ಪದ್ಯ ೩೩: ನಾರಾಯಣಾಸ್ತ್ರದ ಪ್ರಭಾವ ಹೇಗಿತ್ತು?

ಜಗದ ಹುಯ್ಯಲು ಜಡಿಯಲಭ್ರದ
ಲಗಿದು ಕೌರವಸೇನೆ ಹರುಷದ
ಸೊಗಸಿನಲಿ ಮೈಮರೆಯೆ ಕೃಷ್ಣಾದಿಗಳು ಕೈಮರೆಯೆ
ಹೊಗೆಯ ಹೊರಳಿಯ ಕಿಡಿಯ ಥಟ್ಟಿನ
ತಗೆದುರಿಯ ತೆಕ್ಕೆಯಲಿ ಧಗಧಗ
ಧಗಿಸಿ ಧಾಳಿಟ್ಟುದು ಮಹಾಶರವಹಿತಮೋಹರಕೆ (ದ್ರೋಣ ಪರ್ವ, ೧೯ ಸಂಧಿ, ೩೩ ಪದ್ಯ)

ತಾತ್ಪರ್ಯ:
ಮಹಾಶಬ್ದವಾಯಿತು. ಕೌರವಸೇನೆ ಹರ್ಷದಿಮ್ದ ಮೈಮರೆಯಿತು. ಕೃಷ್ಣಾದಿಗಳು ಕೈ ಮರೆತರು. ಶಸ್ತ್ರಗಳು ಕೆಳಬಿದ್ದವು. ಹೊಗೆಯ ತೆಕ್ಕೆಗಳು ಹಬ್ಬಿದವು. ಕಿಡಿಗಳು ಎತ್ತೆತ್ತಲೂ ಸಿಡಿಯುತ್ತಿದ್ದವು, ಉರಿಯು ಧಗಧಗಿಸುತ್ತಿತ್ತು. ನಾರಾಯಣಾಸ್ತ್ರವು ಪಾಂಡವ ಸೇನೆಯ ಮೇಲೆ ದಾಳಿಯಿಟ್ಟಿತು.

ಅರ್ಥ:
ಜಗ: ಪ್ರಪಂಚ; ಅಲುಗು: ಅಲ್ಲಾಡು; ಹುಯ್ಯಲು: ಅಳು; ಜಡಿ:ಬೆದರಿಕೆ, ಹೆದರಿಕೆ; ಅಭ್ರ: ಆಗಸ; ಹರುಷ: ಸಂತಸ; ಸೊಗಸು: ಚೆಂದ; ಮೈಮರೆ: ಎಚ್ಚರತಪ್ಪು; ಕೈ: ಹಸ್ತ; ಮರೆ: ನೆನಪಿನಿಂದ ದೂರವಾಗು; ಹೊಗೆ: ಧೂಮ; ಹೊರಳಿ: ಗುಂಪು, ಸಮೂಹ; ಕಿಡಿ: ಬೆಂಕಿ; ಥಟ್ಟು: ಗುಂಪು; ತಗೆ: ಹೊರತರು; ಉರಿ: ಬೆಂಕಿ; ತೆಕ್ಕೆ: ಗುಂಪು, ಸಮೂಹ; ಧಗ: ಬೆಂಕಿಯ ತೀವ್ರತೆಯನ್ನು ತೋರುವ ಶಬ್ದ; ಧಾಳಿ: ಆಕ್ರಮಣ; ಶರ: ಬಾಣ; ಅಹಿತ: ವೈರಿ; ಮೋಹರ: ಸೈನ್ಯ, ದಂಡು;

ಪದವಿಂಗಡಣೆ:
ಜಗದ +ಹುಯ್ಯಲು +ಜಡಿಯಲ್+ಅಭ್ರದ
ಲಗಿದು+ ಕೌರವಸೇನೆ +ಹರುಷದ
ಸೊಗಸಿನಲಿ +ಮೈಮರೆಯೆ +ಕೃಷ್ಣಾದಿಗಳು +ಕೈಮರೆಯೆ
ಹೊಗೆಯ +ಹೊರಳಿಯ +ಕಿಡಿಯ +ಥಟ್ಟಿನ
ತಗೆದುರಿಯ +ತೆಕ್ಕೆಯಲಿ +ಧಗಧಗ
ಧಗಿಸಿ +ಧಾಳಿಟ್ಟುದು +ಮಹಾಶರವ್+ಅಹಿತ+ಮೋಹರಕೆ

ಅಚ್ಚರಿ:
(೧) ಧಾಳಿಯಿಡುವ ಪರಿ – ಹೊಗೆಯ ಹೊರಳಿಯ ಕಿಡಿಯ ಥಟ್ಟಿನ ತಗೆದುರಿಯ ತೆಕ್ಕೆಯಲಿ ಧಗಧಗ
ಧಗಿಸಿ ಧಾಳಿಟ್ಟುದು ಮಹಾಶರವಹಿತಮೋಹರಕೆ

ಪದ್ಯ ೫೮: ಪಾಂಡವ ಸೈನ್ಯದ ಸ್ಥಿತಿ ಹೇಗಿತ್ತು?

ಕೂಡೆ ತಳಪಟವಾಯ್ತು ಸುಭಟರ
ಜೋಡಿ ಜರಿದುದು ಕೌರವೇಂದ್ರಗೆ
ಖೋಡಿಯುಂಟೇ ದ್ರೋಣ ಕೇಣವ ಬಿಟ್ಟು ಕಾದುವರೆ
ಖೇಡತನ ಬಿಗುಹಾಯ್ತು ಮೆಯ್ಯಲಿ
ಮೂಡಿದವು ಹೊಗರಂಬುಗಳು ತೆಗೆ
ದೋಡಿದವು ತೆಕ್ಕೆಯಲಿ ಪಾಂಡವ ನೃಪ ಮಹಾರಥರು (ದ್ರೋಣ ಪರ್ವ, ೨ ಸಂಧಿ, ೫೮ ಪದ್ಯ
)

ತಾತ್ಪರ್ಯ:
ಇದ್ದಕ್ಕಿದ್ದಹಾಗೆ ರಣರಂಗವು ಸಮತಟ್ಟಾಯಿತು. ವೀರರು ಜಾರಿಹೋದರು. ದ್ರೋಣನು ನಿರ್ದಾಕ್ಷಿಣ್ಯದಿಂದ ಯುದ್ಧಮಾಡಿದರೆ, ಕೌರವನಿಗೆ ಕೇಡುಂಟಾದೀತೇ? ಪಾಂಡವ ವೀರರು ಬೆದರಿದರು. ಅವರ ಮೈಯಲ್ಲಿ ಬಾಣಗಳು ಒಟ್ಟೊಟ್ಟಾಗಿ ನಾಟಿದವು. ಪಾಂಡವ ಸೈನ್ಯದ ಮಹಾರಥರು ಯುದ್ಧವನ್ನು ಬಿಟ್ಟು ಓಡಿದರು.

ಅರ್ಥ:
ಕೂಡು: ಸೇರು; ತಳಪಟ: ಸೋಲು, ಅಂಗಾತ ಬೀಳು; ಸುಭಟ: ಪರಾಕ್ರಮಿ; ಖೋಡಿ: ದುರುಳ, ಕೊರತೆ; ಕೇಣ: ಹೊಟ್ಟೆಕಿಚ್ಚು, ಮತ್ಸರ; ಕಾದು: ಹೋರಾಡು; ಖೇಡ: ಹೆದರಿದವನು, ಭಯಗ್ರಸ್ತ; ಬಿಗು: ಗಟ್ಟಿ; ಮೈಯ್ಯು: ತನು, ದೇಹ; ಮೂಡು: ಉದಯಿಸು; ಹೊಗರು: ಕಾಂತಿ, ಪ್ರಕಾಶ; ಅಂಬು: ಬಾಣ; ತೆಗೆ: ಹೊರತರು; ಓಡು: ಧಾವಿಸು; ತೆಕ್ಕೆ: ಅಪ್ಪುಗೆ, ಆಲಿಂಗನ; ನೃಪ: ರಾಜ; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ಕೂಡೆ +ತಳಪಟವಾಯ್ತು +ಸುಭಟರ
ಜೋಡಿ +ಜರಿದುದು +ಕೌರವೇಂದ್ರಗೆ
ಖೋಡಿಯುಂಟೇ +ದ್ರೋಣ +ಕೇಣವ+ ಬಿಟ್ಟು +ಕಾದುವರೆ
ಖೇಡತನ+ ಬಿಗುಹಾಯ್ತು +ಮೆಯ್ಯಲಿ
ಮೂಡಿದವು +ಹೊಗರ್+ಅಂಬುಗಳು+ ತೆಗೆದ್
ಓಡಿದವು +ತೆಕ್ಕೆಯಲಿ +ಪಾಂಡವ +ನೃಪ +ಮಹಾರಥರು

ಅಚ್ಚರಿ:
(೧) ದ್ರೋಣನ ಹಿರಿಮೆ – ಕೌರವೇಂದ್ರಗೆ ಖೋಡಿಯುಂಟೇ ದ್ರೋಣ ಕೇಣವ ಬಿಟ್ಟು ಕಾದುವರೆ

ಪದ್ಯ ೪೭: ಆಯುಧಗಳ ಪ್ರಕಾಶ ಹೇಗಿತ್ತು?

ಅಗಿವ ವಜ್ರದ ಹೊಳೆಕೆಗಳೊ ದಿಟ
ಹಗಲ ತಗಡೋ ಮೇಣು ಮೀಂಚಿನ
ಬಗೆಯ ಸೆಕ್ಕೆಯೊ ಸೂರ್ಯಕಾಂತಚ್ಛವಿಯ ತೆಕ್ಕೆಗಳೊ
ಜಗುಳಿದೊರೆಗಳ ಜಾಳಿಗೆಯ ಹೊಗ
ರೊಗಲು ಝಳಪಿಸೆ ಹೊಳೆ ಹೊಳೆವ ಕೈ
ದುಗಳ ಹಬ್ಬುಗೆವೆಳಗು ಗಬ್ಬರಿಸಿದುದು ದಿಗುತಟವ (ಭೀಷ್ಮ ಪರ್ವ, ೧ ಸಂಧಿ, ೪೭ ಪದ್ಯ)

ತಾತ್ಪರ್ಯ:
ಒರೆಯಿಂದ ತೆಗೆದ ಆಯುಧಗಳ ಕಾಂತಿಯು, ವಜ್ರದ ತುಂಡುಗಳೋ, ಮೀಂಚಿನ ಹೊರೆಯೋ, ಸೂರ್ಯಕಾಂತದ ಪ್ರತಿಬಿಂಬವೋ ಎಂಬಂತೆ ಸುತ್ತಲೂ ಹಬ್ಬಿ ದಿಕ್ಕುಗಳನ್ನು ದೆಸೆಗಡಿಸಿತು.

ಅರ್ಥ:
ಅಗಿ: ತೋಡು; ವಜ್ರ: ಸಿಡಿಲು, ಅಶನಿ, ಆಯುಧ; ಹೊಳೆ: ಕಾಂತಿ, ಹೊಳಪು; ದಿಟ: ನಿಜ, ಸತ್ಯ; ಹಗಲು: ದಿನ; ತಗಡು: ತೆಳುವಾಗಿ ಬಡಿದ ಲೋಹದ—ಹಾಳೆ, ಫಲಕ; ಮಿಂಚು: ಹೊಳಪು, ಕಾಂತಿ; ಬಗೆ: ರೀತಿ; ಸೆಕ್ಕೆ: ಒಳಸೇರಿಸು; ಸೂರ್ಯ: ರವಿ; ಕಾಂತಿ: ಹೊಳಪು; ಚ್ಛವಿ: ಹೊಳಪು; ತೆಕ್ಕೆ: ಆಲಿಂಗನ; ಜಗುಳು: ಜಾರು; ದೊರೆ: ರಾಜ, ಕಾಣು, ತೋರು; ಜಾಳಿಗೆ: ಬಲೆ, ಜಾಲ; ಹೊಗರು: ಕಾಂತಿ; ಝಳ: ತಾಪ; ಹೊಳೆ: ಪ್ರಕಾಶ; ಕೈದು: ಆಯುಧ; ಹಬ್ಬುಗೆ: ಹರವು, ವಿಸ್ತಾರ; ಗಬ್ಬರಿಸು: ಆವರಿಸು; ದಿಗು:ದಿಕ್ಕು; ತಟ: ದಡ, ತೀರ; ಮೇಣ್: ಅಥವಾ;

ಪದವಿಂಗಡಣೆ:
ಅಗಿವ +ವಜ್ರದ +ಹೊಳೆಕೆಗಳೊ +ದಿಟ
ಹಗಲ +ತಗಡೋ +ಮೇಣು +ಮಿಂಚಿನ
ಬಗೆಯ +ಸೆಕ್ಕೆಯೊ +ಸೂರ್ಯಕಾಂತಚ್ಛವಿಯ +ತೆಕ್ಕೆಗಳೊ
ಜಗುಳಿ+ದೊರೆಗಳ+ ಜಾಳಿಗೆಯ+ ಹೊಗ
ರೊಗಲು +ಝಳಪಿಸೆ +ಹೊಳೆ +ಹೊಳೆವ +ಕೈ
ದುಗಳ +ಹಬ್ಬುಗೆವೆಳಗು +ಗಬ್ಬರಿಸಿದುದು +ದಿಗುತಟವ

ಅಚ್ಚರಿ:
(೧) ಹೊಳೆಕೆ, ಹಗಲ, ಹೊಗರು, ಹೊಳೆ, ಹಬ್ಬುಗೆ – ಹ ಕಾರದ ಪದಗಳು

ಪದ್ಯ ೩೯: ಅರ್ಜುನನಿಗೆ ಉತ್ತರನು ಯಾವ ಧನುಸ್ಸನ್ನು ನೀಡಿದನು?

ಉಲಿದು ಸತ್ವದೊಳೌಕಿ ಕಾಯವ
ಬಲಿದು ತೆಕ್ಕೆಯೊಳೊತ್ತಿ ಬೆವರಿದು
ಬಳಲಿ ನೀಡಿದನರ್ಜುನನ ಕರತಳಕೆ ಗಾಂಡಿವವ
ಬಲುಹಿನಿಂದವಡೊತ್ತಿ ತೆಗೆತೆಗೆ
ದುಳಿದ ಬಿಲುಗಳ ನೀಡಿ ಮರನನು
ಮಲಗಿ ಢಗೆಯಿಂದಳ್ಳೆವೊಯ್ದು ಕುಮಾರನಿಂತೆಂದ (ವಿರಾಟ ಪರ್ವ, ೭ ಸಂಧಿ, ೩೯ ಪದ್ಯ)

ತಾತ್ಪರ್ಯ:
ಜೋರಾಗಿ ಕೂಗಿ, ತನ್ನ ಶಕ್ತಿಯನ್ನೆಲ್ಲಾ ಬಿಟ್ಟು ದೇಹವನ್ನು ಬಿಗಿಹಿಡಿದು ತೆಕ್ಕೆಯಲ್ಲಿ ತೆಗೆದುಕೊಂಡು ಆಯಾಸಗೊಂದು ಅರ್ಜುನನ ಕೈಗೆ ಗಾಂಡೀವ ಧನುಸ್ಸನ್ನು ಕೊಟ್ಟನು. ಅವಡುಗಚ್ಚಿ ಬಲವನ್ನೆಲ್ಲಾ ಬಿಟ್ಟು ಉಳಿದ ಬಿಲ್ಲುಗಳನ್ನೂ ಕೊಟ್ಟು ತಾಪದಿಂದ ಉಸಿರುಸಿರು ಬಿಡುತ್ತಾ ಮರದ ಕೊಂಬೆಯ ಮೇಲೆ ಮಲಗಿ ಉತ್ತರನು ಹೀಗೆಂದು ನುಡಿದನು.

ಅರ್ಥ:
ಉಲಿ: ಧ್ವನಿ; ಸತ್ವ: ಸಾರ; ಔಕು: ಒತ್ತು, ಹಿಚುಕು; ಕಾಯ: ದೇಹ; ಬಲಿ: ಗಟ್ಟಿ, ದೃಢ; ತೆಕ್ಕೆ: ಅಪ್ಪುಗೆ, ಆಲಿಂಗನ; ಬೆವರು: ಸ್ವೇದ ಜಲ; ಬಳಲು: ಆಯಾಸ, ದಣಿವು; ಕರತಳ: ಅಂಗೈ; ಬಲುಹು: ಶಕ್ತಿ; ತೆಗೆ: ಹೊರತರು; ಉಳಿದ: ಮಿಕ್ಕ; ಬಿಲು: ಬಿಲ್ಲು; ನೀಡು: ಕೊಡು; ಮರ: ತರು; ಮಲಗು: ಶಯನ, ನಿದ್ದೆ ಮಾಡು; ಢಗೆ: ತಾಪ; ಕುಮಾರ: ಪುತ್ರ;

ಪದವಿಂಗಡಣೆ:
ಉಲಿದು +ಸತ್ವದೊಳ್+ಔಕಿ +ಕಾಯವ
ಬಲಿದು +ತೆಕ್ಕೆಯೊಳೊತ್ತಿ +ಬೆವರಿದು
ಬಳಲಿ +ನೀಡಿದನ್+ಅರ್ಜುನನ +ಕರತಳಕೆ +ಗಾಂಡಿವವ
ಬಲುಹಿನಿಂದ್+ಅವಡೊತ್ತಿ+ ತೆಗೆತೆಗೆದ್
ಉಳಿದ+ ಬಿಲುಗಳ +ನೀಡಿ +ಮರನನು
ಮಲಗಿ +ಢಗೆಯಿಂದಳ್ಳೆವೊಯ್ದು +ಕುಮಾರನ್+ಇಂತೆಂದ

ಅಚ್ಚರಿ:
(೧) ಉತ್ತರನು ಕಷ್ಟಪಟ್ಟು ಗಾಂಡಿವ ತೆಗೆದ ಪರಿ – ಉಲಿದು ಸತ್ವದೊಳೌಕಿ ಕಾಯವ ಬಲಿದು ತೆಕ್ಕೆಯೊಳೊತ್ತಿ ಬೆವರಿದು ಬಳಲಿ ನೀಡಿದನರ್ಜುನನ ಕರತಳಕೆ ಗಾಂಡಿವವ

ಪದ್ಯ ೬೨: ಧರ್ಮರಾಯನ ಸ್ಥಿತಿ ಹೇಗಿತ್ತು?

ಹೊಗಳಿನಿಲ್ಲದು ಜಿಹ್ವೆ ತೆಕ್ಕೆಯ
ಸೊಗಸಿನಲಿ ಮನ ದಣಿಯದೀಕ್ಷಣ
ಯುಗಳ ಬೀಯದು ನೋಡಿ ಪಾರ್ಥನ ಮಾತ ಸವಿಸವಿದು
ತೆಗೆದು ನಿಲ್ಲದು ಕರ್ಣಯುಗ ಸುರ
ನಗರಿಯುತ್ತಮ ಗಂಧಭರದಲಿ
ಮಗುಳದರಸನ ನಾಸಿಕವು ಭೂಪಾಲ ಕೇಳೆಂದ (ಅರಣ್ಯ ಪರ್ವ, ೧೩ ಸಂಧಿ, ೬೨ ಪದ್ಯ)

ತಾತ್ಪರ್ಯ:
ಅರ್ಜುನನನ್ನು ಎಷ್ಟು ಹೊಗಳಿದರೂ ನಾಲಿಗೆಗೆ ತೃಪ್ತಿಯಿಲ್ಲ. ಎಷ್ಟು ಆಲಂಗಿಸಿದರೂ ಮನಸ್ಸಿಗೆ ತೃಪ್ತಿಯಿಲ್ಲ. ಮನದಣಿಯುವಂತೆ ಎಷ್ಟು ನೋಡಿದರೂ ಕಣ್ಣಿಗೆ ತೃಪ್ತಿಯಿಲ್ಲ. ಅರ್ಜುನನ ಮಾತನ್ನು ಎಷ್ಟು ಕೇಳಿದರೂ ಕಿವಿಗಳಿಗೆ ತೃಪ್ತಿಯಿಲ್ಲ. ಅರ್ಜುನನು ಲೇಪಿಸಿಕೊಂಡ ಸ್ವರ್ಗದ ಗಂಧದ ಪರಿಮಳವನ್ನು ಎಷ್ಟು ಮೂಸಿದರೂ ಮೂಗಿಗೆ ತೃಪ್ತಿಯಿಲ್ಲ.

ಅರ್ಥ:
ಹೊಗಳು: ಪ್ರಶಂಶಿಸು; ಜಿಹ್ವೆ: ನಾಲಗೆ; ತೆಕ್ಕೆ: ಅಪ್ಪುಗೆ; ಸೊಗಸು: ಚೆಲುವು; ಮನ; ಮನಸ್ಸು; ದಣಿವು: ಆಯಾಸ; ಈಕ್ಷಣ: ನೋಡು; ಯುಗಳ: ಎರದು; ಬೀಯ: ವ್ಯಯ, ಖರ್ಚು; ನೋಡಿ: ನೋಟ; ಮಾತು: ವಾಣಿ; ಸವಿ: ಸಿಹಿ; ತೆಗೆ: ಹೊರತರು; ನಿಲ್ಲು: ತಡೆ; ಕರ್ಣ: ಕಿವಿ; ಸುರನಗರಿ: ಅಮರಾವತಿ; ನಗರ: ಊರು; ಉತ್ತಮ: ಶ್ರೇಷ್ಠ; ಗಂಧ: ಪರಿಮಳ; ಭರ: ವೇಗ; ಮಗುಳು: ಮತ್ತೆ; ಅರಸ: ರಾಜ; ನಾಸಿಕ: ಮೂಗು; ಭೂಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹೊಗಳಿ+ನಿಲ್ಲದು +ಜಿಹ್ವೆ +ತೆಕ್ಕೆಯ
ಸೊಗಸಿನಲಿ +ಮನ +ದಣಿಯದ್+ಈಕ್ಷಣ
ಯುಗಳ+ ಬೀಯದು+ ನೋಡಿ +ಪಾರ್ಥನ +ಮಾತ +ಸವಿಸವಿದು
ತೆಗೆದು +ನಿಲ್ಲದು +ಕರ್ಣಯುಗ +ಸುರ
ನಗರಿ+ಉತ್ತಮ +ಗಂಧ+ಭರದಲಿ
ಮಗುಳದ್+ಅರಸನ+ ನಾಸಿಕವು+ ಭೂಪಾಲ +ಕೇಳೆಂದ

ಅಚ್ಚರಿ:
(೧) ಜಿಹ್ವೆ, ನೋಟ, ಮಾತು, ಕರ್ಣ – ಇವಗಳ ಸಂತಸದ ಸ್ಥಿತಿಯನ್ನು ವರ್ಣಿಸುವ ಪದ್ಯ

ಪದ್ಯ ೨೭: ಭೀಮ ಶಕುನಿಯ ಯುದ್ಧ ಹೇಗೆ ನಡೆಯಿತು?

ಜನಪ ಕೇಳೈ ಬಳಿಕ ಭೀಮಾ
ರ್ಜುನರ ಮೋಹರಕೈದುಸಾವಿರ
ಕನಕಮಯರಥಸಹಿತ ಬಿಟ್ಟನು ಶಕುನಿ ಸೂಠಿಯಲಿ
ಅನಿಲಸುತನರ್ಜುನನ ನೀ ಸಾ
ರೆನುತ ಕೆದರಿದನಹಿತನಂಬಿನ
ಮೊನೆಯೊಳಳ್ಳಿರಿದೌಕಿ ತುಡುಕುವ ತೇರ ತೆಕ್ಕೆಯಲಿ (ಕರ್ಣ ಪರ್ವ, ೧೮ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಭೀಮಾರ್ಜುನರ ಸೈನ್ಯಕ್ಕೆ ಶಕುನಿಯು ಐದು ಸಾವಿರ ಬಂಗಾರದಿಂದ ಮಾಡಿದ ರಥಗಳೊಡನೆ ವೇಗದಿಂದ ಆಕ್ರಮಣ ಮಾಡಿದನು. ಭೀಮನು ಅರ್ಜುನನನ್ನು ಆಚೆಗೆ ಕಳಿಸಿ ಬಾಣಗಳನ್ನು ಸತತವಾಗಿ ಸುರಿದು ಶಕುನಿಯ ಸೇನೆಯ ರಥಗಳನ್ನು ನಿಲ್ಲಿಸಿದನು.

ಅರ್ಥ:
ಜನಪ: ರಾಜ; ಕೇಳು: ಆಲಿಸು; ಬಳಿಕ: ನಂತರ; ಮೋಹರ: ಯುದ್ಧ, ಸೈನ್ಯ; ಕನಕ: ಚಿನ್ನ; ಮಯ: ತುಂಬಿದ; ರಥ: ಬಂಡಿ; ಸಹಿತ: ಜೊತೆ; ಬಿಟ್ಟನು: ತೆರಳು; ಸೂಠಿ: ವೇಗ; ಅನಿಲ: ವಾಯು; ಸುತ: ಮಗ; ಸಾರು: ಹತ್ತಿರಕ್ಕೆ ಬರು; ಕೆದರು: ಚೆದರು; ಅಹಿತ: ಶತ್ರು; ಅಂಬು: ಬಾಣ; ಮೊನೆ: ತುದಿ; ಅಳ್ಳಿರಿ: ಚುಚ್ಚು, ನಡುಗಿಸು; ತುಡುಕು: ಹೋರಾಡು, ಸೆಣಸು; ತೇರ: ಬಂಡಿ; ತೆಕ್ಕೆ: ಗುಂಪು, ಸಮೂಹ;

ಪದವಿಂಗಡಣೆ:
ಜನಪ +ಕೇಳೈ +ಬಳಿಕ +ಭೀಮಾ
ರ್ಜುನರ +ಮೋಹರಕ್+ಐದುಸಾವಿರ
ಕನಕಮಯ+ರಥಸಹಿತ +ಬಿಟ್ಟನು +ಶಕುನಿ +ಸೂಠಿಯಲಿ
ಅನಿಲಸುತನ್+ಅರ್ಜುನನ +ನೀ +ಸಾ
ರೆನುತ +ಕೆದರಿದನ್+ಅಹಿತನ್+ಅಂಬಿನ
ಮೊನೆಯೊಳ್+ಅಳ್ಳಿರಿದ್+ಔಕಿ +ತುಡುಕುವ +ತೇರ +ತೆಕ್ಕೆಯಲಿ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತುಡುಕುವ ತೇರ ತೆಕ್ಕೆಯಲಿ

ಪದ್ಯ ೩೦: ಕೃಷ್ಣನು ಧೃತರಾಷ್ಟ್ರನ ಅರಮನೆಗೆ ಹೇಗೆ ಬಂದನು?

ಮಂದದಲಿ ಸುಳಿವಾನೆ ಕುದುರೆಯ
ಸಂದಣಿಯ ಕೀಲಿಸಿದ ಭೂಮಿಪ
ರಂದಣದ ಸಾಲುಗಳ ತೆಕ್ಕೆಯ ಹಳಿಯದಾಳುಗಳ
ಮಂದಿಯಲಿ ಹೊಗಲನಿಲಗುಬ್ಬಸ
ವೆಂದರುಳಿದವರಳವೆಯೆನಲರ
ವಿಂದನಾಭನು ಬಂದನು ಧೃತರಾಷ್ಟ್ರನರಮನೆಗೆ (ಉದ್ಯೋಗ ಪರ್ವ, ೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕೃಷ್ಣನು ಅರಮನೆಯ ಕಡೆಗೆ ಹೊರಟಿದ್ದನು, ನಿಧಾನವಾಗಿ ಆನೆ ಕುದುರೆಗಳ ಸಾಲುಗಳು ಬರುತ್ತಿದ್ದವು, ಅದರ ಜೊತೆಗಿದ್ದ ರಾಜರ ಅಂದವಾದ ಸಾಲುಗಳು, ಸೇವಕರ ಗುಂಪು ಸಾಗಿತ್ತು. ಆ ಜನಜಂಗುಳಿಯಲ್ಲಿ ಜನರು ಹೋಗುತ್ತಿರಲು ಕೆಲವರು ಹೆಚ್ಚು ಉಸಿರನ್ನು ಹೀರಿದರೆ ಮಿಕ್ಕರು ಸ್ವಲ್ಪ ಉಸಿರನ್ನು ಒಳಗೆಳೆದುಕೊಳ್ಳತ್ತಿರಲು, ಕೃಷ್ಣನು ಇವರೆಲ್ಲರ ನಡುವೆ ಸಾಗುತ್ತ ಧೃತರಾಷ್ಟ್ರನ ಅರಮನೆಯನ್ನು ಸೇರಿದನು.

ಅರ್ಥ:
ಮಂದ: ನಿಧಾನ; ಸುಳಿ: ಗೋಚರವಾಗು, ಆವರಿಸು; ಆನೆ: ಕರಿ, ಇಭ; ಕುದುರೆ: ಅಶ್ವ; ಸಂದಣಿ: ಗುಂಪು; ಕೀಲು: ಮರ್ಮ, ಗುಟ್ಟು; ಕೀಲಿಸು: ಜೋಡಿಸು; ಭೂಮಿಪ: ರಾಜ; ಅಂದಣ: ಚೆಂದ, ಚೆಲುವು; ಸಾಲು: ಆವಳಿ; ತೆಕ್ಕೆ: ಗುಂಪು, ಸಮೂಹ, ಆಲಿಂಗನ; ಹಳಿ: ನಿಂದಿಸು, ಬಯ್ಯು; ಆಳು: ಸೇವಕ; ಮಂದಿ: ಜನ; ಹೊಗು: ಪ್ರವೇಶಿಸು; ಅನಿಲ: ಗಾಳಿ; ಉಬ್ಬಸ: ಹೆಚ್ಚು; ಅಳವೆ: ನದೀಮುಖ, ತೂಬು; ಉಳಿದ: ಮಿಕ್ಕ; ಅರವಿಂದ: ಕಮಲ; ಬಂದನು: ಆಗಮಿಸು; ಅರಮನೆ: ಆಲಯ;

ಪದವಿಂಗಡಣೆ:
ಮಂದದಲಿ +ಸುಳಿವಾನೆ +ಕುದುರೆಯ
ಸಂದಣಿಯ +ಕೀಲಿಸಿದ +ಭೂಮಿಪರ್
ಅಂದಣದ +ಸಾಲುಗಳ +ತೆಕ್ಕೆಯ +ಹಳಿಯದ್+ಆಳುಗಳ
ಮಂದಿಯಲಿ+ ಹೊಗಲ್+ಅನಿಲಗ್+ಉಬ್ಬಸ
ವೆಂದರ್+ಉಳಿದವರ್+ಅಳವೆ+ಯೆನಲ್+ಅರ
ವಿಂದನಾಭನು +ಬಂದನು +ಧೃತರಾಷ್ಟ್ರನ್+ಅರಮನೆಗೆ

ಅಚ್ಚರಿ:
(೧) ಮಂದ, ಅಂದ, ಅರವಿಂದ, ಸಂದ – ಪ್ರಾಸ ಪದಗಳು
(೨) ಸಂದಣಿ, ತೆಕ್ಕೆ, ಮಂದಿ – ಗುಂಪನ್ನು ಸೂಚಿಸುವ ಪದಗಳು