ಪದ್ಯ ೧: ಹಸ್ತಿನಾಪುರದ ಜನರ ಮುಖವೇಕೆ ಕಳಾಹೀನವಾಗಿತ್ತು?

ಕೇಳು ಜನಮೇಜಯ ಧರಿತ್ರೀ
ಪಾಲ ಕುರುಪತಿ ವಿಳಯವಾರ್ತಾ
ವ್ಯಾಳವಿಷ ವೇಢೈಸಿದುದು ಗಜಪುರದ ಜನಮನವ
ಹೂಳಿದುಬ್ಬಿನ ಹುದಿದ ಮೋನದ
ಸೂಳುಚಿಂತೆಯ ಬಲಿದ ಭೀತಿಯ
ಮೇಲುದುಗುಡದ ದಡಿಯ ವದನದಲಿದ್ದುದಖಿಳಜನ (ಗದಾ ಪರ್ವ, ೧೧ ಸಂಧಿ, ೧ ಪದ್ಯ)

ತಾತ್ಪರ್ಯ:
ದುರ್ಯೋಧನನ ಮರಣ ವಾರ್ತೆಯ ವಿಷವು ಹಸ್ತಿನಾಪುರದ ಜನರ ಮನಸ್ಸುಗಳನ್ನು ಆವರಿಸಿತು. ಜನತೆಯ ಉತ್ಸಾಹ ಹೂಳಿಹೋಯಿತು. ಮೌನವು ಎಲ್ಲೆಡೆ ಆವರಿಸಿತು. ಚಿಂತೆಯು ಮತ್ತೆ ಮತ್ತೆ ಮನಸ್ಸನ್ನು ಮುತ್ತುತ್ತಿತ್ತು. ಭಯ ದುಃಖಗಳು ಎಲ್ಲರ ಮುಖಗಳಲ್ಲೂ ಕಾಣಿಸಿತು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ವಿಳಯ: ಅಳಿವು, ಮರಣ; ವಾರ್ತೆ: ವಿಷಯ, ವಿಚಾರ; ವ್ಯಾಳ: ಸರ್ಪ; ವಿಷ: ಗರಳ; ವೇಡೈಸು: ಸುತ್ತುವರಿ, ಮುತ್ತು; ಗಜಪುರ: ಹಸ್ತಿನಾಪುರ; ಜನ: ಮನುಷ್ಯ; ಮನ: ಮನಸ್ಸು; ಹೂಳು: ಅಡಗು, ಹೂತು ಹಾಕು, ಹುದುಗು; ಹುದಿ: ಒಳಸೇರು, ಒಳಗೊಂಡಿರು; ಉಬ್ಬು: ಹಿಗ್ಗು; ಮೋನ: ಮಾತನಾಡದಿರುವಿಕೆ, ಮೌನ; ಸೂಳು: ಆವೃತ್ತಿ, ಬಾರಿ; ಚಿಂತೆ: ಯೋಚನೆ; ಬಲಿ: ಗಟ್ಟಿಯಾಗು; ಭೀತಿ: ಭಯ; ಮೇಲು: ಹೆಚ್ಚು; ದುಗುಡ: ದುಃಖ; ದಡಿ: ದಂಡೆ, ತೀರ,ಅಂಚು; ವದನ: ಮುಖ; ಅಖಿಳ: ಎಲ್ಲಾ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕುರುಪತಿ +ವಿಳಯ+ವಾರ್ತಾ
ವ್ಯಾಳವಿಷ +ವೇಢೈಸಿದುದು +ಗಜಪುರದ +ಜನ+ಮನವ
ಹೂಳಿದ್+ಉಬ್ಬಿನ +ಹುದಿದ +ಮೋನದ
ಸೂಳುಚಿಂತೆಯ+ ಬಲಿದ +ಭೀತಿಯ
ಮೇಲು+ದುಗುಡದ +ದಡಿಯ +ವದನದಲಿದ್ದುದ್+ಅಖಿಳ+ಜನ

ಅಚ್ಚರಿ:
(೧) ರೂಪಕದ ಪ್ರಯೋಗ – ವಿಳಯವಾರ್ತಾ ವ್ಯಾಳವಿಷ
(೨) ವ ಕಾರದ ತ್ರಿವಳಿ ಪದ – ವಿಳಯವಾರ್ತಾ ವ್ಯಾಳವಿಷ ವೇಢೈಸಿದುದು
(೩) ದುಃಖವನ್ನು ವಿವರಿಸುವ ಪರಿ – ಹೂಳಿದುಬ್ಬಿನ ಹುದಿದ ಮೋನದಳುಚಿಂತೆಯ ಬಲಿದ ಭೀತಿಯ
ಮೇಲುದುಗುಡದ ದಡಿಯ ವದನದಲಿದ್ದುದಖಿಳಜನ

ಪದ್ಯ ೫೭: ಆನೆಗಳ ಸ್ಥಿತಿ ಹೇಗಾಯಿತು?

ಒರಲಿ ತಿವಿದನು ಕರಿಯ ಬರಿಯೆಲು
ಮುರಿಯಲೊದೆದನು ಸದೆದು ದಾಡೆಯ
ತಿರುಹಿ ಕಿತ್ತನು ಬಿತ್ತಿದನು ಬದುವಿನಲಿ ಬಲುಗದೆಯ
ಜರೆದನಾರೋಹಕರ ತಲೆಗಳ
ತರಿದು ಬಿಸುಟನು ಗಜಘಟೆಯ ಥ
ಟ್ಟೊರಗಿದವು ದಡಿಸಹಿತ ನವರುಧಿರಾಂಬುಪೂರದಲಿ (ಗದಾ ಪರ್ವ, ೧ ಸಂಧಿ, ೫೭ ಪದ್ಯ)

ತಾತ್ಪರ್ಯ:
ಗರ್ಜಿಸಿ ಆನೆಗಳನ್ನು ತಿವಿದು ಎಲುಬುಗಳು ಮುರಿಯುವಂತೆ ಒದೆದು, ನಾಶಮಾಡಿ ದಂತಗಳನ್ನು ಕಿತ್ತು, ಕುಂಭಸ್ಥಳದಲ್ಲಿ ಗದೆಯನ್ನೂರಿದನು. ಆರೋಹಕರನ್ನು ಜರೆದು ತಲೆಗಳನ್ನು ಕತ್ತರಿಸಿ ಎಸೆದನು. ಆನೆಗಳ ಹಿಂಡು ತಮ್ಮ ದಡಿಗಳೊಡನೆ ರಕ್ತದಲ್ಲಿ ಮುಳುಗಿದವು.

ಅರ್ಥ:
ಒರಲು: ಅರಚು, ಕೂಗಿಕೊಳ್ಳು; ತಿವಿ: ಚುಚ್ಚು; ಕರಿ: ಆನೆ; ಬರಿ: ಪಕ್ಕ, ಬದಿ; ಎಲು: ಎಲುಬು, ಮೂಳೆ; ಮುರಿ: ಕತ್ತರಿಸು, ಸೀಳು; ಒದೆ: ನೂಕು; ಸದೆ: ನಾಶ, ಕುಟ್ಟು; ದಾಡೆ: ದಂತ; ತಿರುಹು: ತಿರುಗಿಸು; ಕಿತ್ತು: ಕೀಳು; ಬಿತ್ತು: ಉಂಟುಮಾಡು; ಬದುವು: ಹೊಲದ ಅಂಚು, ತೆವರು; ಬಲುಗದೆ: ದೊಡ್ಡ ಗದೆ; ಜರೆ: ಕಳಚಿಬೀಳು; ಆರೋಹಕ: ಸವಾರ, ಆನೆ, ರಥ ಕುದುರೆ ಮೇಲೆ ಕೂತು ಯುದ್ಧ ಮಾಡುವವ; ತಲೆ: ಶಿರ; ತರಿ: ಸೀಳು; ಬಿಸುಟು: ಹೊರಹಾಕು; ಗಜಘಟೆ: ಗುಂಪು; ಥಟ್ಟು: ಗುಂಪು; ಒರಗು: ಕೆಳಕ್ಕೆ ಬಾಗು; ದಡಿ: ಕೋಲು, ಬಡಿಗೆ; ಸಹಿತ: ಜೊತೆ; ನವ: ಹೊಸ; ರುಧಿರ: ರಕ್ತ, ನೆತ್ತರು; ಅಂಬು: ನೀರು; ಪೂರ: ತುಂಬು, ಪೂರ್ತಿ;

ಪದವಿಂಗಡಣೆ:
ಒರಲಿ +ತಿವಿದನು +ಕರಿಯ +ಬರಿ+ಎಲು
ಮುರಿಯಲ್+ಒದೆದನು +ಸದೆದು +ದಾಡೆಯ
ತಿರುಹಿ+ ಕಿತ್ತನು +ಬಿತ್ತಿದನು +ಬದುವಿನಲಿ +ಬಲುಗದೆಯ
ಜರೆದನ್+ಆರೋಹಕರ +ತಲೆಗಳ
ತರಿದು+ ಬಿಸುಟನು +ಗಜಘಟೆಯ +ಥ
ಟ್ಟೊರಗಿದವು +ದಡಿಸಹಿತ +ನವರುಧಿರ+ಅಂಬುಪೂರದಲಿ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಿತ್ತಿದನು ಬದುವಿನಲಿ ಬಲುಗದೆಯ

ಪದ್ಯ ೩೧: ಯುದ್ಧಭೂಮಿಯಲ್ಲಿ ಯಾವ ವಸ್ತುಗಳು ಬಿದ್ದಿದ್ದವು?

ಕಡಿದ ಹಕ್ಕರಿಕೆಗಳ ಸೀಳಿದ
ದಡಿಯ ನೆಗ್ಗಿದ ಗುಳದ ರೆಂಚೆಯ
ಸಿಡಿದ ಸೀಸಕ ಬಾಹುರಕ್ಷೆಯ ಜೋಡು ಮೊಚ್ಚೆಯದ
ಉಡಿದ ಮಿಣಿ ಮೊಗರಂಬ ಗದ್ದುಗೆ
ಬಡಿಗೆಗಳ ಸೂತ್ರಿಕೆಯ ಕಬ್ಬಿಯ
ಕಡಿಯಣದ ಕುಸುರಿಗಳಲೆಸೆದುದು ಕೂಡೆ ರಣಭೂಮಿ (ಕರ್ಣ ಪರ್ವ, ೧೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕಡಿದು ಬಿದ್ದ ಕುದುರೆಯ ಪಕ್ಕರೆ, ತುಂಡಾಗಿ ಬಿದ್ದ ಕುದುರೆಯ ಬೆನ್ನಿನ ಮೇಲೆ ಹಾಕುವ ಹಲ್ಲಣ, ನುಗ್ಗಾಗಿದ್ದ ಆನೆ ಕುದುರೆಗಳ ಪಕ್ಷರಕ್ಷೆ, ಸ್ಫೋಟಗೊಂಡಿದ್ದ ಶಿರಸ್ತ್ರಾಣಗಳು, ತುಂಡಾಗಿದ್ದ ಬಾಹು ಮತ್ತು ದೇಹ ಕವಚಗಳು, ಪಾದರಕ್ಷೆಗಳು, ಹರಿದು ಬಿದ್ದ ಹಗ್ಗ, ಮುಖವಾಡ, ಪೀಠ, ಕೈಗೋಲು, ಕಡಿವಾಣ, ಕಬ್ಬಿ ಇವುಗಳು ರಣಭೂಮಿಯಲ್ಲಿ ಚೆಲ್ಲಿದ್ದವು.

ಅರ್ಥ:
ಕಡಿ: ಸೀಳು; ಹಕ್ಕರಿಕೆ: ಕುದುರೆಯ ಜೀನು, ಪಕ್ಕರೆ; ಸೀಳು: ಚೂರು, ತುಂಡು; ದಡಿ: ಕುದುರೆಯ ಬೆನ್ನಿನ ಮೇಲೆ ಹಾಕುವ ಹಲ್ಲಣ, ಜೀನು; ವಸ್ತ್ರಗಳ ಅಂಚು; ನೆಗ್ಗು:ಕುಗ್ಗು, ಕುಸಿ; ಗುಳ:ಆನೆ ಕುದುರೆಗಳ ಪಕ್ಷರಕ್ಷೆ; ರೆಂಚೆ:ಆನೆ, ಕುದುರೆಗಳ ಪಕ್ಕರಕ್ಕೆ, ಜೂಲು; ಸಿಡಿ:ಸ್ಫೋಟ; ಸೀಸಕ: ಶಿರಸ್ತ್ರಾಣ; ಬಾಹು: ಭುಜ; ರಕ್ಷೆ: ಕವಚ; ಜೋಡು: ಜೊತೆ, ಜೋಡಿ; ಮೊಚ್ಚೆ:ಪಾದರಕ್ಷೆ, ಚಪ್ಪಲಿ; ಉಡಿ: ಮುರಿ, ತುಂಡು ಮಾಡು; ಮಿಣಿ:ಚರ್ಮದ ಹಗ್ಗ; ಮೊಗ: ಮುಖ; ಮೊಗರಂಬ: ಮುಖವಾಡ; ಗದ್ದುಗೆ: ಪೀಠ; ಬಡಿಗೆ: ಕೋಲು, ದೊಣ್ಣೆ; ಸೂತ್ರಿಕೆ: ದಾರ, ನೂಲು; ಕಬ್ಬಿ: ಕುದುರೆ ಬಾಯಲ್ಲಿ ಸೇರಿಸಿ ಕಟ್ಟುವ ಉಕ್ಕಿನ ತುಂಡು; ಕಡಿ:ತುಂಡು, ಹೋಳು; ಕುಸುರಿ: ತುಂಡು,ಸೂಕ್ಷ್ಮವಾದ ಮತ್ತು ನಾಜೂ ಕಾದ ಕೆಲಸ; ಕೂಡೆ: ಜೊತೆ; ರಣಭೂಮಿ: ಯುದ್ಧರಂಗ;

ಪದವಿಂಗಡಣೆ:
ಕಡಿದ +ಹಕ್ಕರಿಕೆಗಳ +ಸೀಳಿದ
ದಡಿಯ +ನೆಗ್ಗಿದ +ಗುಳದ +ರೆಂಚೆಯ
ಸಿಡಿದ +ಸೀಸಕ+ ಬಾಹುರಕ್ಷೆಯ+ ಜೋಡು +ಮೊಚ್ಚೆಯದ
ಉಡಿದ +ಮಿಣಿ +ಮೊಗರಂಬ+ ಗದ್ದುಗೆ
ಬಡಿಗೆಗಳ+ ಸೂತ್ರಿಕೆಯ +ಕಬ್ಬಿಯ
ಕಡಿಯಣದ +ಕುಸುರಿಗಳಲ್+ಎಸೆದುದು +ಕೂಡೆ +ರಣಭೂಮಿ

ಅಚ್ಚರಿ:
(೧) ಕಡಿ, ದಡಿ, ಸಿಡಿ, ಉಡಿ, ಬಡಿ – ಪ್ರಾಸ ಪದಗಳು
(೨) ಹಕ್ಕರಿ, ದಡಿ, ರೆಂಚೆ, ಸೀಸಕ, ಬಾಹುರಕ್ಷೆ, ಮಿಣಿ, ಮೊಗರಂಬ, ಗದ್ದುಗೆ, ಸೂತ್ರಿಕೆ – ರಣರಂಗದಲ್ಲಿ ಚೆಲ್ಲಿದ ವಸ್ತುಗಳು

ಪದ್ಯ ೧೧: ಮಾವುತರ ಕೇರಿಯಲ್ಲಿ ಯಾವ ಮಾತುಗಳು ಕೇಳಿ ಬರುತ್ತಿದ್ದವು?

ಬಿಡು ಗಜವ ಬಿಗಿ ರೆಂಚೆಗಳ ತೆಗೆ
ದಡಿಯ ಹಾಯಿಕು ಗುಳವ ತಾ ಮೊಗ
ವಡವ ಕೊಡು ಪಟ್ಟೆಯವ ಕೈಯಲಿ ಬೀಸು ಚೌರಿಗಳ
ತಡವಿದೇನೋ ಸಾಯಿ ಫಡ ಫಡ
ಕೆಡೆಯೆನುತ ತಮ್ಮೊಬ್ಬರೊಬ್ಬರ
ಜಡಿಯಲಬ್ಬರವಾದುದಾರೋಹಕರ ಕೇರಿಯಲಿ (ಕರ್ಣ ಪರ್ವ, ೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಆನೆಯ ರೆಂಚೆ, ಗುಳ, ದಡಿಗಳನ್ನು ಹಾಕು, ಮುಖದ ಮೇಲೆ ಹಾಕುವ ಮುಖವಾಡವನ್ನು ಕೊಡು, ಪಟ್ಟೆಯವನ್ನು ಕೊಡು, ಚೌರಿಗಳನ್ನು ಕಟ್ಟು, ಯಾಕೆ ತಡ ಮಾಡುತ್ತಿ, ಸಾಯಿ! ಬೀಳು ಎನ್ನುತ್ತಾ ಒಬ್ಬರೊಬ್ಬರೊಡನೆ ಹೋರಾಡಲು ಮಾವುತರ ಕೇರಿಯಲ್ಲಿ ಸದ್ದಾಯಿತು.

ಅರ್ಥ:
ಬಿಡು: ಸುರಿಸು, ಚೆಲ್ಲು; ಗಜ: ಆನೆ; ಬಿಗಿ: ಭದ್ರ, ಗಟ್ಟಿ; ರೆಂಚೆ: ಆನೆ, ಜೂಲು; ತೆಗೆ:ಈಚೆಗೆ ತರು, ಹೊರತರು; ದಡಿ: ಆನೆಯ ಬೆನ್ನಿನ ಮೇಲೆ ಹಾಕುವ ಹಲ್ಲಣ, ಜೀನು; ಹಾಯಿಕು: ಹಾಕು, ತೊಡಿಸು; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಮೊಗ: ಮುಖ; ಮೊಗವಡವ; ಮುಖವಾಡ; ಕೊಡು: ನೀಡು; ಪಟ್ಟೆ: ಆನೆಯ ಕೊರಳು ಯಾ ನಡುವಿಗೆ ಕಟ್ಟುವ ಚರ್ಮದ ಪಟ್ಟಿ; ಕೈ: ಹಸ್ತ; ಬೀಸು: ತೂಗು; ಚೌರಿ:ಚೌರಿಯ ಕೂದಲು; ತಡವು: ನಿಧಾನ; ಸಾಯಿ: ಸತ್ತುಹೋಗು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಕೆಡೆ: ಬೀಳು, ಕುಸಿ; ಎನುತ: ಹೇಳುತ್ತಾ; ಜಡಿ: ಜರಿ, ಬಯ್ಯು; ಅಬ್ಬರ: ಜೋರಾಗಿ ಮಾತಾಡು; ಆರೋಹಕ: ಮಾವುತ; ಕೇರಿ: ಬೀದಿ, ಓಣಿ;

ಪದವಿಂಗಡಣೆ:
ಬಿಡು +ಗಜವ +ಬಿಗಿ +ರೆಂಚೆಗಳ +ತೆಗೆ
ದಡಿಯ +ಹಾಯಿಕು +ಗುಳವ +ತಾ +ಮೊಗ
ವಡವ+ ಕೊಡು +ಪಟ್ಟೆಯವ +ಕೈಯಲಿ +ಬೀಸು +ಚೌರಿಗಳ
ತಡವಿದೇನೋ +ಸಾಯಿ +ಫಡ +ಫಡ
ಕೆಡೆಯೆನುತ+ ತಮ್+ಒಬ್ಬರೊಬ್ಬರ
ಜಡಿಯಲ್+ಅಬ್ಬರ+ವಾದುದ್+ಆರೋಹಕರ +ಕೇರಿಯಲಿ

ಅಚ್ಚರಿ:
(೧) ಆನೆಯನ್ನು ಯುದ್ಧಕ್ಕೆ ಸಿದ್ಧಪಡಿಸಲು ಬಳಸುವ ಸಾಧನ: ರೆಂಚೆ, ಗುಳ, ದಡಿ, ಮೊಗವಾಡ, ಪಟ್ಟೆ, ಚೌರಿ
(೨) ಆಡು ಮಾತುಗಳ ಪ್ರಯೋಗ – ಸಾಯಿ, ಫಡ, ಕೆಡೆ