ಪದ್ಯ ೯: ಊರ್ವಶಿಯು ಸುಲಭದಲ್ಲಿ ದೊರಕುವವಳೇ?

ಧರಣಿಪತಿ ಕೇಳವರ ತೊತ್ತಿರ
ಹೊರಗೆಲಸದವದಿರ ಪಸಾಯಿತೆ
ಯರಿಗೆ ಪಡಿಗವ ನೀಡಸಲ್ಲರು ಸೋಮಯಾಜಿಗಳು
ವರುಣಸೂನು ಜಯಂತ ನಳಕೂ
ಬರರು ಸಮಯವನೊಮ್ಮೆ ಕಾಣದೆ
ವರುಷವೋಲೈಸುವರು ಸೌಧದ ದಾರವಟ್ಟದಲಿ (ಅರಣ್ಯ ಪರ್ವ, ೯ ಸಂಧಿ, ಪದ್ಯ ೯)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಊರ್ವಶಿಯು ಎಷ್ಟು ದುರ್ಲಭಳೆಂದು, ಅವಳಿರಲಿ, ಅವಳ ಮನೆಯ ಆಳುಗಳ ಸೇವಕಿಯರಿಗಿರಲಿ, ಆ ಸೇವಕಿಯರ ಆಪ್ತ ಸ್ನೇಹಿತೆಯರಿಗೆ ತಾಂಬೂಲವನ್ನುಗುಳಲು ಪೀಕದಾನಿ ಹಿಡಿಯುವುದಕ್ಕೂ ಸೋಮಯಾಗ ಮಾದಿ ಸ್ವರ್ಗಕ್ಕೆ ಬಂದವರಿಗೆ ಸಾಧ್ಯವಿಲ್ಲ. ವರುಣನ ಮಗ, ಜಯಂತ, ನಳಕೂಬರರು ಅವಳನ್ನು ಕಾಣಲು, ಅವಳ ಮನೆಯ ಹೆಬ್ಬಾಗಿಲಲ್ಲಿ ಒಂದು ವರ್ಷ ಕಾಯಬೇಕಾಯಿತು.

ಅರ್ಥ:
ಧರಣಿಪತಿ: ರಾಜ; ಧರಣಿ: ಭೂಮಿ;ತೊತ್ತು: ದಾಸಿ, ಸೇವಕಿ; ಹೊರ: ಆಚೆ; ಕೆಲಸ: ಕಾರ್ಯ; ಪಸಾಯ: ಉಡುಗೊರೆ; ಪಡಿಗ: ತೊಳೆದ ನೀರನ್ನು ಗ್ರಹಿಸುವ ಪಾತ್ರೆ; ನೀಡು: ತೆಗೆದುಕೋ; ಸಲ್ಲ:ಸರಿಯಲ್ಲ, ಯೋಗ್ಯವಲ್ಲದು; ಯಾಜಿ:ಯಾಗವನ್ನು ಮಾಡಿಸುವವನು, ಯಜ್ಞ; ವರುಣ: ನೀರಿನ ಅಧಿದೇವತೆಯೂ ಪಶ್ಚಿಮ ದಿಕ್ಪಾಲಕನೂ ಆಗಿರುವ ಒಬ್ಬ ದೇವತೆ; ಸೂನು: ಮಗ; ಸಮಯ: ಕಾಲ; ವರುಷ: ಸಂವತ್ಸರ; ಓಲೈಸು: ಉಪಚರಿಸು; ಸೌಧ: ಮನೆ; ದಾರವಟ್ಟ: ಹೆಬ್ಬಾಗಿಲು;

ಪದವಿಂಗಡಣೆ:
ಧರಣಿಪತಿ+ ಕೇಳ್+ಅವರ +ತೊತ್ತಿರ
ಹೊರ+ಕೆಲಸದವದಿರ+ ಪಸಾಯಿತೆ
ಯರಿಗೆ +ಪಡಿಗವ +ನೀಡಸಲ್ಲರು+ ಸೋಮಯಾಜಿಗಳು
ವರುಣಸೂನು +ಜಯಂತ +ನಳಕೂ
ಬರರು+ ಸಮಯವನ್+ಒಮ್ಮೆ +ಕಾಣದೆ
ವರುಷವ್+ಓಲೈಸುವರು+ ಸೌಧದ+ ದಾರವಟ್ಟದಲಿ

ಅಚ್ಚರಿ:
(೧) ಹೆಬ್ಬಾಗಿಲೆನ್ನಲು ದಾರವಟ್ಟ ಪದದ ಬಳಕೆ

ಪದ್ಯ ೬೬: ಪಾಂಡವರು ಹೇಗೆ ಹಸ್ತಿನಾಪುರದಿಂದ ಹಿಂದಿರುಗಿದರು?

ಸಾಕು ನೇಮವ ಕೊಡಿಯೆನುತ ಕುಂ
ತೀಕುಮಾರರು ಬೀಳುಕೊಂಡರು
ನೂಕಿ ಹೊಕ್ಕುದು ದಾರವಟ್ಟದಲಿವರ ಪರಿವಾರ
ತೋಕಿದವು ಸೀಗುರಿಗಳೆಡ ಬಲ
ದಾಕೆಯಲಿ ಪಾಂಡವ ಕುಮಾರಾ
ನೀಕ ಬೆರಸಿತು ಗಜತುರಗ ರಥ ಪಾಯದಳ ಸಹಿತ (ಸಭಾ ಪರ್ವ, ೧೬ ಸಂಧಿ, ೬೬ ಪದ್ಯ)

ತಾತ್ಪರ್ಯ:
ಗಾಂಧಾರಿಯ ನುಡಿಗಳನ್ನು ಕೇಳಿ, ನಮಗೆ ಹೊರಡಲು ಅಪ್ಪಣೆ ನೀಡಿ ಎಂದು ಪಾಂದವರು ಧೃತರಾಷ್ಟ್ರ ಗಾಂಧಾರಿಯಿಂದ ಬೀಳ್ಕೊಂಡರು. ಅರಮನೆಯ ಮುಖ್ಯದ್ವಾರದಿಂದ ಹೊರಹೊರಟರು. ಅವರ ಎಡಬಲದಲ್ಲಿ ಚಾಮರಗಳು ಬೀಸುತ್ತಿದ್ದವು. ಅವರ ಎಡಬಲದಲ್ಲಿ ಪಾಂಡವರ ಕುಮಾರರೂ ಸೈನ್ಯವೂ ಬರುತ್ತಿದ್ದವು.

ಅರ್ಥ:
ಸಾಕು: ನಿಲ್ಲು; ನೇಮ: ನಿಯಮ; ಕೊಡಿ: ನೀಡಿ; ಕುಮಾರ:ಪುತ್ರ; ಬೀಳುಕೊಂಡು: ತೆರಳು; ನೂಕು: ತಳ್ಳು; ಹೊಕ್ಕು: ಸೇರು; ದಾರವಟ್ಟ: ಹೆಬ್ಬಾಗಿಲು; ಪರಿವಾರ: ಸುತ್ತಲಿನವರು, ಪರಿಜನ; ತೋಕು: ಪ್ರಯೋಗಿಸು; ಸೀಗುರಿ: ಚಾಮರ, ಚಮರಿ; ಎಡಬಲ: ಸುತ್ತಲು; ಬೆರಸು: ಸಹಿತ, ಒಡನೆ; ಗಜ: ಆನೆ; ತುರಗ: ಕುದುರೆ; ರಥ: ಬಂಡಿ; ಪಾಯದಳ: ಸೈನಿಕ; ಸಹಿತ: ಜೊತೆ;ಆನೀಕ: ಗುಂಪು, ಸೈನ್ಯ;

ಪದವಿಂಗಡಣೆ:
ಸಾಕು+ ನೇಮವ +ಕೊಡಿ+ಎನುತ +ಕುಂ
ತೀ+ಕುಮಾರರು +ಬೀಳುಕೊಂಡರು
ನೂಕಿ+ ಹೊಕ್ಕುದು +ದಾರವಟ್ಟದಲ್+ಇವರ +ಪರಿವಾರ
ತೋಕಿದವು +ಸೀಗುರಿಗಳ್+ಎಡ ಬಲದ್
ಆಕೆಯಲಿ +ಪಾಂಡವ +ಕುಮಾರ
ಅನೀಕ +ಬೆರಸಿತು +ಗಜ+ತುರಗ +ರಥ +ಪಾಯದಳ +ಸಹಿತ

ಅಚ್ಚರಿ:
(೧) ಕುಂತೀ ಕುಮಾರ, ಪಾಂಡವ ಕುಮಾರ – ಪದಗಳ ಬಳಕೆ