ಪದ್ಯ ೮: ಅರ್ಜುನನಿಗೆ ಯಾರು ಅಸ್ತ್ರಪ್ರಯೋಗವನ್ನು ನಿಲ್ಲಿಸಲು ಹೇಳಿದರು?

ಆಹಹ ಬೆಂದುದು ಭುವನವಿದು ವಿ
ಗ್ರಹದ ಸಮಯವೆ ತಮ್ಮ ಲೀಲೆಗೆ
ಕುಹಕಮತಿಗಳು ತಂದರೈ ತ್ರೈಜಗಕೆ ತಲ್ಲಣವ
ರಹವಿದೇನೆಂದಭ್ರ ತಳದಿಂ
ಮಹಿಗೆ ಬಂದನು ದೇವಮುನಿ
ದುಸ್ಸಹವಿದೇನೈ ಪಾರ್ಥ ಹೋಹೋ ಸಾಕು ಸಾಕೆಂದ (ಅರಣ್ಯ ಪರ್ವ, ೧೪ ಸಂಧಿ, ೮ ಪದ್ಯ)

ತಾತ್ಪರ್ಯ:
ಓಹೋ ಇದೇನು ಭೂಮಿಯು ಬೆಂದಂತಾಗುತ್ತಿದೆ, ಇದೇನು ಯುದ್ಧದ ಸಮಯವೇನಲ್ಲ, ತಮ್ಮ ವಿನೋದಕ್ಕಾಗಿ ಯಾರೋ ಬುದ್ಧಿಯಿಲ್ಲದವರು ಲೋಕಕ್ಕೆ ಕ್ಷೋಭೆಯನ್ನುಂಟು ಮಾಡುತ್ತಿದ್ದಾರೆ, ಇದನ್ನು ತಪ್ಪಿಸುವ ಮಾರ್ಗವೇನೆಂದು ಯೋಚಿಸುತ್ತಾ ನಾರದರು ಆಗಸದಿಂದ ಭೂಮಿಗೆ ಇಳಿದು ಬಂದು ಅರ್ಜುನನನ್ನು ನೋಡಿ ಓಹೋ ಅರ್ಜುನ ಇದು ಸಹಿಸಲಾಗದ ಸಂಕಟ ಇದನ್ನು ಸಾಕು ಮಾಡೆಂದನು.

ಅರ್ಥ:
ಆಹಹ: ಓಹೋ; ಬೆಂದು: ಸುಟ್ಟುಹೋಗು; ಭುವನ: ಭೂಮಿ; ವಿಗ್ರಹ: ರೂಪ; ಯುದ್ಧ; ಸಮಯ: ಕಾಲ; ಲೀಲೆ: ಆಟ, ಕ್ರೀಡೆ; ಕುಹಕ: ಮೋಸ, ವಂಚನೆ; ಮತಿ: ಬುದ್ಧಿ; ತಂದರೈ: ತರು, ಬರೆಮಾಡು; ತ್ರೈಜಗ: ಮೂರು ಲೋಕ; ತಲ್ಲಣ: ಅಂಜಿಕೆ, ಭಯ; ರಹ: ಗುಟ್ಟು, ರಹಸ್ಯ; ಅಭ್ರ: ಆಗಸ; ತಳ: ಕೆಳಗು, ಪಾತಾಳ; ಮಹಿ: ಭೂಮಿ; ಬಂದನು: ಆಗಮಿಸು; ದೇವಮುನಿ: ನಾರದ; ದುಸ್ಸಹ: ಸಹಿಸಲಸಾಧ್ಯವಾದ; ಸಾಕು: ನಿಲ್ಲಿಸು;

ಪದವಿಂಗಡಣೆ:
ಅಹಹ +ಬೆಂದುದು +ಭುವನವ್+ಇದು +ವಿ
ಗ್ರಹದ +ಸಮಯವೆ +ತಮ್ಮ +ಲೀಲೆಗೆ
ಕುಹಕ+ಮತಿಗಳು+ ತಂದರೈ +ತ್ರೈಜಗಕೆ+ ತಲ್ಲಣವ
ರಹವಿದೇನ್+ಎಂದ್+ಅಭ್ರ+ ತಳದಿಂ
ಮಹಿಗೆ+ ಬಂದನು +ದೇವಮುನಿ
ದುಸ್ಸಹವಿದೇನೈ+ ಪಾರ್ಥ +ಹೋಹೋ +ಸಾಕು +ಸಾಕೆಂದ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತಂದರೈ ತ್ರೈಜಗಕೆ ತಲ್ಲಣವ
(೨) ಹೋಹೋ, ಆಹಹ – ಆಶ್ಚರ್ಯ ಸೂಚಕ ಪದಗಳ ಬಳಕೆ

ಪದ್ಯ ೨೦: ಯುದ್ಧದ ಚಿತ್ರಣ ಹೇಗಿತ್ತು?

ಕವಿದುದಸುರರ ಚೂಣಿ ಬೊಬ್ಬೆಯ
ವಿವಿಧ ವಾದ್ಯ ಧ್ವನಿಯ ಕಹಳಾ
ರವದ ಕೋಳಾಹಳಕೆ ತುಂಬಿತು ಬಹಳ ಭೇರಿಗಳು
ರವಿಯನಾಕಾಶವ ದಿಗಂತವ
ತಿವಿದು ಕೆದರುವ ಧೂಳಿ ತಿಮಿರಾ
ರ್ಣವವಲೈ ತ್ರೈಜಗವೆನಲು ಜೊಂಪಿಸಿದುದರಿಸೇನೆ (ಅರಣ್ಯ ಪರ್ವ, ೧೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ರಾಕ್ಷಸರ ಸೈನ್ಯವು ನಮ್ಮ ಮೇಲೆ ಕವಿಯಿತು. ಕಹಳೆ ಭೇರಿಗಳ ಕೋಲಾಹಲವು ಆಕಾಶವನ್ನಾವರಿಸಿತು. ದಿಗಂತವನ್ನು ಆವರಿಸುವ ಕೆಂದೂಳಿನಿಂದ ಮೂರು ಲೋಕಗಳು ಕತ್ತಲಿನ ಕಡಲಿನಂತಾದವು. ಶತ್ರು ಸೈನ್ಯವು ಆರ್ಭಟಿಸಿತು.

ಅರ್ಥ:
ಕವಿ: ಆವರಿಸು; ಅಸುರ: ರಾಕ್ಷಸ; ಚೂಣಿ: ಮುಂಭಾಗ; ಬೊಬ್ಬೆ: ಸುಟ್ಟ ಗಾಯ, ಗುಳ್ಳೆ; ವಿವಿಧ: ಹಲವಾರು; ವಾದ್ಯ: ಸಂಗೀತದ ಸಾಧನ; ಧ್ವನಿ: ರವ, ಶಬ್ದ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಕೋಳಾಹಳ: ಗದ್ದಲ, ಗೊಂದಲ; ತುಂಬು; ಪೂರ್ಣಗೊಳ್ಳು; ಬಹಳ: ಹಲವಾರು; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ, ದುಂದುಭಿ; ರವಿ: ಸೂರ್ಯ; ಆಕಾಶ: ಆಗಸ; ದಿಗಂತ: ದಿಕ್ತಟ, ದಿಕ್ಕಿನ ತುದಿ; ತಿವಿ: ಚುಚ್ಚು; ಕೆದರು: ಹರಡು; ಧೂಳು: ಮಣ್ಣಿನ ಪುಡಿ; ತಿಮಿರ: ಅಂಧಕಾರ; ಅರ್ಣವ: ಸಮುದ್ರ; ತ್ರೈಜಗ: ಮೂರು ಲೋಕ; ಜೊಂಪಿಸು: ಭಯಗೊಳ್ಳು; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಕವಿದುದ್+ಅಸುರರ +ಚೂಣಿ +ಬೊಬ್ಬೆಯ
ವಿವಿಧ +ವಾದ್ಯ +ಧ್ವನಿಯ +ಕಹಳಾ
ರವದ+ ಕೋಳಾಹಳಕೆ+ ತುಂಬಿತು +ಬಹಳ +ಭೇರಿಗಳು
ರವಿಯನ್+ಆಕಾಶವ+ ದಿಗಂತವ
ತಿವಿದು +ಕೆದರುವ +ಧೂಳಿ +ತಿಮಿರಾ
ರ್ಣವವಲೈ+ ತ್ರೈಜಗವೆನಲು+ ಜೊಂಪಿಸಿದುದ್+ಅರಿಸೇನೆ

ಅಚ್ಚರಿ:
(೧) ಧ್ವನಿ, ರವ – ಸಮನಾರ್ಥಕ ಪದ

ಪದ್ಯ ೨೭: ದ್ರೌಪದಿಯು ದೇವತೆಗಳಲ್ಲಿ ಹೇಗೆ ಮೊರೆಯಿಟ್ಟಳು?

ಸೊಸೆಯಲಾ ದೇವೆಂದ್ರಯೆನ್ನಯ
ಘಸಣಿ ಯಾರದು ಹಿರಿಯ ಮಾವನ
ವಶವಲಾ ತ್ರೈಜಗದ ಜೀವರ ಜೀವ ವಿಭ್ರಮಣ
ಉಸುರು ನಿನ್ನಾಧೀನವೀ ದು
ರ್ವ್ಯಸನಿಗಳ ಕೊಂಡಾಡುವರೆ ಕರು
ಣಿಸು ಸಮೀರಣಯೆಂದು ಹಲುಬಿದಳಾಶ್ವಿನೇಯರಿಗೆ (ಸಭಾ ಪರ್ವ, ೧೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಪರಮಾತ್ಮರಲ್ಲಿ ಮೊರೆಯಿಟ್ಟ ದ್ರೌಪದಿ ನಂತರ ತನ್ನ ಮಾವನಾದ ಇಂದ್ರನಲ್ಲಿ ಬೇಡಿದಳು. ಹೇ ಇಂದ್ರದೇವ ನಾನು ನಿನಗೆ ಸೊಸೆಯಲ್ಲವೇ, ಈ ಕಷ್ಟದಿಂದ ನನ್ನನ್ನು ಪಾರು ಮಾಡುವವರು ಯಾರು, ಅದು ನಿನ್ನ ಕೆಲಸವಲ್ಲವೇ? ಹೇ ವಾಯುದೇವ, ಮೂರುಲೋಕಗಳಲ್ಲಿರುವ ಜೀವರಲ್ಲಿ ಜೀವವಾಗಿರುವ ಉಸಿರು ನಿನ್ನ ಅಧೀನವಲ್ಲವೇ? ಈ ದುರಾಚಾರಿಗಳನ್ನು ನೀನು ಸೈರಿಸಬಹುದೇ? ಹೇ ವಾಯುದೇವ ಕರುಣಿಸು, ಹೇ ಅಶ್ವಿನೀ ದೇವತೆಗಳೇ ನೀವಾದರೂ ನನ್ನನ್ನು ಕಷ್ಟದಿಂದ ಪಾರುಮಾಡಬಹುದಲ್ಲವೇ ಎಂದು ದ್ರೌಪದಿಯು ದೇವತೆಗಳಲ್ಲಿ ಮೊರೆಯಿಟ್ಟಳು.

ಅರ್ಥ:
ಸೊಸೆ: ಮಗನ ಹೆಂಡತಿ; ದೇವೇಂದ್ರ; ಇಂದ್ರ; ಘಸಣಿ: ತೊಂದರೆ; ಹಿರಿಯ: ದೊಡ್ಡವ; ಮಾವ: ಗಂಡನ ತಂದೆ; ವಶ: ಅಧೀನ, ಅಂಕೆ; ತ್ರೈಜಗ: ಮೂರುಲೋಕ; ಜೀವ: ಉಸಿರು; ವಿಭ್ರಮಣ: ಅಲೆಯುವಿಕೆ; ಉಸುರು: ವಾಯು; ಅಧೀನ: ವಶ, ಕೈಕೆಳಗಿರುವ; ದುರ್ವ್ಯಸನ: ಕೆಟ್ಟ ಚಟವುಳ್ಳ; ಕೊಂಡಾಡು: ಹೊಗಳು, ಆದರಿಸು; ಕರುಣಿಸು: ದಯಪಾಲಿಸು; ಸಮೀರ: ವಾಯು; ಹಲುಬು: ಗೋಳಿಡು, ಬೇಡಿಕೋ; ಅಶ್ವಿನಿ: ದೇವತೆಗಳ ಒಂದು ಗುಂಪು;

ಪದವಿಂಗಡಣೆ:
ಸೊಸೆಯಲಾ +ದೇವೆಂದ್ರ+ಎನ್ನಯ
ಘಸಣಿ +ಯಾರದು +ಹಿರಿಯ +ಮಾವನ
ವಶವಲಾ +ತ್ರೈಜಗದ+ ಜೀವರ +ಜೀವ +ವಿಭ್ರಮಣ
ಉಸುರು +ನಿನ್+ಅಧೀನವ್+ಈ+ ದು
ರ್ವ್ಯಸನಿಗಳ +ಕೊಂಡಾಡುವರೆ +ಕರು
ಣಿಸು +ಸಮೀರಣ+ಎಂದು +ಹಲುಬಿದಳ್+ಅಶ್ವಿನೇಯರಿಗೆ

ಅಚ್ಚರಿ:
(೧) ವಾಯುದೇವನನ್ನು ಹೊಗಳುವ ಪರಿ – ಜಗದ ಜೀವರ ಜೀವ ವಿಭ್ರಮಣ ಉಸುರು ನಿನ್ನಾಧೀನವೀ