂತ್ರಣ; ಹಾಸು: ಹಾಸಿಗೆ, ಶಯ್ಯೆ; ಸೂಸು: ಹರಡು; ದೊಂಡೆ: ಗಂಟಲು, ಕಂಠ; ತಣಿದು: ತೃಪ್ತಿಹೊಂದು; ಅಂತಕ: ಯಮ; ಅಟ್ಟೆ: ತಲೆಯಿಲ್ಲದ ದೇಹ; ರಿಂಗಣ: ಚಟುವಟಿಕೆ, ಚಲನೆ; ನಾಟಕ: ರೂಪಕ; ಸಮರ: ಯುದ್ಧ; ರೌರವ: ಒಂದು ಬಗೆಯ ಭಯಂಕರ ನರಕ; ರೌದ್ರ: ಸಿಟ್ಟು, ರೋಷ; ಕಳ: ರಣರಂಗ; ಚೌಕ: ಚತು ಷ್ಕೋಣಾಕೃತಿಯಾದ ಅಂಗಳ;

ಪದವಿಂಗಡಣೆ:
ವ್ರಣದ +ಬಲುವೊನಲ್+ಒಳಗೆ+ ತಲೆಗಳು
ಕುಣಿದವ್+ಅರ್ಜುನನ್+ಅಂಬಿನ್+ಉರುಬೆಗೆ
ಹೆಣನ +ದಾವಣಿ +ಹಾಸಿದವು +ಸೂಸಿದವು +ದೊಂಡೆಗಳು
ತಣಿದನ್+ಅಂತಕನ್+ಅಟ್ಟೆಗಳ +ರಿಂ
ಗಣದ +ನಾಟಕದೊಳಗೆ +ಸಮರಾಂ
ಗಣದ +ರೌರವ +ರೌದ್ರವಾಯಿತು +ಕಳನ +ಚೌಕದಲಿ

ಅಚ್ಚರಿ:
(೧) ತುಂಬ ಜನರು ಸತ್ತರು ಎಂದು ಹೇಳುವ ಪರಿ – ತಣಿದನಂತಕನ್
(೨) ರಣಾಂಗಣವನ್ನು ನಾಟಕಕ್ಕೆ ಹೋಲಿಸುವ ಪರಿ – ಅಟ್ಟೆಗಳ ರಿಂಗಣದ ನಾಟಕದೊಳಗೆ ಸಮರಾಂ
ಗಣದ ರೌರವ ರೌದ್ರವಾಯಿತು ಕಳನ ಚೌಕದಲಿ

ಪದ್ಯ ೫೯: ಎಂತಹ ರಾವುತರು ಮುನ್ನುಗ್ಗಿದರು?

ನೂಲ ಹರಿಗೆಯ ಹೆಗಲ ಬಾರಿಯ
ತೋಳ ತೊರಿಯ ಲೌಡಿಗಳ ಕರ
ವಾಳ ತಳಪದ ಮಿಂಚುಗಳ ತನುಮನದ ಕೆಚ್ಚುಗಳ
ಸಾಲದಾವಣಿಅಲೆಯ ಗಂಟಲ
ಗಾಳಗತ್ತರಿಗರಗಸದ ಬಿರು
ದಾಳಿಗಳ ಛಲದಂಕರಾವುತರೊತ್ತಿ ನೂಕಿದರು (ಭೀಷ್ಮ ಪರ್ವ, ೪ ಸಂಧಿ, ೫೯ ಪದ್ಯ)

ತಾತ್ಪರ್ಯ:
ನೂಲಿನ ಗುರಾಣಿ, ಹೆಗಲಲ್ಲಿ ಹಗ್ಗ, ದೃಢವಾದ ತೋಳುಗಳಲ್ಲಿ ಹಿಡಿದ ಲೌಡಿ ಕತ್ತಿಗಳ ಹೊಳಪು, ಮನಸ್ಸಿನ ನಿಷ್ಠುರ ಪರಾಕ್ರಮ, ತಲೆಯ ಮೇಲೆ ದಾವಣಿಗಳು, ಅವಕ್ಕೆ ಕಟ್ಟಿದ ಗಂಟಲಿನ ಕೊಕ್ಕೆ, ಕತ್ತರಿ, ಗರಗಸಗಳು ಇವುಗಳಿಂದ ಕೂಡಿದ ಬಿರುದನ್ನುಳ್ಳವರೂ, ಛಲಗಾರರೂ ಆದ ರಾವುತರು ಮುನ್ನುಗ್ಗಿದರು.

ಅರ್ಥ:
ನೂಲು: ಬಟ್ಟೆ, ವಸ್ತ್ರ; ಹರಿಗೆ: ಗುರಾಣಿ; ಹೆಗಲು: ಭುಜ; ಬಾರಿ: ಬಲಿ, ಆಹುತಿ, ಲಗ್ಗೆ; ತೋಳ: ಭುಜ; ತೋರ: ದಪ್ಪನಾದ; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಕರವಾಳ: ಕತ್ತಿ; ತಳಪಥ: ಕಾಂತಿ; ಮಿಂಚು: ಪ್ರಕಾಶ; ತನುಮನ: ದೇಹ ಮತ್ತು ಮನಸ್ಸು; ಕೆಚ್ಚು: ಧೈರ್ಯ, ಸಾಹಸ; ಸಾಲು: ಗುಂಪು, ಆವಳಿ; ದಾವಣಿ: ಕಟ್ಟು, ಬಂಧನ; ತಲೆ: ಶಿರ; ಗಂಟಲು: ಕೊರಳು; ಕತ್ತರಿ: ಒಂದು ಬಗೆಯ ಆಯುಧ; ಗರಗಸ: ಮರ ಕೊಯ್ಯುವ ಸಾಧನ, ಗಂಪ; ಬಿರುದ: ಬಿರುದುಳ್ಳವ; ಛಲ: ದೃಢ ನಿಶ್ಚಯ; ಅಂಕ: ಯುದ್ಧ; ರಾವುತ: ಕುದುರೆ ಸವಾರ, ಅಶ್ವಾರೋಹಿ; ನೂಕು: ತಳ್ಳು; ಗಾಳ: ಕೊಕ್ಕೆ;

ಪದವಿಂಗಡಣೆ:
ನೂಲ+ ಹರಿಗೆಯ+ ಹೆಗಲ+ ಬಾರಿಯ
ತೋಳ +ತೋರಿಯ +ಲೌಡಿಗಳ+ ಕರ
ವಾಳ +ತಳಪದ +ಮಿಂಚುಗಳ +ತನುಮನದ +ಕೆಚ್ಚುಗಳ
ಸಾಲ+ದಾವಣಿ+ತಲೆಯ +ಗಂಟಲ
ಗಾಳ+ಕತ್ತರಿ+ಗರಗಸದ +ಬಿರು
ದಾಳಿಗಳ +ಛಲದ್+ಅಂಕ+ರಾವುತರ್+ಒತ್ತಿ +ನೂಕಿದರು

ಅಚ್ಚರಿ:
(೧) ಹರಿಗೆ, ಲೌಡಿ, ಕರವಾಳ, ಕತ್ತರಿ, ಗರಗಸ – ಆಯುಧಗಳ ಹೆಸರು
(೨) ರಾವುತರ ತೋರಿದ ಪರಿ – ನೂಲ ಹರಿಗೆಯ ಹೆಗಲ ಬಾರಿಯ ತೋಳ ತೊರಿಯ ಲೌಡಿಗಳ ಕರ
ವಾಳ ತಳಪದ ಮಿಂಚುಗಳ ತನುಮನದ ಕೆಚ್ಚುಗಳ

ಪದ್ಯ ೪೭: ಉಪಪ್ಲಾವ್ಯ ನಗರವು ಹೇಗೆ ಅಲಂಕೃತಗೊಂಡಿತ್ತು?

ದೇವ ನೀ ಬಹನೆಂದು ಬಂದರು
ದಾವಣಿಯ ಹವಣರಿದು ಬಳಿಕ ಮ
ಹಾವಿಳಾಸದೊಳೊಪ್ಪವಿಟ್ಟರು ತಮ್ಮ ನಗರಿಗಳ
ಹೂವಲಿಯ ವೀಧಿಗಳ ನವ ರ
ತ್ನಾವಳಿಯ ಸೂಸಕದ ಭದ್ರದ
ಲೋವೆಗಳ ಲಂಬಳದಲೆಸೆದವು ಕೇರಿಕೇರಿಗಳು (ವಿರಾಟ ಪರ್ವ, ೧೧ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕುದುರೆ ಆನೆಯ ಲಾಯಗಳ ಸಿದ್ಧತೆಯಿಂದ ಸೈನ್ಯವು ಮುಂದುವರಿದು ಬಂದುದನ್ನು ಖಚಿತಪಡಿಸಿಕೊಂಡು ದೂತರು, ಶ್ರೀಕೃಷ್ಣನು ಇಗೋ ಬಂದನು ಎಂದು ಹೇಳಿದರು. ಉಪಪ್ಲಾವ್ಯ ನಗರಿಯನ್ನು ಉತ್ತಮವಾಗಿ ಅಲಂಕರಿಸಿದ್ದರು, ಬೀದಿಗಳಲ್ಲಿ ಪುಷ್ಪಾಲಂಕಾರ, ನವರತ್ನಗಲ ಕುಚ್ಚುಗಳು, ಅಲಂಕೃತವಾದ ಛಾವಣಿಯ ಮುಂಭಾಗಗಳು, ಉಪಪ್ಲಾವ್ಯದ ಬೀದಿ ಬೀದಿಗಳಲ್ಲೂ ಕಂಡು ಬಂದವು.

ಅರ್ಥ:
ದೇವ: ಭಗವಂತ; ಬಹನೆಂದು: ಬರುವೆಯೆಂದು; ಬಂದು: ಆಗಮಿಸು; ದಾವಣಿ: ಗುಂಪು, ಸಮೂಹ; ಹವಣ: ಸಿದ್ಧತೆ, ಪ್ರಯತ್ನ; ಅರಿ: ತಿಳಿದು; ಬಳಿಕ: ನಂತರ; ವಿಲಾಸ: ಅಂದ, ಸೊಬಗು; ನಗರ: ಪಟ್ಟಣ; ಹೂವಲಿ: ರಂಗವಲ್ಲಿಯಂತೆ ರಚಿಸಿದ ಹೂವುಗಳ ಅಲಂಕಾರ; ವೀಧಿ: ಬೀದಿ, ರಸ್ತೆ; ನವ: ಹೊಸ; ರತ್ನಾವಳಿ: ವಜ್ರ, ಮಾಣಿಕ್ಯಗಳ ಗುಂಪು; ಸೂಸಕ: ಒಂದು ಬಗೆಯ ಆಭರಣ, ಬೈತಲೆ ಬೊಟ್ಟು; ಭದ್ರ: ಮಂಗಳಕರವಾದ, ಶುಭಕರವಾದ; ಲೋವೆ: ಛಾವಣಿಯ ಚೌಕಟ್ಟು; ಲಂಬಳ: ತೂಗಾಡುವ; ಎಸೆ: ತೋರು; ಕೇರಿ: ಬೀದಿ;

ಪದವಿಂಗಡಣೆ:
ದೇವ+ ನೀ +ಬಹನೆಂದು+ ಬಂದರು
ದಾವಣಿಯ+ ಹವಣರಿದು+ ಬಳಿಕ+ ಮ
ಹಾ+ವಿಳಾಸದೊಳ್+ ಒಪ್ಪವಿಟ್ಟರು +ತಮ್ಮ +ನಗರಿಗಳ
ಹೂವಲಿಯ +ವೀಧಿಗಳ+ ನವ +ರ
ತ್ನಾವಳಿಯ +ಸೂಸಕದ +ಭದ್ರದ
ಲೋವೆಗಳ +ಲಂಬಳದಲ್+ಎಸೆದವು+ ಕೇರಿ+ಕೇರಿಗಳು

ಅಚ್ಚರಿ:
(೧) ನಗರವನ್ನು ಸಿಂಗರಿಸಿದ ಪರಿ – ಹೂವಲಿಯ ವೀಧಿಗಳ ನವ ರತ್ನಾವಳಿಯ ಸೂಸಕದ ಭದ್ರದ
ಲೋವೆಗಳ ಲಂಬಳದಲೆಸೆದವು

ಪದ್ಯ ೩೮: ಅರ್ಜುನನು ಉತ್ತರನಿಗೆ ಹೇಗೆ ಧೈರ್ಯವನ್ನು ನೀಡಿದನು?

ತುಡಕಬಹುದೇ ದೋಷಿ ಹಾವಿನ
ಕೊಡನ ನಿನಗಿವು ಕೈದುಗಳೆ ಬರ
ಸಿಡಿಲ ದಾವಣಿಯಾಗುತಿವೆ ಕೈಯಿಕ್ಕಲಂಜುವೆನು
ಬಿಡಿಸು ಸಾರಥಿಯೆನ್ನನೆನೆ ಫಡ
ನಡುಗದಿರು ಫಲುಗುಣನ ನೆನೆ ಕೈ
ದುಡುಕು ಕೈವಶವಹವು ತೆಗೆ ಸಾಕೆಂದನಾ ಪಾರ್ಥ (ವಿರಾಟ ಪರ್ವ, ೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ಕಳ್ಳತನ ಮಾಡಿದವನು ಹಾವಿನ ಕೊಡದಲ್ಲಿ ಕೈಯಿಡಬಹುದೇ? ಇವು ಖಂಡಿತ ಆಯುಧಗಲಲ್ಲಿ, ಬರಸಿಡಿಲುಗಳನ್ನು ಕಟ್ಟಿ ಹಾಕಿರುವ ದಾವಣಿ. ಕೈಯಿಡಲು ಹೆದರುತ್ತೇನೆ, ಎಂದು ಉತ್ತರನು ಹೇಳಿದನು. ಅರ್ಜುನನು ಉತ್ತರನ ಮಾತನ್ನು ಕೇಳಿ, ಹೆದರಬೇಡ ಅರ್ಜುನನನ್ನು ನೆನೆದು ಕೈಯಿಟ್ಟರೆ ಅವೆಲ್ಲ ವಶವಾಗುತ್ತವೆ ಅವನ್ನು ಕೊಡು ಎಂದನು.

ಅರ್ಥ:
ತುಡುಕು: ತೆಗೆದುಕೊಳ್ಳು; ದೋಷಿ: ಆರೋಪಿ; ಹಾವು: ಉರಗ; ಕೊಡ: ಬಿಂದಿಗೆ; ಕೈ: ಹಸ್ತ; ಕೈದು: ಶಸ್ತ್ರ; ಬರಸಿಡಿಲು: ಅಕಾಲದಲ್ಲಿ ಬೀಳುವ ಸಿಡಿಲು, ಆಘಾತ; ದಾವಣಿ:ಕಟ್ಟು, ಬಂಧನ, ಸಮೂಹ; ಕೈ: ಹಸ್ತ; ಅಂಜು: ಹೆದರು; ಬಿಡಿಸು: ತೊರೆ; ಸಾರಥಿ: ಸೂತ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ನಡುಗು: ಅಲ್ಲಾಡು, ಹೆದರು; ಫಲುಗುಣ: ಅರ್ಜುನ; ನೆನೆ: ಜ್ಞಾಪಿಸಿಕೋ; ದುಡುಕು: ವಿಚಾರಣೆ ಮಾಡದೆ ಮುನ್ನುಗ್ಗು; ವಶ: ಅಧೀನ, ಅಂಕೆ; ತೆಗೆ: ಹೊರತರು; ಸಾಕು: ಇನ್ನು ಬೇಡ;

ಪದವಿಂಗಡಣೆ:
ತುಡಕಬಹುದೇ+ ದೋಷಿ +ಹಾವಿನ
ಕೊಡನ +ನಿನಗ್+ಇವು +ಕೈದುಗಳೆ +ಬರ
ಸಿಡಿಲ +ದಾವಣಿಯಾಗುತಿವೆ +ಕೈಯಿಕ್ಕಲ್+ಅಂಜುವೆನು
ಬಿಡಿಸು +ಸಾರಥಿ +ಎನ್ನನ್+ಎನೆ +ಫಡ
ನಡುಗದಿರು+ ಫಲುಗುಣನ +ನೆನೆ +ಕೈ
ದುಡುಕು +ಕೈವಶವಹವು+ ತೆಗೆ+ ಸಾಕೆಂದನಾ +ಪಾರ್ಥ

ಅಚ್ಚರಿ:
(೧) ಎನ್ನನೆನೆ, ನೆನೆ – ಪದಗಳ ಬಳಕೆ
(೨) ಉಪಮಾನದ ಪ್ರಯೋಗ – ತುಡಕಬಹುದೇ ದೋಷಿ ಹಾವಿನ ಕೊಡನ