ಪದ್ಯ ೮: ಸಂಜಯನು ಯಾರ ನಡಿಗೆಯನ್ನು ನೋಡಿದನು – ೧?

ಅರಸ ಕೇಳೈ ಸಂಜಯನು ಬರ
ಬರಲು ಕಂಡನು ದೂರದಲಿ ನಿರಿ
ಗರುಳ ಕಾಲ್ದೊಡಕುಗಳ ಖಂಡದ ಜಿಗಿಯ ಚಾರುಗಳ
ಕರಿಗಳೊಟ್ಟಿಲನೇರಿಳಿದು ಪೈ
ಸರಿಸಿ ಮಿದುಳಿನ ಚೋರು ಜೊಂಡಿನ
ತೊರಳೆಯಲಿ ದಡದಡಿಸಿ ಜಾರುತ ಬೀಳುತೇಳುವನ (ಗದಾ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸಂಜಯನು ಬರ ಬರುತ್ತಾ ದೂರದಲ್ಲಿ ಕರುಳುಗಳು ಕಾಲಿಗೆ ತೊಡಕುತ್ತಾ ಇರಲು, ಮಾಂಸಖಂಡಗಳ ಅಂಟಿನಲ್ಲಿ ಜಾರುತ್ತಾ, ಆನೆಗಳ ರಾಶಿಗಳನ್ನು ಹತ್ತಿಳಿದು ಕೆಳಕ್ಕೆ ಬೀಳುತ್ತಾ ಮಿದುಳಿನ ಜೊಂಡು ಗುಲ್ಮಗಳನ್ನು ತುಳಿದು ವೇಗವಾಗಿ ಜಾರುತ್ತಾ, ಬೀಳುತ್ತಾ, ಏರುತ್ತಾ ಇದ್ದವನೊಬ್ಬನನ್ನು ನೋಡಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬರಲು: ಆಗಮಿಸು; ಕಂಡು: ನೋಡು; ದೂರ: ಬಹಳ ಅಂತರ; ನಿರಿ: ನೆರಿಗೆಯಂತಿರುವ ಕರುಳು; ಕಾಲು: ಪಾದ; ತೊಡಕು: ಸಿಕ್ಕಿಕೊಳ್ಳು; ಖಂಡ: ಚೂರು; ಜಿಗಿ: ಅಂಟು; ಜಾರು: ಬೀಳು; ಕರಿ: ಆನೆ; ಒಟ್ಟು: ಗುಂಪು; ಏರು: ಮೇಲೆ ಹತ್ತು; ಇಳಿ: ಕೆಳಕ್ಕೆ ಬಂದು; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಮಿದುಳು: ಮಸ್ತಿಷ್ಕ; ಜೋರು: ಹೆಚ್ಚಳ; ಜೊಂಡು: ತಲೆಯ ಹೊಟ್ಟು; ತೊರಳೆ: ಗುಲ್ಮ, ಪ್ಲೀಹ; ದಡದಡಿಸು: ವೇಗವಾಗಿ ನಡೆ; ಜಾರು: ಬೀಳು;

ಪದವಿಂಗಡಣೆ:
ಅರಸ +ಕೇಳೈ +ಸಂಜಯನು +ಬರ
ಬರಲು +ಕಂಡನು +ದೂರದಲಿ+ ನಿರಿ
ಗರುಳ +ಕಾಲ್ದೊಡಕುಗಳ+ ಖಂಡದ+ ಜಿಗಿಯ+ ಚಾರುಗಳ
ಕರಿಗಳ್+ಒಟ್ಟಿಲನ್+ಏರಿಳಿದು +ಪೈ
ಸರಿಸಿ +ಮಿದುಳಿನ +ಚೋರು +ಜೊಂಡಿನ
ತೊರಳೆಯಲಿ +ದಡದಡಿಸಿ+ ಜಾರುತ +ಬೀಳುತೇಳುವನ

ಅಚ್ಚರಿ:
(೧) ಚೋರು ಜೊಂಡಿನ, ಜಿಗಿಯ ಚಾರುಗಳ – ಪದಗಳ ಬಳಕೆ
(೨) ಬರಬರಲು, ದಡದಡಿಸಿ – ಪದಗಳ ಬಳಕೆ

ಪದ್ಯ ೮೩: ಕೌರವ ಸೈನ್ಯವು ಹೇಗೆ ಉರುಳಿತು

ತನುವನೊಲೆದವು ದಡದಡಿಸಿ ಕಿವಿ
ಗೊನೆಯ ಜೋಲಿಸಲಲ್ಲಿ ಮಡಿಗಾ
ಲಿನಲಿ ಕುಸಿದವು ಕೊರಳ ಮರಳಿಚಿ ಕೈಯನೊಳಗಿಟ್ಟು
ತೊನೆದು ಕೆಡೆದವು ಜೋದರಾಗಳು
ಕನಲಿ ಕೆಡೆದರು ಗುರುನದೀಜರ
ಘನ ಬಲಂಗಳೊಳಯುತ ಕೋಟಿ ಗಜಂಗಳುರುಳಿದವು (ವಿರಾಟ ಪರ್ವ, ೯ ಸಂಧಿ, ೮೩ ಪದ್ಯ)

ತಾತ್ಪರ್ಯ:
ಭೀಷ್ಮ ದ್ರೋಣರ ಸೈನ್ಯದಲ್ಲಿದ್ದ ಅಸಂಖ್ಯ ಆನೆಗಳು, ಮೈತುಗಿ ಕಾಲುಗಳನ್ನು ಧೊಪ್ಪನಿಟ್ಟು, ಕಿವಿಗಳು ಜೋಲು ಬೀಳಲು, ಕಾಲುಗಳನ್ನು ಮಡಿಸಿ, ಸೊಂಡಿಲುಗಳನ್ನು ಒಳಕ್ಕಿಟ್ಟು ಅಲುಗಾಡಿ ಕೊರಳನ್ನು ಹೊರಳಿಸಿ ಮಲಗಿದವು. ಅವು ಹೀಗೇಕೆ ಮಾಡುತ್ತಿವೆಯೆಂದು ಕೋಪಗೊಂಡ ಯೋಧರೂ ನಿದ್ದೆಯ ಅಮಲೇರಿ ಮಲಗಿದರು.

ಅರ್ಥ:
ತನು: ದೇಹ; ಒಲೆ: ತೂಗಾಡು; ದಡದಡಿಸು: ವೇಗವಾಗಿ ನಡೆ; ಕಿವಿ: ಕರ್ಣ; ಕೊನೆ: ತುದಿ; ಜೋಲು: ಕೆಳಗೆ ಬೀಳು; ಮಡಿ: ಮಡಿಸು; ಕಾಲು: ಪಾದ; ಕುಸಿ: ಬೀಳು; ಕೊರಳ: ಗಂಟಳು; ಮರಳು: ಸುತ್ತು, ತಿರುಗು; ಕೈ: ಹಸ್ತ; ತೊನೆ:ಅಲುಗಾಡು; ಕೆಡೆ:ಬೀಳು; ಜೋದರು: ಯೋಧರು, ಪರಾಕ್ರಮಿ; ಕನಲು: ಸಂಕಟಪಡು; ನದೀಜ: ಭೀಷ್ಮ; ಘನ: ಶ್ರೇಷ್ಠ; ಬಲ: ಸೈನ್ಯ; ಕೋಟಿ: ಅಸಂಖ್ಯಾತ; ಗಜ: ಆನೆ; ಉರುಳು: ಬೀಳು;

ಪದವಿಂಗಡಣೆ:
ತನುವನ್+ಒಲೆದವು +ದಡದಡಿಸಿ +ಕಿವಿ
ಕೊನೆಯ +ಜೋಲಿಸಲಲ್ಲಿ +ಮಡಿ+
ಕಾಲಿನಲಿ +ಕುಸಿದವು +ಕೊರಳ +ಮರಳಿಚಿ +ಕೈಯನ್+ಒಳಗಿಟ್ಟು
ತೊನೆದು +ಕೆಡೆದವು +ಜೋದರಾಗಳು
ಕನಲಿ +ಕೆಡೆದರು +ಗುರು+ನದೀಜರ
ಘನ +ಬಲಂಗಳೊಳಯುತ+ ಕೋಟಿ +ಗಜಂಗಳ್+ಉರುಳಿದವು

ಅಚ್ಚರಿ:
(೧) ಆನೆಗಳ ಸ್ಥಿತಿ – ತನುವನೊಲೆದವು ದಡದಡಿಸಿ ಕಿವಿಗೊನೆಯ ಜೋಲಿಸಲಲ್ಲಿ ಮಡಿಗಾ
ಲಿನಲಿ ಕುಸಿದವು ಕೊರಳ ಮರಳಿಚಿ ಕೈಯನೊಳಗಿಟ್ಟು