ಪದ್ಯ ೫೧: ದುರ್ಯೋಧನನ ಜನನಕ್ಕೆ ಬ್ರಾಹ್ಮಣರು ಯಾವ ಫಲಗತಿಯನ್ನು ಹೇಳಿದರು?

ಕರೆಸಿದನು ಧೃತರಾಷ್ಟ್ರನವನೀ
ಸುರರ ಬೆಸಗೊಂಡನು ಕುಮಾರನ
ದರುಶನದ ಸಮನಂತರದಲುತ್ಪಾತ ಫಲಗತಿಯ
ಭರತ ವಂಶವನುಳಿದ ಭೂಮೀ
ಶ್ವರರನಂತವನೀತನೇ ಸಂ
ಹರಿಸುವನು ಸಂದೇಹವಿದಕೇನೆಂದರಾ ದ್ವಿಜರು (ಆದಿ ಪರ್ವ, ೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಬ್ರಾಹ್ಮಣರನ್ನು ಕರೆಸಿ, ತನ್ನ ಮಗನ ಮುಖದರ್ಶನಾನಂತರ ಕಾಣಿಸಿಕೊಂಡ ಅಪಶಕುನಗಳ ಫಲವೇನೆಂದು ಕೇಳಿದನು ಬ್ರಾಹ್ಮಣರು ಭರತವಂಶವನ್ನು ಉಳಿದ ಕ್ಷತ್ರಿಯರನ್ನೂ ಈತನೇ ಕೊಲ್ಲುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹೇಳಿದರು.

ಅರ್ಥ:
ಕರೆಸು: ಬರೆಮಾಡು; ಅವನೀಸುರರು: ಬ್ರಾಹ್ಮಣರು; ಬೆಸಸು: ಹೇಳು; ಕುಮಾರ: ಮಗ; ದರುಶನ: ನೋಟ; ನಂತರ: ಆಮೇಲೆ; ಉತ್ಪಾತ: ಅಪಶಕುನ; ಫಲ: ಪ್ರಯೋಜನ; ವಂಶ: ಕುಲ; ಉಳಿದ: ಮಿಕ್ಕ; ಭೂಮೀಶ್ವರ: ರಾಜ; ಸಂಹರಿಸು: ನಾಶಮಾಡು; ಸಂದೇಹ: ಅನುಮಾನ; ದ್ವಿಜ: ಬ್ರಾಹ್ಮಣ; ಅಂತ: ಕೊನೆ;

ಪದವಿಂಗಡಣೆ:
ಕರೆಸಿದನು +ಧೃತರಾಷ್ಟ್ರನ್+ಅವನೀ
ಸುರರ +ಬೆಸಗೊಂಡನು +ಕುಮಾರನ
ದರುಶನದ +ಸಮನಂತರದಲ್+ಉತ್ಪಾತ +ಫಲಗತಿಯ
ಭರತ +ವಂಶವನ್+ಉಳಿದ +ಭೂಮೀ
ಶ್ವರರನ್+ಅಂತವನ್+ಈತನೇ +ಸಂ
ಹರಿಸುವನು +ಸಂದೇಹವಿದಕೇನ್+ಎಂದರಾ+ ದ್ವಿಜರು

ಅಚ್ಚರಿ:
(೧) ಅವನೀಸುರ, ದ್ವಿಜ – ಸಮಾನಾರ್ಥಕ ಪದ

ಪದ್ಯ ೫೨: ಯಾವುದು ಶ್ರೇಷ್ಠವಾದ ಧರ್ಮ?

ಹರಿಯೆ ಚಿತ್ತಯಿಸೈಯಹಿಂಸಾ
ಪರಮಧರ್ಮವು ಎಂಬ ವಾಕ್ಯದ
ಸರಣಿ ಸಾರೋದ್ಧಾರವಲ್ಲಾ ಸಕಲದರುಶನಕೆ
ನೆರವಿಯಿನಿಬರ ತನ್ನವರ ಕೊರ
ಳರಿತದಲಿ ಕೊಕ್ಕರಿಸದಿರ್ದಡೆ
ನರಕದೊಳು ನೂರೊಂದು ಕುಲ ಮುಳುಗಾಡದಿರದೆಂದ (ಭೀಷ್ಮ ಪರ್ವ, ೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನೇ ಕೇಳು, ಅಹಿಂಸೆಯೇ ಅತಿ ಶ್ರೇಷ್ಠವಾದ ಧರ್ಮ ಎಂಬುದು ಹಿಂದಿನಿಂದಲೂ ಎಲ್ಲ ದರ್ಶನಗಳ ಸಾರವಾಗಿದೆ. ತನ್ನವರನ್ನೂ, ಸಕಲ ಸೈನ್ಯವನ್ನೂ ಸಂಹರಿಸಿದರೆ ನೂರೊಂದು ಕುಲಗಳು ನರಕದಲ್ಲಿ ಮುಳುಗುವುದಿಲ್ಲವೇ ಎಂದು ಅರ್ಜುನನು ಪ್ರಶ್ನಿಸಿದನು.

ಅರ್ಥ:
ಹರಿ: ಕೃಷ್ಣ; ಚಿತ್ತಯಿಸು: ಗಮನವಿಟ್ಟು ಕೇಳು; ಅಹಿಂಸೆ: ನೋವಿಲ್ಲದ; ಪರಮ: ಶ್ರೇಷ್ಠ; ಧರ್ಮ: ನಡತೆ; ವಾಕ್ಯ: ನುಡಿ; ಸರಣಿ: ಹಾದಿ; ಸಾರ: ಸತ್ವ; ಉದ್ಧಾರ: ಮೇಲಕ್ಕೆ ಎತ್ತುವುದು; ಸಕಲ: ಎಲ್ಲಾ; ದರುಶನ: ಅವಲೋಕನ; ನೆರವಿ: ಗುಂಪು; ಇನಿಬರು: ಇಷ್ಟು ಜನ; ಕೊರಳು: ಗಂಟಲು;ಆರಿ: ಕತ್ತರಿಸು; ಕೊಕ್ಕರಿಸು: ಅಸಹ್ಯಪಡು; ನರಕ: ಅಧೋಲೋಕ; ಕುಲ: ವಂಶ; ಮುಳುಗು: ಮರೆಯಾಗು;

ಪದವಿಂಗಡಣೆ:
ಹರಿಯೆ +ಚಿತ್ತಯಿಸೈ+ಅಹಿಂಸಾ
ಪರಮಧರ್ಮವು +ಎಂಬ +ವಾಕ್ಯದ
ಸರಣಿ +ಸಾರ+ಉದ್ಧಾರವಲ್ಲಾ +ಸಕಲ+ದರುಶನಕೆ
ನೆರವಿ+ಇನಿಬರ+ ತನ್ನವರ+ ಕೊರಳ್
ಅರಿತದಲಿ +ಕೊಕ್ಕರಿಸದಿರ್ದಡೆ
ನರಕದೊಳು +ನೂರೊಂದು +ಕುಲ +ಮುಳುಗಾಡದಿರದೆಂದ

ಅಚ್ಚರಿ:
(೧) ಎಲ್ಲಾ ದರ್ಶನದ ಸಾರ: ಅಹಿಂಸಾ ಪರಮಧರ್ಮವು

ಪದ್ಯ ೮೫: ಧರ್ಮಜನು ಕೃಷ್ಣನಲ್ಲಿ ಏನು ಬೇಡಿದನು?

ಆದುದಭಿಮನ್ಯುವಿನ ಮದುವೆ ಮ
ಹಾ ದಯಾಂಬುಧಿ ಕೃಷ್ಣರಾಯನ
ಪಾದದರುಶನವಾಗಲಿಮ್ಮಡಿಸಿತ್ತು ನಮ್ಮುದಯ
ಮೇದಿನಿಯ ನಾವೊತ್ತೆಯಿಟ್ಟೆವು
ಕಾದುಕೊಂಡೆವು ಸತ್ಯವನು ಮೇ
ಲಾದ ಹದನನು ಕರುಣಿಸೆಂದನು ಭೂಪ ನರಯಣಗೆ (ವಿರಾಟ ಪರ್ವ, ೧೧ ಸಂಧಿ, ೮೫ ಪದ್ಯ)

ತಾತ್ಪರ್ಯ:
ಅಭಿಮನ್ಯುವಿನ ವಿವಾಹಾನಂತರ ಕೃಷ್ಣನಲ್ಲಿ ಧರ್ಮಜನು, ಅಭಿಮನ್ಯುವಿನ ವಿವಾಹವು ಸಾಂಗವಾಗಿ ನೆರವೇರಿತು, ಶ್ರೀಕೃಷ್ಣನ ದರ್ಶನಮಾತ್ರದಿಂದ ನಮ್ಮ ಏಳಿಗೆಯ ವೇಗವು ಇಮ್ಮಡಿಯಾಯಿತು, ಭೂಮಿಯನ್ನು ಕೌರವನಿಗೆ ಅಡವಿಟ್ಟಿದ್ದರೂ, ನಾವು ಸತ್ಯವನ್ನು ರಕ್ಷಣೆ ಮಾಡಿಕೊಂಡೆವು ಎಂದು ಆಲೋಚಿಸಿ, ಮುಂದಿನ ಕಾರ್ಯಭಾರವನ್ನು ಕರುಣೆಯಿಂದ ಅಪ್ಪಣೆ ಕೊಡಿಸು ಎಂದು ಬೇಡಿದನು.

ಅರ್ಥ:
ಮದುವೆ: ವಿವಾಹ; ಮಹಾ: ಶ್ರೇಷ್ಠ; ದಯಾಂಬುಧಿ: ಕರುಣಾಸಾಗರ; ಅಂಬುಧಿ: ಸಾಗರ; ರಾಯ: ರಾಜ; ಪಾದ: ಚರಣ; ದರುಶನ: ನೋಟ; ಇಮ್ಮಡಿ: ಎರಡುಪಟ್ಟು; ಉದಯ: ಏಳಿಗೆ; ಮೇದಿನಿ: ಭೂಮಿ; ಒತ್ತೆ:ಅಡವು; ಕಾದು: ಕಾಪಾಡು; ಸತ್ಯ: ದಿಟ; ಮೇಲಾದ: ಮೊದಲು ನಡೆದ; ಹದ: ಸ್ಥಿತಿ; ಕರುಣಿಸು: ದಯೆತೋರು; ಭೂಪ: ರಾಜ;

ಪದವಿಂಗಡಣೆ:
ಆದುದ್+ಅಭಿಮನ್ಯುವಿನ +ಮದುವೆ +ಮ
ಹಾ +ದಯಾಂಬುಧಿ +ಕೃಷ್ಣ+ರಾಯನ
ಪಾದ+ದರುಶನವಾಗಲ್+ಇಮ್ಮಡಿಸಿತ್ತು +ನಮ್ಮುದಯ
ಮೇದಿನಿಯ +ನಾವೊತ್ತೆಯಿಟ್ಟೆವು
ಕಾದುಕೊಂಡೆವು+ ಸತ್ಯವನು+ ಮೇ
ಲಾದ +ಹದನನು +ಕರುಣಿಸೆಂದನು +ಭೂಪ +ನರಯಣಗೆ

ಅಚ್ಚರಿ:
(೧) ಕೃಷ್ಣನನ್ನು ಹೊಗಳುವ ಪರಿ – ಮಹಾ ದಯಾಂಬುಧಿ ಕೃಷ್ಣರಾಯ

ಪದ್ಯ ೧೩: ಪಾಂಡವರ ಆಯಾಸ ಹೇಗೆ ದೂರವಾಯಿತು?

ಮರಳಿ ಕಾಮ್ಯಕವನದ ದಳ ಮಂ
ದಿರವನೇ ನೆಲೆ ಮಾಡಿದೆವು ವಿ
ಸ್ತರಣವಿದು ಹಿಂದಾದ ವಿಪಿನಾಂತರ ಪರಿಭ್ರಮದಿ
ಕರುಣಿ ನಿಮ್ಮಡಿಯಂಘ್ರಿಕಮಲದ
ದರುಶನದಿನಾಯಾಸ ಪಾರಂ
ಪರೆಗೆ ಬಿಡುಗಡೆಯಾಯ್ತೆನುತ ಮೈಯಿಕ್ಕಿದನು ಭೂಪ (ಅರಣ್ಯ ಪರ್ವ, ೧೫ ಸಂಧಿ, ೧೩ ಪದ್ಯ)

ತಾತ್ಪರ್ಯ:
ಹೇ ಕೃಷ್ಣ, ನಾವು ಮತ್ತೆ ಕಾಮ್ಯಕವನದಲ್ಲೇ ಬೀಡು ಬಿಟ್ಟೆವು. ನಮ್ಮ ವನವಾಸದ ತಿರುಗಾಟದ ವಿವರವದು. ಎಲೈ ಕರುಣಾಶಾಲಿಯೇ, ನಿಮ್ಮ ಪಾದಕಮಲಗಳ ದರುಶನದಿಂದ ನಮ್ಮ ಆಯಾಸ ಪರಂಪರೆ ಕೊನೆಗೊಂಡಿತು ಎಂದು ಹೇಳಿ ಧರ್ಮಜನು ಶ್ರೀಕೃಷ್ಣನ ಪಾದಗಳಿಗೆ ನಮಸ್ಕರಿಸಿದನು.

ಅರ್ಥ:
ಮರಳಿ: ಮತ್ತೆ, ಹಿಂದಿರುಗು; ವನ: ಕಾಡು; ದಳ: ಗುಂಪು; ಮಂದಿರ: ಆಲ್ಯ; ನೆಲೆ: ಸ್ಥಾನ; ವಿಸ್ತರಣ: ವಿಶಾಲ; ಹಿಂದೆ: ಪೂರ್ವ; ವಿಪಿನ: ಕಾಡು; ಪರಿಭ್ರಮಣ: ಸುತ್ತಾಡು, ಅಲೆದಾಟ; ಕರುಣಿ: ದಯೆ; ಅಡಿ: ಹೆಜ್ಜೆ, ತಳ; ಅಂಘ್ರಿ: ಪಾದ; ಕಮಲ: ತಾವರೆ; ದರುಶನ: ದೃಷ್ಟಿ, ಗೋಚರ; ಆಯಾಸ: ಬಳಲಿಕೆ, ಶ್ರಮ; ಪಾರಂಪರೆ: ಸಂಪ್ರದಾಯ; ಬಿಡುಗಡೆ: ಬಂಧನದಿಂದ ಪಾರಾಗುವಿಕೆ; ಮೈಯಿಕ್ಕು: ನಮಸ್ಕರಿಸು; ಭೂಪ: ರಾಜ;

ಪದವಿಂಗಡಣೆ:
ಮರಳಿ +ಕಾಮ್ಯಕವನದ+ ದಳ +ಮಂ
ದಿರವನೇ+ ನೆಲೆ +ಮಾಡಿದೆವು +ವಿ
ಸ್ತರಣವಿದು +ಹಿಂದಾದ +ವಿಪಿನಾಂತರ +ಪರಿಭ್ರಮದಿ
ಕರುಣಿ +ನಿಮ್ಮಡಿ+ಅಂಘ್ರಿ+ಕಮಲದ
ದರುಶನದಿನ್+ಆಯಾಸ +ಪಾರಂ
ಪರೆಗೆ +ಬಿಡುಗಡೆಯಾಯ್ತ್+ಎನುತ+ ಮೈಯಿಕ್ಕಿದನು +ಭೂಪ

ಅಚ್ಚರಿ:
(೧) ಕೃಷ್ಣನ ಹಿರಿಮೆಯನ್ನು ವಿವರಿಸುವ ಪರಿ – ಕರುಣಿ ನಿಮ್ಮಡಿಯಂಘ್ರಿಕಮಲದ
ದರುಶನದಿನಾಯಾಸ ಪಾರಂಪರೆಗೆ ಬಿಡುಗಡೆಯಾಯ್ತೆ

ಪದ್ಯ ೧೩: ಅರ್ಜುನನು ಯಾವ ರಥಕ್ಕೆ ಎದಿರಾಗಿ ನಡೆದನು?

ಏನಿದಚ್ಚರಿ ಮೇಲೆ ಮೇಲೆ ನ
ವೀನದರುಶನವೆನ್ನ ಪುಣ್ಯವ
ನೂನವೈಸಲೆಯೆನುತ ನರನಿದಿರಾದನಾ ರಥಕೆ
ನೀನಹೈ ಕಲಿ ಪಾರ್ಥನೆಂಬ ಮ
ಹಾನರೇಶ್ವರನೆನುತ ಮಿಗೆ ಸ
ನ್ಮಾನಿಸುತ ಸುರಪತಿಯ ಸಾರಥಿ ನಿಲಿಸಿದನು ರಥವ (ಅರಣ್ಯ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಇಂದ್ರನ ಹೊಳೆಯುವ ರಥವನ್ನು ನೋಡಿದ ಅರ್ಜುನನು, ನನ್ನ ಪುಣ್ಯಕ್ಕೆ ಕೊರತೆಯೇ ಇಲ್ಲ, ಇನ್ನು ಮೇಲೆ ನೂತನ ದರ್ಶನಗಳಾಗುತ್ತವೆ ಎಂದುಕೊಂಡು ಅರ್ಜುನನು ಇಂದ್ರ ರಥಕ್ಕೆ ಎದಿರಾಗಿ ಹೋದನು. ಇಂದ್ರನ ಸಾರಥಿ ಮಾತಲಿಯು, ವೀರನಾದ ಅರ್ಜುನನು, ಮಹಾಕ್ಷತ್ರಿಯನು ನೀನೆಯೆಲ್ಲವೇ ಎಂದು ಹೇಳುತ್ತ ಅರ್ಜುನನ ಬಳಿ ರಥವನ್ನು ನಿಲ್ಲಿಸಿದನು.

ಅರ್ಥ:
ಅಚ್ಚರಿ: ಆಶ್ಚರ್ಯ; ನವೀನ: ಹೊಸ; ದರುಶನ: ನೋಟ; ಪುಣ್ಯ: ಸದಾಚಾರ; ಊನ: ಕುಂದು ಕೊರತೆ; ನರ: ಅರ್ಜುನ; ಇದಿರು: ಎದುರು; ರಥ: ಬಂಡಿ; ಕಲಿ: ಪರಾಕ್ರಮಿ; ಮಿಗೆ: ಮತ್ತು; ಸನ್ಮಾನ: ಗೌರವ; ಸುರಪತಿ: ಇಂದ್ರ; ಸಾರಥಿ: ರಥವನ್ನು ಓಡಿಸುವವ; ನಿಲಿಸು: ತಡೆ;

ಪದವಿಂಗಡಣೆ:
ಏನಿದಚ್ಚರಿ +ಮೇಲೆ +ಮೇಲೆ +ನ
ವೀನ+ದರುಶನವ್+ಎನ್ನ +ಪುಣ್ಯವನ್
ಊನ+ವೈಸಲೆಯೆನುತ +ನರನ್+ಇದಿರಾದನಾ+ ರಥಕೆ
ನೀನಹೈ+ ಕಲಿ+ ಪಾರ್ಥನೆಂಬ+ ಮ
ಹಾ+ನರೇಶ್ವರನ್+ಎನುತ +ಮಿಗೆ +ಸ
ನ್ಮಾನಿಸುತ +ಸುರಪತಿಯ +ಸಾರಥಿ +ನಿಲಿಸಿದನು +ರಥವ

ಅಚ್ಚರಿ:
(೧) ಮಹಾನರೇಶ್ವರ, ಪಾರ್ಥ, ನರ – ಅರ್ಜುನನನ್ನು ಕರೆದ ಪರಿ