ಪದ್ಯ ೩೯: ಸೈನ್ಯವು ಅಭಿಮನ್ಯುವನ್ನು ಹೇಗೆ ಮುತ್ತಿತು?

ತುಡುಕಿದವು ತೇಜಿಗಳು ವಾಘೆಯ
ಗಡಣದಲಿ ತೂಳಿದವು ದಂತಿಗ
ಳೆಡಬಲದ ಬವರಿಯಲಿ ಮುತ್ತಿತು ಮತ್ತೆ ರಿಪುನಿಕರ
ಕಡುಮನದ ಕಾಲಾಳು ಕರೆದುದು
ಖಡುಗ ಧಾರೆಯನೀತನಳವಿಯ
ಕೆಡಿಸಿ ತಲೆಯೊತ್ತಿದರು ಭೂಪನ ಮೊನೆಯ ನಾಯಕರು (ದ್ರೋಣ ಪರ್ವ, ೬ ಸಂಧಿ, ೩೯ ಪದ್ಯ)

ತಾತ್ಪರ್ಯ:
ಕುದುರೆಗಳು ಮೇಲೆ ಬಿದ್ದವು. ಆನೆಗಳು ನುಗ್ಗಿದವು. ಎಡಬಲಗಲಲ್ಲಿ ಶತ್ರುಸಮೂಹ ಮುತ್ತಿತು. ಕಾಲಾಳುಗಳು ಕಠೋರ ಮನಸ್ಸಿನಿಂದ ಖಡ್ಗಗಳನ್ನೆತ್ತಿ ಬಂದರು. ಕೌರವನ ಶ್ರೇಷ್ಠರಾದ ಸೈನ್ಯದ ನಾಯಕರು ತಲೆಯೊತ್ತಿ ಅಭಿಮನ್ಯುವಿನೊಡನೆ ಕಾಳಗಕ್ಕೆ ಬಂದರು.

ಅರ್ಥ:
ತುಡುಕು: ಹೋರಾಡು, ಸೆಣಸು; ತೇಜಿ: ಕುದುರೆ; ವಾಘೆ: ಲಗಾಮು; ಗಡಣ: ಕೂಡಿಸುವಿಕೆ, ಸೇರಿಸುವಿಕೆ; ತೂಳು: ಆವೇಶ, ಉನ್ಮಾದ; ದಂತಿ: ಆನೆ; ಎಡಬಲ: ಅಕ್ಕಪಕ್ಕ; ಬವರಿ: ತಿರುಗುವುದು; ಮುತ್ತು: ಆವರಿಸು; ಮತ್ತೆ: ಪುನಃ; ರಿಪು: ವೈರಿ; ನಿಕರ: ಗುಂಪು; ಕಡು: ವಿಶೇಷ, ಅಧಿಕ; ಮನ: ಮನಸ್ಸು; ಕಾಲಾಳು: ಸೈನಿಕ; ಕರೆ: ಬರೆಮಾಡು; ಖಡುಗ: ಕತ್ತಿ; ಧಾರೆ: ವರ್ಷ; ಅಳವಿ: ಯುದ್ಧ; ಕೆಡಿಸು: ಹಾಳುಮಾಡು; ತಲೆ: ಶಿರ; ಒತ್ತು: ಅಮುಕು; ಭೂಪ: ರಾಜ; ಮೊನೆ: ತುದಿ, ಕೊನೆ; ನಾಯಕ: ಒಡೆಯ;

ಪದವಿಂಗಡಣೆ:
ತುಡುಕಿದವು +ತೇಜಿಗಳು +ವಾಘೆಯ
ಗಡಣದಲಿ +ತೂಳಿದವು +ದಂತಿಗಳ್
ಎಡಬಲದ +ಬವರಿಯಲಿ +ಮುತ್ತಿತು +ಮತ್ತೆ +ರಿಪುನಿಕರ
ಕಡುಮನದ +ಕಾಲಾಳು +ಕರೆದುದು
ಖಡುಗ+ ಧಾರೆಯನೀತನ್+ಅಳವಿಯ
ಕೆಡಿಸಿ +ತಲೆಯೊತ್ತಿದರು+ ಭೂಪನ +ಮೊನೆಯ +ನಾಯಕರು

ಅಚ್ಚರಿ:
(೧) ಕ ಕಾರದ ಸಾಲು ಪದ – ಕಡುಮನದ ಕಾಲಾಳು ಕರೆದುದು ಖಡುಗ
(೨) ತುಡುಕಿದವು, ತೂಳಿದವು – ಪದಗಳ ಬಳಕೆ

ಪದ್ಯ ೬೦: ಶಲ್ಯನ ಮಗನ ಸೈನ್ಯವು ಅಭಿಮನ್ಯುವನ್ನು ಹೇಗೆ ಎದುರಿಸಿತು?

ಆ ಕುಮಾರನ ಸೇನೆ ಗಡಣಿಸಿ
ನೂಕಿತುರವಣಿಸಿದುದು ತುರಗಾ
ನೀಕವಿಭತತಿ ತೂಳಿದವು ತುಡುಕಿದವು ರಥನಿಕರ
ತೋಕಿದವು ಕೈದುಗಳ ಮಳೆ ರಣ
ದಾಕೆವಾಳರ ಸನ್ನೆಯಲಿ ಸಮ
ರಾಕುಳರು ಕೆಣಕಿದರು ರಿಪುಕಲ್ಪಾಂತಭೈರವನ (ದ್ರೋಣ ಪರ್ವ, ೫ ಸಂಧಿ, ೬೦ ಪದ್ಯ)

ತಾತ್ಪರ್ಯ:
ಶಲ್ಯನ ಮಗನ ಸೈನ್ಯವು ಅಭಿಮನ್ಯುವನ್ನು ಆವರಿಸಿತು. ಆನೆ, ಕುದುರೆ, ರಥ, ಕಾಲಾಳುಗಳು ಮುನ್ನುಗ್ಗಿದರು. ಶಸ್ತ್ರಗಳ ಮಳೆ ಸುರಿಸಿದರು. ಚಮೂಪತಿಗಳ ಸನ್ನೆಯಂತೆ ಶತ್ರುಗಳಿಗೆ ಕಲ್ಪಾಂತ ಭೈರವನಂತಿದ್ದ ಅಭಿಮನುವನ್ನು ಎದುರಿಸಿದರು.

ಅರ್ಥ:
ಕುಮಾರ: ಮಗ; ಸೇನೆ: ಸೈನ್ಯ; ಗಡಣ: ಕೂಡಿಸುವಿಕೆ, ಸೇರಿಸುವಿಕೆ; ನೂಕು: ತಳ್ಳು; ಉರವಣೆ: ಆತುರ, ಅವಸರ; ತುರಗ: ಅಶ್ವ; ಆನೀಕ; ಸೈನ್ಯ, ಸಮೂಹ; ಇಭ; ಆನೆ; ತತಿ: ಗುಂಪು; ತೂಳು: ಆವೇಶ, ಉನ್ಮಾದ; ತುಡುಕು: ಹೋರಾಡು, ಸೆಣಸು; ರಥ:ಬಂಡಿ, ತೇರು; ನಿಕರ: ಗುಂಪು; ತೋಕು: ಎಸೆ, ಪ್ರಯೋಗಿಸು; ಕೈದು: ಆಯುಧ; ಮಳೆ: ವರ್ಷ; ರಣ: ಯುದ್ಧ; ಆಕೆವಾಳ: ವೀರ, ಪರಾಕ್ರಮಿ; ಸನ್ನೆ: ಗುರುತು; ಸಮರ: ಯುದ್ಧ; ಕೆಣಕು: ರೇಗಿಸು; ರಿಪು: ವೈರಿ; ಕಲ್ಪಾಂತ: ಯುಗದ ಅಂತ್ಯ; ಭೈರವ: ಈಶ್ವರನ ಸ್ವರೂಪ;

ಪದವಿಂಗಡಣೆ:
ಆ +ಕುಮಾರನ +ಸೇನೆ +ಗಡಣಿಸಿ
ನೂಕಿತ್+ಉರವಣಿಸಿದುದು +ತುರಗ
ಆನೀಕವ್+ಇಭ+ತತಿ +ತೂಳಿದವು +ತುಡುಕಿದವು +ರಥನಿಕರ
ತೋಕಿದವು +ಕೈದುಗಳ +ಮಳೆ +ರಣದ್
ಆಕೆವಾಳರ +ಸನ್ನೆಯಲಿ +ಸಮ
ರಾಕುಳರು +ಕೆಣಕಿದರು +ರಿಪು+ಕಲ್ಪಾಂತ+ಭೈರವನ

ಅಚ್ಚರಿ:
(೧) ತೂಳಿದವು, ತುಡುಕಿದವು, ತೋಕಿದವು – ಪದಗಳ ಬಳಕೆ
(೨) ರಣ, ಸಮರ; ತತಿ, ನಿಕರ – ಸಮಾನಾರ್ಥಕ ಪದ