ಪದ್ಯ ೬೪: ಕೌರವರು ಯಾರ ಬಿಡಾರಕ್ಕೆ ಬಂದರು?

ಇವರು ಬಂದರು ದಕ್ಷಿಣದ ದೆಸೆ
ಗವರ ಪಾಳೆಯಕಾಗಿ ಸುತ್ತಲು
ಸವಡಿಗತ್ತಲೆಯಾಯ್ತು ಘನರೋಷಾಂಧಕಾರದಲಿ
ಇವರು ಮನದಲಿ ಕುಡಿದರಹಿತಾ
ರ್ಣವವರಿವರಿಗೆ ಗೋಚರವೆ ಪಾಂ
ಡವರು ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ಆ ಮೂವರೂ ದಕ್ಷಿಣ ದಿಕ್ಕಿನೆಡೆಗೆ ಹೊರಟರು. ಪಾಂಡವರ ಪಾಳೆಯದ ಕಡೆಗೆ ನಡೆದರು. ಕತ್ತಲು ದಟ್ಟಯಿಸಿದಂತೆ ಇವರ ಘನರೋಷಾಂಧಕಾರವೂ ದಟ್ಟಯಿಸಿತು. ಪಾಂಡವಸೇನಾ ಸಮುದ್ರವನ್ನು ಇವರು ಮನಸ್ಸಿನಲ್ಲೇ ಕುಡಿದರು. ಆದರೆ ಶ್ರೀಕೃಷ್ಣನ ಕರುಣೆಯಿಂದ ಪಾಂಡವರು ಇವರಿಗೆ ಸಿಲುಕುವರೇ!

ಅರ್ಥ:
ಬಂದು: ಆಗಮಿಸು; ದೆಸೆ: ದಿಕ್ಕು; ಪಾಳೆಯ: ಬೀಡು; ಸುತ್ತಲು: ಬಳಸಿಕೊಂಡು; ಸವಡಿ: ಜೊತೆ, ಜೋಡಿ; ಕತ್ತಲೆ: ಅಂಧಕಾರ; ಘನ: ದೊಡ್ಡ, ಗಾಢ; ರೋಷ: ಕೋಪ; ಅಂಧಕಾರ: ಕತ್ತಲೆ; ಮನ: ಮನಸ್ಸು; ಕುದಿ: ಮರಳು, ಸಂಕಟಪಡು; ಕುಡಿ: ಪಾನಮಾಡು; ಅಹಿ: ವೈರಿ; ಆರ್ಣವ: ಯುದ್ಧ; ಗೋಚರ: ಕಾಣುವುದು, ಮಾಡಬಹುದಾದ; ಕರುಣೆ: ದಯೆ;

ಪದವಿಂಗಡಣೆ:
ಇವರು +ಬಂದರು +ದಕ್ಷಿಣದ +ದೆಸೆಗ್
ಅವರ+ ಪಾಳೆಯಕಾಗಿ +ಸುತ್ತಲು
ಸವಡಿ+ಕತ್ತಲೆಯಾಯ್ತು +ಘನ+ರೋಷಾಂಧಕಾರದಲಿ
ಇವರು +ಮನದಲಿ+ ಕುಡಿದರ್+ಅಹಿತ
ಅರ್ಣವವರ್+ಇವರಿಗೆ +ಗೋಚರವೆ +ಪಾಂ
ಡವರು +ಗದುಗಿನ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಸವಡಿಗತ್ತಲೆಯಾಯ್ತು ಘನರೋಷಾಂಧಕಾರದಲಿ

ಪದ್ಯ ೧೮: ಯುಧಿಷ್ಠಿರನು ಯಾರ ಆಗಮನವನ್ನು ನಿರೀಕ್ಷಿಸಿದನು?

ವಾಮನಯನ ಸ್ಫುರಣ ಪರಿಗತ
ವಾಮ ಬಾಹುಸ್ಪಂದವಾದುದು
ಭಾಮಿನಿಗೆ ಭೂಪತಿಗೆ ಚಲಿಸಿತು ದಕ್ಷಿಣಾಂಗದಲಿ
ವೈಮನಸ್ಯವ್ಯಸನ ನಿರಸನ
ಕೀ ಮಹಾ ಶಕುನಂಗಳಿವೆಯೆಂ
ದಾ ಮಹೀಪತಿ ನೆನೆವುತಿರ್ದನು ಫಲುಗುಣನ ಬರವ (ಅರಣ್ಯ ಪರ್ವ, ೧೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಹೀಗೆ ಯುಧಿಷ್ಠಿರನು ಯೋಚಿಸುತ್ತಿರಲು, ದ್ರೌಪದಿಯ ಎಡಕಣ್ಣು, ಮತ್ತು ಎಡಭುಜ ಅದರಿದವು, ಯುಧಿಷ್ಠಿರನ ಬಲಗಣ್ಣು ಬಲಭುಜವೂ ಅದುರಿದರು ಮನೋವ್ಯಥೆಯ ಪರಿಹಾರಕ್ಕಾಗಿ ಈ ಉತ್ತಮ ಶಕುನಗಳಾಗುತ್ತಿವೆಯೆಂದು ಧರ್ಮಜನು ಅರ್ಜುನನ ಆಗಮನವನ್ನು ನಿರೀಕ್ಷಿಸಿದನು.

ಅರ್ಥ:
ವಾಮ: ಎಡಭಾಗ; ನಯನ: ಕಣ್ಣು; ಸ್ಫುರಣ: ಅಲುಗಾಡು; ಪರಿಗತ:ಹೆಚ್ಚಾದ, ಆವರಿಸು; ಬಾಹು: ಭುಜ; ಸ್ಪಂದ: ಅಲ್ಲಾಡು, ಕಂಪನ; ಭಾಮಿನಿ: ಹೆಣ್ಣು; ಭೂಪತಿ: ರಾಜ; ಚಲಿಸು: ನಡೆ, ಅದರು; ದಕ್ಷಿಣ: ಬಲಭಾಗ; ಅಂಗ: ದೇಹದ ಭಾಗ; ವೈಮನಸ್ಯ: ಅಪಾರವಾದ ದುಃಖ; ವ್ಯಸನ: ದುಃಖ, ವ್ಯಥೆ; ನಿರಸನ: ಹೊರದೂಡುವುದು, ನಾಶ; ಮಹಾ: ದೊಡ್ಡ; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಮಹೀಪತಿ: ರಾಜ; ನೆನೆ: ಜ್ಞಾಪಿಸಿಕೋ; ಫಲುಗುಣ: ಅರ್ಜುನ; ಬರವ: ಆಗಮನ;

ಪದವಿಂಗಡಣೆ:
ವಾಮ+ನಯನ +ಸ್ಫುರಣ +ಪರಿಗತ
ವಾಮ +ಬಾಹು+ಸ್ಪಂದವಾದುದು
ಭಾಮಿನಿಗೆ +ಭೂಪತಿಗೆ +ಚಲಿಸಿತು +ದಕ್ಷಿಣಾಂಗದಲಿ
ವೈಮನಸ್ಯ+ವ್ಯಸನ +ನಿರಸನಕ್
ಈ+ ಮಹಾ +ಶಕುನಂಗಳಿವೆ+ಯೆಂದ್
ಆ+ ಮಹೀಪತಿ +ನೆನೆವುತಿರ್ದನು +ಫಲುಗುಣನ +ಬರವ

ಅಚ್ಚರಿ:
(೧) ವಾಮ, ದಕ್ಷಿಣ – ದಿಕ್ಕನ್ನು ಸೂಚಿಸುವ ಪದಗಳ ಬಳಕೆ
(೨) ಭಾಮಿನಿ, ಭೂಪತಿ – ಪದಗಳ ಬಳಕೆ
(೩) ಭೂಪತಿ, ಮಹೀಪತಿ – ಪ್ರಾಸಪದಗಳು