ಪದ್ಯ ೯: ಶಿವನ ಪಾದಕ್ಕೆ ಯಾರು ಏನನ್ನು ಅರ್ಪಿಸಿದರು?

ಶ್ರುತವೆ ನಿಮಗಿದು ಮಾವ ಬಹಳಾ
ದ್ಭುತದ ರಥ ನಿರ್ಮಾಣ ದೇವ
ಪ್ರತತಿ ನೆರೆದುದು ನೆರೆ ಚತುರ್ದಶಭುವನವಾಸಿಗಳ
ಶತಮಖಬ್ರಹ್ಮಾದಿಗಳು ತ
ಮ್ಮತಿಶಯದ ತೇಜೋರ್ಧವನು ಪಶು
ಪತಿಯ ಪದಕೋಲೈಸಿದರು ಮಾದ್ರೇಶ ಕೇಳೆಂದ (ಕರ್ಣ ಪರ್ವ, ೭ ಸಂಧಿ, ೯ ಪದ್ಯ)

ತಾತ್ಪರ್ಯ:
ಬಹಳ ಅದ್ಭುತವಾದ ರಥದ ನಿರ್ಮಾಣವನ್ನು ನೀವು ಕೇಳಿದಿರಿ. ಮಾವ ತದನಂತರ ಎಲ್ಲಾ ದೇವತೆಗಳು, ಹದಿನಾಲ್ಕು ಲೋಕದ ಸಮಸ್ತರೊಡಗೂಡಿ ಅಲ್ಲಿ ಸೇರಿದರು. ಇಂದ್ರ ಬ್ರಹ್ಮಾದಿಗಳು ತಮ್ಮ ತೇಜಸ್ಸಿನ ಅರ್ಧವನ್ನು ಶಿವನ ಪಾದಗಳಿಗೆ ಅರ್ಪಿಸಿದರು.

ಅರ್ಥ:
ಶ್ರುತ: ಪ್ರಸಿದ್ಧವಾದ, ಕೇಳಿದ; ಮಾವ: ತಾಯಿಯ ತಮ್ಮ; ಬಹಳ: ತುಂಬ; ಅದ್ಭುತ: ಆಶ್ಚರ್ಯ; ರಥ: ಬಂಡಿ; ನಿರ್ಮಾಣ: ಕಟ್ಟುವುದು, ರಚನೆ; ದೇವ: ಸುರರ; ಪ್ರತತಿ: ಗುಂಪು, ಸಮೂಹ; ನೆರೆ: ಸೇರು; ನೆರೆ: ಗುಂಪು; ಚತುರ್ದಶ: ಹದಿನಾಲ್ಕು; ಭುವನ: ಲೋಕ, ಜಗತ್ತು;
ವಾಸಿ: ವಾಸಿಸುವ, ಜೀವಿಸುವ; ಶತ: ನೂರು; ಮಖ: ಯಜ್ಞ; ಶತಮಖ: ಇಂದ್ರ; ಆದಿ: ಮುಂತಾದ; ಅತಿಶಯ: ವಿಶೇಷವಾದ; ತೇಜಸ್ಸು: ಕಾಂತಿ, ಪ್ರಕಾಶ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಪಶುಪತಿ: ಶಂಕರ; ಪದ: ಚರಣ; ಓಲೈಸು: ಒಪ್ಪಿಸು, ಉಪಚರಿಸು; ಮಾದ್ರೇಶ: ಶಲ್ಯ; ಕೇಳು: ಆಲಿಸು;

ಪದವಿಂಗಡಣೆ:
ಶ್ರುತವೆ +ನಿಮಗಿದು +ಮಾವ +ಬಹಳ
ಅದ್ಭುತದ +ರಥ +ನಿರ್ಮಾಣ +ದೇವ
ಪ್ರತತಿ +ನೆರೆದುದು +ನೆರೆ +ಚತುರ್ದಶ+ಭುವನ+ವಾಸಿಗಳ
ಶತಮಖ+ಬ್ರಹ್ಮಾದಿಗಳು +ತಮ್ಮ್
ಅತಿಶಯದ +ತೇಜೋರ್ಧವನು+ ಪಶು
ಪತಿಯ +ಪದಕ್+ಓಲೈಸಿದರು +ಮಾದ್ರೇಶ +ಕೇಳೆಂದ

ಅಚ್ಚರಿ:
(೧) ಶ್ರುತ, ಕೇಳು – ಪದ್ಯದ ಮೊದಲ ಮತ್ತು ಕೊನೆ ಪದ
(೨) ಮಾದ್ರೇಶ, ಮಾವ – ಶಲ್ಯನನ್ನು ಕರೆದಿರುವ ಬಗೆ
(೩) ನೆರೆದುದು, ನೆರೆ – ನೆರೆ ಪದದ ಬಳಕೆ
(೪) ಇಂದ್ರನನ್ನು ಶತಮಖ ನೆಂದು ಕರೆದಿರುವುದು