ಪದ್ಯ ೧೫: ನಾರಾಯಣಾಸ್ತ್ರದ ಪ್ರಕಾಶವು ಹೇಗಿತ್ತು?

ಪ್ರಳಯ ಮೇಘವನೊಡೆವ ರವಿಮಂ
ಡಲ ಸಹಸ್ರದ ರಶ್ಮಿಯೋ ಜಗ
ದಳಿವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ
ಮುಳಿದ ನರಕೇಸರಿಯ ದಾಡೆಯ
ಥಳಥಲತ್ಕಾರವೊ ಮಹಾಸ್ತ್ರದ
ಬೆಳಗೊ ಹೆಸರಿಡಲಾರು ಬಲ್ಲರು ಭೂಪ ಕೇಳೆಂದ (ದ್ರೋಣ ಪರ್ವ, ೧೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪ್ರಳಯ ಮೇಘವನ್ನು ಭೇದಿಸಬಲ್ಲ ಸಹಸ್ರ ಸೂರ್ಯರ ಕಿರಣಗಳೋ, ಪ್ರಳಯಕಾಲದಲ್ಲಿ ಶಿವನು ತೆಗೆಯುವ ಉರಿಗಣ್ಣಿನ ಪ್ರಕಾಶವೋ, ಕೋಪಗೊಂಡ ನರಸಿಂಹನ ಹಲ್ಲುಗಳ ಹೊಳಪೋ ಎಂಬಂತೆ ನಾರಾಯಣಾಸ್ತ್ರದ ಪ್ರಕಾಶ ಹಬ್ಬುತ್ತಿತ್ತು, ಅದನ್ನು ಹೇಗೆಂದು ಹೇಳೋಣ ಎಂದು ಸಂಜಯನು ವಿವರಿಸಿದನು.

ಅರ್ಥ:
ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಮೇಘ: ಮೋಡ; ಒಡೆವ: ಸೀಳು; ರವಿ: ಸೂರ್ಯ; ಮಂಡಲ: ನಾಡಿನ ಒಂದು ಭಾಗ, ವರ್ತುಲಾಕಾರ; ಸಹಸ್ರ: ಸಾವಿರ; ರಶ್ಮಿ: ಕಾಂತಿ, ಪ್ರಕಾಶ; ಜಗ: ಪ್ರಪಂಚ; ಅಳಿವು: ನಾಶ; ಝೊಂಪಿಸು: ಬೆಚ್ಚಿಬೀಳು; ಹರ: ಶಂಕರ; ಉರಿಗಣ್ಣು: ಬೆಂಕಿಯ ಕಣ್ಣು; ದೀಧಿತಿ: ಹೊಳಪು; ಮುಳಿ: ಸಿಟ್ಟು, ಕೋಪ; ನರಕೇಸರಿ: ನರಸಿಂಹ; ದಾಡೆ: ದವಡೆ, ಒಸಡು; ಥಳ: ಪ್ರಕಾಶ, ಹೊಳಪು; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಬೆಳಗು: ಕಾಂತಿ, ಪ್ರಕಾಶ; ಹೆಸರು: ನಾಮ; ಬಲ್ಲರು: ತಿಳಿದವರು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಪ್ರಳಯ +ಮೇಘವನ್+ಒಡೆವ +ರವಿ+ಮಂ
ಡಲ +ಸಹಸ್ರದ +ರಶ್ಮಿಯೋ +ಜಗದ್
ಅಳಿವಿನಲಿ +ಝೊಂಪಿಸುವ +ಹರನ್+ಉರಿಗಣ್ಣ+ ದೀಧಿತಿಯೊ
ಮುಳಿದ +ನರಕೇಸರಿಯ +ದಾಡೆಯ
ಥಳಥಳತ್ಕಾರವೊ+ ಮಹಾಸ್ತ್ರದ
ಬೆಳಗೊ +ಹೆಸರಿಡಲಾರು+ ಬಲ್ಲರು +ಭೂಪ +ಕೇಳೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಪ್ರಳಯ ಮೇಘವನೊಡೆವ ರವಿಮಂಡಲ ಸಹಸ್ರದ ರಶ್ಮಿಯೋ ಜಗದಳಿವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ

ಪದ್ಯ ೬: ಆಯುಧಗಳ ಪ್ರಕಾಶವು ಯಾವುದಕ್ಕೆ ಸಮವಾಯಿತು?

ಝಳಪದಲಿ ಬೊಬ್ಬಿಡುವಡಾಯುಧ
ಹೊಳವುಗಳ ಡೊಂಕಣೆಯ ತಳಪದ
ಬೆಳಗುಗಳ ಬಟ್ಟೇರ ಧಾರೆಯ ಬಳ್ಳಿಮಿಂಚುಗಳ
ಅಲಗಿನುಬ್ಬರಗಿಡಿಯ ಹಬ್ಬುಗೆ
ಥಳಥಳಿಸಿ ಸೈಗರೆದುದೈ ಹೆ
ಬ್ಬಲ ದಿವಾಕರಶತವನೆನೆ ಹೆಸರಿಡುವನಾರೆಂದ (ಭೀಷ್ಮ ಪರ್ವ, ೨ ಸಂಧಿ, ೬ ಪದ್ಯ)

ತಾತ್ಪರ್ಯ:
ಝಳಪಿಸುವ ಕತ್ತಿಗಳ ಹೊಳಪು, ಈಟಿಯ ಪ್ರಕಾಶಗಳು ಬಳ್ಳಿ ಮಿಂಚುಗಳಂತೆ ಹಬ್ಬಿ, ಆಯುಧಗಳ ಮುಂಭಾಗದ ಪ್ರಕಾಶವು ನೂರಾರು ಸೂರ್ಯರ ಪ್ರಕಾಶಕ್ಕೆ ಸಮವಾಯಿತು. ಅದನ್ನು ಯಾವ ಹೆಸರಿನಿಂದ ಕರೆಯಲು ಸಾಧ್ಯ!

ಅರ್ಥ:
ಝಳ: ತಾಪ; ಬೊಬ್ಬಿಡು: ಅರಚು, ಗರ್ಜಿಸು; ಆಯುಧ: ಶಸ್ತ್ರ; ಹೊಳವು: ಕಾಂತಿ, ಪ್ರಕಾಶ; ಡೊಂಕಣಿ: ಈಟಿ; ತಳಪಥ: ಕಾಂತಿ; ಬೆಳಗು: ಹೊಳಪು, ಕಾಂತಿ; ಬಟ್ಟೆ: ದಾರಿ; ಧಾರೆ: ಹರಿಯುವಿಕೆ; ಬಳ್ಳಿ: ಲತೆ, ಹಂಬು; ಮಿಂಚು:ಹೊಳಪು, ಕಾಂತಿ; ಅಲಗು: ಆಯುಧಗಳ ಹರಿತವಾದ ಅಂಚು; ಉಬ್ಬರ: ಅತಿಶಯ; ಹಬ್ಬು: ಹರಡು; ಥಳಥಳಿಸು: ಹೊಳೆ; ಸೈ: ಸರಿಯಾದುದು; ಹೆಬ್ಬಲ: ದೊಡ್ಡದಾದ ಸೈನ್ಯ; ದಿವಾಕರ: ಸೂರ್ಯ; ಶತ: ನೂರು; ಹೆಸರು: ನಾಮ;

ಪದವಿಂಗಡಣೆ:
ಝಳಪದಲಿ +ಬೊಬ್ಬಿಡುವಡ್+ಆಯುಧ
ಹೊಳವುಗಳ +ಡೊಂಕಣೆಯ +ತಳಪದ
ಬೆಳಗುಗಳ+ ಬಟ್ಟೇರ +ಧಾರೆಯ +ಬಳ್ಳಿ+ಮಿಂಚುಗಳ
ಅಲಗಿನ್+ಉಬ್ಬರ+ಕಿಡಿಯ +ಹಬ್ಬುಗೆ
ಥಳಥಳಿಸಿ +ಸೈ+ಕರೆದುದೈ +ಹೆ
ಬ್ಬಲ +ದಿವಾಕರ+ಶತವನ್+ಎನೆ +ಹೆಸರಿಡುವನ್+ಆರೆಂದ

ಅಚ್ಚರಿ:
(೧) ಝಳಪ, ಹೊಳಪು, ಬೆಳಗು, ಕಿಡಿ, ಮಿಂಚು, ಥಳಥಳ – ಪ್ರಕಾಶವನ್ನು ವಿವರಿಸುವ ಪದಗಳು
(೨) ಉಪಮಾನದ ಪ್ರಯೋಗ – ಅಲಗಿನುಬ್ಬರಗಿಡಿಯ ಹಬ್ಬುಗೆ ಥಳಥಳಿಸಿ ಸೈಗರೆದುದೈ ಹೆಬ್ಬಲ ದಿವಾಕರಶತವ