ಪದ್ಯ ೮೭: ಭೂಮ್ಯಾಕಾಶಗಳಿಗೆ ಯಾವುದು ಕತ್ತಲನ್ನು ಆವರಿಸಿತು?

ನೀಲಗಿರಿಗಳ ನೆಮ್ಮಿ ಘನಮೇ
ಘಾಳಿ ಸುರಿದವೊ ಮಳೆಯನೆನೆ ಬಿರು
ಗೋಲ ಸೈವಳೆಗರೆದರುಭಯದ ಜೋದರವಗಡಿಸಿ
ಮೇಲೆ ತೊಳಲುವ ಖಚರ ನಿಚಯಗ
ಳಾಲಿಯೊಲೆದವು ಧರೆಗೆ ಗಗನಕೆ
ಕಾಳಿಕೆಯ ಪಸರಿಸಿತು ಜೋದರ ಕೋದ ಶರಜಾಲ (ಭೀಷ್ಮ ಪರ್ವ, ೪ ಸಂಧಿ, ೮೭ ಪದ್ಯ)

ತಾತ್ಪರ್ಯ:
ನೀಲಗಿರಿಗೆ ಆತು ಮಹಾಮೇಘಗಳು ಮಳೆಯನ್ನು ಸುರಿಸುವಂತೆ ಜೋದರು ಬಾಣಗಳ ಮಳೆಗರೆಯಲು ಭೂಮಿಗೂ ಆಗಸಕ್ಕೂ ನಡುವೆ ಕತ್ತಲು ಕವಿಯಿತು. ದೇವತೆಗಳ ಕಣ್ಣುಗಳು ಚಲಿಸಿದವು. ಬಾಣಗಳು ಭೂಮ್ಯಾಕಾಶಗಳಿಗೆ ಕತ್ತಲನ್ನು ಕವಿಸಿದವು.

ಅರ್ಥ:
ಗಿರಿ: ಬೆಟ್ಟ; ನೆಮ್ಮು: ಒರಗು, ಆತುಕೊಳ್ಳು, ಆಸರೆ; ಘನ: ದೊಡ್ಡ; ಮೇಘಾಳಿ: ಮೋಡಗಳ ಸಮೂಹ; ಸುರಿ: ವರ್ಷಿಸು; ಮಳೆ: ವರ್ಷ; ಬಿರುಗೋಲು: ವೇಗವಾಗಿ ಬಿಟ್ಟ ಬಾಣಗಳು; ಸೈವಳೆ: ರಭಸವಾದ ಮಳೆ; ಉಭಯ: ಎರಡು; ಜೋಧ: ಯೋಧ; ಅವಗಡಿಸು: ಕಡೆಗಣಿಸು; ತೊಳಲು: ಬವಣೆ, ಸಂಕಟ; ಖಚರ: ಗಂಧರ್ವ, ಆಕಾಶದಲ್ಲಿ ಸಂಚರಿಸುವ; ನಿಚಯ: ಗುಂಪು; ಆಲಿ: ಕಣ್ಣು; ಧರೆ: ಭೂಮಿ; ಗಗನ: ಭೂಮಿ; ಕಾಳಿಕೆ: ಕೊಳಕು; ಪಸರಿಸು: ಹರಡು; ಜೋಧ: ಯೋಧ; ಕೋದು: ಸೇರಿಸು; ಶರಜಾಲ: ಬಾಣಗಳ ಗುಂಪು;

ಪದವಿಂಗಡಣೆ:
ನೀಲಗಿರಿಗಳ +ನೆಮ್ಮಿ +ಘನ+ಮೇ
ಘಾಳಿ +ಸುರಿದವೊ +ಮಳೆಯನ್+ಎನೆ+ ಬಿರು
ಗೋಲ +ಸೈವಳೆಗರೆದರ್+ಉಭಯದ +ಜೋದರ್+ಅವಗಡಿಸಿ
ಮೇಲೆ +ತೊಳಲುವ+ ಖಚರ +ನಿಚಯಗಳ್
ಆಲಿ+ಒಲೆದವು +ಧರೆಗೆ +ಗಗನಕೆ
ಕಾಳಿಕೆಯ+ ಪಸರಿಸಿತು +ಜೋದರ +ಕೋದ +ಶರಜಾಲ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೀಲಗಿರಿಗಳ ನೆಮ್ಮಿ ಘನಮೇಘಾಳಿ ಸುರಿದವೊ ಮಳೆಯನೆನೆ

ಪದ್ಯ ೯: ಕೃಷ್ಣನು ಧರ್ಮಜನಿಗೆ ಏನು ಹೇಳಿದನು?

ಕುಶಲವೇ ಕುರುರಾಯನೂಳಿಗ
ವೆಸಕದಲೆ ನಿಮ್ಮತ್ತಲವಧಿಯ
ದೆಸೆ ಸಮೀಪವೆ ತೊಳಲಿದಿರೆಲಾ ವನವನಂಗಳಲಿ
ಪಶುಪತಿಯು ಹಿಡಿವಂಬು ಕೈವ
ರ್ತಿಸಿತಲಾ ಪಾರ್ಥಂಗೆ ನಮಗಿಂ
ದೊಸಗೆಯಾಯಿತು ಪುಣ್ಯವೆಂದನು ಹರಿ ಮಹೀಪತಿಗೆ (ಅರಣ್ಯ ಪರ್ವ, ೧೫ ಸಂಧಿ, ೯ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಪಾಂಡವರನ್ನು ನೋಡಿ, ನೀವು ಕುಶಲವೇ, ಕೌರವನ ಆಟೋಪವು ನಿಮ್ಮ ಮೇಲೆ ಉಪಟಳ ಮಾಡುತ್ತಿಲ್ಲವೆ? ವನವಾಸದ ಅವಧಿಯು ತೀರುತ್ತಾ ಬಂದಿತೇ? ಕಾಡು ಮೇಡುಗಳಲ್ಲಿ ಅಲೆದಾಡಿದಿರಲ್ಲವೇ? ಶಿವನ ಬಾಣವು ಅರ್ಜುನನಿಗೆ ವಶವಾಯಿತಲ್ಲವೇ? ನಿಮ್ಮನ್ನು ನೋಡಿದ ಈ ಗಳಿಗೆ ನಮಗೆ ಶುಭಕರವಾಯಿತು ಎಂದು ಹೇಳಿ ಧರ್ಮಜನನ್ನು ಆಲಿಂಗಿಸಿಕೊಂಡನು.

ಅರ್ಥ:
ಕುಶಲ: ಕ್ಷೇಮ; ಊಳಿಗ: ಕೆಲಸ, ಕಾರ್ಯ; ಎಸಕ: ಕೆಲಸ, ಕಾಂತಿ; ಅವಧಿ: ಗಡು, ಸಮಯದ ಪರಿಮಿತಿ; ದೆಸೆ: ದಿಕ್ಕು; ಸಮೀಪ: ಹತ್ತಿರ; ತೊಳಲು: ಅಲೆದಾಡು, ತಿರುಗಾಡು; ವನ: ಕಾಡು; ಪಶುಪತಿ: ಶಂಕರ; ಅಂಬು: ಬಾಣ; ಕೈವರ್ತಿಸು: ವಶವಾಯಿತು; ಒಸಗೆ: ಶುಭ; ಪುಣ್ಯ: ಸದಾಚಾರ; ಹರಿ: ಕೃಷ್ಣ; ಮಹೀಪತಿ: ರಾಜ;

ಪದವಿಂಗಡಣೆ:
ಕುಶಲವೇ+ ಕುರುರಾಯನ್+ಊಳಿಗವ್
ಎಸಕದಲೆ+ ನಿಮ್ಮತ್ತಲ್+ಅವಧಿಯ
ದೆಸೆ +ಸಮೀಪವೆ +ತೊಳಲಿದಿರೆಲಾ +ವನವನಂಗಳಲಿ
ಪಶುಪತಿಯು +ಹಿಡಿವ್+ಅಂಬು +ಕೈವ
ರ್ತಿಸಿತಲಾ +ಪಾರ್ಥಂಗೆ +ನಮಗಿಂದ್
ಒಸಗೆಯಾಯಿತು +ಪುಣ್ಯವೆಂದನು +ಹರಿ +ಮಹೀಪತಿಗೆ

ಅಚ್ಚರಿ:
(೧) ಕೃಷ್ಣನ ಸರಳತೆ: ನಮಗಿಂದೊಸಗೆಯಾಯಿತು ಪುಣ್ಯವೆಂದನು ಹರಿ ಮಹೀಪತಿಗೆ

ಪದ್ಯ ೬೨: ಕುಂತಿ ಹೇಗೆ ಮರುಗಿದಳು?

ವನದೊಳತ್ಯಾಯಾಸ ನೀವೆಂ
ತನುಭವಿಸುವಿರಿ ಪಾಪಿ ದುರ್ಯೋ
ಧನನ ದುರ್ಜನ ಸಂಗ ನಿಮಗಿದು ಸಿಂಗಿಯಾದುದಲೆ
ವನಿತೆ ನಿಮ್ಮೊಡನೆಂತು ತೊಳಲುವ
ಳನವರತ ಗಿರಿ ಗುಹೆಯ ಘಟ್ಟವ
ನೆನುತ ನುಡಿದಳು ಕುಟಿಲ ಗರ್ಭದ ಗುಣದ ಬೆಳವಿಗೆಯ (ಸಭಾ ಪರ್ವ, ೧೭ ಸಂಧಿ, ೬೨ ಪದ್ಯ)

ತಾತ್ಪರ್ಯ:
ಕುಂತಿಯು ತನ್ನ ಮಕ್ಕಳ ಸ್ಥಿತಿಯನ್ನು ಕಂಡು, ಪಾಪಿಯಾದ ದುರ್ಯೋಧನನ ಸಂಗವು ನಿಮಗೆ ವಿಷಪ್ರಾಯವಾಯಿತು, ನನುಗುನ್ನಿಯಂತೆ ಮೈಯುರಿಗೆ ಕಾರಣವಯಿತು. ನೀವು ಕಾಡಿನಲಿ ಹೆಚ್ಚಿನ ಆಯಾಸವನ್ನು ಹೇಗೆ ಅನುಭವಿಸುವಿರಿ? ದ್ರೌಪದಿಯು ಗುಡ್ಡ, ಗುಹೆ, ಘಟ್ಟಗಳಲ್ಲಿ ನಿಮ್ಮೊಡನೆ ಯಾವಾಗಲೂ ಹೇಗೆ ಅಲೆದಾಡುವಳು? ದುರ್ಜನರ ಕಪಟ ನಡತೆ, ಸಂಗದೋಷವು ನಿಮ್ಮ ಈ ಕಷ್ಟಕ್ಕೆ ಕಾರಣವಾಯಿತಲಾ ಎಂದು ಮರುಗಿದಳು.

ಅರ್ಥ:
ವನ: ಕಾಡು; ಅತಿ: ಬಹಳ; ಆಯಾಸ: ಬಳಲಿಕೆ, ಶ್ರಮ; ಅನುಭವಿಸು: ಕಷ್ಟಪಡು; ಪಾಪಿ: ದುಷ್ಟ; ದುರ್ಜನ: ಕೆಟ್ಟ ಜನ; ಸಂಗ: ಜೊತೆ; ಸಿಂಗಿ: ಒಂದು ಬಗೆಯ ಘೋರ ವಿಷ; ವನಿತೆ: ಹೆಣ್ಣು; ತೊಳಲು: ಬವಣೆ, ಸಂಕಟ; ಅನವರತ: ಯಾವಾಗಲು; ಗಿರಿ: ಬೆಟ್ಟ; ಗುಹೆ: ಗವಿ; ಘಟ್ಟ: ಬೆಟ್ಟಗಳ ಸಾಲು, ಪರ್ವತ ಪಂಕ್ತಿ; ನುಡಿ: ಮಾತಾಡು; ಕುಟಿಲ: ಮೋಸ; ಗರ್ಭ: ಬಸಿರು, ಕೂಸು; ಗುಣ: ನಡತೆ; ಬೆಳವಿಗೆ: ವೃದ್ಧಿ, ಬೆಳೆಯುವಿಕೆ;

ಪದವಿಂಗಡಣೆ:
ವನದೊಳ್+ಅತಿ+ಆಯಾಸ +ನೀವೆಂತ್
ಅನುಭವಿಸುವಿರಿ+ ಪಾಪಿ+ ದುರ್ಯೋ
ಧನನ +ದುರ್ಜನ +ಸಂಗ +ನಿಮಗಿದು+ ಸಿಂಗಿಯಾದುದಲೆ
ವನಿತೆ+ ನಿಮ್ಮೊಡನೆಂತು +ತೊಳಲುವಳ್
ಅನವರತ +ಗಿರಿ +ಗುಹೆಯ +ಘಟ್ಟವನ್
ಎನುತ +ನುಡಿದಳು+ ಕುಟಿಲ+ ಗರ್ಭದ +ಗುಣದ +ಬೆಳವಿಗೆಯ

ಅಚ್ಚರಿ:
(೧) ದುರ್ಯೋಧನನನ್ನು ಬಯ್ಯುವ ಪರಿ – ಪಾಪಿ ದುರ್ಯೋಧನನ ದುರ್ಜನ ಸಂಗ ನಿಮಗಿದು ಸಿಂಗಿಯಾದುದಲೆ; ಕುಟಿಲ ಗರ್ಭದ ಗುಣದ ಬೆಳವಿಗೆಯ