ಪದ್ಯ ೪೧: ಧರ್ಮಜನು ಹಾವಿನ ಪರಿಚಯವನ್ನು ಹೇಗೆ ಕೇಳಿದನು?

ಅನಿಲ ಸುತನಪರಾಧಿಯೋ ನೀ
ವಿನಯ ಹೀನನೋ ಮೇಣು ಪರಪೀ
ಡನ ವೃಥಾ ದುಷ್ಕರ್ಮ ಸಂಗ್ರಹ ಬೇಹುದೇ ನಿನಗೆ
ದನುಜನೋ ಗಂಧರ್ವನೋ ಯ
ಕ್ಷನೊ ಸರೀಸೃಪರೂಪದಿವಿಜೇಂ
ದ್ರನೊ ನಿಧಾನಿಸಲರಿಯೆ ನೀನಾರೆಂದನವನೀಶ (ಅರಣ್ಯ ಪರ್ವ, ೧೪ ಸಂಧಿ, ೪೧ ಪದ್ಯ)

ತಾತ್ಪರ್ಯ:
ಧರ್ಮಜನು ಹಾವನ್ನು ಮಾತನಾಡಿಸುತ್ತಾ, ಭೀಮನು ತಪ್ಪಿತಸ್ಥನೋ, ಅಥವಾ ನೀನು ನಯವನ್ನು ಮೀರಿ ಹೀಗೆ ಮಾಡಿದೆಯೋ? ಪರರನ್ನು ಪೀಡಿಸುವ ದುಷ್ಕರ್ಮದ ಪಾಪವು ನಿನಗೆ ಇಷ್ಟವೋ? ನೀನು ರಾಕ್ಷಸನೋ, ಗಂಧರ್ವನೋ, ಯಕ್ಷನೋ, ಅಥವಾ ಹಾವಿನರೂಪದಲ್ಲಿರುವ ದೇವೇಂದ್ರನೋ, ನನಗೆ ತಿಳಿಯದಾಗಿದೆ, ನೀನು ಯಾರು ಎಂದು ಹಾವನ್ನು ಕೇಳಿದನು.

ಅರ್ಥ:
ಅನಿಲಸುತ: ವಾಯುಪುತ್ರ (ಭೀಮ); ಅಪರಾಧಿ: ತಪ್ಪಿತಸ್ಥ; ವಿನಯ: ಒಳ್ಳೆಯತನ, ಸೌಜನ್ಯ; ಹೀನ: ಕೀಳು; ಮೇಣ್: ಅಥವಾ; ಪರ: ಬೇರೆ,ಅನ್ಯ; ಪೀಡನ: ತೊಂದರೆ; ವೃಥ: ಸುಮ್ಮನೆ; ದುಷ್ಕರ್ಮ: ಕೆಟ್ಟ ಕೆಲಸ; ಸಂಗ್ರಹ: ಹಿಡಿತ, ವಶ; ಬೇಹು: ಬೇಕು; ದನುಜ: ರಾಕ್ಷಸ; ಗಂಧರ್ವ: ದೇವಲೋಕದ ಸಂಗೀತಗಾರ; ಯಕ್ಷ: ದೇವತೆಗಳಲ್ಲಿ ಒಂದು ವರ್ಗ; ಸರೀಸೃಪ: ತೆವಳಿಕೊಂಡು ಹೋಗುವ ಪ್ರಾಣಿ, ಹಾವು; ರೂಪ: ಆಕಾರ; ವಿಜೇಂದ್ರ: ಇಂದ್ರ; ನಿಧಾನಿಸು: ಪರೀಕ್ಷಿಸು, ವಿಚಾರಮಾಡು; ಅರಿ: ತಿಳಿ; ಅವನೀಶ: ರಾಜ;

ಪದವಿಂಗಡಣೆ:
ಅನಿಲ+ ಸುತನ್+ಅಪರಾಧಿಯೋ +ನೀ
ವಿನಯ+ ಹೀನನೋ +ಮೇಣು +ಪರಪೀ
ಡನ +ವೃಥಾ +ದುಷ್ಕರ್ಮ +ಸಂಗ್ರಹ +ಬೇಹುದೇ +ನಿನಗೆ
ದನುಜನೋ +ಗಂಧರ್ವನೋ +ಯ
ಕ್ಷನೊ +ಸರೀಸೃಪ+ರೂಪದಿ+ವಿಜೇಂ
ದ್ರನೊ +ನಿಧಾನಿಸಲ್+ಅರಿಯೆ +ನೀನ್+ಆರೆಂದನ್+ಅವನೀಶ

ಅಚ್ಚರಿ:
(೧) ಹಾವನ್ನು ಯಾರೆಂದು ಕೇಳುವ ಪರಿ – ವಿನಯಹೀನನೋ, ದನುಜನೋ, ಗಂಧರ್ವನೋ, ಯಕ್ಷನೊ, ಸರೀಸೃಪರೂಪದಿ ವಿಜೇಂದ್ರನೊ