ಪದ್ಯ ೩೭: ಶಲ್ಯ ಧರ್ಮಜರ ಬಾಣ ಪ್ರಯೋಗ ಹೇಗಿತ್ತು?

ಧರಣಿಪತಿಯಂಬುಗಳನೆಡೆಯಲಿ
ತರಿದು ತುಳುಕಿದನಂಬಿನುಬ್ಬಿನ
ಗರಿಯ ಗಾಳಿಯ ದಾಳಿ ಪೈಸರಿಸಿದುದು ಪರ್ವತವ
ಮೊರೆವ ಕಣೆ ಮಾರ್ಗಣೆಗಳನು ಕ
ತ್ತರಿಸಿದವು ಬಳಿಯಂಬುಗಳು ಪಡಿ
ಸರಳ ತೂಳಿದಡೆಚ್ಚರೆಚ್ಚರು ಮೆಚ್ಚಲುಭಯಬಲ (ಶಲ್ಯ ಪರ್ವ, ೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಬಾಣಗಳನ್ನು ಶಲ್ಯನು ಕತ್ತರಿಸಿ, ಅವನ ಮೇಲೆ ಬಾಣಗಳನ್ನು ಬಿಟ್ಟನು. ಆ ಬಾಣಗಳ ಗಾಳಿಗೆ ಪರ್ವತವೂ ಹಿಂದಕ್ಕೆ ಸರಿಯಬೇಕೆನ್ನುವಷ್ಟು ಶಕ್ತಿಯಿತ್ತು. ಅವರಿಬ್ಬರ ಅಬ್ಬರದ ಬಾಣ ಪ್ರತಿಬಾಣಗಳು ಒಂದನ್ನೊಂದು ಕತ್ತರಿಸಿ ಹಾಕಿದವು. ಹಿಂದೆ ಮತ್ತೆ ಬಾಣಗಳು ಅದಕ್ಕೆದುರಾಗಿ ಬೇರೆಯ ಬಾಣಗಳು ಬಿಡುವುದನ್ನು ಕಂಡ ಎರಡು ಕಡೆಯ ಸೈನಿಕರು ಇಬ್ಬರನ್ನು ಮೆಚ್ಚಿದರು.

ಅರ್ಥ:
ಧರಣಿಪತಿ: ರಾಜ; ಅಂಬು: ಬಾಣ; ಎಡೆ: ಸುಲಿ, ತೆಗೆ; ತರಿ: ಕಡಿ, ಕತ್ತರಿಸು; ತುಳುಕು: ಹೊರಸೂಸುವಿಕೆ; ಉಬ್ಬು: ಹಿಗ್ಗು; ಗರಿ: ಬಾಣದ ಹಿಂಭಾಗ; ಗಾಳಿ: ವಯು; ದಾಳಿ: ಆಕ್ರಮಣ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಪರ್ವತ: ಬೆಟ್ಟ; ಮೊರೆ: ಗುಡುಗು,ಝೇಂಕರಿಸು; ಕಣೆ: ಬಾಣ; ಮಾರ್ಗಣೆ: ಪ್ರತಿಯಾಗಿ ಬಿಡುವ ಬಾಣ, ಎದುರು ಬಾಣ; ಕತ್ತರಿಸು: ಚೂರು ಮಾಡು; ಬಳಿ: ಹತ್ತಿರ; ಪಡಿಸರಳ: ಸಮಾನವಾದುದು ಬಾಣ; ತೂಳು: ಆವೇಶ, ಹಿಂಬಾಲಿಸು; ಎಚ್ಚು: ಬಾಣ ಪ್ರಯೋಗ ಮಾಡು; ಮೆಚ್ಚು: ಪ್ರಶಂಶಿಸು; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಧರಣಿಪತಿ+ಅಂಬುಗಳನ್+ಎಡೆಯಲಿ
ತರಿದು +ತುಳುಕಿದನ್+ಅಂಬಿನ್+ಉಬ್ಬಿನ
ಗರಿಯ +ಗಾಳಿಯ +ದಾಳಿ +ಪೈಸರಿಸಿದುದು +ಪರ್ವತವ
ಮೊರೆವ +ಕಣೆ +ಮಾರ್ಗಣೆಗಳನು+ ಕ
ತ್ತರಿಸಿದವು +ಬಳಿ+ಅಂಬುಗಳು+ ಪಡಿ
ಸರಳ +ತೂಳಿದಡ್+ಎಚ್ಚರ್+ಎಚ್ಚರು +ಮೆಚ್ಚಲ್+ಉಭಯಬಲ

ಅಚ್ಚರಿ:
(೧) ಎಚ್ಚರೆಚ್ಚರು ಮೆಚ್ಚಲುಭಯಬಲ – ಚ್ಚ ಕಾರದ ಪದಗಳ ಬಳಕೆ
(೨) ರೂಪಕದ ಪ್ರಯೋಗ – ಗರಿಯ ಗಾಳಿಯ ದಾಳಿ ಪೈಸರಿಸಿದುದು ಪರ್ವತವ

ಪದ್ಯ ೩೨: ಸೈನಿಕರು ಏನೆಂದು ಕೂಗಿದರು?

ಆಳ ಹೊಗಿಸೋ ದ್ರೋಣ ರಥ ದು
ವ್ವಾಳಿಯಲಿ ಬರುತದೆ ಕೃತಾಂತನ
ದಾಳಿಗೆತ್ತಣ ವೀರವೋ ನೆಗ್ಗಿದವು ನೆನಹುಗಳು
ಕಾಳುಗೆಡದಿರಿ ಕೂಡೆ ಕೈಕೊಳ
ಹೇಳಿ ಕೈತಪ್ಪಾಗದಿರದು ನೃ
ಪಾಲಕಂಗೆಂದೊದರಿದರು ಧರ್ಮಜನ ಮಂತ್ರಿಗಳು (ದ್ರೋಣ ಪರ್ವ, ೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ದ್ರೋಣನ ಮಹಾರಭಸವನ್ನು ಕಂಡ ಮಂತ್ರಿಗಳು, ವೀರರನ್ನು ಕಳಿಸಿ ದ್ರೋಣನ ರಭಸವನ್ನು ತಗ್ಗಿಸಿರಿ, ಯಮನದಾಳಿಗೆ ಎದುರಾಗಿ ಪರಾಕ್ರಮ ಏನು ಮಾಡೀತು? ನಮ್ಮ ಭರವಸೆಗಳು ಕುಸಿಯುತ್ತಿವೆ, ದ್ರೋಣನನ್ನು ನಿಲ್ಲಿಸಿ ಯುದ್ಧಮಾಡದಿದ್ದರೆ ರಾಜನು ಸೆರೆಸಿಕ್ಕುವ ಭಯ ತಪ್ಪುವುದಿಲ್ಲ ಎಂದು ಕೂಗಿದರು.

ಅರ್ಥ:
ಆಳು: ಸೇವಕ, ಸೈನಿಕ; ಹೊಗಿಸು: ಹೊಗುವಂತೆ ಮಾಡು; ರಥ: ಬಂಡಿ; ದುವ್ವಾಳಿ: ವೇಗ; ಬರುತದೆ: ಆಗಮಿಸು; ಕೃತಾಂತ: ಯಮ; ದಾಳಿ: ಆಕ್ರಮಣ; ವೀರ: ಶೂರ; ನೆಗ್ಗು: ತಗ್ಗು, ಕುಸಿ; ನೆನಹು: ಜ್ಞಾಪಕ, ನೆನಪು; ಕಾಳು: ಕೆಟ್ಟದ್ದು, ಕಪ್ಪು; ಕೆಡು: ಹಾಳು; ಕೂಡೆ: ಜೊತೆ; ತಪ್ಪ: ಸುಳ್ಳಾಗು; ನೃಪಾಲ: ರಾಜ; ಒದರು: ಕೂಗು; ಮಂತ್ರಿ: ಸಚಿವ;

ಪದವಿಂಗಡಣೆ:
ಆಳ +ಹೊಗಿಸೋ +ದ್ರೋಣ +ರಥ +ದು
ವ್ವಾಳಿಯಲಿ +ಬರುತದೆ+ ಕೃತಾಂತನ
ದಾಳಿಗ್+ಎತ್ತಣ +ವೀರವೋ +ನೆಗ್ಗಿದವು +ನೆನಹುಗಳು
ಕಾಳುಗೆಡದಿರಿ+ ಕೂಡೆ+ ಕೈಕೊಳ
ಹೇಳಿ +ಕೈ ತಪ್ಪಾಗದಿರದು+ ನೃ
ಪಾಲಕಂಗ್+ಎಂದ್+ಒದರಿದರು +ಧರ್ಮಜನ +ಮಂತ್ರಿಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ಕೃತಾಂತನ ದಾಳಿಗೆತ್ತಣ ವೀರವೋ
(೨) ಕ ಕಾರದ ತ್ರಿವಳಿ ಪದ – ಕಾಳುಗೆಡದಿರಿ ಕೂಡೆ ಕೈಕೊಳ ಹೇಳಿ ಕೈತಪ್ಪಾಗದಿರದು

ಪದ್ಯ ೩೪: ಅರ್ಜುನನು ಹೇಗೆ ಯುದ್ಧಕ್ಕನುವಾದನು?

ರಣಕೆ ತವಕಿಸಿ ಬಳಿಕ ತಾಗುವ
ಕಣಿಯ ದಾಳಿಗೆ ತಳ್ಳುವಾರುವ
ಗುಣವಿದೆಂತುಟೊ ಭಂಡರಿವದಿರ ಹೋಗಹೇಳೆನುತ
ಕೆಣಕಿದನು ಬಿಲುದಿರುವನುರು ಮಾ
ರ್ಗಣದ ಹೊದೆಗಳ ಕೆದರಿ ಸಮರಾಂ
ಗಣಕೆ ಸಮ್ಮುಖನಾದನರ್ಜುನ ಸಿಂಹನಾದದಲಿ (ಭೀಷ್ಮ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಯುದ್ಧಕ್ಕೆ ತವಕದಿಂದ ಬಂದು, ಬಾಣಗಳ ಹೊಡೆತಕ್ಕೆ ಹೆದರಿ ಓಡಿಹೋಗುವುದು ಇದೆಂತಹ ಕುದುರೆಯಂತಹ ಗುಣ! ಈ ಭಂಡರು ಹೋಗಲಿ ಕಳಿಸಿ ಬಿಡು ಎನ್ನುತ್ತಾ ಅರ್ಜುನನು ತನ್ನ ಗಾಂಡೀವ ಬಿಲ್ಲಿನ ಹೆದೆಯನ್ನು ನುಡಿಸಿ, ಸಿಂಹಗರ್ಜನೆ ಮಾಡಿ ಬಾಣಗಳನ್ನು ಹಿಡಿದು ಯುದ್ಧಕ್ಕನುವಾದನು.

ಅರ್ಥ:
ರಣ: ರಣರಂಗ; ತವಕ: ಬಯಕೆ, ಆತುರ; ಬಳಿಕ: ನಂತರ; ತಾಗು: ಎದುರಿಸು, ಮೇಲೆ ಬೀಳು; ಕಣಿ: ನೋಟ, ನೆಲೆ; ದಾಳಿ: ಆಕ್ರಮಣ; ತಳ್ಳು: ನೂಕು; ವಾರುವ: ಕುದುರೆ; ಗುಣ: ನಡತೆ; ಭಂಡ: ನಾಚಿಕೆ ಇಲ್ಲದವನು; ಇವದಿರು: ಇಷ್ಟು ಜನ; ಹೋಗು: ತೆರಳು, ಗಮಿಸು; ಹೇಳು: ತಿಳಿಸು; ಕೆಣಕು: ರೇಗಿಸು; ಬಿಲು: ಬಿಲ್ಲು; ಉರು: ಹೆಚ್ಚು; ಮಾರ್ಗಣ: ಬಾಣ, ಅಂಬು; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಕೆದರು: ಹರಡು; ಸಮರಾಂಗಣ: ಯುದ್ಧರಂಗ, ರಣರಣ್ಗ; ಸಮ್ಮುಖ: ಎದುರು; ಸಿಂಹ: ಕೇಸರಿ; ಸಿಂಹನಾದ: ಗರ್ಜನೆ;

ಪದವಿಂಗಡಣೆ:
ರಣಕೆ +ತವಕಿಸಿ +ಬಳಿಕ +ತಾಗುವ
ಕಣಿಯ +ದಾಳಿಗೆ +ತಳ್ಳು+ವಾರುವ
ಗುಣವ್+ಇದೆಂತುಟೊ +ಭಂಡರ್+ಇವದಿರ +ಹೋಗ+ಹೇಳೆನುತ
ಕೆಣಕಿದನು +ಬಿಲುದಿರುವನ್+ಉರು +ಮಾ
ರ್ಗಣದ +ಹೊದೆಗಳ +ಕೆದರಿ +ಸಮರಾಂ
ಗಣಕೆ +ಸಮ್ಮುಖನಾದನ್+ಅರ್ಜುನ +ಸಿಂಹನಾದದಲಿ

ಅಚ್ಚರಿ:
(೧) ಸೈನಿಕರ ಗುಣವನ್ನು ಹೋಲಿಸುವ ಪರಿ – ರಣಕೆ ತವಕಿಸಿ ಬಳಿಕ ತಾಗುವ ಕಣಿಯ ದಾಳಿಗೆ ತಳ್ಳುವಾರುವ
ಗುಣವಿದೆಂತುಟೊ

ಪದ್ಯ ೧೫: ಭೀಮನು ಯಾರ ಮೇಲೆ ದಾಳಿಮಾಡುವೆನೆಂದು ಹೇಳಿದನು?

ಸುರನಿಕರ ಕಾದಿರಲಿ ಮೇಣೀ
ಧರಣಿಕೊಡೆನೆಂದೆನಲಿ ಹಸ್ತಿನ
ಪುರಿಗೆ ದಾಳಿಯನಿಡುವೆನಮರರ ಮೋರೆಗಳ ತಿವಿದು
ಉರುತರಾಸ್ತ್ರವನೊಯ್ವೆನೆಂದ
ಬ್ಬರಿಸಿ ಮಾರುತಿ ನುಡಿಯೆ ತಮ್ಮನ
ಬರಸೆಳೆದು ಬಿಗಿಯಪ್ಪಿ ಮೈದಡವಿದನು ಭೂಪಾಲ (ವಿರಾಟ ಪರ್ವ, ೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಈ ಆಯುಧಗಳನ್ನು ದೇವತೆಗಳೇ ಕಾದಿರಲಿ. ಈ ಭೂಮಿಯೇ ಕೊಡುವುದಿಲ್ಲ ಎನ್ನಲಿ, ದೇವತೆಗಳ ಮುಖಕ್ಕೆ ತಿವಿದು ಈ ಅಸ್ತ್ರಗಳನ್ನು ತೆಗೆದುಕೊಂಡು ಹೋಗಿ ಹಸ್ತಿನಾವತಿಯ ಮೇಲೆ ದಾಳಿಯಿಡುತ್ತೇನೆ ಎಂದು ಭೀಮನು ಅಬ್ಬರಿಸಲು, ಧರ್ಮರಾಯನು ಭೀಮನನ್ನು ಬರಸೆಳೆದು ಬಿಗಿಯಾಗಿ ಅಪ್ಪಿಕೊಂಡು ಮೈದಡವಿದನು.

ಅರ್ಥ:
ಸುರ: ದೇವತೆ; ನಿಕರ: ಗುಂಪು; ಕಾದು: ರಕ್ಷಣೆ, ಕಾಯುವುದು; ಮೇಣ್: ಅಥವ; ಧರಣಿ: ಭೂಮಿ; ದಾಳಿ: ಆಕ್ರಮಣ; ಅಮರ: ದೇವತೆ; ಮೋರೆ: ಮುಖ; ತಿವಿ: ಚುಚ್ಚು; ಉರು: ಶ್ರೇಷ್ಠ; ಅಸ್ತ್ರ: ಆಯುಧ; ಒಯ್ವೆ: ತೆಗೆದುಕೊಂಡು; ಅಬ್ಬರಿಸು: ಗರ್ಜಿಸು; ಮಾರುತಿ: ವಾಯುಪುತ್ರ; ನುಡಿ: ಮಾತಾಡು; ತಮ್ಮ: ಸಹೋದರ; ಬರಸೆಳೆ: ಹತ್ತಿರಕ್ಕೆ ಕರೆದುಕೊಂಡು; ಅಪ್ಪು: ಆಲಿಂಗನ; ಮೈದಡವಿ: ಮೈಯನ್ನು ನೇವರಿಸು; ಭೂಪಾಲ: ರಾಜ;

ಪದವಿಂಗಡಣೆ:
ಸುರ+ನಿಕರ+ ಕಾದಿರಲಿ+ ಮೇಣ್+ಈ
ಧರಣಿ+ಕೊಡೆನೆಂದ್+ಎನಲಿ +ಹಸ್ತಿನ
ಪುರಿಗೆ+ ದಾಳಿಯನ್+ಇಡುವೆನ್+ಅಮರರ +ಮೋರೆಗಳ+ ತಿವಿದು
ಉರುತರಾಸ್ತ್ರವನ್+ಒಯ್ವೆನೆಂದ್
ಅಬ್ಬರಿಸಿ +ಮಾರುತಿ +ನುಡಿಯೆ +ತಮ್ಮನ
ಬರಸೆಳೆದು +ಬಿಗಿಯಪ್ಪಿ+ ಮೈದಡವಿದನು+ ಭೂಪಾಲ

ಅಚ್ಚರಿ:
(೧) ಸುರ, ಅಮರ – ಸಮಾನಾರ್ಥಕ ಪದ
(೨) ತಮ್ಮನ ಮೇಲಿನ ಪ್ರೀತಿ – ತಮ್ಮನಬರಸೆಳೆದು ಬಿಗಿಯಪ್ಪಿ ಮೈದಡವಿದನು ಭೂಪಾಲ

ಪದ್ಯ ೭: ಗಣಿಕೆಯರು ಯಾವ ಬಲೆಯನ್ನು ಹರಡಿದರು?

ಹೊಕ್ಕರಿವರಾಶ್ರಮದ ತುರುಗಿದ
ತಕ್ಕರಂತಃಕರಣ ತುರಗಕೆ
ದುಕ್ಕುಡಿಯನಿಕ್ಕಿದರು ತಿರುಹಿದರೆರಡು ವಾಘೆಯಲಿ
ಸಿಕ್ಕಿದವು ದಾಳಿಯಲಿ ಧೈರ್ಯದ
ದಕ್ಕಡರ ಮನ ಹರಹಿನಲಿ ಹಾ
ಯಿಕ್ಕಿದರು ಕಡೆಗಣ್ಣ ಬಲೆಗಳ ಮುನಿ ಮೃಗಾವಳಿಗೆ (ಅರಣ್ಯ ಪರ್ವ, ೧೯ ಸಂಧಿ, ೭ ಪದ್ಯ)

ತಾತ್ಪರ್ಯ:
ಗಣಿಕೆಯರು ಋಷ್ಯಾಶ್ರಮಗಳನ್ನು ಹೊಕ್ಕು ಅಲ್ಲಿನ ಆಚಾರವಂತರ ಸಮೂಹದ ಮನಸ್ಸಿನ ಕುದುರೆಗೆ ಕಡಿವಾಣವನ್ನು ಹಾಕಿದರು, ಎರಡೂ ಕಡೆ ಲಗಾಮನ್ನೆಳೆದರು. ಆ ಋಷಿಗಳ ಬಲಶಾಲಿಯಾದ ಧೈರ್ಯಕ್ಕೆ ತಮ್ಮ ಕಣ್ನೋಟಗಳೆಂಬ ಬಲೆಗಳನ್ನು ವಿಸ್ತಾರವಾಗಿ ಹರಡಿದರು.

ಅರ್ಥ:
ಹೊಕ್ಕು: ಸೇರು; ಆಶ್ರಮ: ಕುಟೀರ; ತುರುಗು: ಹೆಚ್ಚಾಗು, ಎದುರಿಸು; ಅಂತಃಕರಣ: ಮನಸ್ಸು; ತುರಗ: ಕುದುರೆ; ದುಕ್ಕುಡಿ: ಕಡಿವಾಣ; ತಿರುಹು: ತಿರುಗಿಸು; ವಾಘೆ: ಲಗಾಮು; ಸಿಕ್ಕು: ಪಡೆ; ದಾಳಿ: ಲಗ್ಗೆ; ಧೈರ್ಯ: ಎದೆಗಾರಿಕೆ, ಕೆಚ್ಚು; ದಕ್ಕಡ: ಸಮರ್ಥ, ಬಲಶಾಲಿ; ಮನ: ಮನಸ್ಸು; ಹರಹು: ಹರಡು; ಹಾಯ್ಕು: ಇಡು, ಇರಿಸು; ಕಡೆಗಣ್ಣು: ಕುಡಿನೋಟ; ಬಲೆ: ಜಾಲ; ಮುನಿ: ಋಷಿ; ಮೃಗ: ಪ್ರಾಣಿ; ಆವಳಿ: ಗುಂಪು;

ಪದವಿಂಗಡಣೆ:
ಹೊಕ್ಕರ್+ಇವರ್+ಆಶ್ರಮದ +ತುರುಗಿದ
ತಕ್ಕರ್+ಅಂತಃಕರಣ +ತುರಗಕೆ
ದುಕ್ಕುಡಿಯನ್+ಇಕ್ಕಿದರು +ತಿರುಹಿದರ್+ಎರಡು +ವಾಘೆಯಲಿ
ಸಿಕ್ಕಿದವು +ದಾಳಿಯಲಿ +ಧೈರ್ಯದ
ದಕ್ಕಡರ +ಮನ +ಹರಹಿನಲಿ +ಹಾ
ಯಿಕ್ಕಿದರು +ಕಡೆಗಣ್ಣ+ ಬಲೆಗಳ+ ಮುನಿ +ಮೃಗಾವಳಿಗೆ

ಅಚ್ಚರಿ:
(೧) ಗಣಿಕೆಯರ ಕುಡಿನೋಟದ ವರ್ಣನೆ: ಹಾಯಿಕ್ಕಿದರು ಕಡೆಗಣ್ಣ ಬಲೆಗಳ ಮುನಿ ಮೃಗಾವಳಿಗೆ

ಪದ್ಯ ೨೩: ವನದ ಮೇಲೆ ದಾಳಿಯ ಪರಿಣಾಮ ಹೇಗಿತ್ತು?

ದಾಳಿಯಿಟ್ಟರು ಸುರವನಕೆ ಸುರ
ಜಾಲ ಸರಿಯಿತು ಬೊಬ್ಬೆಯಲಿದೆ
ಖ್ಖಾಳಿಸಿದುದುತ್ಪಾತಶತ ಖಾಂಡವದ ಮಧ್ಯದಲಿ
ಕೂಳಿಗಳ ಕುಡಿ ಮೀನವೋಲ್ವಿಹ
ಗಾಳಿ ಹುದುಗಿತು ನಡುಗಿದರು ವನ
ಪಾಲಕರು ನಿಂದೊಣಗಿದವು ಹರಿಚಂದನಾದಿಗಳು (ಆದಿ ಪರ್ವ, ೨೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕೃಷ್ಣಾರ್ಜುನರು ಖಾಂಡವ ವನಕ್ಕೆ ದಾಳಿಯನ್ನಿಟ್ಟರು, ಅಲ್ಲಿದ್ದ ಸುರರು ಹಿಂದಕ್ಕೆ ಸರಿದರು. ಎಲ್ಲೆಲ್ಲೂ ಆರ್ತಧ್ವನಿಯಾಗಿ ಖಾಂಡವವನದ ನಡುವೆ ನೂರಾರು ಅಶುಭಕರ ಶಕುನಗಳು ಕಂಡು ಬಂದವು. ಮೀನು ಹಿಡಿಯುವ ಬುಟ್ಟಿಯಲ್ಲಿ ಸಿಕ್ಕುಬಿದ್ದು ಒದ್ದಾಡುವ ರೀತಿಯಲ್ಲಿ ಹಕ್ಕಿಗಳು ಸಂಕಟದಿಂದ ನಾಶವಾದವು. ವನಪಾಲಕರು ನಡುಗಿದರು, ಹಸಿರಾಗಿದ್ದ ಚಂದನದ ಮರಗಳು ಬಾಡಿದವು.

ಅರ್ಥ:
ದಾಳಿ: ಮುತ್ತಿಗೆ, ಆಕ್ರಮಣ; ಸುರ: ದೇವತೆ; ವನ: ಕಾಡು; ಜಾಲ:ಸಮೂಹ; ಸರಿಯಿತು: ದಾರಿಮಾಡು, ಹಿಂದಕ್ಕೆ ಹೋಗು; ಬೊಬ್ಬೆ:ಜೋರಾಗಿ ಕೂಗು; ದೆಖ್ಖಾಳಿ:ಗೊಂದಲ; ಉತ್ಪಾತ:ಅಪಶಕುನ;ಮಧ್ಯ: ನಡು; ಕೂಳಿ: ಗುಣಿ; ಕುಡಿ:ವಂಶ;ಮೀನು: ಮತ್ಸ್ಯ; ವಿಹಗ: ಪಕ್ಷಿ; ಹುದುಗು:ಮರೆಯಾಗು; ನಡುಗು: ಹೆದರು; ಪಾಲಕ: ರಕ್ಷಕ; ಒಣಗು: ಬಾಡು; ಚಂದನ: ಶ್ರೀಗಂಧ;

ಪದವಿಂಗಡಣೆ:
ದಾಳಿಯಿಟ್ಟರು+ ಸುರ+ವನಕೆ+ ಸುರ
ಜಾಲ +ಸರಿಯಿತು +ಬೊಬ್ಬೆಯಲಿ+ದೆ
ಖ್ಖಾಳಿಸಿದುದ್+ಉತ್ಪಾತ+ಶತ+ ಖಾಂಡವದ+ ಮಧ್ಯದಲಿ
ಕೂಳಿಗಳ+ ಕುಡಿ +ಮೀನವೋಲ್+ವಿಹ
ಗಾಳಿ+ ಹುದುಗಿತು +ನಡುಗಿದರು +ವನ
ಪಾಲಕರು +ನಿಂದ್+ಒಣಗಿದವು +ಹರಿಚಂದನಾದಿಗಳು

ಅಚ್ಚರಿ:
(೧) ದಾಳಿ, ದೆಖ್ಖಾಳಿ, ಕೂಳಿ, ವಿಹಗಾಳಿ – “ಳಿ” ಇಂದ ಕೊನೆಗೊಳ್ಳುವ ಪದ
(೨) ಬೊಬ್ಬೆ, ನಡುಗು – ನೋವಿನ ಸಂದರ್ಭದದ ಭಾವನೆ