ಪದ್ಯ ೩೮: ದ್ರೋಣರು ಹೇಗೆ ಕಂಡರು?

ಸಕಲ ಸಾವಂತರು ಮಹೀಪಾ
ಲಕರು ಬಂದುದು ಚರಣದಲಿ ಕಾ
ಣಿಕೆಯನಿಕ್ಕಿತು ಕೈಯ ಮುಗಿದುದು ನಿಖಿಳ ಪರಿವಾರ
ಮಕುಟ ರತ್ನದ ಲಹರಿ ಖಡುಗದ
ವಿಕಟ ಧಾರಾರಶ್ಮಿ ದೀಪ
ಪ್ರಕರದಲಿ ಥಳಥಳಿಸೆ ರವಿಯವೊಲೆಸೆದನಾ ದ್ರೋಣ (ದ್ರೋಣ ಪರ್ವ, ೧ ಸಂಧಿ, ೩೮ ಪದ್ಯ)

ತಾತ್ಪರ್ಯ:
ಎಲ್ಲಾ ಸಮಂತರೂ, ರಾಜರೂ ಬಂದು ದ್ರೋಣನ ಪಾದಗಳಿಗೆ ಕಾಣಿಕೆಯನ್ನರ್ಪಿಸಿದರು. ಪರಿವಾರದವರೆಲ್ಲರೂ ದ್ರೋಣನಿಗೆ ನಮಸ್ಕರಿಸಿದರು. ತಲೆಯ ಮೇಲಿನ ಕಿರೀಟದ ರತ್ನಗಳ ಲಹರಿ ಖಡ್ಗಧಾರೆಯ ರಶ್ಮಿಗಳು ಥಳಥಳಿಸಲು ದ್ರೋಣನು ಸೂರ್ಯನಂತೆ ಹೊಳೆದನು.

ಅರ್ಥ:
ಸಕಲ: ಎಲ್ಲಾ; ಸಾವಮ್ತ: ಸಾಮಂತರಾಜ; ಮಹೀಪಾಲ: ರಾಜ; ಮಹೀ: ಭೂಮಿ; ಬಂದು: ಆಗಮಿಸು; ಚರಣ: ಪಾದ; ಕಾಣಿಕೆ: ಉಡುಗೊರೆ; ಇಕ್ಕು: ಇಡು; ಕೈಯಮುಗಿ: ನಮಸ್ಕರಿಸು; ನಿಖಿಳ: ಎಲ್ಲಾ; ಪರಿವಾರ: ಬಂಧುಬಳಗ; ಮಕುಟ: ಕಿರೀತ; ರತ್ನ: ಮಣಿ; ಲಹರಿ: ಅಲೆ; ಖಡುಗ: ಕತ್ತಿ; ವಿಕಟ: ವಿಕಾರವಾದ; ಧಾರೆ: ಧಾರೆ: ಮಳೆ; ರಶ್ಮಿ:ಕಿರಣ; ದೀಪ: ಹಣತೆ; ಪ್ರಕರ: ಸಮೂಹ; ಥಳಥಳ: ಹೊಳೆ; ರವಿ: ಸೂರ್ಯ; ಎಸೆ: ತೋರು;

ಪದವಿಂಗಡಣೆ:
ಸಕಲ +ಸಾವಂತರು +ಮಹೀಪಾ
ಲಕರು +ಬಂದುದು +ಚರಣದಲಿ +ಕಾ
ಣಿಕೆಯನಿಕ್ಕಿತು +ಕೈಯ +ಮುಗಿದುದು +ನಿಖಿಳ+ ಪರಿವಾರ
ಮಕುಟ +ರತ್ನದ +ಲಹರಿ+ ಖಡುಗದ
ವಿಕಟ+ ಧಾರಾ+ರಶ್ಮಿ+ ದೀಪ
ಪ್ರಕರದಲಿ +ಥಳಥಳಿಸೆ+ ರವಿಯವೊಲ್+ಎಸೆದನಾ+ ದ್ರೋಣ

ಅಚ್ಚರಿ:
(೧) ದ್ರೋಣನು ಕಾಣಿಸಿಕೊಂಡ ಪರಿ – ಮಕುಟ ರತ್ನದ ಲಹರಿ ಖಡುಗದ ವಿಕಟ ಧಾರಾರಶ್ಮಿ ದೀಪ ಪ್ರಕರದಲಿ ಥಳಥಳಿಸೆ ರವಿಯವೊಲೆ

ಪದ್ಯ ೭: ದ್ರೌಪದಿಯ ಸೌಂದರ್ಯ ಹೇಗಿತ್ತು?

ಹಾರ ನೂಪುರ ಝಣಝಣಿತ ಝೇಂ
ಕಾರ ರವವದು ಮೊಳಗೆ ಭುವನ ಮ
ಯೂರ ಕುಣಿದುದು ವರಕಟಾಕ್ಷದ ಮಿಂಚು ಥಳಥಳಿಸೆ
ಆರು ಹೊಗಳುವರಂಗವಟ್ಟದ
ಸೌರಭದ ಪರಿಮಳಕೆ ತುಂಬಿಯ
ಸಾರಕಟ್ಟಿತು ಬಂದಳಂಗನೆ ಕೀಚಕನ ಮನೆಗೆ (ವಿರಾಟ ಪರ್ವ, ೩ ಸಂಧಿ, ೭ ಪದ್ಯ)

ತಾತ್ಪರ್ಯ:
ದ್ರೌಪದಿಯ ಕಣ್ಣೋಟವು ಮಿಂಚಿನಂತೆ ಹೊಳೆಯುತ್ತಿರಲು, ಅವಳು ತೊಟ್ಟ ಹಾರ ನೂಪುರಗಳ ಸದ್ದು ಗುಡುಗೆಂದು ಭಾವಿಸಿದ ಲೋಕವೆಂಬ ನವಿಲು ಕುಣಿಯಿತು, ಅವಳ ಸುಂದರ ದೇಹದ ಸುಗಂಧದ ಪರಿಮಳಕ್ಕೆ ಕಮಲವೆಂದು ತಿಳಿದು ದುಂಬಿಗಳ ಹಿಂಡು ಅವಳತ್ತ ಬಂದಿತು, ಇಂತಹ ದ್ರೌಪದಿಯು ಕೀಚಕನ ಮನೆಗೆ ಬಂದಳು.

ಅರ್ಥ:
ಹಾರ: ಮಾಲೆ; ನೂಪುರ: ಕಾಲಿನ ಗೆಜ್ಜೆ, ಕಾಲಂದುಗೆ; ಝಣಝಣ, : ಶಬ್ದವನ್ನು ವಿವರಿಸುವ ಪದ; : ಝೇಂಕಾರ: ನಾದ; ರವ: ಶಬ್ದ; ಮೊಳಗು: ಧ್ವನಿ, ಸದ್ದು; ಭುವನ: ಆಲಯ; ಮಯೂರ: ನವಿಲು; ಕುಣಿ: ನೃತ್ಯ; ವರ: ಶ್ರೇಷ್ಠ; ಕಟಾಕ್ಷ: ದೃಷ್ಟಿ, ಓರೆನೋಟ; ಮಿಂಚು: ಪ್ರಕಾಶ; ಥಳಥಳಿಸು: ಹೊಳೆ; ಹೊಗಳು: ಪ್ರಶಂಶಿಸು; ಅಂಗವಟ್ಟು: ದೇಹ ಸೌಂದರ್ಯ; ಸೌರಭ: ಪರಿಮಳ; ತುಂಬಿ: ಜೇನು ನೊಣ, ದುಂಬಿ; ಸಾರಕಟ್ಟು: ಗುಂಪುಗೂಡು; ಅಂಗನೆ: ಹೆಣ್ಣು; ಮನೆ: ಆಲಯ;

ಪದವಿಂಗಡಣೆ:
ಹಾರ +ನೂಪುರ+ ಝಣಝಣಿತ+ ಝೇಂ
ಕಾರ +ರವವದು+ ಮೊಳಗೆ +ಭುವನ+ ಮ
ಯೂರ +ಕುಣಿದುದು+ ವರಕಟಾಕ್ಷದ+ ಮಿಂಚು +ಥಳಥಳಿಸೆ
ಆರು+ ಹೊಗಳುವರ್+ಅಂಗವಟ್ಟದ
ಸೌರಭದ +ಪರಿಮಳಕೆ +ತುಂಬಿಯ
ಸಾರಕಟ್ಟಿತು +ಬಂದಳಂಗನೆ+ ಕೀಚಕನ+ ಮನೆಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಾರ ನೂಪುರ ಝಣಝಣಿತ ಝೇಂಕಾರ ರವವದು ಮೊಳಗೆ ಭುವನ ಮ
ಯೂರ ಕುಣಿದುದು ವರಕಟಾಕ್ಷದ ಮಿಂಚು ಥಳಥಳಿಸೆ
(೨) ಅಂಗ ಪರಿಮಳದ ಉಪಮಾನ – ಅಂಗವಟ್ಟದ ಸೌರಭದ ಪರಿಮಳಕೆ ತುಂಬಿಯ ಸಾರಕಟ್ಟಿತು

ಪದ್ಯ ೪: ಕರ್ಣನ ಪ್ರತಾಪವು ಹೇಗೆ ಹೆಚ್ಚಿತು?

ತೊಳಗಿ ಬೆಳಗುವ ಶಿರದ ಪಚ್ಚೆಯ
ಹಳುಕು ಬೆರಸಿದ ವೀಳೆಯವನಿ
ಕ್ಕೆಲದ ಶಲ್ಯಾದಿಗಳಿಗಿತ್ತನು ವರರಥಾಗ್ರದಲಿ
ಕಳಚಿ ತೆಗೆದನು ಜೋಡ ಮೈವೆ
ಗ್ಗಳಿಸಿ ದಳವೇರಿದುದು ಮನ ಮೊಗ
ಥಳಥಳಿಸೆ ಬಹಳಪ್ರತಾಪದಲಿದರ್ನಾ ಕರ್ಣ (ಕರ್ಣ ಪರ್ವ, ೨೧ ಸಂಧಿ, ೪ ಪದ್ಯ)

ತಾತ್ಪರ್ಯ:
ಕರ್ಣನು ರಥದಲ್ಲಿ ಕುಳಿತು ಪಚ್ಚಕರ್ಪೂರದ ವೀಳೆಯವನ್ನು ಉಡುಗೊರೆಯಾಗಿ ಶಲ್ಯ ಮೊದಲಾದವರಿಗೆ ಕೊಟ್ಟನು ತನ್ನ ಕವಚವನ್ನು ತೆಗೆದಿಟ್ತುಬಿಟ್ಟನು. ಮೈಪ್ರತಾಪದಿಂದ ಹೆಚ್ಚಿತು. ಮನಸ್ಸು ಉಲ್ಲಾಸ ಭರಿತವಾಯಿತು. ಮುಖವು ಕಾಂತಿಯಿಂದ ಹೊಳೆಯಿತು. ಕರ್ಣನ ಪ್ರತಾಪ ಹೆಚ್ಚಿತು.

ಅರ್ಥ:
ತೊಳಗು: ಹೊಳೆ, ಕಾಂತಿ; ಬೆಳಗು: ಹೊಳೆ; ಶಿರ: ತಲೆ; ಪಚ್ಚೆ: ಕರ್ಪೂರ; ಹಳುಕು: ಚೂರು; ಬೆರಸು: ಕಲಿಸು; ವೀಳೆ: ತಾಂಬೂಲ; ಇಕ್ಕೆಲ: ಎರಡೂ ಕಡೆ; ಆದಿ: ಮುಂತಾದವರು; ವರ: ಶ್ರೇಷ್ಠ; ರಥ: ಬಂಡಿ; ಅಗ್ರ: ಮುಂದೆ; ಕಳಚು: ತೆಗೆ, ಬಿಚ್ಚು; ತೆಗೆ: ಹೊರತರು; ಜೋಡು: ಜೊತೆ; ಮೈ: ತನು; ವೆಗ್ಗಳ: ಹೆಚ್ಚು, ಆಧಿಕ್ಯ; ದಳ: ಸೈನ್ಯ; ಏರು: ಹತ್ತು; ಮನ: ಮನಸ್ಸು; ಮೊಗ: ಮುಖ; ಥಳಥಳ: ಹೊಳೆ; ಬಹಳ: ತುಂಬ; ಪ್ರತಾಪ: ಪರಾಕ್ರಮ;

ಪದವಿಂಗಡಣೆ:
ತೊಳಗಿ +ಬೆಳಗುವ +ಶಿರದ +ಪಚ್ಚೆಯ
ಹಳುಕು +ಬೆರಸಿದ+ ವೀಳೆಯವನ್
ಇಕ್ಕೆಲದ +ಶಲ್ಯಾದಿಗಳಿಗ್+ಇತ್ತನು +ವರ+ರಥಾಗ್ರದಲಿ
ಕಳಚಿ +ತೆಗೆದನು +ಜೋಡ +ಮೈವೆ
ಗ್ಗಳಿಸಿ+ ದಳವೇರಿದುದು +ಮನ +ಮೊಗ
ಥಳಥಳಿಸೆ+ ಬಹಳ+ಪ್ರತಾಪದಲ್+ಇದರ್ನಾ +ಕರ್ಣ