ಪದ್ಯ ೧೨: ದುರ್ಯೋಧನನಿಗೆ ಯಾವುದರ ಫಲ ದೊರೆಯಿತು?

ರಾಯನಾಸ್ಥಾನದಲಿ ಖೂಳರ
ರಾಯ ನೀನೇ ಭಂಗಪಡಿಸಿ ನ
ವಾಯದಲಿ ನಿಮ್ಮೂರಿಗೆಮ್ಮೈವರನು ನೀ ಕರಸಿ
ವಾಯದಲಿ ಜೂಜಾಡಿ ಕಪಟದ
ದಾಯದಲಿ ಸೋಲಿಸಿ ಯುಧಿಷ್ಠಿರ
ರಾಯನರಸಿಯ ಸುಲಿಸಿತಕೆ ಫಲವಾಯ್ತೆ ಹೇಳೆಂದ (ಗದಾ ಪರ್ವ, ೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ಖೂಳರ ರಾಜನೇ, ನಿಮ್ಮೂರಿಗೆ ನಮ್ಮೈವರನ್ನು ಕರೆಸಿ, ಜೂಜಾಡಿ, ಮೋಸದ ಲೆಕ್ಕದಿಂದ ನಮ್ಮನ್ನು ಸೋಲಿಸಿ ದ್ರೌಪದಿಯ ವಸ್ತ್ರಾಪಹರಣಕ್ಕೆ ಕೈಹಾಕಿದ ಫಲ ದೊರಕಿತೇ ಹೇಳು ಎಂದು ಭೀಮನು ದುರ್ಯೊಧನನನ್ನು ಕೇಳಿದನು.

ಅರ್ಥ:
ರಾಯ: ರಾಜ; ಆಸ್ಥಾನ: ದರ್ಬಾರು; ಖೂಳ: ದುಷ್ಟ; ಭಂಗ: ಮುರಿ; ನವಾಯ: ಹೊಸದಾದ; ಊರು: ಪಟ್ಟಣ; ಕರಸು: ಬರೆಮಾಡು; ವಾಯ: ಮೋಸ, ಕಪಟ; ಜೂಜು: ಪಗಡೆಯಾಟ; ಕಪಟ: ಮೋಸ; ದಾಯ: ಪಗಡೆಯ ಗರ; ಸೋಲಿಸು: ಪರಾಭವವಾಗು; ಅರಸಿ: ರಾಣಿ; ಸುಲಿ: ತೆಗೆ, ಕಳಚು; ಫಲ: ಪ್ರಯೋಜನ; ಹೇಳು: ತಿಳಿಸು;

ಪದವಿಂಗಡಣೆ:
ರಾಯನ್+ಆಸ್ಥಾನದಲಿ +ಖೂಳರ
ರಾಯ +ನೀನೇ +ಭಂಗಪಡಿಸಿ +ನ
ವಾಯದಲಿ +ನಿಮ್ಮೂರಿಗ್+ಎಮ್ಮೈವರನು +ನೀ +ಕರಸಿ
ವಾಯದಲಿ +ಜೂಜಾಡಿ +ಕಪಟದ
ದಾಯದಲಿ +ಸೋಲಿಸಿ +ಯುಧಿಷ್ಠಿರ
ರಾಯನ್+ಅರಸಿಯ +ಸುಲಿಸಿತಕೆ +ಫಲವಾಯ್ತೆ+ ಹೇಳೆಂದ

ಅಚ್ಚರಿ:
(೧) ನವಾಯ, ವಾಯ, ದಾಯ, ರಾಯ – ಪ್ರಾಸ ಪದಗಳು
(೨) ದುರ್ಯೋಧನನನ್ನು ಖೂಳರ ರಾಯ ಎಂದು ಕರೆದಿರುವುದು

ಪದ್ಯ ೫೦: ಪಾಂಡವರಲ್ಲಿರುವ ಶ್ರೇಷ್ಠವಾದ ಆಯುಧವಾವುದು?

ತಾಯೆ ಬೇಡೌ ವರವ ತಾನ
ನ್ಯಾಯದಲಿ ನಿಮ್ಮನು ನಿರರ್ಥಕ
ನೋಯಿಸಿದೆನದ ನೆನೆಯದಿರಿ ಸರ್ವಾಪರಾಧವನು
ದಾಯಗೆಡೆ ನಿನ್ನವರು ಕೊಲುವರೆ
ಕಾಯಲಾಪವರುಂಟೆ ವರಸ
ತ್ಯಾಯುಧರಲೇ ನೀವೆನುತತಿಳುಹಿದನು ಧೃತರಾಷ್ಟ್ರ (ಸಭಾ ಪರ್ವ, ೧೬ ಸಂಧಿ, ೫೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ದ್ರೌಪದಿಯನ್ನು ಸಂತೈಸುತ್ತಾ, ತಾಯೇ ನಾನು ನಿಮ್ಮನ್ನು ನಿರರ್ಥಕವಾಗಿ ಅನ್ಯಾಯದಿಂದ ನೋಯಿಸಿದೆ, ನನ್ನ ಸರ್ವಾಪರಾಧಗಳನ್ನು ನೆನೆಯಬೇಡಿರಿ, ಒಂದುವೇಳೆ ಲೆಕ್ಕದಪ್ಪಿ ನಿನ್ನ ಪತಿಗಳು ಕೊಲ್ಲಲು ಅಣಿಯಾಗಿದ್ದರೆ, ಕಾಯುವವರೇ ಇರುತ್ತಿರಲಿಲ್ಲ. ನಿಮಗೆ ಸತ್ಯವೇ ಆಯುಧ, ಆದುದರಿಂದ ನೀನು ವರವನ್ನು ಬೇಡು ನಾನು ನೀಡುತ್ತೇನೆ ಎಂದು ಧೃತರಾಷ್ಟ್ರನು ಹೇಳಿದನು.

ಅರ್ಥ:
ತಾಯೆ: ಮಾತೆ; ಬೇಡು: ಕೇಳಿಕೋ; ವರ: ಅನುಗ್ರಹ, ಕೊಡುಗೆ; ಅನ್ಯಾಯ: ಯೋಗ್ಯವಲ್ಲದ; ನಿರರ್ಥಕ: ಅರ್ಥವಿಲ್ಲದೆ; ನೋಯಿಸು: ತೊಂದರೆ ನೀಡು; ನೆನೆ: ಜ್ಞಾಪಿಸು; ಸರ್ವ: ಎಲ್ಲಾ; ಅಪರಾಧ: ತಪ್ಪುಗಳು; ದಾಯ: ಸಮತೋಲನ, ಆಯ; ಕೊಲು: ಕೊಂದುಹಾಕು, ಸಾಯಿಸು; ಕಾಯಲಾಪು: ಕಾಯಲು ಶಕ್ತನಾಗು; ವರ: ಶ್ರೇಷ್ಠ; ಸತ್ಯ: ನಿಜ, ದಿಟ; ಆಯುಧ: ಶಸ್ತ್ರ; ತಿಳುಹು: ಹೇಳು;

ಪದವಿಂಗಡಣೆ:
ತಾಯೆ +ಬೇಡೌ+ ವರವ +ತಾನ್
ಅನ್ಯಾಯದಲಿ +ನಿಮ್ಮನು +ನಿರರ್ಥಕ
ನೋಯಿಸಿದೆನ್+ಅದ+ ನೆನೆಯದಿರಿ +ಸರ್ವ+ಅಪರಾಧವನು
ದಾಯಗೆಡೆ +ನಿನ್ನವರು +ಕೊಲುವರೆ
ಕಾಯಲಾಪವರುಂಟೆ +ವರಸ
ತ್ಯಾಯುಧರಲೇ+ ನೀವೆನುತ +ತಿಳುಹಿದನು +ಧೃತರಾಷ್ಟ್ರ

ಅಚ್ಚರಿ:
(೧) ನ ಕಾರದ ತ್ರಿವಳಿ ಪದಗಳು – ನಿಮ್ಮನು ನಿರರ್ಥಕನೋಯಿಸಿದೆನದ ನೆನೆಯದಿರಿ

ಪದ್ಯ ೧೬: ಸಹದೇವನ ನಂತರ ಧರ್ಮರಾಯನು ಯಾರನ್ನು ಪಣಕ್ಕೆ ಒಡ್ಡಿದನು?

ಹರಿಬದಲಿ ತನ್ನಖಿಳ ವಸ್ತೂ
ತ್ಕರವ ಮರಳಿಚುವನು ಮಹೀಪತಿ
ಕಿರಿಯ ತಮ್ಮನವೊಡ್ಡಿದನು ಮಾದ್ರೀ ಕುಮಾರಕನ
ಅರಸು ದಾಯವೆ ಬಾ ಜಯಾಂಗದ
ಸಿರಿಯೆ ಬಾ ಕುರುರಾಯ ರಾಜೋ
ತ್ಕರದ ಸಿದ್ಧಿಯೆ ಬಾಯೆನುತ ಗರ್ಜಿಸಿದನಾ ಶಕುನಿ (ಸಭಾ ಪರ್ವ, ೧೫ ಸಂಧಿ, ೧೬ ಪದ್ಯ)

ತಾತ್ಪರ್ಯ:
ಸಹದೇವನನ್ನು ಸೋತ ಮೇಲೆ ಶಕುನಿಯು ದಾಳಗಳನ್ನು ಹೊಸೆದು, ಈ ಹಲಗೆಯಲ್ಲಿ ಯುಧಿಷ್ಠಿರನು ಸೋತ ಎಲ್ಲವನ್ನೂ ಗೆಲ್ಲಲು ಕಿರಿಯ ತಮ್ಮನನ್ನು ಒಡ್ಡಿದ್ದಾನೆ, ನನ್ನ ರಾಜಾ, ಗರವೆ ಬಾ, ಜಯಲಕ್ಷ್ಮಿಯೇ ಬಾ, ಕೌರವನ ಉನ್ನತಿಯ ಸಿದ್ಧಿಯೇ ಬಾ ಎಂದು ಶಕುನಿಯು ಗರ್ಜಿಸಿದನು.

ಅರ್ಥ:
ಹರಿಬ: ಕೆಲಸ, ಕಾರ್ಯ, ಯುದ್ಧ; ಅಖಿಳ: ಎಲ್ಲಾ; ವಸ್ತು: ಸಾಮಗ್ರಿ; ಉತ್ಕರ: ಸಮೂಹ; ಮರಳಿ: ಮತ್ತೆ, ಪುನಃ; ಮಹೀಪತಿ: ರಾಜ; ಕಿರಿಯ: ಚಿಕ್ಕ; ತಮ್ಮ: ಸಹೋದರ; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಕುಮಾರ: ಪುತ್ರ; ಅರಸ: ರಾಜ; ದಾಯ: ಪಗಡೆಯ ಗರ; ಜಯ: ಗೆಲುವು; ಜಯಾಂಗದಸಿರಿ: ಜಯಲಕ್ಷ್ಮಿ; ಉತ್ಕರ: ಉನ್ನತಿ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಬಾ: ಆಗಮಿಸು; ಗರ್ಜಿಸು: ಜೋರಾಗಿ ಕೂಗು;

ಪದವಿಂಗಡಣೆ:
ಹರಿಬದಲಿ+ ತನ್+ಅಖಿಳ +ವಸ್ತು
ಉತ್ಕರವ +ಮರಳಿಚುವನು+ ಮಹೀಪತಿ
ಕಿರಿಯ +ತಮ್ಮನವ್+ಒಡ್ಡಿದನು +ಮಾದ್ರೀ +ಕುಮಾರಕನ
ಅರಸು +ದಾಯವೆ +ಬಾ +ಜಯಾಂಗದ
ಸಿರಿಯೆ +ಬಾ +ಕುರುರಾಯ +ರಾಜ
ಉತ್ಕರದ+ ಸಿದ್ಧಿಯೆ+ ಬಾ+ಎನುತ +ಗರ್ಜಿಸಿದನಾ +ಶಕುನಿ

ಅಚ್ಚರಿ:
(೧) ಶಕುನಿಯು ದಾಳವನ್ನು ಹಾಕುವ ಪರಿ – ಅರಸು ದಾಯವೆ ಬಾ ಜಯಾಂಗದ
ಸಿರಿಯೆ ಬಾ ಕುರುರಾಯ ರಾಜೋತ್ಕರದ ಸಿದ್ಧಿಯೆ ಬಾಯೆನುತ ಗರ್ಜಿಸಿದನಾ ಶಕುನಿ

ಪದ್ಯ ೬೫: ಶಕುನಿಯು ದಾಳವನ್ನು ಹೇಗೆ ಹಾಕಿದನು?

ಆಯಿತಿದು ಪಣವಹುದಲೇ ನೃಪ
ಹಾಯಿಕಾ ಹಾಸಂಗಿಗಳ ಸಾ
ಹಾಯ ಕುರುಪತಿಗಿಲ್ಲ ಕೃಷ್ಣಾದಿಗಳು ನಿನ್ನವರು
ದಾಯ ಕಂದೆರೆವರೆ ಸುಯೋಧನ
ರಾಯನುಪಚಿತ ಪುಣ್ಯವಕಟಾ
ದಾಯವೇ ಬಾಯೆಂದು ಮಿಗೆ ಬೊಬ್ಬಿರಿದನಾ ಶಕುನಿ (ಸಭಾ ಪರ್ವ, ೧೪ ಸಂಧಿ, ೬೫ ಪದ್ಯ)

ತಾತ್ಪರ್ಯ:
ಪಣವನ್ನಿಟ್ಟ ಧರ್ಮರಾಯನನ್ನು ನೋಡಿ, ಶಕುನಿಯು ಇದೇ ಪಣವಾಗಲಿ, ರಾಜ ದಾಳಗಳನ್ನು ಹಾಕು ಕೃಷ್ಣನೇ ಮೊದಲಾದವರು ನಿನ್ನ ಸಹಾಯಕ್ಕಿದ್ದಾರೆ. ದುರ್ಯೋಧನನಿಗೆ ಸಹಾಯ ಮಾಡುವವರೇ ಇಲ್ಲ. ಗರಗಳು ಕಣ್ಣು ತೆರೆದರೆ ದುರ್ಯೋಧನನು ಕೂಡಿಸಿಟ್ಟ ಪುಣ್ಯದ ಫಲ ಕೈಗೂಡಿದಂತೆ. ಗರವೇ ಬಾ ಎಂದು ಶಕುನಿಯು ಜೋರಾಗಿ ಕೂಗಿದನು.

ಅರ್ಥ:
ಆಯಿತು: ಮುಗಿಯಿತು; ಪಣ:ಜೂಜಿಗೆ ಒಡ್ಡಿದ ವಸ್ತು, ಬಾಜಿ; ನೃಪ: ರಾಜ; ಹಾಯಿಕು: ಹಾಕು; ಹಾಸಂಗಿ: ಜೂಜಿನ ದಾಳ, ಲೆತ್ತ; ಸಾಹಾಯ: ಸಹಾಯ, ನೆರವು; ಆದಿ: ಮೊದಲಾದ; ದಾಯ: ಪಗಡೆಯ ಗರ; ಕಂದೆರೆವ: ಕಣ್ಣು ಬಿಡು; ರಾಯ: ರಾಜ; ಉಪಚಿತ: ಯೋಗ್ಯ; ಪುಣ್ಯ: ಒಳ್ಳೆಯ ಕಾರ್ಯ; ಅಕಟ: ಅಯ್ಯೋ; ಮಿಗೆ: ಹೆಚ್ಚು; ಬೊಬ್ಬಿರಿ: ಕೂಗು;

ಪದವಿಂಗಡಣೆ:
ಆಯಿತಿದು+ ಪಣವ್+ಅಹುದಲೇ +ನೃಪ
ಹಾಯಿಕಾ +ಹಾಸಂಗಿಗಳ+ ಸಾ
ಹಾಯ +ಕುರುಪತಿಗಿಲ್ಲ+ ಕೃಷ್ಣಾದಿಗಳು+ ನಿನ್ನವರು
ದಾಯ +ಕಂದೆರೆವರೆ+ ಸುಯೋಧನ
ರಾಯನ್+ಉಪಚಿತ +ಪುಣ್ಯವ್+ಅಕಟ್+ಆ
ದಾಯವೇ +ಬಾ+ಎಂದು +ಮಿಗೆ +ಬೊಬ್ಬಿರಿದನಾ +ಶಕುನಿ

ಅಚ್ಚರಿ:
(೧) ಶಕುನಿಯ ಆಟವನ್ನು ಚಿತ್ರಿಸುವ ಪರಿ – ಆ ದಾಯವೇ ಬಾಯೆಂದು ಮಿಗೆ ಬೊಬ್ಬಿರಿದನಾ ಶಕುನಿ
(೨) ಸಾಹಾಯ, ದಾಯ, ರಾಯ – ಪ್ರಾಸ ಪದಗಳು
(೩) ದುರ್ಯೋಧನನು ನಿಮ್ಮನ್ನು ಸೋಲಿಸಲು ದ್ಯೂತವೇ ಮಾರ್ಗ ಎಂದು ಸೂಚಿಸುವ ಪರಿ – ದಾಯ ಕಂದೆರೆವರೆ ಸುಯೋಧನರಾಯನುಪಚಿತ ಪುಣ್ಯ

ಪದ್ಯ ೧೯: ಸಂತಸಗೊಂಡ ಭೀಮನು ವಿಶೋಕನಿಗೆ ಏನು ಹೇಳಿದ?

ರಾಯ ಹದುಳಿಸಿದನೆ ಮಹಾದೇ
ವಾಯಿದೆತ್ತಣ ಪುಣ್ಯವೋ ರಣ
ದಾಯಸವ ಸೈರಿಸಿದ ತನಗಿದು ಸಫಲವಾಯಿತಲ
ದಾಯ ಬಂದುದು ನಮಗೆ ಹೋ ಲೇ
ಸಾಯಿತೇಳು ವಿಶೋಕ ಸಾಕುಳಿ
ದಾಯುಧದ ಪರಿಗಣಿತವನು ಹೇಳೆಂದನಾ ಭೀಮ (ಕರ್ಣ ಪರ್ವ, ೧೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ಭೀಮನು ಸಂತಸಗೊಂಡು ಮಹಾದೇವ, ಅಣ್ಣನು ಎಚೆತ್ತು ಮತ್ತೆ ಮೊದಲಿನಂತಾದನೇ! ಇದು ಯಾವ ಪುಣ್ಯದ ಫಲವೋ! ಯುದ್ಧದಲ್ಲಿ ನಾನು ಪಟ್ಟ ಕಷ್ಟ, ಸೈರಿಸಿದ ಆಯಾಸ ಸಫಲವಾಯಿತಲ್ಲಾ! ಈ ಬಾರಿ ದಾಳವು ನಮ್ಮಂತೆ ಬಿತ್ತು, ತನ್ನ ಸಾರಥಿಯಾದ ವಿಶೋಕನಿಗೆ ಆಯುಧಗಳ ಲೆಕ್ಕವನ್ನು ತಿಳಿಸಲು ಹೇಳಿದನು.

ಅರ್ಥ:
ರಾಯ: ರಾಜ; ಹದುಳ: ಸೌಖ್ಯ, ಕ್ಷೇಮ; ಎತ್ತಣ: ಎಲ್ಲಿಯ; ಪುಣ್ಯ: ಸದಾಚಾರ; ರಣ:ಯುದ್ಧಭೂಮಿ; ಆಯಸ: ಆಯಾಸ, ಬಳಲಿಕೆ; ಸೈರಿಸು: ತಾಳು, ಸಹಿಸು; ಸಫಲ: ಸಾರ್ಥಕವಾದುದು; ದಾಯ: ದಾಳ, ಗರ, ಸಮಯ, ಅವಕಾಶ; ಬಂದು: ಆಗಮಿಸು; ಲೇಸು: ಒಳಿತು; ವಿಶೋಕ: ಶೋಕರಹಿತ, ಭೀಮನ ಸಾರಥಿ; ಸಾಕು: ಇನ್ನು ಬೇಡ, ನಿಲ್ಲಿಸು; ಉಳಿದ: ಮಿಕ್ಕ; ಆಯುಧ: ಶಸ್ತ್ರ; ಪರಿಗಣಿತ: ಲೆಕ್ಕ;

ಪದವಿಂಗಡಣೆ:
ರಾಯ +ಹದುಳಿಸಿದನೆ +ಮಹಾದೇವ
ಆಯಿತ್+ಎತ್ತಣ +ಪುಣ್ಯವೋ +ರಣದ್
ಆಯಸವ +ಸೈರಿಸಿದ +ತನಗಿದು+ ಸಫಲವಾಯಿತಲ
ದಾಯ+ ಬಂದುದು +ನಮಗೆ +ಹೋ +ಲೇ
ಸಾಯಿತ್+ಏಳು +ವಿಶೋಕ +ಸಾಕ್+ಉಳಿದ್
ಆಯುಧದ +ಪರಿಗಣಿತವನು +ಹೇಳೆಂದನಾ +ಭೀಮ

ಅಚ್ಚರಿ:
(೧) ವಿಶೋಕ – ಭೀಮನ ಸಾರಥಿಯ ಉಲ್ಲೇಖ
(೨) ಭಾವನೆಯನ್ನು ಸೂಚಿಸುವ ಪದ – ಹೋ, ಮಹಾದೇವ

ಪದ್ಯ ೧೦: ಮುಕ್ತಿರಾಜ್ಯವನ್ನು ಹೇಗೆ ವಶಪಡಿಸಿಕೊಳ್ಳಬೇಕು?

ಕಾಯವಿದು ನೆಲೆಯಲ್ಲ ಸಿರಿತಾ
ಮಾಯರೂಪಿನ ಮೃತ್ಯು ದೇವತೆ
ಬಾಯಬಿಡುತಿಹಳಾವುದೀತನ ಕಾಲಗತಿಯೆಂದು
ದಾಯವರಿತು ಮಹಾತ್ಮರಿದಕೆ ಸ
ಹಾಯ ಧರ್ಮವ ವಿರಚಿಸುತ ನಿ
ರ್ದಾಯದಲಿ ಕೈ ಸೂರೆಗೊಂಬುದು ಮುಕ್ತಿ ರಾಜ್ಯವನು (ಉದ್ಯೋಗ ಪರ್ವ, ೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಈ ದೇಹವು ಶಾಶ್ವತವಲ್ಲ. ಐಶ್ವರ್ಯವು ಮಾಯರೂಪವಾಗಿರುವು ಮೃತ್ಯು ದೇವತೆ, ಇದು ಬಾಯಿಬಿಡುತ್ತಾ ಇವನ ಕಾಲವೆಂದು ಕೊನೆಗೊಳ್ಳುತ್ತದೆ ಎಂದು ಕಾಯುತ್ತಿದಾಳೆ. ಈ ವ್ಯೂಹವನ್ನು ಯಾವ ಲೆಕ್ಕದಿಂದ ದಾಟಬೇಕು ಎಂದರಿತ ಮಹಾತ್ಮರು, ಧರ್ಮದ ಸಹಾಯದಿಂದ ಜೀವನವನ್ನು ರೂಪಿಸಿಕೊಂಡು, ಮೋಕ್ಷದ ಸ್ಥಾನಕ್ಕೆ ನಿರ್ದಾಕ್ಷಿಣ್ಯದಿಂದ ವಶಪಡಿಸಿಕೊಳ್ಳಬೇಕು.

ಅರ್ಥ:
ಕಾಯ: ದೇಹ; ನೆಲೆ: ಆಶ್ರಯ, ವಾಸಸ್ಥಾನ; ಸಿರಿ: ಐಶ್ವರ್ಯ; ಮಾಯ: ಇಂದ್ರಜಾಲ; ರೂಪ: ಆಕಾರ; ಮೃತ್ಯು: ಸಾವು; ದೇವತೆ: ದೇವಿ; ಬಾಯಿ: ಮುಖದ ಅಂಗ; ಬಿಡು: ಅಡೆಯಿಲ್ಲದಿರು ; ಕಾಲ: ಸಮಯ, ಸಾವು; ದಾಯ: ರೀತಿ; ಪಾಲು; ಅರಿ: ತಿಳಿ; ಮಹಾತ್ಮ: ಶ್ರೇಷ್ಠ; ಸಹಾಯ: ನೆರವು; ಧರ್ಮ: ಧಾರಣೆ ಮಾಡಿರುವುದು; ವಿರಚಿಸು: ಕಟ್ಟು, ನಿರ್ಮಿಸು; ನಿರ್ದಾಯದ: ಅಖಂಡ; ಕೈ: ಕರ; ಸೂರೆ: ಸುಲಿಗೆ; ಮುಕ್ತಿ: ಮೋಕ್ಷ; ರಾಜ್ಯ: ದೇಶ;

ಪದವಿಂಗಡಣೆ:
ಕಾಯವಿದು +ನೆಲೆಯಲ್ಲ +ಸಿರಿ+ತಾ+
ಮಾಯ+ರೂಪಿನ +ಮೃತ್ಯು +ದೇವತೆ
ಬಾಯಬಿಡುತಿಹಳ್ +ಆವುದೀತನ+ ಕಾಲಗತಿಯೆಂದು
ದಾಯವರಿತು +ಮಹಾತ್ಮರ್+ಇದಕೆ +ಸ
ಹಾಯ +ಧರ್ಮವ +ವಿರಚಿಸುತ+ ನಿ
ರ್ದಾಯದಲಿ +ಕೈ +ಸೂರೆಗೊಂಬುದು+ ಮುಕ್ತಿ +ರಾಜ್ಯವನು

ಅಚ್ಚರಿ:
(೧) ಕಾಯ, ಮಾಯ, ದಾಯ, ಸಹಾಯ, ನಿರ್ದಾಯ, ಬಾಯ – ಪ್ರಾಸ ಪದಗಳು
(೨) ಕಾಲ, ಮೃತ್ಯು – ಸಮನಾರ್ಥಕ ಪದ