ಪದ್ಯ ೨೧: ಭೀಷ್ಮರು ಧರ್ಮಜನನ್ನು ಹೇಗೆ ಸಮಾಧಾನ ಪಡಿಸಿದರು.

ಖೇದವೇಕೆಲೆ ಮಗನೆ ನಿನ್ನೋ
ಪಾದಿಯಲಿ ಸುಚರಿತ್ರನಾವನು
ಮೇದಿನಿಯೊಳಾ ಮಾತು ಸಾಕೈ ಕ್ಷತ್ರಧರ್ಮವನು
ಆದರಿಸುವುದೆ ಧರ್ಮ ನಿನಗಪ
ವಾದ ಪಾತಕವಿಲ್ಲ ಸುಕೃತ
ಕ್ಕೀ ದಯಾಂಬುಧಿ ಕೃಷ್ಣ ಹೊಣೆ ನಿನಗಂಜಲೇಕೆಂದ (ಭೀಷ್ಮ ಪರ್ವ, ೧೦ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭೀಷ್ಮನು ಧರ್ಮಜನನ್ನು ಸಮಾಧಾನಪಡಿಸಿ, ಮಗನೇ, ಏಕೆ ದುಃಖಿಸುವೆ? ನಿನ್ನಂತಹ ಸುಚರಿತ್ರರು, ಸನ್ಮಾರ್ಗದಲ್ಲಿ ನಡೆಯುವವರು ಯಾರಿದ್ದಾರೆ? ಆ ಮಾತು ಸಾಕು, ಕ್ಷತ್ರಿಯ ಧರ್ಮವನ್ನು ಆಚರಿಸಬೇಕಾದುದೇ ಕರ್ತವ್ಯ. ನಿನಗೆ ಅಪವಾದ ಹೊರವು ಪಾಪ ಬರುವುದಿಲ್ಲ. ನಿನ್ನ ಪುಣ್ಯ ಪಾಪಗಳ ಹೊಣೆಯು ದಯಾನಿಧಿಯಾದ ಶ್ರೀಕೃಷ್ಣನ ಮೇಲಿದೆ ಎಂದು ಭೀಷ್ಮರು ಹೇಳಿದರು.

ಅರ್ಥ:
ಖೇದ: ದುಃಖ; ಮಗ: ಸುತ; ಉಪಾಧಿ: ಧರ್ಮದ ವಿಷಯವಾಗಿ ಮಾಡುವ ಚಿಂತನೆ; ಸುಚರಿತ್ರ: ಒಳ್ಳೆಯ ನಡತೆಯುಳ್ಳವ; ಮೇದಿನಿ: ಭೂಮಿ; ಸಾಕು: ನಿಲ್ಲಿಸು; ಕ್ಷತ್ರ: ಕ್ಷತ್ರಿಯ; ಧರ್ಮ: ಧಾರಣೆ ಮಾಡಿದುದು; ಆದರಿಸು: ಗೌರವಿಸು; ಅಪವಾದ: ನಿಂದನೆ; ಪಾತಕ: ಪಾಪ; ಸುಕೃತ: ಒಳ್ಳೆಯ ನಡತೆ; ದಯಾಂಬುಧಿ: ಕರುಣಾಸಾಗರ; ಹೊಣೆ: ಜವಾಬ್ದಾರಿ; ಅಂಜು: ಹೆದರು;

ಪದವಿಂಗಡಣೆ:
ಖೇದವ್+ಏಕೆಲೆ +ಮಗನೆ +ನಿನ್ನ
ಉಪಾದಿಯಲಿ +ಸುಚರಿತ್ರನ್+ಆವನು
ಮೇದಿನಿಯೊಳ್+ಆ+ ಮಾತು +ಸಾಕೈ+ ಕ್ಷತ್ರ+ಧರ್ಮವನು
ಆದರಿಸುವುದೆ +ಧರ್ಮ +ನಿನಗ್+ಅಪ
ವಾದ +ಪಾತಕವಿಲ್ಲ+ ಸುಕೃತಕ್+
ಈ+ ದಯಾಂಬುಧಿ +ಕೃಷ್ಣ +ಹೊಣೆ +ನಿನಗ್+ಅಂಜಲೇಕೆಂದ

ಅಚ್ಚರಿ:
(೧) ಧರ್ಮಜನಿಗೆ ಯಾವುದು ಧರ್ಮ? – ಕ್ಷತ್ರಧರ್ಮವನು ಆದರಿಸುವುದೆ ಧರ್ಮ
(೨) ಧರ್ಮಜನಿಗೆ ಅಭಯವನ್ನು ಹೇಳುವ ಪರಿ – ನಿನಗಪವಾದ ಪಾತಕವಿಲ್ಲ

ಪದ್ಯ ೮೫: ಧರ್ಮಜನು ಕೃಷ್ಣನಲ್ಲಿ ಏನು ಬೇಡಿದನು?

ಆದುದಭಿಮನ್ಯುವಿನ ಮದುವೆ ಮ
ಹಾ ದಯಾಂಬುಧಿ ಕೃಷ್ಣರಾಯನ
ಪಾದದರುಶನವಾಗಲಿಮ್ಮಡಿಸಿತ್ತು ನಮ್ಮುದಯ
ಮೇದಿನಿಯ ನಾವೊತ್ತೆಯಿಟ್ಟೆವು
ಕಾದುಕೊಂಡೆವು ಸತ್ಯವನು ಮೇ
ಲಾದ ಹದನನು ಕರುಣಿಸೆಂದನು ಭೂಪ ನರಯಣಗೆ (ವಿರಾಟ ಪರ್ವ, ೧೧ ಸಂಧಿ, ೮೫ ಪದ್ಯ)

ತಾತ್ಪರ್ಯ:
ಅಭಿಮನ್ಯುವಿನ ವಿವಾಹಾನಂತರ ಕೃಷ್ಣನಲ್ಲಿ ಧರ್ಮಜನು, ಅಭಿಮನ್ಯುವಿನ ವಿವಾಹವು ಸಾಂಗವಾಗಿ ನೆರವೇರಿತು, ಶ್ರೀಕೃಷ್ಣನ ದರ್ಶನಮಾತ್ರದಿಂದ ನಮ್ಮ ಏಳಿಗೆಯ ವೇಗವು ಇಮ್ಮಡಿಯಾಯಿತು, ಭೂಮಿಯನ್ನು ಕೌರವನಿಗೆ ಅಡವಿಟ್ಟಿದ್ದರೂ, ನಾವು ಸತ್ಯವನ್ನು ರಕ್ಷಣೆ ಮಾಡಿಕೊಂಡೆವು ಎಂದು ಆಲೋಚಿಸಿ, ಮುಂದಿನ ಕಾರ್ಯಭಾರವನ್ನು ಕರುಣೆಯಿಂದ ಅಪ್ಪಣೆ ಕೊಡಿಸು ಎಂದು ಬೇಡಿದನು.

ಅರ್ಥ:
ಮದುವೆ: ವಿವಾಹ; ಮಹಾ: ಶ್ರೇಷ್ಠ; ದಯಾಂಬುಧಿ: ಕರುಣಾಸಾಗರ; ಅಂಬುಧಿ: ಸಾಗರ; ರಾಯ: ರಾಜ; ಪಾದ: ಚರಣ; ದರುಶನ: ನೋಟ; ಇಮ್ಮಡಿ: ಎರಡುಪಟ್ಟು; ಉದಯ: ಏಳಿಗೆ; ಮೇದಿನಿ: ಭೂಮಿ; ಒತ್ತೆ:ಅಡವು; ಕಾದು: ಕಾಪಾಡು; ಸತ್ಯ: ದಿಟ; ಮೇಲಾದ: ಮೊದಲು ನಡೆದ; ಹದ: ಸ್ಥಿತಿ; ಕರುಣಿಸು: ದಯೆತೋರು; ಭೂಪ: ರಾಜ;

ಪದವಿಂಗಡಣೆ:
ಆದುದ್+ಅಭಿಮನ್ಯುವಿನ +ಮದುವೆ +ಮ
ಹಾ +ದಯಾಂಬುಧಿ +ಕೃಷ್ಣ+ರಾಯನ
ಪಾದ+ದರುಶನವಾಗಲ್+ಇಮ್ಮಡಿಸಿತ್ತು +ನಮ್ಮುದಯ
ಮೇದಿನಿಯ +ನಾವೊತ್ತೆಯಿಟ್ಟೆವು
ಕಾದುಕೊಂಡೆವು+ ಸತ್ಯವನು+ ಮೇ
ಲಾದ +ಹದನನು +ಕರುಣಿಸೆಂದನು +ಭೂಪ +ನರಯಣಗೆ

ಅಚ್ಚರಿ:
(೧) ಕೃಷ್ಣನನ್ನು ಹೊಗಳುವ ಪರಿ – ಮಹಾ ದಯಾಂಬುಧಿ ಕೃಷ್ಣರಾಯ

ಪದ್ಯ ೭೪: ಧರ್ಮಜನು ಕೃಷ್ಣನಿಗೆ ಏನು ಹೇಳಿದ?

ಕೊಳುಕೊಡೆಗೆ ಸೇರುವೊಡೆ ಮದುವೆಯ
ನೊಲಿದು ದೇವರು ಮಾಡುವುದು ಮೇ
ಲಿಳೆಯ ಕಾರ್ಯವ ಬುದ್ಧಿಗಲಿಸುವುದೆಮ್ಮನುದ್ದರಿಸಿ
ಬಳಿಕ ಬಿಜಯಂಗೈವುದಿದು ಹದ
ನೆಲೆ ದಯಾಂಬುಧಿ ಕೇಳೆನಲು ನೃಪ
ತಿಲಕನುಚಿತದ ಬಿನ್ನಹಕೆ ಮನವೊಲಿದು ಹರಿ ನುಡಿದ (ವಿರಾಟ ಪರ್ವ, ೧೧ ಸಂಧಿ, ೭೪ ಪದ್ಯ)

ತಾತ್ಪರ್ಯ:
ದೇವಾ, ಈ ಸಂಬಂಧವು ಉಚಿತವೆಂದು ನೀವು ಹೇಳುವಿರಾದರೆ ಮದುವೆಯನ್ನು ಮಾಡಿಸಿ, ನಮ್ಮ ರಾಜ್ಯದ ಬಗೆಗೆ ಏನು ಮಾಡಬೇಕೆಂದು ಬುದ್ಧಿ ಹೇಳಬೇಕು, ಆಮೇಲೆ ನಿಮ್ಮ ಇಚ್ಛೆ. ಆದುದರಿಂದ ಎಲೈ ದಯಾಸಾಗರನೆ ಏನು ಮಾಡಬೇಕೆಂದು ಹೇಳಿ, ಎಂದು ಧರ್ಮಜನು ಕೇಳಲು, ಅವನ ಉಚಿತ ವಾಕ್ಯಗಳಿಗೆ ಮೆಚ್ಚಿ ಶ್ರೀಕೃಷ್ಣನು ನುಡಿದನು.

ಅರ್ಥ:
ಕೊಳು: ತೆಗೆದುಕೋ;ಕೊಡು: ನೀಡು; ಸೇರು: ಜೊತೆಯಾಗು; ಮದುವೆ: ವಿವಾಹ; ಒಲಿ: ಪ್ರೀತಿ; ದೇವರು: ಭಗವಂತ; ಇಳೆ: ಭೂಮಿ; ಕಾರ್ಯ: ಕೆಲಸ; ಬುದ್ಧಿ: ತಿಳಿವು, ಅರಿವು; ಆಲಿಸು: ಕೇಳು; ಉದ್ಧಾರ: ಮೇಲಕ್ಕೆ ಎತ್ತುವುದು; ಬಳಿಕ: ನಂತರ; ಬಿಜಯಂಗೈ: ದಯಮಾಡು; ಹದ: ಸರಿಯಾದ ಸ್ಥಿತಿ; ನೆಲೆ: ಭೂಮಿ; ದಯಾಂಬುಧಿ: ಕರುಣಾ ಸಾಗರ; ಕೇಳು: ಆಲಿಸು; ನೃಪ: ರಾಜ; ತಿಲಕ: ಶ್ರೇಷ್ಠ; ಉಚಿತ: ಸರಿಯಾದ; ಬಿನ್ನಹ: ಕೋರಿಕೆ; ಮನ: ಮನಸ್ಸು; ಒಲಿ: ಒಪ್ಪು; ನುಡಿ: ಮಾತಾಡು;

ಪದವಿಂಗಡಣೆ:
ಕೊಳು+ಕೊಡೆಗೆ +ಸೇರುವೊಡೆ +ಮದುವೆಯನ್
ಒಲಿದು+ ದೇವರು +ಮಾಡುವುದು +ಮೇಲ್
ಇಳೆಯ +ಕಾರ್ಯವ +ಬುದ್ಧಿಗಲಿಸುವುದೆಮ್ಮನ್+ಉದ್ಧರಿಸಿ
ಬಳಿಕ +ಬಿಜಯಂಗೈವುದಿದು +ಹದ
ನೆಲೆ +ದಯಾಂಬುಧಿ +ಕೇಳೆನಲು +ನೃಪ
ತಿಲಕನ್+ಉಚಿತದ +ಬಿನ್ನಹಕೆ +ಮನವೊಲಿದು +ಹರಿ+ ನುಡಿದ

ಅಚ್ಚರಿ:
(೧) ದಯಾಂಬುಧಿ, ಹರಿ, ದೇವರು – ಕೃಷ್ಣನನ್ನು ಕರೆದ ಪರಿ

ಪದ್ಯ ೭೪: ಕೀಚಕನು ದ್ರೌಪದಿಗೆ ಏನು ಹೇಳಿದ?

ಆದಿವಸವರಮನೆಗೆ ಬರುತ ವೃ
ಕೋದರನ ವಲ್ಲಭೆಯ ಕಂಡನು
ಕೈದುಡಕಲಂಜಿದನು ಮಾತಾಡಿಸಿದನಂಗನೆಯ
ಹೋದಿರುಳ ಯುಗವಾಗಿ ನೂಕಿದೆ
ನೀ ದಯಾಂಬುಧಿ ಕುಸುಮಶರ ಯಮ
ನಾದ ನೀನೇ ಬಲ್ಲೆಯೆಂದನು ಕೀಚಕನು ನಗುತ (ವಿರಾಟ ಪರ್ವ, ೩ ಸಂಧಿ, ೭೪ ಪದ್ಯ)

ತಾತ್ಪರ್ಯ:
ಕೀಚಕನು ಆ ದಿನ ತನ್ನ ಅರಮನೆಗೆ ಹಿಂತಿರುಗುತ್ತಾ ದ್ರೌಪದಿಯನ್ನು ಕಂಡನು, ಅವಳನ್ನು ಮುಟ್ಟಲು ಹೆದರಿ, ನೆನ್ನೆ ರಾತ್ರಿಯನ್ನು ಒಂದು ಯುಗದಂತೆ ಕಷ್ಟಪಟ್ಟು ಕಳೆದೆ, ಸೈರಂಧ್ರೀ, ನೀನು ಕರುಣೆಯ ಸಾಗರ, ನನ್ನ ಪಾಲಿಗೆ ಮನ್ಮಥನು ಯಮನಾಗಿ ಬಿಟ್ಟ, ಅದರ ಕಾರಣವನ್ನು ನೀನೇ ಬಲ್ಲೆ ಎಂದು ಹೇಳಿದನು.

ಅರ್ಥ:
ದಿವಸ: ದಿನ; ಅರಮನೆ: ರಾಜರ ಆಲಯ; ಬರುತ: ಆಗಮಿಸು; ವೃಕೋದರ: ತೋಳದಂತ ಹೊಟ್ಟೆಯುಳ್ಳವ (ಭೀಮ); ವಲ್ಲಭೆ: ಪ್ರಿಯತಮೆ, ಪತ್ನಿ; ಕಂಡು: ನೋಡು; ಕೈ: ಹಸ್ತ; ಕೈದುಡುಗು: ಬಲದಿಂದ ತೆಗೆದುಕೋ; ಅಂಜು: ಹೆದರು; ಮಾತು: ವಾಣಿ, ನುಡಿ; ಅಂಗನೆ: ಹೆಣ್ಣ್; ಹೋದ: ಕಳೆದ; ಇರುಳು: ರಾತ್ರಿ; ಯುಗ: ವಿಶ್ವದ ದೀರ್ಘವಾದ ಕಾಲಖಂಡ; ನೂಕು: ತಳ್ಳು; ದಯಾಂಬುಧಿ: ಕರುಣೆಯ ಸಾಗರ; ಕುಸುಮ: ಹೂವು; ಶರ: ಬಾಣ; ಕುಸುಮಶರ: ಮನ್ಮಥ; ಯಮ: ಮೃತ್ಯುದೇವತೆ; ಬಲ್ಲೆ: ತಿಳಿದಿರುವೆ; ನಗು: ಸಂತಸ;

ಪದವಿಂಗಡಣೆ:
ಆ+ದಿವಸವ್+ಅರಮನೆಗೆ +ಬರುತ +ವೃ
ಕೋದರನ +ವಲ್ಲಭೆಯ+ ಕಂಡನು
ಕೈದುಡಕಲ್+ಅಂಜಿದನು +ಮಾತಾಡಿಸಿದನ್+ಅಂಗನೆಯ
ಹೋದ್+ಇರುಳ+ ಯುಗವಾಗಿ +ನೂಕಿದೆ
ನೀ +ದಯಾಂಬುಧಿ +ಕುಸುಮಶರ+ ಯಮ
ನಾದ +ನೀನೇ +ಬಲ್ಲೆ+ಎಂದನು+ ಕೀಚಕನು+ ನಗುತ

ಅಚ್ಚರಿ:
(೧) ದಿವಸ, ಇರುಳು – ವಿರುದ್ಧ ಪದ
(೨) ದ್ರೌಪದಿಯನ್ನು ವೃಕೋದರನ ವಲ್ಲಭೆ, ಅಂಗನೆ, ದಯಾಂಬುಧಿ ಎಂದು ಕರೆದಿರುವುದು

ಪದ್ಯ ೭೬: ಶ್ರೀಕೃಷ್ಣನು ಯಾವ ಆಯುಧವನ್ನು ಹಿಡಿದನು?

ಕಾದಿದರು ವಿವಿಧಾಸ್ತ್ರ ವಿದ್ಯಾ
ಭೇದದಲಿ ರಥಭಂಗ ಚಾಪವಿ
ಭೇದ ಶಸ್ತ್ರಾಸ್ತ್ರೌಘ ಸಂಹರಣ ಪ್ರಪಂಚದಲಿ
ಈ ದುರಾತ್ಮನ ನಿಲಿಸಿ ನಿಮಿಷದೊ
ಳಾ ದಯಾಂಬುಧಿ ತುಡುಕಿದನು ತ್ರೈ
ವೇದಮಯ ಮೂರ್ತಿತ್ರಯಾತ್ಮಕ ವರ ಸುದರ್ಶನವ (ಸಭಾ ಪರ್ವ, ೧೧ ಸಂಧಿ, ೭೬ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣ ಶಿಶುಪಾಲರು ಅನೇಕ ಅಸ್ತ್ರಗಳನ್ನು ಪ್ರಯೋಗಿಸಿ ಕಾದಿದರು. ಪರಸ್ಪರ ರಥಗಲನ್ನು ಬಿಲ್ಲುಗಳನ್ನೂ ಕತ್ತರಿಸುವುದು, ಎದುರಾಳಿಗಳ ಶಸ್ತ್ರಾಸ್ತ್ರಗಳನ್ನು ನಾಶಮಾಡುವುದು ಈ ರೀತಿಯಾಗಿ ಬಹಳ ಸಮಯ ಯುದ್ಧವಾಯಿತು. ಶ್ರೀಕೃಷ್ಣನು ಮೂರುವೇದಗಳು, ಮೂರುಮೂರ್ತಿಗಳು ಆತ್ಮವಾದ ಸುದರ್ಶನ ಚಕ್ರವನ್ನು ಹಿಡಿದನು.

ಅರ್ಥ:
ಕಾದಿದರು: ಕಾವಲಿರು, ನೋಡು; ವಿವಿಧ: ಹಲವಾರು; ಅಸ್ತ್ರ: ಶಸ್ತ್ರ, ಆಯುಧ; ವಿದ್ಯ: ಜ್ಞಾನ; ಭೇದ: ಮುರಿ, ಸೀಳು; ರಥ: ಬಂಡಿ; ಭಂಗ: ಮುರಿಯುವಿಕೆ, ಚೂರು ಮಾಡುವಿಕೆ; ಚಾಪ: ಬಿಲ್ಲು; ವಿಭೇದ: ಒಡೆಯುವಿಕೆ, ಬೇರ್ಪಡಿಸುವಿಕೆ; ಔಘ: ಗುಂಪು, ಸಮೂಹ; ಸಂಹರಣ: ಅಳಿವು, ನಾಶ; ಪ್ರಪಂಚ: ಜಗತ್ತು; ದುರಾತ್ಮ: ದುಷ್ಟ; ನಿಲಿಸು: ತಡೆ; ನಿಮಿಷ: ಕ್ಷಣ; ದಯೆ: ಕರುಣೆ; ಅಂಬುಧಿ: ಸಾಗರ; ತುಡುಕು: ಹೋರಾಡು, ಸೆಣಸು; ತ್ರೈ: ಮೂರು; ವೇದ: ಶೃತಿ; ಮೂರ್ತಿ: ಆಕಾರ, ಸ್ವರೂಪ; ಆತ್ಮ: ಜೀವ; ವರ: ಶ್ರೇಷ್ಠ; ಸುದರ್ಶನ: ಕೃಷ್ಣನ ಆಯುಧ, ಚಕ್ರ;

ಪದವಿಂಗಡಣೆ:
ಕಾದಿದರು+ ವಿವಿಧ+ಅಸ್ತ್ರ +ವಿದ್ಯಾ
ಭೇದದಲಿ+ ರಥಭಂಗ +ಚಾಪ+ವಿ
ಭೇದ +ಶಸ್ತ್ರಾಸ್ತ್ರ+ ಔಘ +ಸಂಹರಣ+ ಪ್ರಪಂಚದಲಿ
ಈ +ದುರಾತ್ಮನ +ನಿಲಿಸಿ+ ನಿಮಿಷದೊಳ್
ಆ+ ದಯಾಂಬುಧಿ +ತುಡುಕಿದನು +ತ್ರೈ
ವೇದಮಯ +ಮೂರ್ತಿತ್ರಯಾತ್ಮಕ+ ವರ+ ಸುದರ್ಶನವ

ಅಚ್ಚರಿ:
(೧) ಸುದರ್ಶನದ ವರ್ಣನೆ – ತ್ರೈವೇದಮಯ ಮೂರ್ತಿತ್ರಯಾತ್ಮಕ ವರ ಸುದರ್ಶನವ