ಪದ್ಯ ೩೪: ಯಾವುದು ಯುಗಧರ್ಮ?

ಕೃತಯುಗದವರು ತ್ರೇತೆಯವರಿಂ
ದತಿ ಪರಾಕ್ರಮ ಯುಕ್ತರವರದು
ಭುತ ಬಲರು ತ್ರೇತೆಯವರಾ ದ್ವಾಪರ ಸ್ಥಿತಿಗೆ
ವಿತತ ಸತ್ವರು ಕಲಿಯುಗದ ದು
ರ್ಮತಿ ಮನುಷ್ಯವ್ರಾತ ಹೀನಾ
ಕೃತಿ ಕಣಾ ಯುಗ ಧರ್ಮ ಕೃತ ಮೊದಲಾಗಿ ಕಲಿಯುಗಕೆ (ಅರಣ್ಯ ಪರ್ವ, ೧೧ ಸಂಧಿ, ೩೪ ಪದ್ಯ)

ತಾತ್ಪರ್ಯ:
ಹನುಮಂತ ಯುಗಧರ್ಮದ ಬಗ್ಗೆ ತಿಳಿಸುತ್ತಾ, ತ್ರೇತಾಯುಗದವರಿಗೆ ಹೋಲಿಸಿದರೆ ಕೃತಯುಗದವರು ಅದ್ಭುತ ಪರಾಕ್ರಮಶಾಲಿಗಳು, ಬಲಶಾಲಿಗಳು ಆಗಿರುತ್ತಾರೆ. ದ್ವಾಪರ ಯುಗದವರಿಗಿಂತ ತ್ರೇತಾಯುಗದವರು ಮಹಾಪರಾಕ್ರಮಶಾಲಿಗಳು. ಕಲಿಯುಗದ ಮನುಷ್ಯರು ದ್ವಾಪರಯುಗದವರಿಗೆ ಹೋಲಿಸಿದಾಗ ಹೀನ ಸತ್ವರು, ಇದು ಯುಗಧರ್ಮ ಎಂದು ತಿಳಿಸಿದನು.

ಅರ್ಥ:
ಯುಗ: ಕಾಲವನ್ನು ಅಳೆಯುವ ಪ್ರಮಾಣ; ಅತಿ: ಬಹಳ; ಪರಾಕ್ರಮ: ಶೌರ್ಯ; ಯುಕ್ತ: ಅನುಸರಣೆ, ತರ್ಕವಾದ; ಅದುಭುತ: ಆಶ್ಚರ್ಯ; ಬಲರು: ಬಲಶಾಲಿಗಳು; ಸ್ಥಿತಿ: ಇರವು, ಅಸ್ತಿತ್ವ; ವಿತತ: ವಿಸ್ತಾರವಾದ; ಸತ್ವ: ಸಾರ; ದುರ್ಮತಿ: ಕೆಟ್ಟ ಬುದ್ಧಿ; ವ್ರಾತ: ಗುಂಪು; ಮನುಷ್ಯ: ನರ; ಹೀನಾಕೃತಿ:ಕೀಳಾದ ಕೆಲಸ, ಕೆಟ್ಟ ಕೆಲಸ;

ಪದವಿಂಗಡಣೆ:
ಕೃತಯುಗದವರು+ ತ್ರೇತೆಯವರಿಂದ್
ಅತಿ +ಪರಾಕ್ರಮ+ ಯುಕ್ತರ್+ಅವರ್+ಅದು
ಭುತ+ ಬಲರು+ ತ್ರೇತೆಯವರಾ+ ದ್ವಾಪರ +ಸ್ಥಿತಿಗೆ
ವಿತತ+ ಸತ್ವರು +ಕಲಿಯುಗದ +ದು
ರ್ಮತಿ +ಮನುಷ್ಯ+ವ್ರಾತ+ ಹೀನಾ
ಕೃತಿ +ಕಣಾ +ಯುಗ +ಧರ್ಮ +ಕೃತ+ ಮೊದಲಾಗಿ +ಕಲಿಯುಗಕೆ

ಅಚ್ಚರಿ:
(೧) ಕಲಿಯುಗದ ಗುಣಧರ್ಮ – ಕಲಿಯುಗದ ದುರ್ಮತಿ ಮನುಷ್ಯವ್ರಾತ ಹೀನಾಕೃತಿ ಕಣಾ

ಪದ್ಯ ೨೨: ಭೀಮನು ಏನೆಂದು ಚಿಂತಿಸಿದನು?

ಈತ ಕಪಿರೂಪದ ಸುರೇಂದ್ರನೊ
ಭೂತನಾಥನೊ ಮೇಣು ವಿಮಲ
ತ್ರೇತೆಯಲಿ ದಶಮುಖನ ಹಾಣಾಹಾಣಿಗಳ ಕಪಿಯೊ
ಏತರವು ನಮ್ಮುಬ್ಬಟೆಗಳಿಂ
ದೀತ ಗೆಲಿದನು ಬಾಲದಲಿ ಸ
ತ್ವಾತಿಶಯವಿನ್ನೀತಗೆಂತುಟೊ ಶಿವ ಶಿವಾಯೆಂದ (ಅರಣ್ಯ ಪರ್ವ, ೧೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಹನುಮನ ಬಾಲವನ್ನು ಸ್ವಲ್ಪವೂ ಆಲ್ಲಾಡಿಸಲಾಗದೆ ಆಶ್ಚರ್ಯಗೊಂಡ ಭೀಮನು, ಇವನಾರಿರಬಹುದು? ಕಪಿರೂಪವನ್ನು ತಾಳಿದ ಇಂದ್ರನೋ, ಶಿವನೋ ಇರಬೇಕು, ಅಥವಾ ತ್ರೇತಾಯುಗದಲ್ಲಿ ರಾವಣನ ಜೊತೆ ಹಾಣಾಹಾಣಿಗಿಳಿದ ಹನುಮಂತನಿರಬಹುದೇ? ನಾವು ಮಹಾಸತ್ವಶಾಲಿಗಳೆಂದು ಮೆರೆಯುತ್ತೇವೆ, ಆದರೆ ಈತನು ನಮ್ಮನ್ನು ಬಾಲದಿಂದಲೇ ಗೆದ್ದನು. ಇವನಿಗೆ ಇನ್ನೆಷ್ಟು ಅತಿಶಯ ಸತ್ವವಿರಬೇಕು ಶಿವ ಶಿವಾ ಎಂದು ಭೀಮನು ಚಿಂತಿಸಿದನು.

ಅರ್ಥ:
ಕಪಿ: ಮಂಗ; ರೂಪ: ಆಕಾರ; ಸುರೇಂದ್ರ: ಇಂದ್ರ; ಭೂತನಾಥ: ಶಿವ; ಮೇಣು: ಅಥವ; ವಿಮಲ: ಶುದ್ಧ; ತ್ರೇತ: ಯುಗದ ಹೆಸರು; ದಶಮುಖ: ಹತ್ತು ಮುಖವುಳ್ಳ (ರಾವಣ); ಹಾಣಾಹಾಣಿ: ಒಬ್ಬನು ತನ್ನ ಹಣೆಯಿಂದ ಇನ್ನೊಬ್ಬನ ಹಣೆಗೆ ಹೊಡೆದು ಮಾಡುವ ಯುದ್ಧ; ಉಬ್ಬಟೆ: ಅತಿಶಯ, ಹಿರಿಮೆ; ಗೆಲುವು: ಜಯ; ಬಾಲ: ಪುಚ್ಛ; ಸತ್ವ: ಶಕ್ತಿ, ಬಲ; ಅತಿಶಯ: ಹೆಚ್ಚು;

ಪದವಿಂಗಡಣೆ:
ಈತ +ಕಪಿ+ರೂಪದ+ ಸುರೇಂದ್ರನೊ
ಭೂತನಾಥನೊ +ಮೇಣು +ವಿಮಲ
ತ್ರೇತೆಯಲಿ +ದಶಮುಖನ+ ಹಾಣಾಹಾಣಿಗಳ+ ಕಪಿಯೊ
ಏತರವು +ನಮ್ಮ್+ಉಬ್ಬಟೆಗಳಿಂದ್
ಈತ +ಗೆಲಿದನು +ಬಾಲದಲಿ +ಸತ್ವ
ಅತಿಶಯವಿನ್+ಈತಗ್+ಎಂತುಟೊ +ಶಿವ+ ಶಿವಾಯೆಂದ

ಅಚ್ಚರಿ:
(೧) ಇಂದ್ರ, ಶಿವನಿಗೆ ಹೋಲಿಸುವ ಪರಿ – ಈತ ಕಪಿರೂಪದ ಸುರೇಂದ್ರನೊ ಭೂತನಾಥನೊ
(೨) ಹನುಮನನ್ನು ಹೋಲಿಸುವ ಪರಿ – ವಿಮಲ ತ್ರೇತೆಯಲಿ ದಶಮುಖನ ಹಾಣಾಹಾಣಿಗಳ ಕಪಿಯೊ