ಪದ್ಯ ೩೨: ಭೀಮನು ಯಾವ ರೂಪವನ್ನು ನೋಡಲು ಇಚ್ಛಿಸಿದನು?

ಅಂಜುವೆನು ಬಿನ್ನಹಕೆ ಬಾಂಧವ
ವಂಜಿಕೆಯ ನಭಕೊತ್ತುತಿದೆ ಕೇ
ಳಂಜನಾಸುತ ತನ್ನ ಸಲಿಗೆಯ ಮಾತ ಸಲಿಸುವೊಡೆ
ಅಂಜದೆಂಬೆನು ದನುಜಪುರಕೆ ಧ
ನಂಜಯನ ಹೊತ್ತಿಸಿದ ಖಳರನು
ಭಂಜಿಸಿದ ಸಾಗರವ ದಾಂಟಿದ ರೂಪ ತೋರೆಂದ (ಅರಣ್ಯ ಪರ್ವ, ೧೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಆಂಜನೇಯನ ಮಾತನ್ನು ಕೇಳಿ ಭೀಮನು, ಹೇ ಅಂಜನಾಸುತ ನಿನ್ನಲ್ಲಿ ನನ್ನದೊಂದು ಕೋರಿಕೆ, ಅದನ್ನು ಹೇಳಲು ನನಗೆ ಭಯವಾಗುತ್ತಿದ್ದರೂ ಸೊದರನ ಸಲಗೆಯನ್ನು ಬಳಸಿ ನನ್ನ ಅಂಜಿಕೆಯನ್ನು ಆಗಸಕ್ಕೆ ತೂರಿ, ನನ್ನ ಸಲಿಗೆಯ ಮಾತನ್ನು ನೀನು ನಡೆಸಿಕೊಡುವುದಾದರೆ, ಧೈರ್ಯವಾಗಿ ಹೇಳುತ್ತೇನೆ ಎಂದು ಬಿನ್ನವಿಸಿ, ಎಲೈ ಹನುಮ ನೀನು ಲಂಕೆಗೆ ಬೆಂಕಿಯನ್ನು ಹೊತ್ತಿಸಿದ, ರಾಕ್ಷಸರನ್ನು ಸಂಹರಿಸಿದ, ಸಮುದ್ರ ಲಂಘನ ಮಾಡಿದ ನಿನ್ನ ರೂಪವನ್ನು ತೋರಿಸು ಎಂದು ಕೇಳಿದನು.

ಅರ್ಥ:
ಅಂಜು: ಹೆದರು; ಬಿನ್ನಹ: ಕೋರಿಕೆ; ಬಾಂಧವ: ಅಣ್ಣ ತಮ್ಮಂದಿರು; ನಭ: ಆಗಸ; ಒತ್ತು: ತಳ್ಳು; ಸುತ: ಮಗ; ಸಲಿಗೆ: ನಿಕಟ ಸಂಪರ್ಕ, ಸದರ; ಸಲಿಸು: ಪೂರೈಸು; ಒಪ್ಪಿಸು; ದನುಜಪುರ: ರಾಕ್ಷಸರ ಊರು; ಧನಂಜಯ: ಅಗ್ನಿ; ಹೊತ್ತಿಸು: ಉರಿಸು, ಪ್ರಜ್ವಲಿಸು; ಖಳ: ದುಷ್ಟ; ಭಂಜಿಸು: ನಿವಾರಿಸು; ಸೋಲಿಸು; ಸಾಗರ: ಸಮುದ್ರ; ದಾಂಟು: ಹಾರು; ರೂಪ: ಆಕಾರ; ತೋರು: ಗೋಚರಿಸು;

ಪದವಿಂಗಡಣೆ:
ಅಂಜುವೆನು+ ಬಿನ್ನಹಕೆ+ ಬಾಂಧವವ್
ಅಂಜಿಕೆಯ +ನಭಕ್+ಒತ್ತುತಿದೆ+ ಕೇಳ್
ಅಂಜನಾಸುತ +ತನ್ನ +ಸಲಿಗೆಯ+ ಮಾತ +ಸಲಿಸುವೊಡೆ
ಅಂಜದೆಂಬೆನು +ದನುಜಪುರಕೆ+ ಧ
ನಂಜಯನ +ಹೊತ್ತಿಸಿದ+ ಖಳರನು
ಭಂಜಿಸಿದ +ಸಾಗರವ+ ದಾಂಟಿದ +ರೂಪ +ತೋರೆಂದ

ಅಚ್ಚರಿ:
(೧) ಅಂಜು ಪದದ ಬಳಕೆ, ಅಂಜು, ಅಂಜಿಕೆ, ಅಂಜನಾಸುತ
(೨) ಲಂಕೆಯನ್ನು ದನುಜಪುರ ಎಂದು ಕರೆದಿರುವುದು