ಪದ್ಯ ೪: ಭೀಮ ದುರ್ಯೋಧನರ ಗದಾ ಯುದ್ಧವು ಹೇಗೆ ನಡೆಯಿತು?

ಗದೆಗದೆಯ ಹೊಯ್ಲುಗಳ ಖಣಿಖಟಿ
ಲೊದಗಿತಿಬ್ಬರ ಬೊಬ್ಬೆ ಭುವನವ
ಬೆದರಿಸಿತು ಪದಥಟ್ಟಣೆಯ ಘಟ್ಟಣೆಯ ಘಾತಿಯಲಿ
ಅದರಿತಿಳೆ ಮಝ ಭಾಪು ಭಟರೆಂ
ದೊದರಿತಾ ಪರಿವಾರದಬ್ಬರ
ತ್ರಿದಶನಿಕರದ ಸಾಧುರವವಂಜಿಸಿತು ಮೂಜಗದ (ಗದಾ ಪರ್ವ, ೭ ಸಂಧಿ, ೪ ಪದ್ಯ)

ತಾತ್ಪರ್ಯ:
ಗದೆಗಳು ಒಂದನ್ನೊಂದು ತಾಗಿ ಖಣಿ ಖಟಿಲೆಂಬ ಸದ್ದಾಗುತ್ತಿತ್ತು. ಇಬ್ಬರ ಕೂಗುಗಳು ಲೋಕವನ್ನೇ ಬೆದರಿಸಿದವು. ಪಾದಗಳ ತುಳಿತಕ್ಕೆ ಭೂಮಿ ನಡುಗಿತು. ಪರಿವಾಅರದವರು ಭಲೇ, ಭಾಪು ಎಂದು ಹೊಗಳುತ್ತಿದ್ದರು. ದೇವತೆಗಳು ಸಾಧುವಾದವನ್ನು ಮಾಡಿದರು.

ಅರ್ಥ:
ಗದೆ: ಮುದ್ಗರ; ಹೊಯ್ಲು: ಹೊಡೆತ; ಖಣಿಖಟಿ: ಶಬ್ದವನ್ನು ವರ್ಣಿಸುವ ಪದ; ಬೊಬ್ಬೆ: ಗರ್ಜನೆ; ಭುವನ: ಭೂಮಿ; ಬೆದರಿಸು: ಹೆದರಿಸು; ಪದ: ಪಾದ, ಚರಣ; ಥಟ್ಟಣೆ: ಗುಂಪು; ಘಾತಿ: ಹೊಡೆತ; ಅದರು: ನಡುಗು; ಇಳೆ: ಭೂಮಿ; ಮಝ: ಕೊಂಡಾಟದ ಒಂದು ಮಾತು; ಭಾಪು: ಭಲೇ; ಭಟ: ವೀರ; ಒದರು: ಹೇಳು; ಪರಿವಾರ: ಬಂಧುಜನ; ಅಬ್ಬರ: ಗರ್ಜನೆ; ತ್ರಿದಶ: ದೇವತೆ; ನಿಕರ: ಗುಂಪು; ಸಾಧು: ಒಪ್ಪಿಗೆ, ಮುನಿಜನ; ಅಂಜಿಸು: ಹೆದರು; ಮೂಜಗ: ತ್ರಿಜಗ, ಮೂರು ಜಗತ್ತು;

ಪದವಿಂಗಡಣೆ:
ಗದೆಗದೆಯ +ಹೊಯ್ಲುಗಳ +ಖಣಿಖಟಿಲ್
ಒದಗಿತ್+ಇಬ್ಬರ+ ಬೊಬ್ಬೆ +ಭುವನವ
ಬೆದರಿಸಿತು +ಪದ+ಥಟ್ಟಣೆಯ +ಘಟ್ಟಣೆಯ +ಘಾತಿಯಲಿ
ಅದರಿತ್+ಇಳೆ +ಮಝ +ಭಾಪು +ಭಟರೆಂದ್
ಒದರಿತಾ+ ಪರಿವಾರದ್+ಅಬ್ಬರ
ತ್ರಿದಶ+ನಿಕರದ+ ಸಾಧುರವವ್+ಅಂಜಿಸಿತು +ಮೂಜಗದ

ಅಚ್ಚರಿ:
(೧) ಶಬ್ದಗಳನ್ನು ವಿವರಿಸುವ ಪದ – ಖಣಿಖಟಿಲ, ಬೊಬ್ಬೆ, ಒದರು, ಸಾಧುರವ, ಮಝ, ಭಾಪು
(೨) ಘ ಕಾರದ ಪದಗಳು – ಘಟ್ಟಣೆಯ ಘಾತಿಯಲಿ

ಪದ್ಯ ೧೨: ಯೋಧರು ಸುಪ್ರತೀಕಗಜನನ್ನು ಕಂಡು ಏನು ಹೇಳಿದರು?

ಇದು ಗಜಾಸುರನೋ ಮಹಾ ದೇ
ವಿದುವೆ ಮಹಿಷಾಸುರನ ಮಾಯಾ
ರದನಿಯೋ ದಿಟವಿದನು ಗೆಲುವರೆ ಭೀಮ ಫಲುಗುಣರು
ತ್ರಿದಶ ರಿಪುಗಳ ಗಂಡನಿದು ಕಾ
ದಿದೆವು ನಾವಿಂದೆನುತ ಸುಭಟರು
ಕದಡಿ ಸರಿದುದು ಸೂರೆಗೊಂಡುದು ಬಲ ಪಲಾಯನವ (ದ್ರೋಣ ಪರ್ವ, ೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಇದು ಬರಿಯ ಯುದ್ಧದಾನೆಯಲ್ಲ, ಇದು ಗಜಾಸುರನೋ, ಮಹಿಷಾಸುರನ ಮಾಯಾದಂತಿಯೋ ಇರಬೇಕು. ಇದನ್ನು ಭೀಮಾರ್ಜುನರು ಗೆಲ್ಲಬಹುದೇ? ಅಸುರರ ಗಂಡನಂತಿರುವ ಇದರೊಡನೆ ಕಾದಿ ಗೆದ್ದು ಬಿಟ್ಟೆವು, ಎಂದು ಯೋಧರು ಚದುರಿ ಪಲಾಯನ ಮಾಡಿದರು.

ಅರ್ಥ:
ಗಜ: ಆನೆ; ಅಸುರ: ರಾಕ್ಷಸ; ಗಜಾಸುರ: ಒಬ್ಬ ರಾಕ್ಷಸನ ಹೆಸರ್; ಮಹಾದೇವ: ಶಿವ; ಮಹಿಷ: ಎಮ್ಮೆ; ಮಾಯಾ: ಇಂದ್ರಜಾಲ; ರದನಿ: ಆನೆ, ದಂತವನ್ನು ಲೆಕ್ಕಣಿಕೆಯಾಗಿ ಉಳ್ಳವನು (ಗಣಪತಿ); ದಿಟ: ಸತ್ಯ; ಗೆಲುವು: ಜಯ; ತ್ರಿದಶ: ಮೂವತ್ತು; ರಿಪು: ವೈರಿ; ಗಂಡ: ಶೂರ, ವೀರ, ಪತಿ; ಕಾದು: ಹೋರಾಡು; ಸುಭಟ: ಪರಾಕ್ರಮಿ; ಕದಡು: ಕಲಕಿದ ದ್ರವ, ಕಲ್ಕ; ಸರಿ: ಸದೃಶ, ಸಾಟಿ; ಸೂರೆ:ಲೂಟಿ, ಕೊಳ್ಳೆ; ಬಲ: ಸೈನ್ಯ; ಪಲಾಯನ: ಓಡುವಿಕೆ, ಪರಾರಿ;

ಪದವಿಂಗಡಣೆ:
ಇದು+ ಗಜಾಸುರನೋ +ಮಹಾದೇವ
ಇದುವೆ +ಮಹಿಷಾಸುರನ +ಮಾಯಾ
ರದನಿಯೋ +ದಿಟವ್+ಇದನು +ಗೆಲುವರೆ+ ಭೀಮ +ಫಲುಗುಣರು
ತ್ರಿದಶ +ರಿಪುಗಳ+ ಗಂಡನಿದು+ ಕಾ
ದಿದೆವು +ನಾವಿಂದ್+ಎನುತ +ಸುಭಟರು
ಕದಡಿ +ಸರಿದುದು +ಸೂರೆಗೊಂಡುದು +ಬಲ +ಪಲಾಯನವ

ಅಚ್ಚರಿ:
(೧) ಸುಪ್ರತೀಕ ಗಜವನ್ನು ಹೋಲಿಸುವ ಪರಿ – ಗಜಾಸುರ, ಮಹಿಷಾಸುರ, ಮಾಯಾರದನಿ

ಪದ್ಯ ೨೯: ಅರ್ಜುನನ ತರ್ಕಬದ್ಧ ಉತ್ತರವೇನು?

ಇದು ಮನುಷ್ಯ ಶರೀರ ತದ್ಧ
ರ್ಮದಲಿ ತನ್ನವಸಾನ ಪರಿಯಂ
ತಿದರೊಳವ್ಯಭಿಚಾರದಲಿ ವರ್ತಿಸಿದ ಬಳಿಕಿನಲಿ
ತ್ರಿದಶರಲ್ಲಿಗೆ ಬಂದರಾ ಮಾ
ರ್ಗದಲಿ ನಡೆವುದು ದೇವತಾ ದೇ
ಹದಲಿ ಬಲವತ್ತರವು ದೇಹ ವಿಶೇಷ ವಿಧಿಯೆಂದ (ಅರಣ್ಯ ಪರ್ವ, ೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ತಾಯಿ, ನನ್ನದು ಮಾನವ ಶರೀರ, ನಾನು ಸಾಯುವವರೆಗೂ ಮನುಷ್ಯ ಧರ್ಮದಂತೆ ಅವ್ಯಭಿಚಾರದಿಂದ ಬದುಕನ್ನು ಸಾಗಿಸಿ, ತದನಂತರ ದೇವಲೋಕಕ್ಕೆ ಬಂದ ಮೇಲೆ ದೇವತೆಗಳಂತೆ ನಡೆಯಬೇಕು, ದೇವತಾ ದೇಹವು ಬಲವತ್ತರವಾದುದು, ಅದಕ್ಕೆ ವಿಧಿ ಬೇರೆ ಎಂದು ಅರ್ಜುನನು ಹೇಳಿದನು.

ಅರ್ಥ:
ಮನುಷ್ಯ: ನರ; ಶರೀರ: ದೇಹ; ಧರ್ಮ: ಧಾರಣೆ ಮಾಡಿದುದು; ಅವಸಾನ: ಅಂತ್ಯ; ಪರಿಯಂತ: ವರೆಗೂ; ವ್ಯಭಿಚಾರ: ಅಪಾಮಾರ್ಗ; ವರ್ತಿಸು: ನಡೆದು, ಸಾಗು; ಬಳಿಕ: ನಂತರ; ತ್ರಿದಶ: ದೇವತೆ;ಬಂದು: ಆಗಮಿಸು; ಮಾರ್ಗ: ದಾರಿ; ನಡೆ: ಸಾಗು; ದೇವತೆ: ಸುರ; ದೇಹ: ತನು; ಬಲ: ಬಲಿಷ್ಟ; ವಿಶೇಷ: ಅಸಾಮಾನ್ಯ, ವಿಶಿಷ್ಟ; ವಿಧಿ: ನಿಯಮ;

ಪದವಿಂಗಡಣೆ:
ಇದು +ಮನುಷ್ಯ +ಶರೀರ +ತದ್ಧ
ರ್ಮದಲಿ+ ತನ್+ಅವಸಾನ +ಪರಿಯಂತ್
ಇದರೊಳ್+ಅವ್ಯಭಿಚಾರದಲಿ+ ವರ್ತಿಸಿದ+ ಬಳಿಕಿನಲಿ
ತ್ರಿದಶರಲ್ಲಿಗೆ +ಬಂದರ್+ಆ+ ಮಾ
ರ್ಗದಲಿ +ನಡೆವುದು +ದೇವತಾ +ದೇ
ಹದಲಿ+ ಬಲವತ್ತರವು+ ದೇಹ +ವಿಶೇಷ +ವಿಧಿಯೆಂದ

ಅಚ್ಚರಿ:
(೧) ಶರೀರ, ದೇಹ; ತ್ರಿದಶ, ದೇವತ – ಸಮನಾರ್ಥಕ ಪದ

ಪದ್ಯ ೩೪: ಯಜ್ಞದ ಹವಿಸ್ಸು ಯಾರನ್ನು ತಲುಪಿತು?

ತ್ರಿದಿವವನು ತುಡುಕಿತು ಹವಿರ್ಗಂ
ಧದ ಗಢಾವಣೆ ಧೂತ ಧೂಮದ
ತುದಿ ತಪೋಲೋಕದಲಿ ತ್ಳಿತುದು ಸತ್ಯಲೋಕದಲಿ
ತ್ರಿದಶರುರೆ ಬಾಯಾಡಿಸಿದರ
ಗ್ಗದ ಧೃವಾದಿಗಳನು ಸುತೃಪ್ತಿಯ
ಹೊದರುದೇಗಿನ ಹೊಟ್ಟೆ ನೂಕಿತು ಹರಿಹಯಾದಿಗಳ (ಸಭಾ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಹವಿಸ್ಸಿನ ಗಂಧಾದಿಗಳ ಸುವಾಸನೆ ಸ್ವರ್ಗವನ್ನು ಆವರಿಸಿತು, ಅಗ್ನಿಯ ದೂತನಾದ ಹೊಗೆಯು ತಪೋಲೋಕ, ಸತ್ಯಲೋಕಗಳನ್ನು ತಲುಪಿತು. ಸ್ವರ್ಗದಲ್ಲಿ ದೇವತೆಗಳು ಅತಿಶಯವಾಗಿ ಹವಿಸ್ಸನ್ನು ಸೇವಿಸಿ, ಸಂತೃಪ್ತಿಯನ್ನು ಹೊಂದು, ದೇವೇಂದ್ರನೇ ಮೊದಲಾದ ದೇವತೆಗಳು ಸಂತೃಪ್ತರಾಗಿ ತೇಗಿದರು.

ಅರ್ಥ:
ತ್ರಿದಿವ: ಸ್ವರ್ಗ; ತುಡುಕು:ಮುಟ್ಟು; ಹವಿಸ್ಸು: ಯಜ್ಞದಲ್ಲಿ ಆಹುತಿ ಕೊಡುವ ತುಪ್ಪ; ಗಂಧ: ಚಂದನ; ಗಡಾವಣೆ: ಗಟ್ಟಿಯಾದ ಶಬ್ದ; ಧೂತ: ಸೇವಕ; ಧೂಮ: ಹೊಗೆ; ತುದಿ: ಅಗ್ರಭಾಗ; ಲೋಕ: ಜಗತ್ತು; ತಳಿತ:ಚಿಗುರಿದ; ಉರೆ: ಅತಿಶಯವಾಗಿ; ಬಾಯಿ: ನ್ನಲು, ಕುಡಿಯಲು, ಮಾತನಾಡಲು ಯಾ ಶಬ್ದದ ಉದ್ಗಾರಗಳಿಗೂ ಬಳಸುವ ಮುಖದ ಅಂಗ;ಆಡಿಸು: ಬಾಯಾಡಿಸು: ತಿನ್ನು; ಅಗ್ಗ: ಶ್ರೇಷ್ಠ; ಧೃವಾದಿ: ದ್ರವ್ಯ ಮುಂತಾದ; ತೃಪ್ತಿ: ಸಂತುಷ್ಟಿ; ಹೊದರು: ಹೊರಹಾಕು; ತೇಗು: ಊಟವಾದ ಮೇಲೆ ಬಾಯಿಂದ ಬರುವ ಶಬ್ದ; ಹೊಟ್ಟೆ: ಉದರ; ನೂಕು: ತಳ್ಳು; ಹರಿಹಯ: ಇಂದ್ರ; ಆದಿ: ಮುಂತಾದ;

ಪದವಿಂಗಡಣೆ:
ತ್ರಿದಿವವನು+ ತುಡುಕಿತು+ ಹವಿರ್+
ಗಂಧದ +ಗಢಾವಣೆ +ಧೂತ +ಧೂಮದ
ತುದಿ +ತಪೋಲೋಕದಲಿ+ ತಳಿತುದು +ಸತ್ಯಲೋಕದಲಿ
ತ್ರಿದಶರ್+ಉರೆ +ಬಾಯಾಡಿಸಿದರ್
ಅಗ್ಗದ +ಧೃವಾದಿಗಳನು +ಸುತೃಪ್ತಿಯ
ಹೊದರು+ತೇಗಿನ +ಹೊಟ್ಟೆ +ನೂಕಿತು +ಹರಿಹಯಾದಿಗಳ

ಅಚ್ಚರಿ:
(೧) ಚೆನ್ನಾಗಿ ಊಟಮಾಡಿದರು ಎಂದು ಹೇಳಲು – ಸುತೃಪ್ತಿಯ ಹೊದರು ತೇಗಿನ ಹೊಟ್ಟೆ ನೂಕಿತು – ತೇಗನ್ನು ಹೊಟ್ಟೆ ನೂಕಿತು
(೨) ತ್ರಿವಿದ, ತ್ರಿದಶ – ಸ್ವರ್ಗವನ್ನು ಕರೆಯಲುಬಳಸಿದ ಪದ, ೧,೪ ಸಾಲಿನ ಮೊದಲ ಪದ
(೩) “ತ” ಕಾರದ ಪದಗಳ ಜೋಡಣೆ – ತುದಿ ತಪೋಲೋಕದಲಿ ತಳಿತುದು