ಪದ್ಯ ೫೫: ಭಗದತ್ತನು ಯಾವ ಅಸ್ತ್ರವನ್ನು ತೆಗೆದನು?

ಅನಿತು ಶರವನು ಕಡಿದು ಭಗದ
ತ್ತನ ಧನುವನಿಕ್ಕಡಿಗಡಿಯೆ ಕಂ
ಗನೆ ಕನಲಿ ಗವಸಣಿಗೆಯಿಂದುಗಿದನು ನಿಜಾಯುಧವ
ದಿನಪ ಕೋಟಿಯ ರಶ್ಮಿಯನು ತುದಿ
ಮೊನೆಯೊಳುಗುಳುವ ಬಾಯಿ ಧಾರೆಯ
ತನಿಯುರಿಯ ತೆಕ್ಕೆಯಲಿ ಥಳಥಳಿಸುವ ಮಹಾಂಕುಶವ (ದ್ರೋಣ ಪರ್ವ, ೩ ಸಂಧಿ, ೫೫ ಪದ್ಯ)

ತಾತ್ಪರ್ಯ:
ಅರ್ಜುನನು ಅವಿಷ್ಟೂ ಬಾಣಗಳನ್ನು ತುಂಡುಮಾಡಿ ಭಗದತ್ತನ ಬಿಲ್ಲನ್ನು ತುಂಡು ಮಾಡಿದನು. ಭಗದತ್ತ ಕಂಗನೆ ಕೆರಳಿ ಮುಸುಕಿನಲ್ಲಿಟ್ಟಿದ್ದ ತನ್ನ ಆಯುಧವೊಂದನ್ನು ತೆಗೆದನು. ಆ ಮಹಾ ಅಂಕುಶದ ಮೊನೆಯಿಂದ ಸೂರ್ಯಕೋಟಿ ಪ್ರಕಾಶವು ಹೊರ ಹೊಮ್ಮುತ್ತಿತ್ತು. ಸುತ್ತಲೂ ಉರಿಯ ತೆಕ್ಕೆಗಳೇಳುತ್ತಿದ್ದವು.

ಅರ್ಥ:
ಅನಿತು: ಸ್ವಲ್ಪ; ಶರ: ಬಾಣ; ಕಡಿ: ಕತ್ತರಿಸು; ಧನು: ಬಿಲ್ಲು; ಇಕ್ಕಡಿ; ಕಂಗನೆ: ಅಧಿಕವಾಗಿ; ಕನಲು: ಬೆಂಕಿ, ಉರಿ; ಗವಸಣಿಗೆ: ಮುಸುಕು; ಉಗಿ: ಹೊರಹಾಕು; ಆಯುಧ: ಶಸ್ತ್ರ; ದಿನಪ: ರವಿ; ಕೋಟಿ: ಅಸಂಖ್ಯಾತ; ರಶ್ಮಿ: ಕಿರಣ; ತುದಿ: ಕೊನೆ; ಮೊನೆ: ಹರಿತವಾದ; ಧಾರೆ: ವರ್ಷ; ತನಿ: ಹೆಚ್ಚಾಗು; ತೆಕ್ಕೆ: ಗುಂಪು; ಥಳಥಳಿ: ಹೊಳೆ; ಅಂಕುಶ:ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ;

ಪದವಿಂಗಡಣೆ:
ಅನಿತು +ಶರವನು+ ಕಡಿದು +ಭಗದ
ತ್ತನ+ ಧನುವನ್+ಇಕ್ಕಡಿ+ಕಡಿಯೆ +ಕಂ
ಗನೆ +ಕನಲಿ +ಗವಸಣಿಗೆಯಿಂದ್+ಉಗಿದನು +ನಿಜಾಯುಧವ
ದಿನಪ +ಕೋಟಿಯ +ರಶ್ಮಿಯನು +ತುದಿ
ಮೊನೆಯೊಳ್+ಉಗುಳುವ +ಬಾಯಿ +ಧಾರೆಯ
ತನಿ+ಉರಿಯ +ತೆಕ್ಕೆಯಲಿ +ಥಳಥಳಿಸುವ+ ಮಹಾಂಕುಶವ

ಅಚ್ಚರಿ:
(೧) ಆಯುಧದ ಪ್ರಕಾಶ – ದಿನಪ ಕೋಟಿಯ ರಶ್ಮಿಯನು ತುದಿಮೊನೆಯೊಳುಗುಳುವ ಬಾಯಿ

ಪದ್ಯ ೩೨: ಬ್ರಹ್ಮನ ಅರಮನೆಯ ಸೊಬಗು ಹೇಗಿತ್ತು?

ಹಲವು ನೆಲೆ ಚೆಲುವಿಕೆಗೆ ಸಲೆ ಹೊಂ
ಗಲಶ ಲೋಕಕೆ ವಿಲಸ ಹೇಮದ
ಕೆಲಸಗತಿಯಲಿ ಚೆಲುವೆನಿಸಿದುಪ್ಪರಿಗೆ ನೋಳ್ಪರಿಗೆ
ಹೊಳಹಿನಲಿ ಥಳಥಳಿಸುತಿಹುದದು
ನಳಿನಪೀಠನ ಭವನ ನಭದಿಂ
ದಿಳಿದ ಗಂಗೆಯಧಾರೆ ಮೆರೆದುದು ಪುರದ ಬಾಹೆಯಲಿ (ಅರಣ್ಯ ಪರ್ವ, ೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ಹಲವಾರು ಭೂಮಿಯ ಸೌಂದರ್ಯದಕ್ಕೆ ಚಿನ್ನದ ಕಲಶವಿದ್ದಂತೆ ಬ್ರಹ್ಮನ ಅರಮನೆಯಿದೆ. ಬಂಗಾರದ ಉಪ್ಪರಿಗೆಯೂ ಭವನವೂ ಹೊಳೆ ಹೊಳೆಯುತ್ತಿವೆ. ಬ್ರಹ್ಮನ ಭವನದ ಊರಿನ ಹೊರಗೆ ಗಂಗಾಧಾರೆಯು ಚೆಲುವಿನಿಂದ ಮೆರೆಯುತ್ತಿದೆ.

ಅರ್ಥ:
ಹಲವು: ಬಹಳ; ನೆಲೆ: ಭೂಮಿ; ಸಲೆ: ವಿಸ್ತೀರ್ಣ; ಹೊಂಗಲಶ: ಚಿನ್ನದ ಕಳಶ; ಕಲಶ: ಕೊಡ; ಲೋಕ: ಜಗತ್ತು; ವಿಲಸ: ಚೆಲುವು; ಹೇಮ: ಚಿನ್ನ; ಗತಿ: ವೇಗ; ಚೆಲುವು: ಸುಂದರ; ಉಪ್ಪರಿಗೆ: ಮಹಡಿ, ಸೌಧ; ನೋಡು: ವೀಕ್ಷಿಸು; ಹೊಳಹು: ಕಾಂತಿ, ಪ್ರಕಾಶ; ಥಳಥಳಿಸು: ಹೊಳೆ; ನಳಿನ: ಕಮಲ; ಪೀಠ: ಆಸನ; ಭವನ: ಆಲಯ; ನಭ: ಆಗಸ; ಗಂಗೆ: ಸುರನದಿ; ಮೆರೆ: ಹೊಳೆ, ಪ್ರಕಾಶಿಸು; ಪುರ: ಊರು; ಬಾಹೆ: ಪಕ್ಕ, ಪಾರ್ಶ್ವ;

ಪದವಿಂಗಡಣೆ:
ಹಲವು +ನೆಲೆ +ಚೆಲುವಿಕೆಗೆ +ಸಲೆ +ಹೊಂ
ಕಲಶ +ಲೋಕಕೆ+ ವಿಲಸ +ಹೇಮದ
ಕೆಲಸಗತಿಯಲಿ +ಚೆಲುವೆನಿಸಿದ್+ಉಪ್ಪರಿಗೆ +ನೋಳ್ಪರಿಗೆ
ಹೊಳಹಿನಲಿ+ ಥಳಥಳಿಸುತಿಹುದ್+ಅದು
ನಳಿನಪೀಠನ +ಭವನ +ನಭದಿಂದ್
ಇಳಿದ +ಗಂಗೆಯಧಾರೆ +ಮೆರೆದುದು +ಪುರದ+ ಬಾಹೆಯಲಿ

ಅಚ್ಚರಿ:
(೧) ಬ್ರಹ್ಮನನ್ನು ಕರೆಯುವ ಪರಿ – ನಳಿನಪೀಠನ

ಪದ್ಯ ೨೩: ಆ ಶುದ್ಧಕಾಂತಿಯು ಯಾವ ಆಕಾರವಾಗಿ ತೋರಿತು?

ಲಲಿತ ತೇಜಃಪುಂಜ ಮಿಗೆ ಥಳ
ಥಳಿಸಿತತಿದೂರದಲಿ ಬೆಳಗಿನ
ಗೊಳಸನುಡಿದಂತಾದುದಾಗಲೆ ತೋರಿತಾಕಾರ
ತಳಿತುದವಯವ ಶುದ್ಧವರ್ಣ
ಸ್ಥಳವು ನಿಮಿಷಕೆ ಮುನಿವರಾಕೃತಿ
ಹೊಳೆದುದಾಕ್ಷಣವೀತ ನಾರದನೆಂದುದಖಿಳಜನ (ಸಭಾ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಯಾವ ಮೂಲದಿಂದ ಆ ತೇಜಸ್ಸು ಬರುತ್ತಿದೆ ಎಂದು ಎಲ್ಲರು ಆ ದಿಕ್ಕಿನಕಡೆಗೆ ನೋಡುತ್ತಿರುವಾಗ, ಆ ಸುಂದರವಾದ ತೇಜಃಪುಂಜವು ಥಳಥಳನೆ ಹೊಳೆಯಿತು, ಆ ತೇಜಸ್ಸಿನ ಪಲ್ಲಟವಾಗಿ ಒಂದು ಆಕಾರ ತೋರಿತು. ಅವಯವಗಳು ಕಾಣಿಸಿದವು, ಶುದ್ಧವರ್ಣದ ಋಷಿಯೊಬ್ಬರು ಕಾಣಿಸಿದರು, ಅವರನ್ನು ನೋಡಿದೊಡನೆಯೆ ಇವರು ನಾರದರು ಎಂದು ಅಲ್ಲಿದ ಜನರು ಉದ್ಘೋಷಿಸಿದರು.

ಅರ್ಥ:
ಲಲಿತ: ಮನೋಹರವಾದ; ತೇಜ: ಕಾಂತಿ; ತೇಜಃಪುಂಜ: ಕಾಂತಿಯ ಸಮೂಹ; ಮಿಗೆ: ಅಧಿಕ, ಮತ್ತು; ಥಳಥಳಿಸು: ಪ್ರಕಾಶಿಸು;ದೂರ: ಹತ್ತಿರವಲ್ಲದ; ಬೆಳಗು: ಹಗಲು; ಒಳುನುಡಿ: ಗುಪ್ತವಾದ ಮಾತು; ತೋರಿತು: ಗೋಚರಿಸು; ಆಕಾರ: ರೂಪ; ಅವಯವ:ಅಂಗ; ಶುದ್ಧ: ನಿರ್ಮಲ; ವರ್ಣ: ಬಣ್ಣ; ಸ್ಥಳ: ಜಾಗ; ಮುನಿ: ಋಷಿ; ಆಕೃತಿ: ರೂಪ; ಹೊಳೆ: ಪ್ರಕಾಶಿಸು; ಅಖಿಳ: ಎಲ್ಲಾ; ಜನ: ಮನುಷ್ಯರು;

ಪದವಿಂಗಡಣೆ:
ಲಲಿತ +ತೇಜಃಪುಂಜ +ಮಿಗೆ +ಥಳ
ಥಳಿಸಿತ್+ಅತಿ+ದೂರದಲಿ +ಬೆಳಗಿನಗ್
ಒಳಸನುಡಿದಂತ್+ಆದುದ್+ಆಗಲೆ+ ತೋರಿತ್+ಆಕಾರ
ತಳಿತುದ್+ಅವಯವ +ಶುದ್ಧವರ್ಣ
ಸ್ಥಳವು +ನಿಮಿಷಕೆ+ ಮುನಿ+ವರಾಕೃತಿ
ಹೊಳೆದುದ್+ಆಕ್ಷಣ+ ವೀತ+ ನಾರದನೆಂದುದ್+ಅಖಿಳಜನ

ಅಚ್ಚರಿ:
(೧) ತೇಜಃಪುಂಜ, ಥಳಥಳಿಸು, ಹೊಳೆ – ಕಾಂತಿ, ಪ್ರಕಾಶಿಸು ಪದದ ಅರ್ಥ
(೨) ಆಕಾರ, ಆಕೃತಿ – ಸಮನಾರ್ಥಕ ಪದ

ಪದ್ಯ ೧೬: ಯಾವ ಕವಿಯು ದ್ರೌಪದಿಯ ಸೌಂದರ್ಯವನ್ನು ವರ್ಣಿಸಲು ಏಕೆ ಸಾಧ್ಯವಿಲ್ಲ?

ಎಸೆವಧರ ರಾಗದಲಿ ಮಿಗೆ ರಂ
ಜಿಸುವವೋಲ್ ಮಾಣಿಕ್ಯಮೆರೆದವು
ದಶನ ದೀಧಿತಿಯಿಂದ ಥಳಥಳಿಸಿದವು ಮುತ್ತುಗಳು
ಮಿಸುಪದೇಹಚ್ಛವಿಗಳಲಿ ಢಾ
ಳಿಸುವ ವೋಲ್ ಭೂಷಣದ ಹೇಮ
ಪ್ರಸರ ಮೆರೆದವು ಹೊಗಳೆ ಕವಿಯಾರಬುಜಲೋಚನೆಯ (ಆದಿ ಪರ್ವ, ೧೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ತುಟಿಯ ಕೆಂಪಾದ ಬಣ್ಣದಿಂದ ಆಕೆಯು ಧರಿಸಿದ್ದ ಮಾಣಿಕ್ಯಗಳು ಹೊಳೆದವು, ಆಕೆಯ ಹಲ್ಲುಗಳ ಬಿಳಿ ಬಣ್ಣದಿಂದ ಆಕೆ ಧರಿಸಿದ್ದ ಮುತ್ತುಗಳು ಹೊಳೆದವು, ಆಕೆಯ ದೇಹದ ಕಾಂತಿಯಿಂದ ಅವಳು ಧರಿಸಿದ್ದ ಆಭರಣಗಳ ಬಂಗಾರವು ಎದ್ದು ಕಾಣುತ್ತಿತ್ತು. ಆ ಕಮಲ ಲೋಚನೆಯನ್ನು ಹೊಗಳಲು ಬಲ್ಲ ಕವಿ ಯಾರು ತಾನೆ ಇದ್ದಾರೆ?

ಅರ್ಥ:
ಎಸೆ:ಚೆಲ್ಲು; ಅಧರ: ತುಟಿ; ರಾಗ:ಬಣ್ಣ, ರಂಗು; ಮಿಗೆ: ಮಿಗಿಲು, ಅತಿಶಯ; ರಂಜಿಸು: ಹೊಳೆ, ಪ್ರಕಾಶಿಸು, ಶೋಭಿಸು; ಮಾಣಿಕ್ಯ: ಮುತ್ತು; ಮೆರೆ: ಶೋಭಿಸು, ಹೊಳೆ; ದಶನ: ಹಲ್ಲು; ದೀಧಿತಿ: ಹೊಳಪು, ಕಾಂತಿ, ಕಿರಣ; ಥಳಥಳ: ಹೊಳೆ; ಮುತ್ತು: ಆಭರಣ, ಮಾಣಿಕ್ಯ; ಮಿಸುಪು: ಕಾಂತಿ, ಹೊಳಪು; ಚ್ಛವಿ: ಕಾಂತಿ; ದೇಹ: ತನು; ಢಾಳಿಸು: ಹೊಳೆ; ಭೂಷಣ: ಆಭರಣ; ಹೇಮ: ಚಿನ್ನ; ಪ್ರಸರ: ಕಾಂತಿ; ಹೊಗಳು: ಕೊಂಡಾಟ; ಕವಿ: ಕಬ್ಬಿಗ; ಅಬುಜ: ಕಮಲ; ಲೋಚನೆ: ಕಣ್ಣು;

ಪದವಿಂಗಡಣೆ:
ಎಸೆವ್+ಅಧರ +ರಾಗದಲಿ +ಮಿಗೆ +ರಂ
ಜಿಸುವವೋಲ್ +ಮಾಣಿಕ್ಯ+ಮೆರೆದವು
ದಶನ+ ದೀಧಿತಿಯಿಂದ +ಥಳಥಳಿಸಿದವು +ಮುತ್ತುಗಳು
ಮಿಸುಪ+ದೇಹ+ಚ್ಛವಿಗಳಲಿ +ಢಾ
ಳಿಸುವ +ವೋಲ್ +ಭೂಷಣದ +ಹೇಮ
ಪ್ರಸರ+ ಮೆರೆದವು +ಹೊಗಳೆ+ ಕವಿಯಾರ್+ಅಬುಜ+ಲೋಚನೆಯ

ಅಚ್ಚರಿ:
(೧) ಮಾಣಿಕ್ಯ, ಮುತ್ತು, ಹೇಮ -ಆಭರಣಗಳ ವಿವರ
(೨) ಮೆರೆ, ಥಳಥಳಿಸು, ಚ್ಛವಿ, ಢಾಳು – ಕಾಂತಿ, ಹೊಳೆ ಪದದ ಸಮಾನಾರ್ಥಕ ಪದ
(೩) ತುಟಿಯ ಕೆಂಪು, ಹಲ್ಲಿನ ಬಿಳುಪು, ದೇಹದ ಹೇಮವರ್ಣವನ್ನು ಉಪಯೋಗಿಸಿ ಸೌಂದರ್ಯದ ವರ್ಣನೆ