ಪದ್ಯ ೭೮: ಶಿಶುಪಾಲನ ಅಂತ್ಯದ ಬಳಿಕ ಯಾರು ತನ್ನ ನಿಜಸ್ಥಾನವನ್ನು ಸೇರಿದರು?

ಹರಿಗೊರಳ ಚೌಧಾರೆಯಲಿ ಧ್ರು
ಧುರಿಸಿ ನೂಕಿತು ರಕುತವದರೊಳು
ಮಿರುಪ ತೇಜಃಪುಂಜವುಕ್ಕಿತು ಹೊದರ ಹೊಳಹಿನಲಿ
ತುರುಗುವೆಳಗಿನ ಜೋಕೆಯಲಿ ಜಗ
ವರಿಯೆ ಬಂದು ಮುರಾರಿಯಂಘ್ರಿಯೊ
ಳೆರಗಿ ನಿಂದುದು ನಿಜನೆಲೆಗೆ ವಿಜಯಾಭಿಧಾನದಲಿ (ಸಭಾ ಪರ್ವ, ೧೧ ಸಂಧಿ, ೭೮ ಪದ್ಯ)

ತಾತ್ಪರ್ಯ:
ಸುದರ್ಶನ ಚಕ್ರವು ಶಿಶುಪಾಲನ ಕಂಠವನ್ನು ಸೀಳಿತು, ಅವನ ಕಂಠದಿಂದ ಹೊರಹೊಮ್ಮಿದ ರಕ್ತವು ನಾಲ್ಕೂ ದಿಕ್ಕುಗಳಿಗೆ ಚೆಲ್ಲಿ ಉಕ್ಕಿ ಹರಿಯಿತು. ಅದರೊಳಗಿನಿಂದ ಮಹಾಪ್ರಕಾಶಮಾನವಾದ ಒಂದು ಬೆಳಕಿನ ಮೊತ್ತವು ಉಕ್ಕಿ ಬಂದು, ಎಲ್ಲರೂ ನೋಡುವಂತೆ ಶ್ರೀಕೃಷ್ಣನ ಪಾದಕ್ಕೆ ನಮಸ್ಕರಿಸಿತು, ವಿಷ್ಣುವಿನ ದ್ವಾರಪಾಲಕನಾದ ವಿಜಯನು ತನ್ನ ನೆಲೆಗೇ ಬಂದು ಸೇರಿದನು.

ಅರ್ಥ:
ಹರಿ: ಸೀಳು; ಕೊರಳು: ಕಂಠ; ಚೌಧಾರೆ: ನಾಲ್ಕು ಕಡೆಯ ಪ್ರವಾಹ; ಧುರುಧುರಿಸು: ಉಕ್ಕಿ ಹರಿ; ನೂಕು: ತಳ್ಳು; ರಕುತ: ರುಧಿರ, ನೆತ್ತರು; ಮಿರುಪು: ಹೊಳಪು; ತೇಜ: ಕಾಂತಿ; ಪುಂಜ: ಸಮೂಹ, ಗುಂಪು; ಉಕ್ಕು: ಹೆಚ್ಚಾಗು; ಹೊದರ: ಪೊದೆ, ಹಿಂಡಲು; ಹೊಳಹು: ಕಾಂತಿ, ಪ್ರಕಾಶ; ತುರುಗು: ಸಂದಣಿಸು, ಒತ್ತಿಬಂದು; ಬೆಳಗು: ಪ್ರಕಾಶ; ಜೋಕೆ: ಎಚ್ಚರಿಕೆ, ಜಾಗರೂಕತೆ; ಜಗ: ಪ್ರಪಂಚ; ಅರಿ: ತಿಳಿ; ಬಂದು: ಆಗಮಿಸು; ಮುರಾರಿ: ಕೃಷ್ಣ; ಅಂಘ್ರಿ: ಪಾದ; ಎರಗು: ಬಾಗು, ನಮಸ್ಕರಿಸು; ನಿಂದು: ನಿಲ್ಲು; ನಿಜನೆಲೆ: ಸ್ವಂತ ಜಾಗ; ಅಭಿಧಾನ: ಹೆಸರು;

ಪದವಿಂಗಡಣೆ:
ಹರಿ+ಕೊರಳ+ ಚೌಧಾರೆಯಲಿ +ಧುರು
ಧುರಿಸಿ+ ನೂಕಿತು +ರಕುತವ್+ಅದರೊಳು
ಮಿರುಪ+ ತೇಜಃಪುಂಜವ್+ಉಕ್ಕಿತು+ ಹೊದರ+ ಹೊಳಹಿನಲಿ
ತುರುಗು+ಬೆಳಗಿನ+ ಜೋಕೆಯಲಿ +ಜಗವ್
ಅರಿಯೆ +ಬಂದು +ಮುರಾರಿ+ಅಂಘ್ರಿಯೊಳ್
ಎರಗಿ+ ನಿಂದುದು +ನಿಜನೆಲೆಗೆ+ ವಿಜಯ+ಅಭಿಧಾನದಲಿ

ಅಚ್ಚರಿ:
(೧) ಚೌಧಾರೆ: ನಾಲ್ಕು ದಿಕ್ಕುಗಳಲ್ಲಿ ಎಂಬ ಪದದ ಬಳಕೆ
(೨) ಕಾಂತಿಯನ್ನು ವರ್ಣಿಸುವ ಬಗೆ – ಮಿರುಪ ತೇಜಃಪುಂಜವುಕ್ಕಿತು ಹೊದರ ಹೊಳಹಿನಲಿ ತುರುಗುವೆಳಗಿನ ಜೋಕೆಯಲಿ