ಪದ್ಯ ೫೧: ಭೀಮನು ಶಬರನಿಗೆ ಏನು ಹೇಳಿದನು?

ಆದರೆಕ್ಕಟಿ ಬಿನ್ನಹವ ನೀ
ವಾದರಿಪುದೆನೆ ತುಷ್ಟನಾಗಿ ವೃ
ಕೋದರನು ಕರಸಿದನು ಪರಿಮಿತಕಾ ಪುಳಿಂದಕರ
ಆದುದೇ ನೆಲೆ ಕುರುಪತಿಗೆ ದು
ರ್ಭೇದವಿದು ಮೆಚ್ಚುಂಟು ನಿಮಗೆನ
ಲಾ ದುರಾತ್ಮಕರರುಹಿದರು ಧೃತರಾಷ್ಟ್ರ ಕೇಳೆಂದ (ಗದಾ ಪರ್ವ, ೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ ಕೇಳು, ಶಬರನು ಭೀಮನನ್ನು ಕಂಡು ಆತನೊಡನೆ ಏಕಾಂಗಿಯಾಗಿ ಮಾತನಾಡಲು ಬಯಸುತ್ತೇನೆ ಎಂದು ಹೇಳಲು, ಭೀಮನು ಸಂತುಷ್ಟನಾಗಿ ಆಪ್ತ ಪರಿವಾರದವರೊಡನೆ ಆ ಶಬರನನ್ನು ಕರೆಸಿದನು. ಕೌರವನು ಎಲ್ಲಿ ಅಡಗಿದನೆಂಬುದು ಗೊತ್ತೇ? ಈವರೆಗೆ ಆ ವಿಷಯ ತಿಳಿದುಬಂದಿಲ್ಲ. ನೀವು ಹೇಳಿದರೆ ನಿಮಗೆ ಉಡುಗೊರೆಯನ್ನು ಕೊಡುತ್ತೇನೆ ಎಂದು ಭೀಮನು ಹೇಳಲು, ಆ ಶಬರನು ಹೀಗೆಂದು ನುಡಿದನು.

ಅರ್ಥ:
ಎಕ್ಕಟಿ: ಒಬ್ಬಂಟಿಗ, ಏಕಾಕಿ; ಬಿನ್ನಹ: ಕೋರಿಕೆ; ತುಷ್ಟ: ತೃಪ್ತ, ಆನಂದ; ಕರಸು: ಬರೆಮಾಡು; ಪರಿಮಿತ: ಮಿತ, ಸ್ವಲ್ಪ; ಪುಳಿಂದಕ: ಬೇಟೆಗಾರ; ನೆಲೆ: ವಾಸಸ್ಥಾನ; ದುರ್ಭೇದ: ಭೇದಿಸಲಾಗದ; ಮೆಚ್ಚು: ಒಲುಮೆ, ಪ್ರೀತಿ; ದುರಾತ್ಮ: ದುಷ್ಟ; ಅರುಹು: ಹೇಳು; ಆದರ: ಆಸಕ್ತಿ, ವಿಶ್ವಾಸ;

ಪದವಿಂಗಡಣೆ:
ಆದರ್+ಎಕ್ಕಟಿ +ಬಿನ್ನಹವ +ನೀವ್
ಆದರಿಪುದ್+ಎನೆ +ತುಷ್ಟನಾಗಿ +ವೃ
ಕೋದರನು +ಕರಸಿದನು +ಪರಿಮಿತಕ್+ಆ+ ಪುಳಿಂದಕರ
ಆದುದೇ +ನೆಲೆ +ಕುರುಪತಿಗೆ+ ದು
ರ್ಭೇದವಿದು+ ಮೆಚ್ಚುಂಟು +ನಿಮಗ್+ಎನಲ್
ಆ+ ದುರಾತ್ಮಕರ್+ಅರುಹಿದರು +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಆದರ್, ಆದರಿಪು – ಪದದ ಬಳಕೆ
(೨) ಕೌರವನೆಲ್ಲಿದ್ದಾನೆ ಎಂದು ಹೇಳುವ ಪರಿ – ಆದುದೇ ನೆಲೆ ಕುರುಪತಿಗೆ