ಪದ್ಯ ೩೭: ಶಲ್ಯ ಧರ್ಮಜರ ಬಾಣ ಪ್ರಯೋಗ ಹೇಗಿತ್ತು?

ಧರಣಿಪತಿಯಂಬುಗಳನೆಡೆಯಲಿ
ತರಿದು ತುಳುಕಿದನಂಬಿನುಬ್ಬಿನ
ಗರಿಯ ಗಾಳಿಯ ದಾಳಿ ಪೈಸರಿಸಿದುದು ಪರ್ವತವ
ಮೊರೆವ ಕಣೆ ಮಾರ್ಗಣೆಗಳನು ಕ
ತ್ತರಿಸಿದವು ಬಳಿಯಂಬುಗಳು ಪಡಿ
ಸರಳ ತೂಳಿದಡೆಚ್ಚರೆಚ್ಚರು ಮೆಚ್ಚಲುಭಯಬಲ (ಶಲ್ಯ ಪರ್ವ, ೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಬಾಣಗಳನ್ನು ಶಲ್ಯನು ಕತ್ತರಿಸಿ, ಅವನ ಮೇಲೆ ಬಾಣಗಳನ್ನು ಬಿಟ್ಟನು. ಆ ಬಾಣಗಳ ಗಾಳಿಗೆ ಪರ್ವತವೂ ಹಿಂದಕ್ಕೆ ಸರಿಯಬೇಕೆನ್ನುವಷ್ಟು ಶಕ್ತಿಯಿತ್ತು. ಅವರಿಬ್ಬರ ಅಬ್ಬರದ ಬಾಣ ಪ್ರತಿಬಾಣಗಳು ಒಂದನ್ನೊಂದು ಕತ್ತರಿಸಿ ಹಾಕಿದವು. ಹಿಂದೆ ಮತ್ತೆ ಬಾಣಗಳು ಅದಕ್ಕೆದುರಾಗಿ ಬೇರೆಯ ಬಾಣಗಳು ಬಿಡುವುದನ್ನು ಕಂಡ ಎರಡು ಕಡೆಯ ಸೈನಿಕರು ಇಬ್ಬರನ್ನು ಮೆಚ್ಚಿದರು.

ಅರ್ಥ:
ಧರಣಿಪತಿ: ರಾಜ; ಅಂಬು: ಬಾಣ; ಎಡೆ: ಸುಲಿ, ತೆಗೆ; ತರಿ: ಕಡಿ, ಕತ್ತರಿಸು; ತುಳುಕು: ಹೊರಸೂಸುವಿಕೆ; ಉಬ್ಬು: ಹಿಗ್ಗು; ಗರಿ: ಬಾಣದ ಹಿಂಭಾಗ; ಗಾಳಿ: ವಯು; ದಾಳಿ: ಆಕ್ರಮಣ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಪರ್ವತ: ಬೆಟ್ಟ; ಮೊರೆ: ಗುಡುಗು,ಝೇಂಕರಿಸು; ಕಣೆ: ಬಾಣ; ಮಾರ್ಗಣೆ: ಪ್ರತಿಯಾಗಿ ಬಿಡುವ ಬಾಣ, ಎದುರು ಬಾಣ; ಕತ್ತರಿಸು: ಚೂರು ಮಾಡು; ಬಳಿ: ಹತ್ತಿರ; ಪಡಿಸರಳ: ಸಮಾನವಾದುದು ಬಾಣ; ತೂಳು: ಆವೇಶ, ಹಿಂಬಾಲಿಸು; ಎಚ್ಚು: ಬಾಣ ಪ್ರಯೋಗ ಮಾಡು; ಮೆಚ್ಚು: ಪ್ರಶಂಶಿಸು; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಧರಣಿಪತಿ+ಅಂಬುಗಳನ್+ಎಡೆಯಲಿ
ತರಿದು +ತುಳುಕಿದನ್+ಅಂಬಿನ್+ಉಬ್ಬಿನ
ಗರಿಯ +ಗಾಳಿಯ +ದಾಳಿ +ಪೈಸರಿಸಿದುದು +ಪರ್ವತವ
ಮೊರೆವ +ಕಣೆ +ಮಾರ್ಗಣೆಗಳನು+ ಕ
ತ್ತರಿಸಿದವು +ಬಳಿ+ಅಂಬುಗಳು+ ಪಡಿ
ಸರಳ +ತೂಳಿದಡ್+ಎಚ್ಚರ್+ಎಚ್ಚರು +ಮೆಚ್ಚಲ್+ಉಭಯಬಲ

ಅಚ್ಚರಿ:
(೧) ಎಚ್ಚರೆಚ್ಚರು ಮೆಚ್ಚಲುಭಯಬಲ – ಚ್ಚ ಕಾರದ ಪದಗಳ ಬಳಕೆ
(೨) ರೂಪಕದ ಪ್ರಯೋಗ – ಗರಿಯ ಗಾಳಿಯ ದಾಳಿ ಪೈಸರಿಸಿದುದು ಪರ್ವತವ

ಪದ್ಯ ೧೨: ಅರ್ಜುನನನ್ನು ಎದುರಿಸಲು ಯಾರು ಮುಂದೆ ಬಂದರು?

ಮುರಿವಡೆದು ಚತುರಂಗವರ್ಜುನ
ನುರುಬೆಗಾರದೆ ನಿಲೆ ಶ್ರುತಾಯುಧ
ನಿರಿಯಲುತ್ಸಾಹಿಸಿದನಿದಿರಾದನು ಧನಂಜಯನ
ಮುರಿಯೆಸುತ ಮುಂಕೊಂಡು ಪಾರ್ಥನ
ತರುಬಿದನು ಬಳಿಕೀತನಾತನ
ನೆರೆವಣಿಗೆ ಲೇಸೆನುತ ತುಳುಕಿದನಂಬಿನಂಬುಧಿಯ (ದ್ರೋಣ ಪರ್ವ, ೧೦ ಸಂಧಿ, ೧೨ ಪದ್ಯ)

ತಾತ್ಪರ್ಯ:
ಚತುರಂಗ ಸೈನ್ಯವು ಅರ್ಜುನನ ದಾಳಿಯನ್ನು ಸಹಿಸಲಾರದೆ ಹೋಗಲು, ಶ್ರುತಾಯುಧನು ಯುದ್ಧೋತ್ಸಾಹದಿಂದ ಅರ್ಜುನನಿಗಿದಿರಾದನು. ಬಾಣಗಳನ್ನು ಬಿಡುತ್ತಾ ಅರ್ಜುನನನ್ನು ತಡೆದು ನಿಲ್ಲಿಸಿದನು. ಅವನ ಶಸ್ತ್ರ ಪ್ರಯೋಗ ಉತ್ತಮವಾಗಿದೆಯೆಂದು ಅರ್ಜುನನು ಬಾಣಗಳ ಸಮುದ್ರವನ್ನೇ ಅವನ ಮೇಲೆ ಬಿಟ್ಟನು.

ಅರ್ಥ:
ಮುರಿ: ಸೀಳು; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಉರು: ಅತಿಶಯವಾದ ವೇಗ; ನಿಲೆ: ನಿಲ್ಲು; ಇರಿ: ಚುಚ್ಚು; ಉತ್ಸಾಹ: ಶಕ್ತಿ, ಬಲ, ಹುರುಪು; ಇದಿರು: ಎದುರು; ಮುರಿ: ಸೀಳು; ಎಸು: ಬಾಣ ಪ್ರಯೋಗ ಮಾಡು; ತರುಬು: ತಡೆ, ನಿಲ್ಲಿಸು; ಬಳಿಕ: ನಂತರ; ಎರವು: ದೂರವಾಗುವಿಕೆ; ಲೇಸು: ಒಳಿತು; ತುಳುಕು: ಹೊರಸೂಸುವಿಕೆ; ಅಂಬು: ಬಾಣ; ಅಂಬುಧಿ: ಸಾಗರ;

ಪದವಿಂಗಡಣೆ:
ಮುರಿವಡೆದು +ಚತುರಂಗವ್+ಅರ್ಜುನನ್
ಉರುಬೆಗಾರದೆ +ನಿಲೆ +ಶ್ರುತಾಯುಧನ್
ಇರಿಯಲ್+ಉತ್ಸಾಹಿಸಿದನ್+ಇದಿರಾದನು +ಧನಂಜಯನ
ಮುರಿಯೆಸುತ+ ಮುಂಕೊಂಡು +ಪಾರ್ಥನ
ತರುಬಿದನು +ಬಳಿಕೀತನ್+ಆತನನ್
ಎರೆವಣಿಗೆ +ಲೇಸೆನುತ +ತುಳುಕಿದನ್+ಅಂಬಿನ್+ಅಂಬುಧಿಯ

ಅಚ್ಚರಿ:
(೧) ಬಾಣಗಳ ಸಾಗರ ಎಂದು ಕರೆದ ಪರಿ – ತುಳುಕಿದನಂಬಿನಂಬುಧಿಯ