ಪದ್ಯ ೬: ಕೌರವವನನ್ನು ಕಂಡ ಸಂಜಯನ ಸ್ಥಿತಿ ಹೇಗಿತ್ತು?

ಕಂಡೆನರಸನ ನಿಬ್ಬರವ ಬಳಿ
ಕಂಡಲೆದುದತಿಶೋಕಶಿಖಿ ಕೈ
ಗೊಂಡುದಿಲ್ಲರೆಘಳಿಗೆ ಬಳಿಕೆಚ್ಚತ್ತು ಕಂದೆರೆದು
ಖಂಡಿಸಿದನೆನ್ನುಬ್ಬೆಯನು ಹುರಿ
ಗೊಂಡುದಾತನ ಸತ್ವವಾತನ
ದಂಡಿಯಲಿ ಬಹರಾರು ಸುರ ನರ ನಾಗಲೋಕದಲಿ (ಗದಾ ಪರ್ವ, ೪ ಸಂಧಿ, ೬ ಪದ್ಯ)

ತಾತ್ಪರ್ಯ:
ಸಂಜಯನು ಮಾತನಾಡುತ್ತಾ, ನಾನು ರಾಜನ ಕಳವಳವನ್ನು ನೋಡಿದೆ, ಅತಿಶಯ ಶೋಕಜ್ವಾಲೆಯಲ್ಲಿ ಬೆಂದಿದ್ದೆ. ಒಂದು ನಿಮಿಷ ಮೂರ್ಛಿತನಾಗಿ, ನಂತರ ಎಚ್ಚೆತ್ತು, ಕಣ್ಣುತೆರೆದು ನನ್ನ ಶೋಕವನ್ನು ನಿಲ್ಲಿಸಿದನು. ಅವನ ಸತ್ವ ಹುರಿಗೊಂಡಿತು. ಅವನಿಗೆ ಸ್ವರ್ಗ, ಮರ್ತ್ಯ, ಪಾತಾಳ ಲೋಕಗಳಲ್ಲಿ ಸಮರಾರಿದ್ದಾರೆ?

ಅರ್ಥ:
ಕಂಡು: ನೋಡು; ಅರಸ: ರಾಜ; ನಿಬ್ಬರ: ಅತಿಶಯ, ಹೆಚ್ಚಳ; ಬಳಿ: ಹತ್ತಿರ; ಅತಿ: ಬಹಳ: ಶೋಕ: ದುಃಖ; ಶಿಖಿ: ಬೆಂಕಿ; ಕೈಗೊಂಡು: ಪಡೆದು; ಅರೆ: ಅರ್ಧ; ಘಳಿಗೆ: ಸಮಯ; ಬಳಿಕ: ನಂತರ; ಎಚ್ಚತ್ತು: ಎಚ್ಚರನಾಗಿ; ಕಂದೆರೆದು: ಕಣ್ಣುಬಿಟ್ಟು; ಖಂಡಿಸು: ಕಡಿ, ಕತ್ತರಿಸು; ಉಬ್ಬೆ: ಸೆಕೆ, ಕಾವು; ಹುರಿ: ಕಾಯಿಸು, ತಪ್ತಗೊಳಿಸು; ಸತ್ವ: ಸಾರ; ದಂಡಿ: ಶಕ್ತಿ, ಸಾಮರ್ಥ್ಯ; ಬಹರು: ಆಗಮಿಸು; ಸುರ: ದೇವತೆ; ನರ: ಮನುಷ್ಯ; ನಾಗಲೋಕ: ಪಾತಾಳ;

ಪದವಿಂಗಡಣೆ:
ಕಂಡೆನ್+ಅರಸನ +ನಿಬ್ಬರವ +ಬಳಿ
ಕಂಡಲೆದುದ್+ಅತಿ+ಶೋಕಶಿಖಿ+ ಕೈ
ಗೊಂಡುದಿಲ್ಲ್+ಅರೆ+ಘಳಿಗೆ +ಬಳಿಕ್+ಎಚ್ಚತ್ತು +ಕಂದೆರೆದು
ಖಂಡಿಸಿದನ್+ಎನ್ನ್+ಉಬ್ಬೆಯನು +ಹುರಿ
ಗೊಂಡುದಾತನ +ಸತ್ವವ್+ಆತನ
ದಂಡಿಯಲಿ +ಬಹರಾರು +ಸುರ+ ನರ+ ನಾಗಲೋಕದಲಿ

ಅಚ್ಚರಿ:
(೧) ದುರ್ಯೋಧನನ ಪರಾಕ್ರಮ – ಆತನ ದಂಡಿಯಲಿ ಬಹರಾರು ಸುರ ನರ ನಾಗಲೋಕದಲಿ

ಪದ್ಯ ೫೦: ದುರ್ಯೋಧನನು ಕೌರವ ಸೇನೆಗೆ ಏನು ಹೇಳಿದ?

ಕಂಡನೀ ಶಲ್ಯಾರ್ಜುನರ ಕೋ
ದಂಡಸಾರಶ್ರುತಿರಹಸ್ಯದ
ದಂಡಿಯನು ಕುರುರಾಯ ಕೈವೀಸಿದನು ತನ್ನವರ
ಗಂಡುಗಲಿಗಳೊ ವೀರಸಿರಿಯುಳಿ
ಮಿಂಡರೋ ತನಿನಗೆಯ ಬಿರುದಿನ
ಭಂಡರೋ ನೀವಾರೆನುತ ಮೂದಲಿಸಿದನು ಭಟರ (ಶಲ್ಯ ಪರ್ವ, ೨ ಸಂಧಿ, ೫೦ ಪದ್ಯ)

ತಾತ್ಪರ್ಯ:
ಶಲ್ಯಾರ್ಜುನರ ಧನುರ್ವೇದ ರಹಸ್ಯದ ಘನತೆಯನ್ನು ಕಂಡು ಕೌರವನು ತನ್ನ ಸೇನೆಯ ವೀರರನ್ನು ಕರೆದು ನೀವೇನು ಗಂಡುಗಲಿಗಳೋ? ಪರಾಕ್ರಮ ಲಕ್ಷ್ಮಿಯು ಸಿಕ್ಕುವಳೆಂದು ಸುಮ್ಮನೆ ಕಾದು ನಿಮ್ತ ಜಾರರೋ? ಬಿರುದಗಳಿಂದ ಹೊಗಳಿಸಿಕೊಂಡು ನಕ್ಕು ಹಿಗ್ಗುವ ಭಂಡರೋ? ನೀವಾರು ಎಂದು ಮೂದಲಿಸಿದನು.

ಅರ್ಥ:
ಕಂಡು: ನೋಡು; ಕೋದಂಡ: ಬಿಲ್ಲು; ಸಾರ: ಸತ್ವ; ರಹಸ್ಯ: ಗುಟ್ಟು; ದಂಡಿ: ಘನತೆ, ಹಿರಿಮೆ; ಶ್ರುತಿ: ವೇದ; ಕೈವೀಸು: ಹಸ್ತವನ್ನು ಅಲ್ಲಾಡಿಸು; ಗಂಡುಗಲಿ: ಪರಾಕ್ರಮಿ; ವೀರ: ಶೂರ; ಸಿರಿ: ಐಶ್ವರ್ಯ; ಮಿಂಡ: ವೀರ, ಶೂರ; ತನಿ: ಚೆನ್ನಾಗಿ ಬೆಳೆದುದು; ನಗೆ: ಹರ್ಷ; ಬಿರುದು: ಗೌರವ ಸೂಚಕ ಪದ; ಭಂಡ: ನಾಚಿಕೆ, ಲಜ್ಜೆ; ಮೂದಲಿಸು: ಹಂಗಿಸು; ಭಟ: ಸೈನಿಕ;

ಪದವಿಂಗಡಣೆ:
ಕಂಡನ್+ಈ+ ಶಲ್ಯ+ಅರ್ಜುನರ +ಕೋ
ದಂಡ+ಸಾರ+ಶ್ರುತಿ+ರಹಸ್ಯದ
ದಂಡಿಯನು +ಕುರುರಾಯ +ಕೈವೀಸಿದನು +ತನ್ನವರ
ಗಂಡುಗಲಿಗಳೊ+ ವೀರಸಿರಿ+ಉಳಿ
ಮಿಂಡರೋ +ತನಿ+ನಗೆಯ +ಬಿರುದಿನ
ಭಂಡರೋ +ನೀವಾರೆನುತ+ ಮೂದಲಿಸಿದನು +ಭಟರ

ಅಚ್ಚರಿ:
(೧) ಕೋದಂಡ, ಮಿಂಡ, ಭಂಡ, ಕಂಡ – ಪ್ರಾಸ ಪದಗಳು

ಪದ್ಯ ೨೪: ಶಿವನು ನಗುತ್ತಾ ಪಾರ್ವತಿಗೆ ಏನು ಹೇಳಿದನು?

ಕಂಡಿರೇ ದೇವಿಯರು ನರನು
ದ್ದಂಡತನವನು ತರಗೆಲೆಯ ಕೈ
ಗೊಂಡು ತಿಂಗಳು ನಾಲ್ಕ ಪವನಗ್ರಾಸದಿಂ ಬಳಿಕ
ದಂಡಿಸಿದನೀ ದೇಹವನು ನಾ
ವಂಡಲೆಯ ಲೊದಗಿದನಲೇ ಸಮ
ದಂಡಿಯಲಿ ನಮ್ಮೊಡನೆಯೆಂದನು ನಗುತ ಶಶಿಮೌಳಿ (ಅರಣ್ಯ ಪರ್ವ, ೭ ಸಂಧಿ, ೨೪ ಪದ್ಯ)

ತಾತ್ಪರ್ಯ:
ಶಿವನು, ಪಾರ್ವತೀದೇವಿ, ಅರ್ಜುನನ ಅತಿಶಯ ಪರಾಕ್ರಮವನ್ನು ನೋಡಿದಿರಾ? ನಾಲ್ಕು ತಿಂಗಳು ತರಗೆಲೆಯನ್ನು ತಿಂದು, ಬಳಿಕ ಗಾಳಿಯನ್ನೇ ಆಹಾರವನ್ನಾಗಿ ಸ್ವೀಕರಿಸಿದವನು. ಇವನು ಹೀಗೆ ದೇಹವನ್ನು ದಂಡಿಸಿದ ಬಳಿಕ, ನಮ್ಮೊಡನೆ ಸರಿಸಮನಾಗಿ ಯುದ್ಧ ಮಾಡಿದ್ದಾನೆ ಎಂದು ನಗುತ್ತಾ ಹೇಳಿದನು.

ಅರ್ಥ:
ಕಂಡು: ನೋಡು; ದೇವಿ: ಭಗವತಿ; ನರ: ಅರ್ಜುನ; ಉದ್ದಂಡ: ಪ್ರಬಲವಾದ, ಪ್ರಚಂಡವಾದ; ತರಗೆಲೆ: ಒಣಗಿದ ಎಲೆ; ಕೈಗೊಂಡು: ತೆಗೆದುಕೊಂಡು; ತಿಂಗಳು: ಮಾಸ; ಪವನ: ಗಾಳಿ; ಗ್ರಾಸ: ತುತ್ತು, ಆಹಾರ; ಬಳಿಕ: ನಂತರ; ದಂಡಿಸು: ಶಿಕ್ಷಿಸು; ದೇಹ: ಶರೀರ; ಅಂಡಲೆ: ಕಾಡು, ಪೀಡಿಸು; ನಗು: ಹರ್ಷಿಸು; ಶಶಿಮೌಳಿ: ಶಂಕರ; ಶಶಿ: ಚಂದ್ರ; ಮೌಳಿ: ಶಿರ, ತಲೆ;

ಪದವಿಂಗಡಣೆ:
ಕಂಡಿರೇ +ದೇವಿಯರು +ನರನ್
ಉದ್ದಂಡತನವನು +ತರಗೆಲೆಯ +ಕೈ
ಗೊಂಡು +ತಿಂಗಳು +ನಾಲ್ಕ +ಪವನ+ಗ್ರಾಸದಿಂ +ಬಳಿಕ
ದಂಡಿಸಿದನ್+ಈ+ ದೇಹವನು+ ನಾವ್
ಅಂಡಲೆಯಲ್ +ಒದಗಿದನಲೇ +ಸಮ
ದಂಡಿಯಲಿ +ನಮ್ಮೊಡನೆ+ಎಂದನು +ನಗುತ +ಶಶಿಮೌಳಿ

ಅಚ್ಚರಿ:
(೧) ಅರ್ಜುನನ ಆಹಾರ – ತರಗೆಲೆ, ಪವನಗ್ರಾಸ

ಪದ್ಯ ೮೪: ಭೀಮನು ಜರಾಸಂಧನ ಮಾತನ್ನು ಹೇಗೆ ತಳ್ಳಿಹಾಕಿದನು?

ಸಾಕಿದೇತಕೆ ಹೊಳ್ಳುನುಡಿಗೆ ವಿ
ವೇಕಿಗಳು ಮೆಚ್ಚುವರೆ ಯುದ್ಧ
ವ್ಯಾಕರಣ ಪಾಂಡಿತ್ಯವುಳ್ಳರೆ ತೋರಿಸುವುದೆಮಗೆ
ಈ ಕಮಲನೇತ್ರಂಗೆ ಫಡನೀ
ನಾಕೆವಾಳನೆ ಶಿವಶಿವಾ ಜಗ
ದೇಕ ದೈವದ ಕೂಡೆ ದಂಡಿಯೆ ಶಿವಶಿವಾ ಎಂದ (ಸಭಾ ಪರ್ವ, ೨ ಸಂಧಿ, ೮೪ ಪದ್ಯ)

ತಾತ್ಪರ್ಯ:
ಜರಾಸಂಧನು ಮರುಳುಮಾತುಗಳನ್ನು ಕೇಳಿದ ಭೀಮನು, ಸಾಕು ನಿನ್ನ ಜೊಳ್ಳುಮಾತುಗಳು, ವಿವೇಕಿಗಳು ಇದನ್ನು ಮೆಚ್ಚುವುದಿಲ್ಲ. ಯುದ್ಧದಲ್ಲಿ ಪಾಂಡಿತ್ಯವಿದ್ದರೆ ಅದನ್ನು ತೋರಿಸು, ಈ ಕೃಷ್ಣನಿಗೆ ನೀನು ಸರಿಸಮನಾದ ವೀರನೇ? ಜಗತ್ತಿಗೆ ದೇವನಾದ ಕೃಷ್ಣನ ಜೊತೆಗೆ ಯುದ್ಧವೇ ಶಿವಶಿವಾ ಎಂದು ಭೀಮನು ಜರಾಸಂಧನಿಗೆ ಹೇಳಿದನು.

ಅರ್ಥ:
ಸಾಕು: ನಿಲ್ಲಿಸು; ಹೊಳ್ಳು: ಹುರುಳಿಲ್ಲದುದು, ಜೊಳ್ಳು; ನುಡಿ: ಮಾತು; ವಿವೇಕ:ಯುಕ್ತಾಯುಕ್ತ ವಿಚಾರ, ವಿವೇಚನೆ; ಮೆಚ್ಚು: ಹೊಗಳು; ಯುದ್ಧ: ಕಾಳಗ; ವ್ಯಾಕರಣ: ನಿಯಮ; ಪಾಂಡಿತ್ಯ: ವಿದ್ವತ್; ತೋರಿಸು: ಪ್ರದರ್ಶಿಸು; ಕಮಲ: ನೀರಜ; ನೇತ್ರ: ನಯನ; ಕಮಲನೇತ್ರ: ಕೃಷ್ಣ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಪದ; ಆಕೆವಾಳ: ಶೂರ, ಪರಾಕ್ರಮಿ; ದೈವ: ದೇವರು; ದಂಡಿ: ಸೆಣೆಸು;

ಪದವಿಂಗಡಣೆ:
ಸಾಕ್+ಇದೇತಕೆ+ ಹೊಳ್ಳುನುಡಿಗೆ+ ವಿ
ವೇಕಿಗಳು+ ಮೆಚ್ಚುವರೆ+ ಯುದ್ಧ
ವ್ಯಾಕರಣ +ಪಾಂಡಿತ್ಯವುಳ್ಳರೆ+ ತೋರಿಸುವುದ್+ಎಮಗೆ
ಈ +ಕಮಲನೇತ್ರಂಗೆ +ಫಡ+ನೀನ್
ಆಕೆವಾಳನೆ +ಶಿವಶಿವಾ +ಜಗ
ದೇಕ +ದೈವದ +ಕೂಡೆ +ದಂಡಿಯೆ +ಶಿವಶಿವಾ +ಎಂದ

ಅಚ್ಚರಿ:
(೧) ಶಿವಶಿವಾ – ೨ ಬಾರಿ ಪ್ರಯೋಗ; ಆಡು ಭಾಷೆಯಲ್ಲಿ ಪ್ರಯೋಗಿಸುವ ಹಾಗೆ
(೨) ಭೀಮನು ಜರಾಸಂಧನನ್ನು ಕೆಣಕುವ ಪರಿ – ಯುದ್ಧವ್ಯಾಕರಣ ಪಾಂಡಿತ್ಯವುಳ್ಳರೆ ತೋರಿಸುವುದೆಮಗೆ
(೩) ಜರಾಸಂಧನು ಕೃಷ್ಣನಿಗೆ ಸರಿಸಮಾನನಲ್ಲ ಎಂದು ಹೇಳುವ ಪರಿ – ಕಮಲನೇತ್ರಂಗೆ ಫಡನೀನ್ ಆಕೆವಾಳನೆ ಶಿವಶಿವಾ ಜಗದೇಕ ದೈವದ ಕೂಡೆ ದಂಡಿಯೆ ಶಿವಶಿವಾ