ಪದ್ಯ ೫೯: ಕೃಷ್ಣನು ಯಾವ ರಾಕ್ಷಸರನ್ನು ಸಂಹರಿಸಿದನು?

ಮುರನ ನರಕನ ಹಂಸಡಿಬಿಕರ
ವರಸೃಗಾಲದ ದಂತವಕ್ತ್ರನ
ದುರುಳ ಪೌಂಡ್ರಕ ಪಂಚಜನ ಕುಂಭನ ನಿಕುಂಭಕನ
ಅರಿ ಹಯಗ್ರೀವಕನ ಸಾಲ್ವನ
ನೊರಸಿದನಲಾ ನಿನ್ನ ಪಾಡಿನ
ದುರುಳರೇ ದೈತ್ಯೇಂದ್ರರೀತನ ಕೆಣಕಿದವರೆಂದ (ಸಭಾ ಪರ್ವ, ೧೦ ಸಂಧಿ, ೫೯ ಪದ್ಯ)

ತಾತ್ಪರ್ಯ:
ಮುರ, ನರಕ, ಹಂಸ, ಡಿಬಿಕ, ಸೃಗಾಲ, ದಂತವಕ್ತ್ರ, ಪೌಂಡ್ರಕ, ಪಂಚಜನ, ಕುಂಭ, ನಿಕುಂಭ, ಹಯಗ್ರೀವ, ಸಾಲ್ವ ಮೊದಲಾದ ದುಷ್ಟ ದೈತ್ಯರನ್ನು ಯುದ್ಧದಲ್ಲಿ ಸಂಹರಿಸಿದನು. ಅವರಿಗೆ ನೀನು ಯಾವ ರೀತಿಯಲ್ಲೂ ಸಮನಲ್ಲ. ಇವನನ್ನು ಹಿಂದೆ ಕೆಣಕಿದವರು ನಿನಗಿಂತ ಬಲಶಾಲಿಗಳೆಂದು ಭೀಷ್ಮರು ಹೇಳಿದರು.

ಅರ್ಥ:
ದುರುಳ: ದುಷ್ಟ; ಅರಿ: ವೈರಿ; ಒರಸು: ಸಾರಿಸು, ನಾಶಮಾಡು, ಅಳಿಸು; ಪಾಡು: ಸ್ಥಿತಿ, ಅವಸ್ಥೆ; ದೈತ್ಯ: ರಾಕ್ಷಸ; ಕೆಣಕು: ರೇಗಿಸು;

ಪದವಿಂಗಡಣೆ:
ಮುರನ+ ನರಕನ+ ಹಂಸ+ಡಿಬಿಕರ
ವರಸೃಗಾಲದ +ದಂತವಕ್ತ್ರನ
ದುರುಳ +ಪೌಂಡ್ರಕ +ಪಂಚಜನ +ಕುಂಭನ +ನಿಕುಂಭಕನ
ಅರಿ +ಹಯಗ್ರೀವಕನ +ಸಾಲ್ವನನ್
ಒರಸಿದನಲಾ +ನಿನ್ನ +ಪಾಡಿನ
ದುರುಳರೇ +ದೈತ್ಯೇಂದ್ರರ್+ಈತನ +ಕೆಣಕಿದವರೆಂದ

ಅಚ್ಚರಿ:
(೧) ರಾಕ್ಷಸರ ಹೆಸರು – ಮುರ, ನರಕ, ಹಂಸ, ಡಿಬಿಕ, ಸೃಗಾಲ, ದಂತವಕ್ತ್ರ, ಪೌಂಡ್ರಕ, ಪಂಚಜನ, ಕುಂಭ, ನಿಕುಂಭ, ಹಯಗ್ರೀವ, ಸಾಲ್ವ

ಪದ್ಯ ೪೯: ಯಾರ ಮಕ್ಕಳು ಕೃಷ್ಣನಿಂದ ಪಟ್ಟಾಭಿಷಿಕ್ತರಾದರು?

ಮಗಧಸುತನೀ ಸಾಲ್ವ ಹಂಸನ
ಮಗ ನಿಶುಂಭನ ಸೂನು ನರಕನ
ಮಗನು ಪೌಂಡ್ರಕ ದಂತವಕ್ತ್ರನ ತನುಜರಿವರೆಲ್ಲ
ಹಗೆಯ ಮಾಡಿ ಮುರಾಂತಕನ ಕಾ
ಳಗದೊಳೆಲ್ಲರನಿಕ್ಕಿ ಪಟ್ಟವ
ಬಿರಿಸಿಕೊಂಡವರಲ್ಲವೇ ಹೇಳೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೪೯ ಪದ್ಯ)

ತಾತ್ಪರ್ಯ:
ಜರಾಸಂಧನ ಮಗ, ಸಾಲ್ವ, ಹಂಸ, ನಿಶುಂಭ, ನರಕ, ಪೌಂಡ್ರಕ, ದಂತವಕ್ತ್ರ ಇವರ ಮಕ್ಕಳೂ ಯುದ್ಧದಲ್ಲಿ ಕೃಷ್ಣನಿಂದ ತಮ್ಮ ತಂದೆಯರನ್ನು ಕಳೆದುಕೊಂಡ ನಂತರ ಕೃಷ್ಣನಿಂದಲೇ ಪಟ್ಟಕ್ಕೆ ಬಂದವರಲ್ಲವೇ ಎಂದು ಭೀಷ್ಮರು ಕೇಳಿದರು.

ಅರ್ಥ:
ಸುತ: ಮಗ; ಮಗಧಸುತ: ಜರಾಸಂಧ; ಹಗೆ: ವೈರತ್ವ; ಮುರಾಂತಕ: ಕೃಷ್ಣ; ಕಾಳಗ: ಯುದ್ಧ;ಇಕ್ಕು: ಸಾಯಿಸು; ಪಟ್ಟ: ಪದವಿ; ಬಿರಿಸು: ಕಟ್ಟು; ಹೇಳು: ತಿಳಿಸು;

ಪದವಿಂಗಡಣೆ:
ಮಗಧಸುತನ್+ಈ+ ಸಾಲ್ವ +ಹಂಸನ
ಮಗ +ನಿಶುಂಭನ+ ಸೂನು +ನರಕನ
ಮಗನು +ಪೌಂಡ್ರಕ +ದಂತವಕ್ತ್ರನ+ ತನುಜರ್+ಇವರೆಲ್ಲ
ಹಗೆಯ +ಮಾಡಿ +ಮುರಾಂತಕನ+ ಕಾ
ಳಗದೊಳ್+ಎಲ್ಲರನ್+ಇಕ್ಕಿ +ಪಟ್ಟವ
ಬಿರಿಸಿಕೊಂಡವರ್+ಅಲ್ಲವೇ +ಹೇಳೆಂದನಾ +ಭೀಷ್ಮ

ಅಚ್ಚರಿ:
(೧) ಮಗ, ಸೂನು, ತನುಜ – ಸಮನಾರ್ಥಕ ಪದ
(೨) ಮಗ – ೧-೩ ಸಾಲಿನ ಮೊದಲ ಪದ

ಪದ್ಯ ೩೮: ಮತ್ತಾವರನ್ನು ಕೃಷ್ಣನು ಸಂಹರಿಸಿದನು?

ಕಾಲಯವನನ ದಂತವಕ್ತ್ರನ
ಸೀಳಿದೆವು ಮುರ ನರಕ ಕುಂಭನ
ಸಾಲುವನ ಪೌಂಡ್ರಕನ ಡಿಬಿಕನ ಹಂಸ ಮೋಹರವ
ಕಾಳಗದೊಳಿಟ್ಟೊರಸಿ ಬಾಣನ
ತೋಳ ತರಿವಂದಾಯ್ತು ಧಾಳಾ
ಧೂಳಿಯಾಹವವಿಂದುಮೌಳಿಯೊಳೆಮಗೆ ಮುಳಿಸಿನಲಿ (ಉದ್ಯೋಗ ಪರ್ವ, ೧ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅಷ್ಟು ಸಾಲದೇನೋ ಎಂಬಂತೆ, ಕಾಲಯವನ, ದಂತವಕ್ತ್ರ, ಮುರ, ನರಕ, ಕುಂಭ, ಸಾಲ್ವ, ಪೌಂಡ್ರಕ, ಡಿಬಿಕ, ಹಂಸರೆಲ್ಲರನ್ನು ಅವರ ಸೈನ್ಯಗಳನ್ನು ಸಂಹಾರ ಮಾಡಿದೆ. ನಂತರ ಬಾಣಾಸುರನ ಸಾವಿರ ತೋಳುಗಳನ್ನು ಕತ್ತರಿಸಿದೆ. ಅದಕ್ಕೆ ಮೊದಲು ಶಿವನೊಡನೆ ಯುದ್ಧ ಮಾಡಬೇಕಾಯಿತು ಎಂದು ಕೃಷ್ಣನು ಹೇಳಿದನು.

ಅರ್ಥ:
ಕಾಳಗ: ಯುದ್ಧ; ಒರಸು:ಸಾರಿಸು, ನಾಶಮಾಡು, ಅಳಿಸು; ತರಿ: ಕಡಿ, ಕತ್ತರಿಸು; ಧಾಳಧೂಳಿ: ವಿಪ್ಲವ, ಚೆಲ್ಲಾಪಿಲ್ಲಿಯಾಗುವಿಕೆ; ಆಹವ: ಯುದ್ಧ; ಇಂದು: ಚಂದ್ರ; ಮೌಳಿ: ತಲೆ; ಮುಳಿಸು: ಕೋಪ;

ಪದವಿಂಗಡಣೆ:
ಕಾಲಯವನನ+ ದಂತವಕ್ತ್ರನ
ಸೀಳಿದೆವು +ಮುರ +ನರಕ +ಕುಂಭನ
ಸಾಲುವನ +ಪೌಂಡ್ರಕನ +ಡಿಬಿಕನ +ಹಂಸ +ಮೋಹರವ
ಕಾಳಗದೊಳ್+ಇಟ್ಟ್+ಒರಸಿ+ ಬಾಣನ
ತೋಳ +ತರಿವಂದಾಯ್ತು+ ಧಾಳಾ
ಧಾಳಿಯ + ಆಹವವ್+ಇಂದುಮೌಳಿಯೊಳ್+ಎಮಗೆ +ಮುಳಿಸಿನಲಿ

ಅಚ್ಚರಿ:
(೧) ಶಿವನನ್ನು ಇಂದುಮೌಳಿ ಎಂದು ಕರೆದಿರುವುದು
(೨) ೧೦ ದಾನವರ ಹೆಸರನ್ನು ೩ ಸಾಲುಗಳಲ್ಲಿ ಹೇಳಿರುವುದು

ಪದ್ಯ ೨: ಸಹದೇವನ ಮೊದಲ ಮೂರ ವಿಜಯಗಳು ಯಾರಮೇಲಾದವು?

ಶೂರಸೇನನ ಸದೆದು ನೆರೆ ಭಂ
ಡಾರವೆಲ್ಲವ ಕೊಂಡು ತೆಂಕಣನ್
ವೀರ ಮತ್ಸ್ಯನ ಗೆಲಿದು ಸರ್ವಸ್ವಾಪಹಾರದಲಿ
ಭೂರಿ ಬಲನಹ ದಂತವಕ್ತ್ರನ
ವಾರಣಾಶ್ವರಥಂಗಳನು ಕೊಂ
ಡಾರುಭಟೆಯಲಿ ಮುಂದೆ ನಡೆದನು ತೆಂಕಮುಖವಾಗಿ (ಸಭಾ ಪರ್ವ, ೫ ಸಂಧಿ, ೨ ಪದ್ಯ)

ತಾತ್ಪರ್ಯ:
ಸಹದೇವನು ತನ್ನ ವಿಜಯ ಯಾತ್ರೆಯನ್ನು ಶೂರಸೇನನ ಮೇಲಿನ ವಿಜಯದಿಂದ ಶುರುಮಾಡಿದನು. ಶೂರಸೇನನನ್ನು ಗೆದ್ದು, ಅವನ ಭಂಡಾರವನ್ನೆಲ್ಲಾ ತೆಗೆದುಕೊಂಡನು. ದಕ್ಷಿಣ ಮತ್ಸ್ಯನನ್ನು ಜಯಿಸಿ ಅವನ ಸರ್ವಸ್ವವನ್ನು ತೆಗೆದುಕೊಂಡನು. ಮಹಾಬಲಶಾಲಿಯಾದ ದಂತವಕ್ತ್ರನ ಆನೆ, ಕುದುರೆ, ರಥಗಳನ್ನು ತೆಗೆದುಕೊಂಡು ಆರ್ಭಟಮಾಡುತ್ತಾ ಮುಂದುವರೆದನು.

ಅರ್ಥ:
ಸದೆ: ಕೊಲ್ಲು, ಹೊಡೆ; ನೆರೆ: ಹೆಚ್ಚಳ, ಪಕ್ಕ; ಭಂಡಾರ: ಬೊಕ್ಕಸ, ಖಜಾನೆ; ಕೊಂಡು: ತೆಗೆದು; ತೆಂಕಣ: ದಕ್ಷಿಣ ದಿಕ್ಕು; ವೀರ: ಶೂರ; ಗೆಲಿದು: ಜಯಿಸಿ; ಸರ್ವ: ಎಲ್ಲಾ; ಅಪಹಾರ: ಕಿತ್ತುಕೊಳ್ಳುವುದು; ಭೂರಿ: ಅಧಿಕ; ಬಲ: ಶೂರ; ವಕ್ತ್ರ: ಮುಖ; ವಾರಣ: ಆನೆ, ಗಜ; ಅಶ್ವ: ಕುದುರೆ; ರಥ: ಬಂಡಿ; ಆರುಭಟ: ಜೋರಾದ ಕೂಗು;

ಪದವಿಂಗಡಣೆ:
ಶೂರಸೇನನ+ ಸದೆದು +ನೆರೆ +ಭಂ
ಡಾರವೆಲ್ಲವ +ಕೊಂಡು +ತೆಂಕಣ
ವೀರ +ಮತ್ಸ್ಯನ +ಗೆಲಿದು +ಸರ್ವಸ್ವ+ಅಪಹಾರದಲಿ
ಭೂರಿ +ಬಲನಹ +ದಂತವಕ್ತ್ರನ
ವಾರಣ+ಅಶ್ವ+ರಥಂಗಳನು +ಕೊಂಡ್
ಆರುಭಟೆಯಲಿ +ಮುಂದೆ +ನಡೆದನು +ತೆಂಕ+ಮುಖವಾಗಿ

ಅಚ್ಚರಿ:
(೧) ಶೂರಸೇನ, ಮತ್ಸ್ಯ, ದಂತವಕ್ತ್ರ – ರಾಜರ ಹೆಸರು
(೨) ಸದೆದು, ಗೆಲಿದು, ಕೊಂಡು – ಪ್ರತಿ ರಾಜರನ್ನು ಹೇಗೆ ಗೆದ್ದನೆನ್ನುವ ಪದಗಳು
(೩) ತೆಂಕ – ೨, ೬ ಸಾಲಿನ ಕೊನೆಯಪದ