ಪದ್ಯ ೩೮: ಪಾಂಡವರ ಸೇನೆಯು ಯಾವ ಉಪಾಯವನ್ನು ಅನುಸರಿಸಿದರು?

ಕಳಿದ ಹೂವಿನ ತೊಡಬೆಯೋ ಕುಸಿ
ದಲೆಯ ಬಿಟ್ಟಿಯ ಭಾರವೋ ನಿ
ರ್ಮಳನ ಚಿತ್ತದ ಖತಿಯೊ ದಾನವ್ಯಸನಿಯೊಡವೆಗಳೊ
ನಳಿನನಾಭನ ಮಾತು ಹಿಂಚಿತು
ಕಳಚಿದವು ಕೈದುಗಳು ಕೈಗಳ
ಲುಳಿವುಪಾಯದ ಜೋಡ ತೊಟ್ಟುದು ಪಾಂಡುಸುತಸೇನೆ (ದ್ರೋಣ ಪರ್ವ, ೧೯ ಸಂಧಿ, ೩೮ ಪದ್ಯ)

ತಾತ್ಪರ್ಯ:
ಇನ್ನೇನು ಉದುರಲಿರುವ ಹೂವಿನ ತೊಟ್ಟೋ, ಬಿಟ್ಟಿ ಕೂಲಿಗಾಗಿ ಭಾರಹೊತ್ತ ತಲೆಗಳೋ, ನಿರ್ಮಲ ಚಿತ್ತನ ಕೋಪವೋ, ದಾನಿಯ ಆಭರಣಗಳೋ ಎಂಬಂತೆ ಶ್ರೀಕೃಷ್ಣನ ಮಾತು ಮುಗಿಯುವ ಮೊದಲೇ ಯೋಧರ ಕೈಗಳಲ್ಲಿದ್ದ ಆಯುಧಗಳು ಕೆಳಕ್ಕೆ ಬಿದ್ದವು. ಉಳಿಯುವ ಉಪಾಯದ ಕವಚವನ್ನು ಪಾಂಡವರ ಸೇನೆ ಧರಿಸಿತು.

ಅರ್ಥ:
ಕಳಿದ: ಉದುರು; ಹೂವು: ಪುಷ್ಪ; ತೊಡಬೆ: ತೊಟ್ಟು; ಕುಸಿ: ಬೀಳು; ತಲೆ: ಶಿರ; ಬಿಟ್ಟಿ: ವ್ಯರ್ಥ; ಭಾರ: ಹೊರೆ; ನಿರ್ಮಳ: ಶುದ್ಧ; ಚಿತ್ತ: ಮನಸ್ಸು; ಖತಿ: ಕೋಪ; ದಾನ: ನೀಡುವ ಸ್ವಭಾವ; ವ್ಯಸನ: ಗೀಳು, ಚಟ; ಒಡವೆ: ಆಭರಣ; ನಳಿನನಾಭ: ಕೃಷ್ಣ; ಮಾತು: ವಾಣಿ; ಹಿಂಚು: ಮುಗಿ, ಕೊನೆಗೊಳ್ಳು; ಕಳಚು: ಬೇರ್ಪಡಿಸು, ತೆಗೆ; ಕೈದು: ಆಯುಧ; ಕೈ: ಹಸ್ತ; ಉಪಾಯ: ಯುಕ್ತಿ; ಜೋಡು: ಜೊತೆ, ಜೋಡಿ; ತೊಟ್ಟು: ತೊಡು; ಸುತ: ಮಕ್ಕಳು; ಸೇನೆ: ಸೈನ್ಯ; ಲುಳಿ: ವೇಗ;

ಪದವಿಂಗಡಣೆ:
ಕಳಿದ+ ಹೂವಿನ +ತೊಡಬೆಯೋ +ಕುಸಿದ್
ತಲೆಯ +ಬಿಟ್ಟಿಯ +ಭಾರವೋ +ನಿ
ರ್ಮಳನ +ಚಿತ್ತದ +ಖತಿಯೊ +ದಾನ+ವ್ಯಸನಿ+ಒಡವೆಗಳೊ
ನಳಿನನಾಭನ +ಮಾತು +ಹಿಂಚಿತು
ಕಳಚಿದವು +ಕೈದುಗಳು +ಕೈಗಳ
ಲುಳಿ+ಉಪಾಯದ+ ಜೋಡ +ತೊಟ್ಟುದು +ಪಾಂಡುಸುತಸೇನೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಳಿದ ಹೂವಿನ ತೊಡಬೆಯೋ ಕುಸಿದಲೆಯ ಬಿಟ್ಟಿಯ ಭಾರವೋ ನಿ
ರ್ಮಳನ ಚಿತ್ತದ ಖತಿಯೊ ದಾನವ್ಯಸನಿಯೊಡವೆಗಳೊ

ಪದ್ಯ ೮೨: ಭೀಮನ ಆಕ್ರಮಣ ಹೇಗಿತ್ತು?

ಗಿಳಿಯ ಹಿಂಡುಗಳೆತ್ತ ಗಿಡಿಗನ
ದಳದುಳವು ತಾನೆತ್ತ ಭೀಮನ
ಸುಳಿವು ಗಡ ಕಾಲೂರುವವೆ ಕರಿ ಘಟೆಗಳೊಗ್ಗಿನಲಿ
ಕಳಿತ ಹೂವಿನ ತೊಡಬೆಗಳೊ ರಿಪು
ಬಲವೊ ಬಿರುಗಾಳಿಯೊ ವೃಕೋದರ
ನಳವ ಬಲ್ಲವನಾವನೈ ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೨ ಸಂಧಿ, ೮೨ ಪದ್ಯ)

ತಾತ್ಪರ್ಯ:
ಗಿಳಿವಿಂಡುಗಳೆಲ್ಲಿ ಗಿಡಗವೆಲ್ಲಿ? ಭೀಮನ ದಾಳಿಯಿಂದ ಆನೆಗಲದಳವು ಕಾಲೂರಿ ನಿಲ್ಲಲೂ ಆಗಲಿಲ್ಲ. ಭೀಮನೆಂಬ ಬಿರುಗಾಳಿಗೆ ಶತ್ರುಸೈನ್ಯವೆಂಬ ಅರಳಿದ ಹೂಗೊಂಚಲುಗಳು ಹಾರಿ ಹೋದವು. ಭೀಮನ ಪರಾಕ್ರಮವನ್ನು ಬಲ್ಲವರಾರು?

ಅರ್ಥ:
ಗಿಳಿ: ಗಿಣಿ, ಶುಕ; ಹಿಂಡು: ಗುಂಪು; ಗಿಡುಗ: ಹದ್ದು; ದಳ: ಗುಂಫು; ಉಳವು: ಉಳಿಸು, ಜೀವಿಸು; ಸುಳಿವು: ಕುರುಹು, ಜಾಡು; ಗಡ: ತ್ವರಿತವಾಗಿ, ಅಲ್ಲವೇ; ಕಾಲು: ಪಾದ; ಊರು: ಮೆಟ್ಟು; ಕರಿ: ಆನೆ; ಘಟೆ: ಗುಂಪು; ಒಗ್ಗು: ಗುಂಪು; ಕಳಿತ: ಪೂರ್ಣ ಹಣ್ಣಾದ; ಹೂವು: ಮಲರು, ಪುಷ್ಪ; ತೊಡಬೆ: ತುಂಬು, ಕಾವು, ಸಮೂಹ; ರಿಪು: ವೈರಿ; ಬಲ: ಸೈನ್ಯ; ಬಿರುಗಾಳಿ: ಜೋರಾದ ಗಾಳಿ; ವೃಕೋದರ: ತೋಳಿನಂತಹ ಹೊಟ್ಟೆ (ಭೀಮ); ಅಳವು: ಶಕ್ತಿ; ಬಲ್ಲ: ತಿಳಿದ; ಕೇಳು: ಆಲಿಸು;

ಪದವಿಂಗಡಣೆ:
ಗಿಳಿಯ+ ಹಿಂಡುಗಳೆತ್ತ +ಗಿಡಿಗನ
ದಳದುಳವು +ತಾನೆತ್ತ +ಭೀಮನ
ಸುಳಿವು+ ಗಡ+ ಕಾಲೂರುವವೆ+ ಕರಿ+ ಘಟೆಗಳ್+ಒಗ್ಗಿನಲಿ
ಕಳಿತ+ ಹೂವಿನ +ತೊಡಬೆಗಳೊ+ ರಿಪು
ಬಲವೊ+ ಬಿರುಗಾಳಿಯೊ+ ವೃಕೋದರನ್
ಅಳವ +ಬಲ್ಲವನ್+ಆವನೈ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಿಳಿಯ ಹಿಂಡುಗಳೆತ್ತ ಗಿಡಿಗನ ದಳದುಳವು ತಾನೆತ್ತ

ಪದ್ಯ ೨೫: ಧರ್ಮರಾಯನು ಕರ್ಣನನ್ನು ಹೇಗೆ ಜರಿದನು?

ಗಳಹದಿರು ಕೆಲಬಲದ ಹಂಗಿನ
ಬಳಕೆಯೇ ಫಡ ಸೂತಸುತ ಬಾ
ಳ್ಗೊಲೆಯ ಬಾಹಿರ ಬಿನುಗ ಬೆದರಿಸಿ ಬರಿದ ಬೆರತೆಯಲ
ಉಲುಕಿದರೆ ನಾಲಗೆಯ ತೊಡಬೆಯ
ಕಳಚುವೆನು ನಿಲ್ಲೆನುತಲಾ ಕುಂ
ಡಳಿತ ಕಾರ್ಮುಕನೆಚ್ಚು ಕಡಿದನು ಕರ್ಣನಂಬುಗಳ (ಕರ್ಣ ಪರ್ವ, ೧೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕರ್ಣನು ಏಳು ಶೂರನಾಗು ಎಂದು ಹೇಳಿದ ನಂತರ ಯುಧಿಷ್ಠಿರನು ಕೋಪಗೊಂಡು, ಸುಮ್ಮನೆ ಪ್ರಲಾಪಿಸದಿರು ಛಿ ಸೂತಪುತ್ರ, ಇನ್ನೊಬ್ಬರ ಹಂಗನ್ನು ಬಳಸಿಕೊಂಡು ಬದುಕುವವನೇ, ಪರಾಕ್ರಮ ವಿಹೀನರಾಗಿ ತಮ್ಮ ಬಾಳನ್ನೇ ಕೊಂದುಕೊಂಡ ಕ್ಷುದ್ರರನ್ನು ಬೆದರಿಸಿ ಹೊಡೆದು ವೃಥಾ ಗರ್ವವನ್ನು ತೋರಿಸುತ್ತಿರುವೆ? ಇನ್ನೊಂದು ಮಾತನಾಡಿದರೆ ನಿನ್ನ ನಾಲಗೆಯನ್ನು ಬೇರು ಸಹಿತ ಕಿತ್ತು ಹಾಕುತ್ತೇನೆ ಎಂದು ತನ್ನ ಬಿಲ್ಲನ್ನು ವೃತಾಕಾರಕ್ಕೆ ಬಾಗುವಂತೆ ಎಳೆದು ಕರ್ಣನ ಬಾಣಗಳನ್ನು ಕಡಿದನು.

ಅರ್ಥ:
ಗಳಹು: ಪ್ರಲಾಪಿಸು, ಹೇಳು; ಕೆಲ: ಸ್ವಲ್ಪ; ಬಲ: ಸೈನ್ಯ; ಹಂಗು: ದಾಕ್ಷಿಣ್ಯ, ಆಭಾರ; ಬಳಕೆ: ಉಪಯೋಗಿಸುವಿಕೆ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಸೂತಸುತ: ಸಾರಥಿಯ ಮಗ (ಕರ್ಣ); ಬಾಳು: ಜೀವನ; ಕೊಲೆ: ಸಾವು; ಬಾಹಿರ: ಹೊರಗಿನವ; ಬಿನುಗು:ಅಲ್ಪವ್ಯಕ್ತಿ, ಕ್ಷುದ್ರವ್ಯಕ್ತಿ; ಬೆದರಿಸು: ಹೆದರಿಸು; ಬರಿ: ಸುಮ್ಮನೆ, ಕೇವಲ; ಬೆರೆ: ಅಹಂಕಾರಪಡು; ಉಲುಕು:ಅಲ್ಲಾಡು, ನಡುಗು; ನಾಲಗೆ: ಜಿಹ್ವೆ; ತೊಡಬೆ: ಮೂಲ, ಬುಡ; ಕಳಚು: ಕೀಳು, ಕಿತ್ತುಹಾಕು; ನಿಲ್ಲು: ತಡೆ; ಕುಂಡಳಿತ: ವೃತ್ತಾಕಾರ; ಕಾರ್ಮುಕ: ಬಿಲ್ಲು; ಎಚ್ಚು: ಬಾಣಬಿಡು; ಕಡಿ: ಸೀಳು; ಅಂಬು: ಬಾಣ;

ಪದವಿಂಗಡಣೆ:
ಗಳಹದಿರು +ಕೆಲಬಲದ +ಹಂಗಿನ
ಬಳಕೆಯೇ +ಫಡ +ಸೂತಸುತ +ಬಾಳ್
ಕೊಲೆಯ +ಬಾಹಿರ +ಬಿನುಗ +ಬೆದರಿಸಿ+ ಬರಿದ +ಬೆರತೆಯಲ
ಉಲುಕಿದರೆ+ ನಾಲಗೆಯ+ ತೊಡಬೆಯ
ಕಳಚುವೆನು +ನಿಲ್ಲ್+ಎನುತಲ್+ಆ+ ಕುಂ
ಡಳಿತ+ ಕಾರ್ಮುಕನ್+ಎಚ್ಚು+ ಕಡಿದನು +ಕರ್ಣನ್+ಅಂಬುಗಳ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬಾಳ್ಗೊಲೆಯ ಬಾಹಿರ ಬಿನುಗ ಬೆದರಿಸಿ ಬರಿದ ಬೆರತೆಯಲ
(೨) ಕರ್ಣನನ್ನು ಬಯ್ಯುವ ಪದಗಳು – ಗಳಹದಿರು, ಫಡ, ಸೂತಸುತ, ಉಲುಕಿದರೆ ನಾಲಗೆಯ ತೊಡಬೆಯ, ಕಳಚುವೆನು, ನಿಲ್ಲು